ರಾಮಗಿರಿ ಗ್ರಾಪಂಗೆ ಗಾಂಧಿ ಗ್ರಾಮ ಪುರಸ್ಕಾರ ಗರಿ

Team Udayavani, Oct 9, 2019, 5:50 PM IST

ಹೊಳಲ್ಕೆರೆ: ತಾಲೂಕಿನ ರಾಮಗಿರಿ ಗ್ರಾಮ ಪಂಚಾಯತ್‌ ಈ ಬಾರಿಯ ಗಾಂಧಿ ಗ್ರಾಮ ಪುರಸ್ಕಾರದ ಗರಿಯನ್ನು ಮುಡಿಗೇರಿಸಿಕೊಂಡಿದ್ದು, ಬೆಂಗಳೂರಿನ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ಸಚಿವ ಕೆ.ಎಸ್‌. ಈಶ್ವರಪ್ಪ ಪ್ರಶಸ್ತಿ ಪ್ರದಾನ ಮಾಡಿದರು.

ಈ ಪುರಸ್ಕಾರ ಪಡೆಯಲು ರಾಮಗಿರಿ ಗ್ರಾಪಂ ಕಳೆದ ವರ್ಷ ಸಾಕಷ್ಟು ಪ್ರಯತ್ನ ಮಾಡಿತ್ತು. ಆದರೆ ಉಪ್ಪರಿಗೇನಹಳ್ಳಿ ಗ್ರಾಪಂ ಪುರಸ್ಕಾರವನ್ನು ಮುಡಿಗೇರಿಸಿಕೊಂಡಿತ್ತು. ಈ ಬಾರಿ ಶತಾಯಗತಾಯ ಈ ಬಾರಿ ಪುರಸ್ಕಾರವನ್ನು ಪಡೆದೇ ತೀರಬೇಕು ಎಂಬ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದ ಪಿಡಿಒ ಮಹೇಶ್ವರಪ್ಪ, ಗ್ರಾಪಂ ಅಧ್ಯಕ್ಷರು, ಸದಸ್ಯರು ನಿಯಮಾನುಸಾರ ಎಲ್ಲಾ ಅಂಶಗಳನ್ನು ಅಳವಡಿಸಿಕೊಂಡು ಪ್ರಗತಿ ಸಾಧಿಸಿದ್ದರು.

ಗ್ರಾಮಸಭೆ, ಸ್ವಚ್ಛತೆ, ಜನರಲ್ಲಿ ಜಾಗೃತಿ ಸೇರಿದಂತೆ ಹತ್ತು ಹಲವು ರೀತಿಯ ಅಂಶಗಳನ್ನು ಅಳವಡಿಸಿಕೊಂಡು ಈ ಬಾರಿಯ ಪ್ರಶಸ್ತಿಯನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಶಸ್ತಿ
ಜೊತೆಗೆ ಐದು ಲಕ್ಷ ರೂ. ನಗದು ನೀಡಲಾಗಿದೆ.

ಹೊಳಲ್ಕೆರೆ ತಾಲೂಕಿನಲ್ಲಿ ಗಾಂಧಿ ಗ್ರಾಮ ಪುರಸ್ಕಾರದ ರೇಸ್‌ನಲ್ಲಿ ರಾಮಗಿರಿ, ತೇಕಲವಟ್ಟಿ, ಎಚ್‌.ಡಿ. ಪುರ, ಬಿ. ದುರ್ಗ, ಹಿರೆಎಮ್ಮಿಗನೂರು ಸೇರಿದಂತೆ ಒಟ್ಟು ಐದು ಗ್ರಾಪಂಗಳಿದ್ದವು. ಆಯ್ಕೆ ಸಮಿತಿಯ 150 ಅಂಕಗಳಲ್ಲಿ ಗರಿಷ್ಠ 112 ಅಂಕ ಪಡೆದ ರಾಮಗಿರಿ ಗ್ರಾಪಂ ಮುಡಿಗೆ ಗಾಂಧಿ ಗ್ರಾಮ ಪುರಸ್ಕಾರ ದೊರೆತಿದೆ. ರಾಮಗಿರಿ ಗ್ರಾಪಂ ವ್ಯಾಪ್ತಿಯಲ್ಲಿ ರಾಮಗಿರಿ, ದಾಸಿಕಟ್ಟೆ, ಆರ್‌. ವಡೇರಹಳ್ಳಿ ಸೇರಿದಂತೆ ಒಟ್ಟು ಮೂರು ಗ್ರಾಮಗಳಿವೆ. ಏಳೂವರೆ ಸಾವಿರ ಜನಸಂಖ್ಯೆಯೊಂದಿಗೆ ಐದು ವಾರ್ಡ್‌ಗಳನ್ನು ಹೊಂದಿದೆ.

ಆನ್‌ಲೈನ್‌ನಲ್ಲಿ ಕೇಳಿದ 88 ಪ್ರಶ್ನೆಗಳಿಗೂ ಸಮರ್ಪಕವಾಗಿ ಉತ್ತರಿಸಿ ದಾಖಲಾತಿಗಳನ್ನು ಒದಗಿಸಲಾಗಿದೆ. 12 ಸಾಮಾನ್ಯ ಸಭೆಗಳು, 3 ಗ್ರಾಮಸಭೆಗಳು, 9 ಸ್ಥಾಯಿ ಸಮಿತಿ ಸಭೆಗಳನ್ನು ನಡೆಸಲಾಗಿದೆ. ಮಹಿಳಾ ವಿಶೇಷ ಸಭೆ, ವಿವಿಧ ಆಯಾಮಗಳಲ್ಲಿ ಸಾಧನೆ ಮಾಡಿದ ಹಿರಿಯ ಮಹಿಳೆಯರಿಗೆ ಸನ್ಮಾನ, ಗರ್ಭಿಣಿಯರಿಗೆ ಸೀಮಂತ, ಬಡ ಕುಟುಂಬದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ, ಮಕ್ಕಳ ಸಭೆಗಳನ್ನು ನಡೆಸಿ ಜನರಲ್ಲಿ ಜಾಗೃತಿ ಮೂಡಿಸಲಾಗಿದೆ. ಸಿಸಿ ಕ್ಯಾಮೆರಾ ವ್ಯವಸ್ಥೆ, ಸ್ವಚ್ಛತೆ, ಶೌಚಾಲಯಗಳು, ಸಮರ್ಪಕ ನೀರಿನ ವ್ಯವಸ್ಥೆ, ಪ್ರತಿ ಮನೆಗೂ ನಲ್ಲಿ ವ್ಯವಸ್ಥೆ, ಗ್ರಾಪಂ ವ್ಯಾಪ್ತಿಯಲ್ಲಿ 4 ಶುದ್ಧ ನೀರಿನ ಘಟಕ, ಎಸ್‌ಸಿ-ಎಸ್‌ಟಿ ಅನುದಾನ ಸಮರ್ಪಕ ಬಳಕೆ, ವಿಕಲಚೇತನರಿಗೆ ಪರಿಕರಗಳ ವಿತರಣೆ, 14 ನೇ ಹಣಕಾಸು ಸದ್ಬಳಕೆ ಮಾಡಿಕೊಂಡಿರುವುದು ಪುರಸ್ಕಾರ ದೊರೆಯಲು ಕಾರಣ ಎಂಬುದು ಗ್ರಾಮಸ್ಥರ ಅಂಬೋಣ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ