ಬಸವಕಲ್ಯಾಣದಲ್ಲಿ 11ರಿಂದ ಕಲ್ಯಾಣ ಪರ್ವ ಉತ್ಸವ 

Team Udayavani, Oct 10, 2019, 6:09 PM IST

ಕಲಬುರಗಿ: ವಿಶ್ವಗುರು ಬಸವಣ್ಣನ ಕಾರ್ಯಕ್ಷೇತ್ರ ಬೀದರ ಜಿಲ್ಲೆಯ ಬಸವಕಲ್ಯಾಣ ಬಸವಧರ್ಮ ಪೀಠದ ಬಸವ ಮಹಾಮನೆ
ಆವರಣದಲ್ಲಿ ಅ. 11, 12 ಮತ್ತು 13ರಂದು 18ನೇ ಕಲ್ಯಾಣ ಪರ್ವ ಉತ್ಸವ ನಡೆಯಲಿದೆ ಎಂದು ಕಲ್ಯಾಣ ಪರ್ವ ಉತ್ಸವ ಸಮಿತಿ ಪ್ರಧಾನ ಸಂಘಟಕ ಬಸವ ಪ್ರಭು ಸ್ವಾಮೀಜಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವಕಲ್ಯಾಣವು 12ನೇ ಶತಮಾನದಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ, ಧಾರ್ಮಿಕತೆಗೆ ಹೆಚ್ಚು ಮಹತ್ವ ಪಡೆದುಕೊಂಡಿತ್ತು. ವಿಶ್ವಕ್ಕೆ ವಚನ ಸಾಹಿತ್ಯದ ಸಂದೇಶ ಸಾರಲು ಹಾಗೂ ಲಿಂಗಾಯತ ಧರ್ಮಕ್ಕೆ ಮಾನ್ಯತೆ ಪಡೆದುಕೊಳ್ಳಲು ಕಳೆದ 18 ವರ್ಷಗಳಿಂದ ಪ್ರತಿ ವರ್ಷವೂ ಕಲ್ಯಾಣ ಪರ್ವವನ್ನು ಆಯೋಜಿಸಲಾಗುತ್ತಿದೆ ಎಂದರು.

ಮೂರು ದಿನಗಳ ಕಾಲ ಮಾತೆ ಗಂಗಾದೇವಿ, ಬಸವಧರ್ಮ ಪೀಠದ ಜಗದ್ಗುರು ಜಂಗಮ ಮೂರ್ತಿಗಳ ದಿವ್ಯ ಸಾನ್ನಿಧ್ಯದಲ್ಲಿ ಸಾಮೂಹಿಕ ಪ್ರಾರ್ಥನೆ, ಶರಣ ವಂದನೆ, ಧರ್ಮ ಚಿಂತನ ಗೋಷ್ಠಿ, ಶರಣೆಯರ ಸಂಗಮ, ರಾಷ್ಟ್ರೀಯ ಬಸವದಳದ ಸಮಾವೇಶ, ಲಿಂಗಾತಯ ಧರ್ಮ ಮಾನ್ಯತೆ ಕುರಿತ ಮುಂದಿನ ರೂಪುರೇಷೆ, ಬಸವಧರ್ಮದ ವಿಜಯೋತ್ಸವ ಮೆರವಣಿಗೆ, ಅಲ್ಲಮಪ್ರಭು ಶೂನ್ಯ ಪೀಠಾರೋಹಣದ 17ನೇ ವಾರ್ಷಿಕೋತ್ಸವ ನಡೆಯಲಿದೆ ಎಂದರು.
ಅ.11ರಂದು ಸಚಿವ ಪ್ರಭು ಚವ್ಹಾಣ 18ನೇ ಕಲ್ಯಾಣ ಪರ್ವದ ಉದ್ಘಾಟನೆ ನೆರವೇರಿಸುವರು.

ಬಸವಕಲ್ಯಾಣ ಶಾಸಕ ಬಿ.ನಾರಾಯಣರಾವ್‌ ಅಧ್ಯಕ್ಷತೆ ವಹಿಸುವರು. ಮಾತಾಜಿ ರಚಿಸಿದ ‘ದೇವರ ಮಕ್ಕಳು’, “ಶರಣ ವಂದನೆ’ ಪುಸ್ತಕಗಳನ್ನು ಕಲಬುರಗಿ ಸಂಸದ ಡಾ| ಉಮೇಶ ಜಾಧವ ಬಿಡುಗಡೆ ಮಾಡುವರು. ಹಿರಿಯ ಸಾಹಿತಿ ರಂಜಾನ ದರ್ಗಾ ಅವರಿಂದ ವಿಶೇಷ ಅನುಭಾವ ನಡೆಯಲಿದೆ ಎಂದು ತಿಳಿಸಿದರು. ಮಾತೆ ಗಂಗಾದೇವಿ, ಮುಂಡರಗಿಯ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ, ಸಿದ್ದರಾಮೇಶ್ವರ ಸ್ವಾಮೀಜಿ, ಚನ್ನಬಸವಾನಂದ ಸ್ವಾಮೀಜಿ, ಬಸವಕುಮಾರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು ಎಂದು ಹೇಳಿದರು. ಅ.12ರಂದು ಬೆಳಗ್ಗೆ ಶರಣ ವಂದನೆ-ಶರಣರಿಗೆ ಶರಣು ಶರಣಾರ್ಥಿ ಮತ್ತು ಸಿದ್ದರಾಮೇಶ್ವರ ಸ್ವಾಮೀಜಿ ಅವರಿಂದ ಶೂನ್ಯ ಪೀಠಾರೋಹಣ ವಿಶೇಷ ಕಾರ್ಯಕ್ರಮ ನಡೆಯಲಿದೆ. 11 ಗಂಟೆಗೆ ಧರ್ಮ ಚಿಂತನ ಗೋಷ್ಠಿ ನಡೆಯಲಿದ್ದು, ಶಾಸಕ ಎಂ.ಬಿ. ಪಾಟೀಲ ಉದ್ಘಾಟಿಸುವರು. ಬೀದರ ಸಂಸದ ಭಗವಂತ ಖೂಬಾ ಧ್ವಜಾರೋಹಣ ನೆರವೇರಿಸುವರು.

ಕಲಬುರಗಿಯ ಹಿರಿಯ ಸಾಹಿತಿ ಪ್ರೊ| ವಸಂತ ಕುಷ್ಟಗಿ ಅಧ್ಯಕ್ಷತೆ ವಹಿಸುವರು ಎಂದು ವಿವರಿಸಿದರು. ಅ.13ರಂದು ಬೆಳಗ್ಗೆ ಅಕ್ಕ ನಾಗಲಾಂಬಿಕಾ ಸಂಸ್ಕರಣೆ ನಿಮಿತ್ತ ಬಸವಧರ್ಮದ ವಿಜಯೋತ್ಸವ ನಡೆಯಲಿದೆ. ವಚನ ಸಾಹಿತ್ಯ ಮೆರವಣಿಗೆಯಲ್ಲಿ ಆನೆ, ಒಂಟೆ, ಜನಪದ ಡೊಳ್ಳು ಕುಣಿತ, ಜಾಂಗ್‌ ಕೋಲಾಟ ಪ್ರದರ್ಶನಗೊಳ್ಳಲಿವೆ. ಮಧ್ಯಾಹ್ನ 12 ಗಂಟೆಗೆ 18ನೇ ಕಲ್ಯಾಣ ಪರ್ವ ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಕಲಬುರಗಿ ಬಸವದಳದ ಅಧ್ಯಕ್ಷ ಆರ್‌.ಜಿ. ಶೆಟಗಾರ, ಬಸವಂತರಾಯ ಏರಿ, ರೇವಣಪ್ಪ ಹೆಗ್ಗಣೆ, ನಾಗೇಂದ್ರಪ್ಪ ನಿಂಬರಗಿ, ಕಲ್ಯಾಣಕುಮಾರ ಸಲಗರ, ಬಸವರಾಜ ಮರಬದ, ಶ್ರೀಶೈಲ ಮಸೂತಿ ಇದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ