ಪಬ್ಲಿಕ್‌ ಫ್ರಿಡ್ಜ್-ಸ್ಟೋರ್‌ಗೆ ಜನರಿಂದ ಉತ್ತಮ ಸ್ಪಂದನೆ

ನಿರಾಶ್ರಿತರು-ಭಿಕ್ಷುಕರಿಗೆ ವರದಾನ ಆಟೋ ಚಾಲಕರ ಮಾನವೀಯ ಕಾರ್ಯ

Team Udayavani, Aug 24, 2019, 1:22 PM IST

ಹುಬ್ಬಳ್ಳಿ: ಇಲ್ಲಿನ ರೈಲ್ವೆ ನಿಲ್ದಾಣದ ಮುಖ್ಯದ್ವಾರ ಬಳಿ ಇಡಲಾದ ಪಬ್ಲಿಕ್‌ ಫ್ರಿಡ್ಜ್ ಹಾಗೂ ಸ್ಟೋರ್‌.

ಹುಬ್ಬಳ್ಳಿ: ಯಾರೂ ಹಸಿವಿನಿಂದ ಬಳಲಬಾರದು, ಮಾನಬಿಟ್ಟು ಬದುಕಬಾರದೆಂಬ ಉದ್ದೇಶ ದೊಂದಿಗೆ ನಗರದ ರೈಲ್ವೆ ನಿಲ್ದಾಣದಲ್ಲಿ ಇಲಾಖೆಯಿಂದ ಇಟ್ಟಿರುವ ಪಬ್ಲಿಕ್‌ ಫ್ರಿಡ್ಜ್ ಹಾಗೂ ಪಬ್ಲಿಕ್‌ ಸ್ಟೋರ್‌ಗೆ ಸಾರ್ವಜನಿಕರು ಹಾಗೂ ನಿರಾಶ್ರಿತರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ.

ಒಂದೆಡೆ ಕೆಲವರು ತುತ್ತು ಅನ್ನಕ್ಕಾಗಿ ಪರದಾಡುತ್ತಿದ್ದರೆ, ಇನ್ನೊಂದೆಡೆ ಕೆಲವರು ತಮಗೆ ಅವಶ್ಯಕ್ಕಿಂತ ಹೆಚ್ಚಾಗಿ ಆಹಾರ ಬಡಿಸಿಕೊಂಡು ಹಾಳು ಮಾಡುತ್ತಿರುತ್ತಾರೆ. ಆಹಾರ ವ್ಯರ್ಥವಾಗಬಾರದೆಂಬ ಉದ್ದೇಶದಿಂದ ಹಾಗೂ ಅವಶ್ಯವುಳ್ಳವರಿಗೆ ಆಹಾರ ದೊರಕಬೇಕೆಂಬ ಸದುದ್ದೇಶದಿಂದ ಪಬ್ಲಿಕ್‌ ಫ್ರಿಡ್ಜ್ ಇಡಲಾಗಿದೆ. ಸಾರ್ವಜನಿಕರು ತಾವು ಬಳಸಿ ಉಳಿದ ಆಹಾರವನ್ನು ಇಲ್ಲವೆ ಹಸಿದುಕೊಂಡವರಿಗೆ ಅನ್ನದಾನ ಮಾಡಬೇಕೆಂಬ ಸದಿಚ್ಛೆ ಇದ್ದರೆ ಅಂಥವರು ಈ ಫ್ರಿಡ್ಜ್ನಲ್ಲಿ ತಂದು ಇಡಬೇಕು. ಆಹಾರವಲ್ಲದೆ ಹಣ್ಣು-ಹಂಪಲ, ಸಲಾಡ್‌, ತರಕಾರಿ, ಪ್ಯಾಕ್‌ವುಳ್ಳ ಹಾಲನ್ನು ಫ್ರಿಡ್ಜ್ನಲ್ಲಿ ಇಡಬಹುದಾಗಿದೆ. ಆದರೆ ಯಾವುದೇ ಕಾರಣಕ್ಕೂ ಹಾಳಾದ, ಅವಧಿ ಮುಗಿದ ಹಾಗೂ ಮಾಂಸ, ಮೀನು, ತೆರೆದ ಹಾಲು ಇಡುವಂತಿಲ್ಲ.

ಇನ್ನು ಪಬ್ಲಿಕ್‌ ಸ್ಟೋರ್‌ನಲ್ಲಿ ಬಳಸಿದ ಬಟ್ಟೆ, ಚಪ್ಪಲಿ, ಬೂಟು, ಇನ್ನಿತರೆ ಸಾಮಗ್ರಿಗಳನ್ನು ತಂದು ಇಡಬಹುದು. ಅವು ಇನ್ನೊಬ್ಬರು ಬಳಸುವಂತಿರಬೇಕು. ಸಂಪೂರ್ಣ ಮಾಸಿರಬಾರದು. ತಾವು ಮಾಡಿದ ದಾನ ಇನ್ನೊಬ್ಬರು ಉಪಯೋಗಿಸುವಂತಿರಬೇಕು.

ಕೆಲವರ ಹಿಂದೇಟು: ಪಬ್ಲಿಕ್‌ ಫ್ರಿಡ್ಜ್-ಸ್ಟೋರ್‌ ಭಿಕ್ಷುಕರು, ನಿರಾಶ್ರಿತರು, ವೃದ್ಧರು, ಹಣ ಕಳೆದುಕೊಂಡವರು, ಮನೆ ಬಿಟ್ಟು ಬಂದವರು, ಊಟಕ್ಕೂ ಹಣ ಇಲ್ಲದವರಿಗೆ, ಜೊತೆಗೆ ರಾತ್ರಿ ಹೊತ್ತು ಹಸಿದುಕೊಂಡು ನಿಲ್ದಾಣಕ್ಕೆ ಬಂದಾಗ ಎಲ್ಲಿಯೂ ಆಹಾರ, ತಿಂಡಿ ಸಿಗದೆ ಪರದಾಡುವವರಿಗೆ ವರದಾನವಾಗಿದೆ. ಆದರೆ, ಆಹಾರ ಮತ್ತು ವಸ್ತುಗಳನ್ನು ತೆಗೆದುಕೊಳ್ಳಲು ಕೆಲವರು ಹಿಂಜರಿಯುತ್ತಿದ್ದಾರೆ. ತೆಗೆದುಕೊಂಡರೆ ಯಾರು ಬಯ್ಯುತ್ತಾರೋ ಎಂಬ ಹೆದರಿಕೆ ಅವರದ್ದಾಗಿದೆ. ಸರಿಯಾಗಿ ಓದಲು ಬರದವರು ಇವನ್ನು ಮಾರಾಟ ಮಾಡಲು ಇಡಲಾಗಿದೆಯೇ ಎಂದು ತಿಳಿದು ಹಾಗೇ ಹೋಗುತ್ತಿದ್ದಾರೆ. ಇಂತಹವರಿಗೆ ಸ್ಥಳೀಯ ಆಟೋ ಚಾಲಕರು ಹಾಗೂ ಕೆಲ ಪ್ರಯಾಣಿಕರು ನೆರವಾಗುತ್ತಿದ್ದಾರೆ. ನಿಮಗಾಗಿಯೇ ಇಟ್ಟಿದ್ದೆಂದು ಹೇಳಿಕೊಡುತ್ತಿದ್ದಾರೆ.

ಆಟೋ ಸಂಘದ ಸಹಾಯಹಸ್ತ

ಪಬ್ಲಿಕ್‌ ಫ್ರಿಡ್ಜ್ ಇಟ್ಟಾಗಿನಿಂದ ನಿಲ್ದಾಣದಲ್ಲಿರುವ ಹಜರತ್‌ ಭೋಡಕೆಶಾಲಿ ಬಾಬಾ ಆಟೋ ರಿಕ್ಷಾ ನಿಲ್ದಾಣದ ಚಾಲಕರು ಸಹಿತ ತಮ್ಮಲ್ಲಿಯೇ ಒಂದಿಷ್ಟು ಹಣ ಸಂಗ್ರಹಿಸಿ, ಹಸಿದು ಬಂದವರಿಗೆ ಅನ್ನದಾನ ಮಾಡುತ್ತಿದ್ದಾರೆ. ಗುರುವಾರ ಅಂದಾಜು 25ಕ್ಕೂ ಅಧಿಕ ಜನರಿಗಾಗಿ ಅನ್ನ, ಸಾಂಬಾರ, ಪಲ್ಲೆ ಸೇರಿ ಪ್ಯಾಕಿಂಗ್‌ ಮಾಡಿದ್ದ ಆಹಾರದ ಪೊಟ್ಟಣವನ್ನು ಫ್ರಿಡ್ಜ್ನಲ್ಲಿಟ್ಟು ಅವಶ್ಯವುಳ್ಳವರಿಗೆ ನೀಡಿದ್ದಾರೆ. ಇತ್ತೀಚೆಗೆ ತನ್ನ ನಾಲ್ಕು ಮಕ್ಕಳೊಂದಿಗೆ ಮನೆಬಿಟ್ಟು ಬಂದಿದ್ದ ತುಮಕೂರು ಮೂಲದ ಮಹಿಳೆಯೊಬ್ಬರಿಗೆ ಈ ಸಂಘದ ಚಾಲಕರು ಐವರಿಗೂ ಊಟ ಮಾಡಿಸಿದ್ದಲ್ಲದೆ, ಮರಳಿ ಅವರ ಊರಿಗೆ ಹೋಗಲು ರೈಲು ಪ್ರಯಾಣದರ ತೆಗೆಸಿ ಕಳುಹಿಸಿದ್ದಾರೆ. ಇದೇರೀತಿ ಬಹಳಷ್ಟು ಜನರು ನಗರಕ್ಕೆ ಬಂದಿರುತ್ತಾರೆ. ಅವರಿಗೆ ನಮ್ಮ ಕೈಲಾದ ಸಹಾಯವನ್ನು ಸಂಘದವರು ಮಾಡುತ್ತಿದ್ದೇವೆ ಎಂದು ಆಟೋರಿಕ್ಷಾ ಚಾಲಕರಾದ ಮಹ್ಮದಫಾರೂಕ ಧಾರವಾಡ ಮತ್ತು ಫಿರೋಜ್‌ ನೀಲಗಾರ ಹೇಳುತ್ತಾರೆ.

ಪಬ್ಲಿಕ್‌ ಫಿಡ್ಜ್-ಸ್ಟೋರ್‌ಗೆ ಜನರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಗಾರ್ಡ್ಸ್‌, ಲೋಕೋ ಪೈಲೆಟ್‌ಗಳು ಉಳಿದ ಆಹಾರವನ್ನು ಫ್ರಿಡ್ಜ್ನಲ್ಲಿ ಇಟ್ಟು ಹೋಗುತ್ತಿದ್ದಾರೆ. ಸಾಕಷ್ಟು ದಾನಿಗಳು ಆಹಾರ ಮತ್ತು ಉಪಯುಕ್ತ ಸಾಮಗ್ರಿ ಇಟ್ಟು ಹೋಗುತ್ತಿದ್ದಾರೆ. ಇದರ ಉಪಯೋಗವನ್ನು ಬಹಳಷ್ಟು ಜನರು ಪಡೆಯುತ್ತಿದ್ದಾರೆ. ಕೆಲ ಸದೃಢರು ಭಿಕ್ಷುಕರಂತೆ ನಟಿಸುತ್ತ ಫ್ರಿಡ್ಜ್ನಲ್ಲಿಟ್ಟಿದ್ದ ಆಹಾರ ತೆಗೆದುಕೊಂಡು ಹೋಗುತ್ತಿರುವುದು ಖೇದಕರ. ಈ ಬಗ್ಗೆ ನಿಗಾ ವಹಿಸಲಾಗುವುದು. ಅಲ್ಲದೇ ಬಳಕೆ ಯೋಗ್ಯವಿಲ್ಲದ ವಸ್ತುಗಳನ್ನು ಇಲ್ಲಿ ಇಡಬಾರದು.
ವಿ. ವಿಜಯನ್‌,
 ಹುಬ್ಬಳ್ಳಿ ರೈಲ್ವೆ ನಿಲ್ದಾಣ ನಿರೀಕ್ಷಕ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ