ದೈವವಲ್ಲ ಪರಿಶ್ರಮದ ಮೇಲಿರಲಿ ನಂಬಿಕ

Team Udayavani, Nov 10, 2018, 10:00 AM IST

ಕಲಬುರಗಿ: ವಿದ್ಯಾರ್ಥಿಗಳು ಪರಿಶ್ರಮ ಬಿಟ್ಟು ದೈವದ ಮೇಲೆ ಅವಲಂಬನೆ ಆಗಬೇಡಿ. ನಿಮ್ಮ ಪರಿಶ್ರಮದ ಮೇಲೆಯೇ ಮುಂದಿನ ಭವಿಷ್ಯ ನಿರ್ಧಾರವಾಗುವುದೇ ಹೊರತು ಯಾರೋ ಹಸ್ತರೇಖೆ ನೋಡಿ ಭವಿಷ್ಯ ಹೇಳುವುದರಿಂದಲ್ಲ ಎಂದು ಸುಪ್ರೀಂಕೋರ್ಟ್‌ ವಿಶ್ರಾಂತ ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ ಸಲಹೆ ನೀಡಿದರು.

ನಗರದ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಶರಣಬಸವೇಶ್ವರ ವಸತಿ ಶಾಲೆಯ ಸುವರ್ಣ ಮಹೋತ್ಸವ ಮತ್ತು ಅಲುಮಿನಿ ಉತ್ಸವದಲ್ಲಿ ಶುಕ್ರವಾರ ಸಂಜೆ ಪ್ರೋತ್ಸಾಹದಾಯಕ ಭಾಷಣ ಮಾಡಿದ ಅವರು, ಪರಿಶ್ರಮದಿಂದ ಹಣೆಬರಹ ಬದಲಾಯಿಸಬಹುದು ಎನ್ನುವುದು ನಿತ್ಯ ಸೂರ್ಯ ಹುಟ್ಟುವಷ್ಟೇ ಸತ್ಯ ಎಂದು ಹಿಂದಿಯ ಹಾಡೊಂದನ್ನು ನೆನಪಿಸಿಕೊಂಡು ಹೇಳಿದರು.

ಮನುಷ್ಯನಿಗೆ ಮನುಷ್ಯತ್ವವೇ ಪುರಸ್ಕಾರ. ಆಸ್ತಿ, ಅಧಿಕಾರ ಮತ್ತು ಸಂಪತ್ತು ಬದಲಾಗಬಹುದು. ಆದರೆ, ಮನುಷ್ಯತ್ವದ ಮೌಲ್ಯ ಯಾವುದೇ ಕಾರಣಕ್ಕೂ ಬದಲಾಗಬಾರದು. ಮನುಷ್ಯನಲ್ಲಿ ಹುಟ್ಟಿನಂದಲೇ ಮನುಷ್ಯತ್ವ ಎನ್ನುವುದು ಇರುತ್ತದೆ. ಅದನ್ನು ಕಾಪಾಡಿಕೊಂಡು ಹೋಗಬೇಕೆಂದರು.

ಹಳ್ಳಿಯಿಂದ ಬೆಳೆದು ಬಂದವರು ಪುನಃ ಹಳ್ಳಿಗಳ ಕಡೆಗೆ ಮುಖ ಮಾಡಿನೋಡಬೇಕು. ಒಂದು ಬೆವರಿನ ಹನಿ ಮುಂದೆ ನೂರಾರು ಬೆವರಿನ ಹನಿಗಳನ್ನು ಉಳಿಸಬಹುದು. ನಮ್ಮಲ್ಲಿ ಸದಾ ಆತ್ಮವಿಶ್ವಾಸ ಇರಬೇಕು. ಕಠಿಣ ಪರಿಶ್ರಮ, ಪ್ರಾಮಾಣಿಕತೆ ಹಾಗೂ ವಿನಯಕ್ಕೆ ಭಗವಂತನ ಕೃಷೆ ಇದ್ದೇ ಇರುತ್ತದೆ. ಯಂಗ್‌ ಹಿಂದೂಸ್ತಾನನಿಂದ ಉತ್ತಮ ಹಿಂದೂಸ್ತಾನ ಕಟ್ಟಲು ಸಾಧ್ಯವಿದೆ ಎಂದು ತಿಳಿಸಿದರು. 

ಹಿಂದಿನ ಕೆಲ ವರ್ಷಗಳು ಹಾಗೂ ಇಂದಿನ ದಿನಗಳಿಗೆ ತುಲನೆ ಮಾಡಿದಾಗ ಹೈಕ ಭಾಗದಲ್ಲಿ ದೊಡ್ಡ ಶೈಕ್ಷಣಿಕ ಕ್ರಾಂತಿಯಾಗಿದೆ. ದೊಡ್ಡಪ್ಪ ಅಪ್ಪ ಮನೆ, ಮನೆಯಿಂದ ಹೆಣ್ಣು ಮಕ್ಕಳನ್ನು ಕರೆಯಿಸಿ ಶಿಕ್ಷಣ ನೀಡಿದ್ದಾರೆ. ಈ ಮೂಲಕ ಅನ್ನ ದಾಸೋಹದೊಂದಿಗೆ ವಿದ್ಯಾ ದಾಸೋಹ ಮಹತ್‌ ಕಾರ್ಯವಾಯಿತು. ಜತೆಗೆ ಕೆಬಿಎನ್‌, ಎಚ್‌ಕೆಇಯಂತ ವಿದ್ಯಾರ್ಥಿಗಳಿಗೆ ಶಿಕ್ಷಣ ಸಂಸ್ಥೆಗಳು ಅವಕಾಶದ ಬಾಗಿಲುಗಳನ್ನು ತೆರೆದವು. ಇದರ ಫಲ ಎಂಬಂತೆ ನಾನು ನಿಮ್ಮ ಮುಂದೆ ನಿಲ್ಲಲು ಸಾಧ್ಯವಾಗಿರುವುದು ಎಂದರು. 

ಮೊದಲು ಗುರುಕುಲ, ನಂತರ ದೇಗುಲಗಳಲ್ಲಿ ಶಿಕ್ಷಣ ಸಿಗುತ್ತಿತ್ತು. ಆನಂತರ ಖಾಸಗಿ ವಿದ್ಯಾ ಸಂಸ್ಥೆಗಳು ಹುಟ್ಟಿಕೊಂಡು ಇಂದು ಉನ್ನತ ಮಟ್ಟಕ್ಕೆ ಬೆಳೆದಿವೆ. ಸರ್ಕಾರ ಮಾಡದಂತ ಕಾರ್ಯಗಳನ್ನು ಖಾಸಗಿ ವಿದ್ಯಾ ಸಂಸ್ಥೆಗಳು ಮಾಡುತ್ತಿವೆ. ಯಾವ ದೇಶ ಶಿಕ್ಷಣಕ್ಕೆ ಗಮನ ಕೊಡುವುದಿಲ್ಲವೋ ಆಂತಹ ದೇಶ ಕಟ್ಟುವುದನ್ನೇ ನಿರ್ಲಕ್ಷ್ಯ ಮಾಡಿದಂತೆ. ಶಿಕ್ಷಣದಲ್ಲಿ ಹಣವನ್ನು ಹೂಡಿದರೆ ಉದ್ಯಮಕ್ಕಿಂತಲೂ ಹೆಚ್ಚಿನ ಲಾಭ ಗಳಿಸಬಹುದು ಎನ್ನುವ ಉದಾಹರಣೆಗಳು ಸಾಕಷ್ಟಿವೆ. ಆದರೆ, ಗುಣಮಟ್ಟದ ಶಿಕ್ಷಣ ಮತ್ತು ಮಾನವೀಯ ಮೌಲ್ಯ ಕಟ್ಟಿಕೊಡುವುದು ಶಿಕ್ಷಣ ಸಂಸ್ಥೆಗಳ ಹೊಣೆ ಎಂದರು.

ಶಾಸಕ ಎಂ.ವೈ. ಪಾಟೀಲ, ಎಸ್‌ಬಿಆರ್‌ ಅಲುಮಿನಿ ಉಪಾಧ್ಯಕ್ಷ ಡಾ| ಬಸವರಾಜ ಬಂಡಿ, ಅಲುಮಿನಿ ಸದಸ್ಯರಾದ ಮಹಾದೇವ ಖೇಣಿ, ಅರವಿಂದ ಶರ್ಮಾ, ಕ್ಯಾ.ಡಾ| ದಿನೇಶ ಸಾಲಿಮಠ, ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರ, ಎಸ್‌ಬಿಆರ್‌ ಶಾಲೆಯ ಪ್ರಾಂಶುಪಾಲ ಎನ್‌.ಎಸ್‌. ದೇವರಕಲ್‌ ಹಾಜರಿದ್ದರು. 

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ