ಕಲಬುರಗಿ: ಶಂಕಿತ ಡೆಂಘೀಗೆ ಏಳು ಸಾವು

Team Udayavani, Nov 14, 2019, 12:12 PM IST

„ರಂಗಪ್ಪ ಗಧಾರ

ಕಲಬುರಗಿ: ಜಿಲ್ಲಾದ್ಯಂತ ಕಳೆದ ಮೂರು ತಿಂಗಳಿಂದ ಸಾಂಕ್ರಾಮಿಕ ರೋಗಗಳ ಆರ್ಭಟ ಹೆಚ್ಚಾಗಿದೆ. ಮಕ್ಕಳಿಂದ ಹಿಡಿದು ಯುವಕರು, ವಯೋವೃದ್ಧರು ಮಹಾಮಾರಿ ಡೆಂಘೀ ಜ್ವರ ಮತ್ತು ಚಿಕೂನ್‌ ಗುನ್ಯಾ ರೋಗಕ್ಕೆ ತುತ್ತಾಗಿ, ಬಳಲುತ್ತಿದ್ದಾರೆ. ಅಕ್ಟೋಬರ್‌ನಿಂದ ಇದುವರೆಗೆ ಶಂಕಿತ ಡೆಂಘೀ ಜ್ವರಕ್ಕೆ ಏಳು ಜನರು ಬಲಿಯಾಗಿದ್ದಾರೆ.

ತಾಲೂಕು ಕೇಂದ್ರಗಳಿಂದ ಹೆಚ್ಚಾಗಿ ಮಹಾನಗರ ವ್ಯಾಪ್ತಿಯಲ್ಲಿ ಮಾರಣಾಂತಿಕ ಡೆಂಘೀ ಜ್ವರ ಉಲ್ಬಣಗೊಂಡಿದೆ. ಜಿಲ್ಲಾಸ್ಪತ್ರೆ ಮತ್ತು ಗುಲಬರ್ಗಾ ವೈದ್ಯಕೀಯ ವಿಜ್ಞಾನ ಸಂಸ್ಥೆ (ಜಿಮ್ಸ್‌) ಆಸ್ಪತ್ರೆ ಸೇರಿದಂತೆ ಖಾಸಗಿ ಆಸ್ಪತ್ರೆಯಲ್ಲಿ ದಿನದಿಂದ ದಿನಕ್ಕೆ ಡೆಂಘೀ ರೋಗಿಗಳ ಸಂಖ್ಯೆ ಅಧಿಕವಾಗುತ್ತಿದೆ. ಹೆಚ್ಚಿನ ಚಿಕಿತ್ಸೆಗಾಗಿ ಸೊಲ್ಲಾಪುರ ಮತ್ತು ಬೆಂಗಳೂರು ಆಸ್ಪತ್ರೆಗಳತ್ತ ರೋಗಿಗಳು ಮುಖ ಮಾಡುವಂತೆ ಆಗಿದೆ.

ಏಳು ಶಂಕಿತರ ಸಾವು: ಜಿಲ್ಲೆಯಲ್ಲಿ ಪ್ರಸ್ತಕ ವರ್ಷದ ಆರಂಭದಿಂದ ಇದುವರೆಗೆ (ನ.12ಕ್ಕೆ) 353 ಡೆಂಘೀ ಪ್ರಕರಣಗಳು ದೃಢಪಟ್ಟಿವೆ. ಇದರಲ್ಲಿ 37 ಹೊರ ಜಿಲ್ಲೆಗಳ ರೋಗಿಗಳು ಸೇರಿದ್ದಾರೆ. ಆಘಾತಕಾರಿ ಅಂಶವೆಂದರೆ ಶಂಕಿತ ಡೆಂಘೀ ಜ್ವರದಿಂದ ಏಳು ಜನರು ಮೃತಪಟ್ಟಿದ್ದಾರೆ. ಇದರಲ್ಲಿ ನಗರದ ಖಾಸಗಿ ಆಸ್ಪತ್ರೆಗಳಲ್ಲಿ ಐವರು ಮೃತಪಟ್ಟಿದ್ದರೆ, ಮತ್ತಿಬ್ಬರು ಸೊಲ್ಲಾಪುರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಅಕ್ಟೋಬರ್‌ ತಿಂಗಳಿಂದ ಇತ್ತೀಚೆಗೆ ಏಳು ಸಾವುಗಳು ಸಂಭವಿಸಿದ್ದು, ರೋಗ ಉಲ್ಬಣಕ್ಕೆ ಸಾಕ್ಷಿಯಾಗಿದೆ. ಇದರ ಬೆನ್ನಲ್ಲೇ ಮಂಗಳವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ಮತ್ತೂಂದು ಸಾವಿನ ವರದಿಯಾಗಿದೆ. ಶಂಕಿತ ಡೆಂಘೀಯಿಂದ 18 ವರ್ಷದ ಯುವತಿ ಮೃತಪಟ್ಟಿದ್ದು, ಆಕೆಯನ್ನು ಮೊದಲು ಜಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಎರಡು ಖಾಸಗಿ ಆಸ್ಪತ್ರೆಗಳಿಗೆ ಸುತ್ತಿ, ಸೋಮವಾರ ರಾತ್ರಿ ಮತ್ತೂಂದು ಆಸ್ಪತ್ರೆಗೆ ಸೇರಿಸಲಾಗಿತ್ತು. ಅಲ್ಲಿ ಮಂಗಳವಾರ ಬೆಳಗ್ಗೆ ಆಕೆ ಕೊನೆಯುಸಿರೆಳೆದಿದ್ದಾಳೆ.

ಹೆಚ್ಚಿದ ಆತಂಕ: ಜನವರಿ ತಿಂಗಳಿಂದಲೇ ಡೆಂಘೀ ಜ್ವರ ಹಾಗೂ ಚಿಕೂನ್‌ ಗುನ್ಯಾ ಪ್ರಕರಣಗಳು ಬೆಳಕಿಗೆ ಬಂದಿವೆ. ಆಗಸ್ಟ್‌ನಿಂದ ಜನರಲ್ಲಿ ಈ ರೋಗಗಳು ಹೆಚ್ಚಿನ ಆತಂಕ ಸೃಷ್ಟಿಸಿವೆ. ಮಹಾನಗರ ಮಾತ್ರವಲ್ಲದೇ ಜಿಲ್ಲೆಯ ಅನೇಕ ಭಾಗಗಳಲ್ಲಿ ಡೆಂಘೀ ಜ್ವರ ಜನರನ್ನು ಬಾಧಿಸುತ್ತಿದೆ. ಆದರೂ, ಆರೋಗ್ಯ ಇಲಾಖೆ ಅಧಿಕಾರಿಗಳು ರೋಗಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಂಡಿಲ್ಲ ಎನ್ನುವ ಆರೋಪಗಳು ಕೇಳಿ ಬಂದಿವೆ.

ಜಿಲ್ಲಾಸ್ಪತ್ರೆ ಹಾಗೂ ಜಿಮ್ಸ್‌ ಆಸ್ಪತ್ರೆಯಲ್ಲಿ ವೈದ್ಯರು ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡುತ್ತಿಲ್ಲ. ಇದರಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ದಾಖಲಾದ ರೋಗಿಗಳು ಖಾಸಗಿ ಆಸ್ಪತ್ರೆ ಹಾಗೂ ಹೊರ ಜಿಲ್ಲೆಗಳತ್ತ ಮುಖ ಮಾಡುವಂತೆ ಆಗಿದೆ. ಇದನ್ನು ಆರೋಗ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೂ ಸರಿಯಾದ ಸಮಯಕ್ಕೆ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ ಎಂದು ಮಾನವ ಹಕ್ಕುಗಳ ಹೋರಾಟಗಾರ ರಿಯಾಜುದ್ದೀನ್‌ ಅಸಮಾಧಾನ ಹೊರ ಹಾಕಿದ್ದಾರೆ.

ಡೆಂಘೀ ಜ್ವರ ಹಾಗೂ ಚಿಕೂನ್‌ ಗುನ್ಯಾ ಹತೋಟಿಗೆ ತರುವುದು ನಮ್ಮ ಕೈಯಲ್ಲೇ ಇದೆ. ಪ್ರತಿಯೊಬ್ಬರು ತಮ್ಮ ಸುತ್ತಮುತ್ತಲಿನ ಪರಿಸರ ಸ್ವತ್ಛವಾಗಿ ಇಟ್ಟುಕೊಳ್ಳಬೇಕೆಂದು ಆರೋಗ್ಯ ಇಲಾಖೆ ಜಿಲ್ಲಾ ಕೀಟಶಾಸ್ತ್ರಜ್ಞ ಚಾಮರಾಜ ದೊಡ್ಡಮನಿ ಮನವಿ ಮಾಡಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

  • ಶಿವಮೊಗ್ಗ: ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ 87 ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ದುರಸ್ತಿಗಾಗಿ ಇದೇ ಪ್ರಥಮ ಬಾರಿಗೆ ಸರ್ಕಾರ 15 ಕೋಟಿ ರೂ....

  • ಚಿಕ್ಕನಾಯಕನಹಳ್ಳಿ: ತಾಲೂಕಿನ ಮಲ್ಲಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಪಾಳ್ಯದ ಪ್ರಾಥಮಿಕ ಶಾಲೆಯ ಛಾವಣಿ ಹಾಗೂ ಕಂಬ ಕುಸಿದು ಬಿದ್ದಿದ್ದು, ಅದೃಷ್ಟವಶಾತ್‌...

  • ಚಿತ್ರದುರ್ಗ: ಹೆಣ್ಣುಮಗು ಬೇಡ ಎನ್ನುವ ಭಾವನೆ ಇಂದು ಲಿಂಗಾನುಪಾತದಲ್ಲಿ ವ್ಯತ್ಯಾಸವಾಗುವಂತೆ ಮಾಡಿದೆ. ಇದರಿಂದ ಇಂದು ವಧುವಿಗಾಗಿ ಹುಡುಕಾಡುವ ಸ್ಥಿತಿ ನಿರ್ಮಾಣವಾಗಿದೆ...

  • ಚಿಕ್ಕಮಗಳೂರು: ಸಂವಿಧಾನದ ಮೂಲ ಆಶಯಗಳನ್ನು ಪ್ರತಿಯೊಬ್ಬರೂ ಅರಿತು ಕೊಳ್ಳುವ ಅನಿವಾರ್ಯತೆ ಇದೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಉಮೇಶ್‌...

  • ಮಾಗಡಿ: ಪಟ್ಟಣದ ಐತಿಹಾಸಿಕ ನಾಡಪ್ರಭು ಕೆಂಪೇಗೌಡ ಕೋಟೆ ಮೈದಾನದಲ್ಲಿ ಡಿ.12ರ ಗುರುವಾರ ದಿನದಂದು ನಡೆಯಲಿರುವ ಕೆಂಪೇಗೌಡರ 511ನೇ ಜಯಂತ್ಯುತ್ಸವದ ಬೃಹತ್‌ ವೇದಿಕೆ...

ಹೊಸ ಸೇರ್ಪಡೆ