ಸ್ವಚ್ಛತೆಗೆ ಪೊರಕೆ ಹಿಡಿದ ಪ್ರತಿನಿಧಿಗಳು

ಕಸದ ಬುಟ್ಟಿಯೊಂದಿಗೆ ಹೆಜ್ಜೆ ಹಾಕಿದ ಅಧಿಕಾರಿಗಳುಶರಣ ಬಸವೇಶ್ವರ-ಬಂದೇನವಾಜ್‌ ದರ್ಗಾ ಎದುರು ಸ್ವಚ್ಛತೆ

Team Udayavani, Oct 3, 2019, 11:00 AM IST

ಕಲಬುರಗಿ: ಪ್ರತಿದಿನ ಸಭೆ, ಸಮಾರಂಭ, ಕಚೇರಿ ಕೆಲಸಗಳಲ್ಲಿ ನಿರತರಾಗುತ್ತಿದ್ದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಬುಧವಾರ ಗಾಂಧಿ ಜಯಂತಿ ನಿಮಿತ್ತ ಕೈಚೀಲ ಧರಿಸಿ, ಪೊರಕೆ, ಕಸದ ಬುಟ್ಟಿ ಹಿಡಿದುಕೊಂಡು ಕಸ ಸಂಗ್ರಹಿಸಿ ಸ್ವಚ್ಛತೆಗಾಗಿ ಶ್ರಮದಾನ ಮಾಡಿದರು.

ಸಂಸದ ಡಾ| ಉಮೇಶ ಜಾಧವ, ಶಾಸಕಿ ಖನೀಜ್‌ ಫಾತೀಮಾ, ಪ್ರಾದೇಶಿಕ ಆಯುಕ್ತ ಸುಬೋಧ ಯಾದವ, ಜಿಲ್ಲಾಧಿಕಾರಿ ಬಿ.ಶರತ್‌, ಜಿಲ್ಲಾ ಪಂಚಾಯಿತಿ ಸಿಇಒ ಡಾ| ಪಿ. ರಾಜಾ ಪೊರಕೆ ಹಿಡಿದು ಕಸಗೂಡಿಸಿದರು. ಕಸದ ಬುಟ್ಟಿಗಳನ್ನು ಹಿಡಿದು ಗಿಡಗಳಲ್ಲಿ ಮರೆಯಾದ ಕುಡಿಯುವ ನೀರಿನ ಪ್ಲಾಸ್ಟಿಕ್‌ ಗ್ಲಾಸ್‌, ಬಾಟಲಿ, ಗುಟ್ಕಾ ಚೀಟಿಗಳ ತ್ಯಾಜ್ಯ ಸಂಗ್ರಹಿಸಿದರು.

ಇದು ರಾಷ್ಟ್ರಪಿತ ಮಹಾತ್ಮ ಗಾಂಧಿಧೀಜಿ ಅವರ 150ನೇ ಜಯಂತಿ ನಿಮಿತ್ತ ನಗರದ ಟೌನ್‌ ಹಾಲ್‌ ಬಳಿಯ ಗಾಂ ಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಸಾರ್ವಜನಿಕ ಉದ್ಯಾನವನದಲ್ಲಿ ನಡೆದ ಶ್ರಮದಾನದ ಚಿತ್ರಣ. ಮಹಾನಗರ ಪಾಲಿಕೆ ಆಯುಕ್ತ ರಾಹುಲ್‌ ಪಾಂಡ್ವೆ, ಎಸ್‌ಪಿ ವಿನಾಯಕ ಪಾಟೀಲ, ನಗರ ಪೊಲೀಸ್‌ ಆಯುಕ್ತ ಕಿಶೋರಬಾಬು, ಪಾಲಿಕೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ಶಿವಣಗೌಡ ಪಾಟೀಲ, ಪರಿಸರ ಅಭಿಯಂತರರಾದ ಸುಷ್ಮಾ ಸಾಗರ, ಮುಖಂಡ ಚಂದು ಪಾಟೀಲ ಹಾಗೂ ಅಧಿಕಾರಿಗಳು, ಸಿಬ್ಬಂದಿ ಶ್ರಮದಾನದಲ್ಲಿ ಭಾಗಿಯಾಗಿದ್ದರು.

ಶ್ರಮದಾನ ಉದ್ದೇಶಿಸಿ ಮಾತನಾಡಿದ ಸಂಸದ ಡಾ| ಉಮೇಶ ಜಾಧವ, ಸ್ವಚ್ಛ, ಸುಂದರ ಮತ್ತು ಹಸಿರು ಕಲಬುರಗಿ ನಮ್ಮೆಲ್ಲರ ಮೂಲಮಂತ್ರವಾಗಲಿ. ಬರ ಭೂಮಿಯಾಗಿರುವ ಇಲ್ಲಿ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಹೆಚ್ಚಿರುತ್ತದೆ. ಇದನ್ನು ನಿಯಂತ್ರಿಸಲು ಜಲಮೂಲಗಳ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ ಎಂದರು.

ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ ಅಂಗೀಕಾರ ಆಂದೋಲನದ ಭಾಗವಾಗಿ ಜಲ ಸಂರಕ್ಷಣೆಗೆ ಸಹಿ ಅಭಿಯಾನ ಕೈಗೊಳ್ಳಲಾಯಿತು. ಕಲಾವಿದ ಎಂ. ಸಂಜೀವ ಅವರು ರಚಿಸಿದ ಸ್ವಚ್ಛ ಭಾರತ ಯೋಜನೆ ಕುರಿತ ವ್ಯಂಗ್ಯಚಿತ್ರ ಕಲಾಕೃತಿ ಪ್ರದರ್ಶನ ಗಮನಸೆಳೆಯಿತು.

ಮಿನಿ ವಿಧಾನಸೌಧ ಆವರಣ: ಸಾರ್ವಜನಿಕ ಉದ್ಯಾನವನದ ನಂತರ ಪ್ರಾದೇಶಿಕ ಆಯುಕ್ತ ಸುಬೋಧ ಯಾದವ, ಜಿಲ್ಲಾಧಿಕಾರಿ ಬಿ.ಶರತ್‌ ಮಿನಿ ವಿಧಾನಸೌಧ ಆವರಣದಲ್ಲೂ ಶ್ರಮದಾನ ಮಾಡಿದರು.

ಅಪರ ಜಿಲ್ಲಾ ಧಿಕಾರಿ ಬಿ.ಶರಣಪ್ಪ, ಶಿಷ್ಟಾಚಾರ ತಹಶೀಲ್ದಾರ್‌ ಪ್ರಕಾಶ ಚಿಂಚೋಳಿಕರ ಸೇರಿದಂತೆ ಮಿನಿ ವಿಧಾನಸೌಧದ ಅಧಿಕಾರಿ ಮತ್ತು ಸಿಬ್ಬಂದಿ ಸಾಥ್‌ ನೀಡಿದರು.

ಸ್ವಚ್ಛತಾ ಅಭಿಯಾನ: ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಕಸಗೂಡಿಸುವ ಮೂಲಕ ಜಿಲ್ಲಾ ಛಾಯಾಗ್ರಾಹಕರ ಸಂಘದ ಸದಸ್ಯರು ಮಹಾತ್ಮ ಗಾಂಧಿಧೀಜಿ ಜಯಂತಿಯನ್ನು ವಿಭಿನ್ನವಾಗಿ ಆಚರಿಸಿದರು. ಜಿಲ್ಲಾ ವೀರಶೈವ ಮಹಾಸಭಾ ಅಧ್ಯಕ್ಷ ಶರಣು ಮೋದಿ, ಸಂಘದ ರಾಜ್ಯಾಧ್ಯಕ್ಷ ಎಸ್‌. ಪರಮೇಶ, ಬಸವರಾಜ ಮಾಲಿಪಾಟೀಲ ಹಾಗೂ ಛಾಯಾಗ್ರಾಹಕರು, ವಿಡಿಯೋಗ್ರಾಫರ್‌ ಗಳು ಶ್ರಮದಾನದಲ್ಲಿ ಪಾಲ್ಗೊಂಡಿದ್ದರು.

ದರ್ಗಾ ಸ್ವತ್ಛತಾ ಕಾರ್ಯ: ಕೆಬಿಎನ್‌ ಶಿಕ್ಷಣ ಸಂಸ್ಥೆ ಮತ್ತು ಪಾಲಿಕೆ ಸಹಯೋಗದಲ್ಲಿ ಖಾಜಾ ಬಂದೇನವಾಜ್‌ ದರ್ಗಾ ಎದುರು ಸ್ವಚ್ಛತಾ ಅಭಿಯಾನ ನಡೆಸಲಾಯಿತು. ಪಾಲಿಕೆ ಆಯುಕ್ತ ರಾಹುಲ್‌ ಪಾಂಡ್ವೆ ಮತ್ತು ಸಂಸ್ಥೆ ಆಡಳಿತ ಮಂಡಳಿಯವರು ಭಾಗವಹಿಸಿದ್ದರು. ಅಲ್ಲದೇ, ಬೀಬೀ ರಜಾ ಕಾಲೇಜು ವತಿಯಿಂದ ವಿದ್ಯಾರ್ಥಿನಿಯರು ಪ್ಲಾಸ್ಟಿಕ್‌ ನಿಷೇಧ ಬಗ್ಗೆ ಜಾಗೃತಿ ಜಾಥಾ ನಡೆಸಿದರು.

ಭವಾನಿ ನಗರ: ವಾರ್ಡ್‌ ನಂ.3ರ ಭವಾನಿ ನಗರದಲ್ಲಿ ಬಿಜೆಪಿ ಯುವ ಮುಖಂಡ ಚಂದು ಪಾಟೀಲ ನೇತೃತ್ವದಲ್ಲಿ ಸ್ವಚ್ಛತಾ ಅಭಿಯಾನ ನಡೆಯಿತು. ಸಂಸದ ಡಾ| ಉಮೇಶ ಜಾಧವ ಚಾಲನೆ ನೀಡಿದರು. ಶಾಸಕ ಬಸವರಾಜ ಮತ್ತಿಮಡು, ಎಂಎಲ್‌ಸಿ ಬಿ.ಜಿ. ಪಾಟೀಲ, ದೊಡ್ಡಪ್ಪಗೌಡ ಪಾಟೀಲ ನರಿಬೋಳ ಇದ್ದರು.

ಆರ್‌ಜಿಪಿಆರ್‌ಎಸ್‌: ಜಿಲ್ಲಾ ಕಾಂಗ್ರೆಸ್‌ನ ರಾಜೀವ ಗಾಂಧಿ ಪಂಚಾಯತ್‌ ರಾಜ್‌ ಸಂಘಟನೆ ವತಿಯಿಂದ ಗಾಂಧೀಜಿ ಆಶಯದಂತೆ ನಗರದ ಕೆ.ಎಚ್‌.ಬಿ ಕಾಲೋನಿಯಲ್ಲಿ ಸ್ವಚ್ಛತಾ ಕಾರ್ಯ ಹಮ್ಮಿಕೊಳ್ಳಲಾಗಿತ್ತು.

ಗಾಂಧಿ ಕಂಡಿರುವ ಗ್ರಾಮ ಸ್ವರಾಜ್‌ ಕನಸು ಸಾಕಾರಗೊಳಿಸುವ ಉದ್ದೇಶದಿಂದ ಸಂಘಟನೆ ರಾಜ್ಯಾದ್ಯಂತ ಅ.30ರ ವರೆಗೆ ಗ್ರಾಮ ಸ್ವರಾಜ್‌ ಅಭಿಯಾನ ನಡೆಸುತ್ತಿದೆ ಎಂದು ವಿಭಾಗೀಯ ಸಂಚಾಲಕ ಶೌಕತ್‌ ಅಲಿ ಆಲೂರ ತಿಳಿಸಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ