ಉಕ್ಕಿ ಹರಿಯುತ್ತಿರುವ ಭೀಮಾ ನದಿ: ಮುಳುಗಿದ ಸೇತುವೆಗಳು

Team Udayavani, Sep 18, 2017, 9:59 AM IST

ಅಫಜಲಪುರ: ಮಹಾರಾಷ್ಟ್ರ ಹಾಗೂ ಕಲಬುರ್ಗಿ ಜಿಲ್ಲಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆಗೆ ಭೀಮಾ ನದಿ ತುಂಬಿ ಹರಿಯುತ್ತಿದ್ದು ಪ್ರಮುಖ ಸೇತುವೆಗಳು ಮುಳುಗಡೆಯಾಗಿ, ಸಂಚಾರ ಸ್ಥಗಿತಗೊಂಡಿದೆ.

ಭೀಮಾ ನದಿ ಮಧ್ಯದಲ್ಲಿರುವ ತಾಲೂಕಿನ ಮಣ್ಣೂರ ಗ್ರಾಮದ ಶಕ್ತಿ ದೇವತೆ ಯಲ್ಲಮ್ಮನ ಗುಡಿ ಮುಳುಗಡೆ ಆಗಿದೆ. ತಾಲೂಕಿನ ಘತ್ತರಗಿ, ದೇವಲ ಗಾಣಗಾಪುರ, ಚಿನಮಳ್ಳಿ ಗ್ರಾಮಗಳಲ್ಲಿ ಭೀಮಾ ನದಿಗೆ ಕಟ್ಟಿರುವ ಬ್ರಿಡ್ಜ್ ಕಂ ಬ್ಯಾರೇಜ್‌ಗಳು ಸೇತುವೆ ಮೇಲೆ ಹರಿಯುತ್ತಿದ್ದು, ಘತ್ತರಗಿ, ದೇವಲ ಗಾಣಗಾಪುರ, ಚಿನಮಳ್ಳಿ, ಮಣ್ಣೂರ, ವಿಜಯಪುರದ ಸಿಂದಗಿ ತಾಲೂಕಿನ ಮೋರಟಗಿ, ಜೇವರ್ಗಿ ತಾಲೂಕಿನ ಜೇರಟಗಿ, ನೆಲೋಗಿ, ಇಂಡಿ ತಾಲೂಕಿನ ಭೂಂಯ್ನಾರ್‌ ಗ್ರಾಮಗಳ ಸಂಪರ್ಕ ಕಡಿತಗೊಂಡಿವೆ. ಅಫಜಲಪುರ ತಾಲೂಕಿನ ಭೀಮಾ ನದಿ ಪಾತ್ರದ ಗ್ರಾಮಗಳಾದ ಶಿವೂರ, ಕೂಡಿಗನೂರ, ಬಂದರವಾಡ, ಸಾಗನೂರ, ಚಿನಮಳ್ಳಿ, ತೆಗ್ಗೆಳ್ಳಿ, ಟಾಕಳಿ, ಉಮರ್ಗಾ, ಕಿರಸಾವಳಗಿ, ಕೆಕ್ಕರಸಾವಳಗಿ, ಸಂಗಾಪುರ, ಶಿವಪುರ, ಬನ್ನಟ್ಟಿ, ಅಳ್ಳಗಿ (ಬಿ), ಅಳ್ಳಗಿ (ಕೆ), ಉಡಚಾಣ, ಸಾಗನೂರ, ಕೆರಕನಹಳ್ಳಿ ಹಾಗೂ ಸಿಂದಗಿ, ಇಂಡಿ ತಾಲೂಕಿನಲ್ಲಿ ಬರುವ ಗ್ರಾಮಗಳಲ್ಲೂ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. 

ಅಪಾರ ಹಾನಿ: ಭೀಮಾ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಅಪಾರ ಪ್ರಮಾಣದ ಹಾನಿಯಾಗಿದೆ. ನದಿ ಪಾತ್ರದ ರೈತರ ಜಮೀನಿನ ಫಲವತಾದ ಮಣ್ಣು ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ. ಕಬ್ಬು, ತೊಗರಿ, ಹತ್ತಿ, ಬಾಳಿ, ಸೂರ್ಯಕಾಂತಿ ಸೇರಿದಂತೆ ವಿವಿಧ ಬೆಳೆಗಳು ಪ್ರವಾಹದಿಂದ ಹಾಳಾಗಿವೆ. ಭೀಮಾ ನದಿ ಪ್ರವಾಹಮಟ್ಟ ತಲುಪಿದ್ದು, ನದಿ ಪಾತ್ರದ ಗ್ರಾಮಗಳ ಜನರು ದಡಕ್ಕೆ ಹೋಗದಂತೆ, ಪ್ರವಾಹ ಪರಿಸ್ಥಿತಿ ಉಂಟಾದಾಗ ಸಹಕರಿಸಬೇಕೆಂದು ಅಧಿಕಾರಿಗಳು ಮನವಿ ಮಾಡಿದ್ದಾರೆ. ಸದ್ಯ ಭೀಮಾ ನದಿಯಲ್ಲಿ 1.45 ಲಕ್ಷ ಕ್ಯುಸೆಕ್‌ ನೀರು ಒಳ ಮತ್ತು ಹೊರ ಹರಿವಿದೆ. ಸೊನ್ನ ಭೀಮಾ ಜಲಾಶಯದ ಒಟ್ಟು 29 ಗೇಟ್‌ಗಳ ಪೈಕಿ 18 ಗೇಟ್‌ಗಳಿಂದ ನೀರನ್ನು ಹೊರಬಿಡಲಾಗುತ್ತಿದೆ ಎಂದು ಅಧಿಕಾರಿಗಳು “ಉದಯವಾಣಿ’ಗೆ ತಿಳಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ