ಸಂಕಷ್ಟಕ್ಕೆ ಸ್ಪಂದಿಸದಿದ್ದರೆ ನಿರ್ದಾಕ್ಷಿಣ್ಯ ಕ್ರಮ

10 ದಿನದಲ್ಲಿ ಹಾನಿ ಅಂದಾಜು ವರದಿ ಸಲ್ಲಿಸಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ

Team Udayavani, Oct 26, 2019, 11:24 AM IST

ಹೊನ್ನಾಳಿ: ಮಳೆಯಿಂದ ಜನ-ಜಾನುವಾರಗಳಿಗೆ ತೀವ್ರ ತೊಂದರೆಯಾಗಿದ್ದು, ನೌಕರ ವರ್ಗ ಹೆಚ್ಚು ಜಾಗೃತರಾಗಿ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.

ತಾ.ಪಂ ಸಾಮರ್ಥ್ಯಸೌಧದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ನೆರೆ ಹಾವಳಿ, ಮಳೆಯಿಂದ ತತ್ತರಿಸುವ ಸಂದರ್ಭದಲ್ಲಿ ಕರ್ತವ್ಯ ನಿರ್ಲಕ್ಷಿಸಿದರೆ ಯಾರೇ ನೌಕರರಾಗಿರಲಿ ನಿರ್ದಾಕ್ಷಣ್ಯವಾಗಿ ಕ್ರಮ ಕೈಗೊಳ್ಳುತ್ತೇನೆ ಎಂದು ಅವರು ಹೇಳಿದರು.

ಹೊನ್ನಾಳಿ ಮತ್ತು ನ್ಯಾಮತಿ ತಾಲೂಕುಗಳಲ್ಲಿ ಕೆಲ ಮನೆಗಳು ಸಂಪೂರ್ಣ ಹಾನಿಯಾಗಿದ್ದರೆ ಕೆಲ ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಹಳ್ಳಿಗಳಲ್ಲಿ ಮನೆಗಳು, ಜಾನುವಾರುಗಳಿಗೆ ಹಾನಿಯಾಗಿರುವುದಲ್ಲದೆ ರಸ್ತೆಗಳು, ಚರಂಡಿಗಳು ಹಾಳಾಗಿವೆ. ಈ ಎಲ್ಲಾ ಹಾನಿಯನ್ನು ಸಮರ್ಪಕವಾಗಿ ಅಂದಾಜು ಮಾಡಬೇಕಿದೆ ಎಂದು ಹೇಳಿದರು.

ಅತಿಯಾದ ಮಳೆಯಿಂದ ಬೆಳೆ ಹಾನಿಯಾಗಿದ್ದು ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖಾಧಿಕಾರಿಗಳು ಮುಂದಿನ 10 ದಿನಗಳಲ್ಲಿ ಸಮೀಕ್ಷೆ ನಡೆಸಿ ನಷ್ಟದ ವರದಿ ಸಲ್ಲಿಸಬೇಕು ಎಂದು ಹೇಳಿದರು. ಸದ್ಯಕ್ಕೆ ಜಿಲ್ಲಾಧಿಕಾರಿ ಪರಿಹಾರ ಖಾತೆಯಲ್ಲಿ 3.75 ಕೋಟಿ ರೂ. ಹಣ ಇದ್ದು, ತಕ್ಷಣಕ್ಕೆ 8ರಿಂದ 10 ಕೋಟಿ ರೂ. ಅವಶ್ಯಕತೆ ಇದೆ. ಶಾಸಕರು ಮಂಜೂರು ಮಾಡಿಸಿ ಕೊಡಬೇಕು ಎಂದು ಮನವಿ ಮಾಡಿದರು.

ಸಭೆ ಅಧ್ಯಕ್ಷತೆ ವಹಿಸಿದ್ದ ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ಅತಿವೃಷ್ಟಿಯಿಂದ ಎರಡೂ ತಾಲೂಕುಗಳ ಬೆಳೆ, ಮನೆ, ರಸ್ತೆ ಹಾಳಾಗಿ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಅವರಿಗೆ ತುರ್ತು ನೆರವಿನ ಅವಶ್ಯಕತೆ ಇದೆ. ಜನಪ್ರತಿನಿಧಿಗಳಾದ ನಾವು ಹಾಗೂ ಅಧಿ ಕಾರಿ ವರ್ಗ ಉತ್ತಮವಾಗಿ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.

ಮಳೆಯಿಂದ ಮನೆಗೆ ನೀರು ನುಗ್ಗಿ ಗೃಹೋಪಯೋಗಿ ವಸ್ತುಗಳು ಹಾಳಾಗಿವೆ. ತುರ್ತಾಗಿ 10 ಸಾವಿರ ರೂ. ಪರಿಹಾರ ನೀಡಲಾಗುವುದು ಎಂದು ಹೇಳಿದರು. ಇಂದು ಜಿಲ್ಲಾಧಿಕಾರಿಗಳು ಹಾಗೂ ಇತರ ತಾಲೂಕು ಮಟ್ಟದ ಅಧಿ ಕಾರಿಗಳೊಂದಿಗೆ 2 ತಾಲೂಕುಗಳ ಹಾನಿ ಪರಿಶೀಲನೆ ಮಾಡಲಾಗಿದೆ. ಅಧಿಕಾರಿಗಳು ಆದಷ್ಟು ಬೇಗ ನನಗೆ ಹಾನಿ ವರದಿ ಕೊಡಬೇಕು. ಸರ್ಕಾರದ ಮಟ್ಟದಲ್ಲಿ ಪರಿಹಾರ ಬಿಡುಗಡೆ ಮಾಡಿಸಲು ಅನುಕೂಲವಾಗುತ್ತದೆ ಎಂದು ಹೇಳಿದರು.

ಜಿ.ಪಂ ಉಪ ಕಾರ್ಯದರ್ಶಿ ಆನಂದ್‌, ಜಿ.ಪಂ ಉಪಾಧ್ಯಕ್ಷ ಸುರೇಂದ್ರನಾಯ್ಕ, ತಾ.ಪಂ ಉಪಾಧ್ಯಕ್ಷ ಎಸ್‌.ಪಿ.ರವಿಕುಮಾರ್‌, ತಹಶೀಲ್ದಾರ್‌ ತುಷಾರ್‌ ಬಿ.ಹೊಸೂರು, ನ್ಯಾಮತಿ ತಾಲೂಕು ತಹಶೀಲ್ದಾರ್‌ ರಶ್ಮಿ, ತಾ.ಪಂ ಕಾರ್ಯ ನಿರ್ವಹಣಾಧಿಕಾರಿ ಗಂಗಾಧರಮೂರ್ತಿ ಇತರರು ಇದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ