ಲೋಕಸಭೆ ಚುನಾವಣೆ: ಜಿಲ್ಲಾಡಳಿತ ಸಜ್ಜು

ಏ.21 ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರ ಅಂತ್ಯಪ್ರತಿಮತಗಟ್ಟೆಯಲ್ಲೂ ಸೂಕ್ತ ಬಂದೋಬಸ್ತು

Team Udayavani, Apr 19, 2019, 10:42 AM IST

ಕಲಬುರಗಿ: ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಆರ್‌. ವೆಂಕಟೇಶಕುಮಾರ ಚುನಾವಣೆ ಸಿದ್ಧತೆ ಕುರಿತು ಮಾಹಿತಿ ನೀಡಿದರು. ಟಿ.ಯೋಗೇಶ ಕುಮಾರ ಇದ್ದರು.

ಕಲಬುರಗಿ: ಗುಲಬರ್ಗಾ (ಮೀಸಲು) ಲೋಕಸಭಾ ಕ್ಷೇತ್ರಕ್ಕೆ ಏ.23ರಂದು ನಡೆಯುವ ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ನಡೆಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, ಜಿಲ್ಲಾಡಳಿತ ಸಜ್ಜಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಆರ್‌. ವೆಂಕಟೇಶಕುಮಾರ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದಾದ್ಯಂತ 2,368 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 516 ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಇದರಲ್ಲಿ 130 ಸೂಕ್ಷ್ಮ
ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್‌ ವ್ಯವಸ್ಥೆ ಕಲ್ಪಿಸಲಾಗಿದೆ. ಮತಗಟ್ಟೆಯಲ್ಲಿನ ಮತದಾನ ಪ್ರಕ್ರಿಯೆಯನ್ನು ಚುನಾವಣಾ ಆಯೋಗವು ನೇರವಾಗಿ ವೀಕ್ಷಿಸಬಹುದಾಗಿದೆ ಎಂದರು.

ಎಲ್ಲ ಮತಗಟ್ಟೆಗಳಲ್ಲಿ ಕೇಂದ್ರ ಸರ್ಕಾರದ ಒಬ್ಬ ಸಿಬ್ಬಂದಿಯನ್ನು ಮೈಕ್ರೋ ವೀಕ್ಷಕರೆಂದು ನೇಮಿಸಲಾಗಿದೆ. ಮತದಾನ ಪ್ರಕ್ರಿಯೆ ಸುಸೂತ್ರವಾಗಿ ನಡೆಯುವಂತೆ ಶಾಂತಿ ಸುವ್ಯವಸ್ಥೆಗೆ ಪ್ರತಿ ಮತಗಟ್ಟೆಗೆ ಸಿಆರ್‌ಪಿಎಫ್‌, ಸಿಎಆರ್‌ ಪೊಲೀಸ್‌ ಸಿಬ್ಬಂದಿ, ಗೃಹರಕ್ಷಕ ದಳ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಹೇಳಿದರು.

ಒಂಭತ್ತು ಸಖೀ ಮತಗಟ್ಟೆಗಳ ಸ್ಥಾಪನೆ: ಜಿಲ್ಲೆಯ ಒಂಭತ್ತು ವಿಧಾನಸಭೆ ಕ್ಷೇತ್ರಗಳಲ್ಲಿ ಮಹಿಳಾ ಮತದಾರರನ್ನು ಆಕರ್ಷಿಸಲು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಂದರಂತೆ ಒಟ್ಟು ಒಂಭತ್ತು ಸಖೀ
ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ. ಅಲ್ಲದೆ ವಿಧಾನಸಭಾವಾರು ಒಂಭತ್ತು ಮಾದರಿ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು ಎಂದು
ಮಾಹಿತಿ ನೀಡಿದರು.

ಅಂಗವಿಕಲರಗೆ ವ್ಯವಸ್ಥೆ: ಈ ಬಾರಿ ಚುನಾವಣೆಯಲ್ಲಿ ಅಂಗವಿಲರಿಗೆ ವಿನೂತನ ವ್ಯವಸ್ಥೆಯನ್ನು ಚುನಾವಣಾ ಆಯೋಗ ಕೈಗೊಂಡಿದೆ. ಮತಗಟ್ಟೆಗಳಲ್ಲಿ ರ್‍ಯಾಂಪ್‌ ವ್ಯವಸ್ಥೆ ಮಾಡಲಾಗಿದೆ. ದೃಷ್ಟಿ ದೋಷವುಳ್ಳವರಿಗೆ ಸಹಾಯವಾಗಲು ಬ್ರೈಲ್ ಬ್ಯಾಲೆಟ್‌ ಪೇಪರ್‌ ಸರಬರಾಜು ಮತ್ತು ಮತದಾನಕ್ಕೆ ಬರುವವರನ್ನು ಕರೆತರಲು ವಾಹನದ ವ್ಯವಸ್ಥೆ ಮಾಡಲಾಗಿದೆ. ಒಂಬತ್ತು ಪಿಡಬ್ಲ್ಯುಡಿ ಮತಗಟ್ಟೆ ಸ್ಥಾಪಿಸಲಾಗಿದೆ ಎಂದರು.

ಗುರುತಿನ ಚೀಟಿ ಕಡ್ಡಾಯ: ಮತದಾರರಿಗೆ ನೀಡಲಾಗುವ ವೋಟರ್‌ ಸ್ಲಿಪ್‌ನೊಂದಿಗೆ ಚುನಾವಣಾ ಆಯೋಗ ನಿಗದಿಪಡಿಸಿರುವ 11 ಗುರುತು ಪತ್ರಗಳನ್ನು ಮತದಾನಕ್ಕೆ ತರುವುದು ಕಡ್ಡಾಯ. ಪಾಸ್‌ಪೋರ್ಟ್‌, ಡ್ರೈವಿಂಗ್‌ ಲೈಸೆನ್ಸ್‌,
ಸರ್ಕಾರದಿಂದ ನೀಡಿದ ಭಾವಚಿತ್ರವಿರುವ ಗುರುತಿನ ಚೀಟಿ, ಬ್ಯಾಂಕ್‌, ಕಿಸಾನ್‌ ಮತ್ತು ಅಂಚೆ ಕಚೇರಿ ಪಾಸ್‌ ಬುಕ್‌, ಪಾನ್‌ ಕಾರ್ಡ್‌, ಎನ್‌ಪಿಆರ್‌ ಸ್ಮಾರ್ಟ್‌ ಕಾರ್ಡ್‌, ಉದ್ಯೋಗ ಖಾತ್ರಿ ಜಾಬ್‌
ಕಾರ್ಡ್‌, ಆರೋಗ್ಯ ವಿಮಾ ಸ್ಮಾರ್ಟ್‌ ಕಾರ್ಡ್‌ಗಳು, ಪಿಂಚಣಿ ಪಾವತಿ ಆದೇಶಗಳು, ಆಧಾರ ಕಾರ್ಡ್‌ ಪೈಕಿ ಒಂದನ್ನು ತೋರಿಸಿ ಮತ ಚಲಾಯಿಸಬಹುದಾಗಿದೆ ಎಂದು ವಿವರಿಸಿದರು.

ಎಕ್ಸಿಟ್‌ ಪೋಲ್‌ ನಿಷೇಧ: ಚುನಾವಣೆ ಬಹಿರಂಗ ಪ್ರಚಾರ ಏ.21ರ ಸಂಜೆ 6 ಗಂಟೆಗೆ ಅಂತ್ಯಗೊಳ್ಳಲಿದೆ. ಏ.22 ಹಾಗೂ 23ರಂದು ಮುದ್ರಣ ಮಾಧ್ಯಮದಲ್ಲಿ ಯಾವುದೇ ಚುನಾವಣೆಗೆ ಸಂಬಂ ಧಿಸಿದ ಜಾಹೀರಾತು ಪ್ರಕಟಣೆ ಮಾಡಬೇಕಾದಲ್ಲಿ ಅದಕ್ಕೆ ಎಂಸಿಎಂಸಿ
ಅನುಮತಿ ಅಗತ್ಯವಾಗಿದೆ. ಕೊನೆಯ 48 ಗಂಟೆಗಳಲ್ಲಿ ಮುದ್ರಣ, ಸುದ್ದಿ ವಾಹಿನಿ, ಕೇಬಲ್‌ ಟಿವಿ., ರೇಡಿಯೋ ಸೇರಿದಂತೆ ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಚುನಾವಣೆ ಫಲಿತಾಂಶದ ಮೇಲೆ ಪರಿಣಾಮ ಬೀರುವ ಚುನಾವಣೆಗೆ ಸಂಬಂಧಿ ಸಿದಂತೆ ಎಲ್ಲ ರೀತಿಯ ಡಿಬೇಟ್‌, ಪ್ರಸಾರ, ಸಂದರ್ಶನ, ಎಕ್ಸಿಟ್‌ ಪೋಲ್‌ ಪ್ರಸಾರ ಮಾಡುವುದು ನಿಷೇ ಧಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಗುಲಬರ್ಗಾ ಲೋಕಸಭಾ ಕ್ಷೇತ್ರದ ಮತದಾರರಲ್ಲದವರು ಮತದಾನ ಮುಗಿಯುವ 48 ಗಂಟೆ ಮುಂಚಿತವಾಗಿಯೆ ಈ ಕ್ಷೇತ್ರವನ್ನು ಖಾಲಿ ಮಾಡಬೇಕು. ಈ ಅವಧಿಯಲ್ಲಿ ಧ್ವನಿ ವರ್ಧಕ ಬಳಸುವಂತಿಲ್ಲ ಹಾಗೂ ಏ.21ರ ಸಂಜೆ 6 ಗಂಟೆಯಿಂದ ಏ.23ರ ಮಧ್ಯರಾತ್ರಿ ವರೆಗೆ ಮದ್ಯ ನಿಷೇ ಧಿಸಲಾಗಿದೆ. ಇದಲ್ಲದೇ ಏ.23ರಂದು ಜಿಲ್ಲೆಯಾದ್ಯಂತಹ ನಡೆಯುವ ಎಲ್ಲ ರೀತಿಯ ಸಂತೆ
ಹಾಗೂ ಜಾತ್ರೆ ಹಾಗೂ ಉತ್ಸವಗಳನ್ನು ಮುಂದೂಡಿ ಆದೇಶ ಹೊರಡಿಸಲಾಗಿದೆ. ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಯೋಗೇಶ ಕುಮಾರ ಇದ್ದರು.

ಮೊಬೈಲ್‌-ಕ್ಯಾಮೆರಾ ನಿಷೇಧ ಮೊಬೈಲ್‌-ಕ್ಯಾಮೆರಾ ನಿಷೇಧ
ಮತದಾನದ ಗೌಪ್ಯತೆ ಕಾಪಾಡುವ ದೃಷ್ಟಿಯಿಂದ ಮತದಾರರು ಮತಗಟ್ಟೆಗೆ ಮೊಬೈಲ್‌, ಕ್ಯಾಮೆರಾ ತರುವುದನ್ನು ನಿಷೇಧಿ ಸಲಾಗಿದೆ. ಮತಗಟ್ಟೆಯಲ್ಲಿ ತಪಾಸಣೆಗಾಗಿ ಸಿಬ್ಬಂದಿ ನೇಮಿಸಲಾಗುವುದು. ಮತದಾರರು ಮತಗಟ್ಟೆಗೆ ಮೊಬೈಲ್‌, ಕ್ಯಾಮೆರಾ ತರಬಾರದು.
ಆರ್‌. ವೆಂಕಟೇಶಕುಮಾರ, ಜಿಲ್ಲಾಧಿಕಾರಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ