ಖಾದಿ ಉತ್ಪನ್ನಗಳಿಗೆ ಹೆಚ್ಚಿನ ಪ್ರಚಾರ ನೀಡಿ: ರೇವೂರ

Team Udayavani, Sep 16, 2018, 11:37 AM IST

ಕಲಬುರಗಿ: ಮಹಾತ್ಮಾ ಗಾಂಧಿಗೆ ಬಹುಪ್ರಿಯವಾದ ಖಾದಿ ಬಟ್ಟೆ ಹಾಗೂ ಅದರ ಉತ್ಪನ್ನಗಳನ್ನು ಇಂದಿನ ಯುವ ಪೀಳಿಗೆ ಹೆಚ್ಚಿನ ರೀತಿಯಲ್ಲಿ ಉಪಯೋಗಿಸಲು ಪ್ರಚಾರದ ಅವಶ್ಯ ಕತೆ ಇದ್ದು, ಖಾದಿ ಗ್ರಾಮೋದ್ಯೋಗ ಮಂಡಳಿ ಈ ನಿಟ್ಟಿನಲ್ಲಿ ಚಿಂತನೆ ಮಾಡಬೇಕು ಎಂದು ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಹೇಳಿದರು.

ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಪಂಚಾಯಿತಿ, ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ, ನಬಾರ್ಡ್‌, ಜಿಲ್ಲಾಡಳಿತಗಳ ಸಂಯುಕ್ತಾಶ್ರಯದಲ್ಲಿ ನಗರದ ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾದ “ಖಾದಿ ಉತ್ಸವ-2018’ರ ಅಂಗವಾಗಿ ರಾಜ್ಯಮಟ್ಟದ ಖಾದಿ ಮತ್ತು ಗ್ರಾಮೋದ್ಯೋಗ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಪ್ರಧಾನಮಂತ್ರಿಗಳು ಖಾದಿ ಉತ್ಪನ್ನಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಅದರ ಪರಿಣಾಮವೇ ಕೇಂದ್ರ ಸರ್ಕಾರದ ಪಿ.ಎಂ.ಇ.ಜಿ.ಪಿ. ಯೋಜನೆಯಡಿ 25 ಲಕ್ಷ ರೂ. ವರೆಗೆ ಸಾಲ ನೀಡಿ, ಶೇ.35 ಸಬ್ಸಿಡಿ ನೀಡಲಾಗುತ್ತದೆ. ಅದೇ ರೀತಿ ರಾಜ್ಯ ಸರ್ಕಾರವೂ ಸಿ.ಎಂ.ಇ.ಜಿ.ಪಿ. ಯೋಜನೆಯಡಿ 10 ಲಕ್ಷ ರೂ. ವರೆಗೆ ಸಾಲ ನೀಡುತ್ತಿದ್ದು ಶೇ.25ರಷ್ಟು ಸಬ್ಸಿಡಿ ಅವಕಾಶ ಕಲ್ಪಿಸಿದೆ ಎಂದು ಹೇಳಿದರು. 

ಯೋಜನೆಗಳ ಲಾಭವನ್ನು ಸಣ್ಣ ಕೈಗಾರಿಕೋದ್ಯಮಿಗಳು ಪಡೆಯಬೇಕು. ನಗರದ ಜನತೆ ಈ ಅಪೂರ್ವ ವಸ್ತು ಪ್ರದರ್ಶನದಲ್ಲಿ ಭಾಗವಹಿಸಿ ಖಾದಿ ಉತ್ಪನ್ನಗಳನ್ನು ಖರೀದಿಸುವ ಮೂಲಕ ಖಾದಿಗೆ ಉತ್ತೇಜನ ನೀಡಬೇಕು
ಎಂದು ಸಾರ್ವಜನಿಕರಿಗೆ ಕರೆ ನೀಡಿದರು.  ಅಫಜಲಪುರ ಶಾಸಕ ಎಂ.ವೈ. ಪಾಟೀಲ ಮಾತನಾಡಿ, ಖಾದಿ ಉತ್ಪನ್ನಗಳನ್ನು ತಯಾರಿ ಮಾಡುವ ಸಣ್ಣ ಕೈಗಾರಿಕೆಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನೇಕ ಪ್ರೋತ್ಸಾಹಧನ ಯೋಜನೆಗಳನ್ನು ಹಮ್ಮಿಕೊಂಡಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಖಾದಿ ವಸ್ತುಗಳಿಗೆ ಉತ್ತಮ ಮಾರುಕಟ್ಟೆ ಲಭ್ಯವಾಗುತ್ತಿಲ್ಲ. ಹೀಗಾಗಿ ನೂತನ ಖಾದಿ ನೀತಿ ತರುವ ಅಗತ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರದ ಎಂ.ಎಸ್‌.ಎಂ.ಇ ಇಲಾಖೆ ಸಹಾಯಕ ನಿರ್ದೇಶಕ ಎಸ್‌. ಜವಳಗಿ ಮಾತನಾಡಿ, ಕೇಂದ್ರ ಸರ್ಕಾರದ ಯಾವುದೇ ಇಲಾಖೆಗಳು ಆಹ್ವಾನಿಸುವ ಟೆಂಡರ್‌ ಮೊತ್ತದಲ್ಲಿ ಶೇ.20ರಷ್ಟು ಮೊತ್ತದ ವಸ್ತುಗಳನ್ನು ಕಡ್ಡಾಯವಾಗಿ ಸಣ್ಣ
ಕೈಗಾರಿಕೆಗಳಿಂದ ನೇರವಾಗಿ ಖರೀದಿಸಲು ಕೇಂದ್ರ ಸರ್ಕಾರ ಪ್ರೋಕ್ಯೂರಮೆಂಟ್‌ ಪಾಲಿಸಿ ಜಾರಿಗೆ ತಂದಿದ್ದು, ಇಲ್ಲಿ ಸಣ್ಣ ಕೈಗಾರಿಕೋದ್ಯಮಿಗಳು ತಯಾರಿಸುವ ತಮ್ಮ ವಸುಗಳನ್ನು ಇಲ್ಲಿ ನೇರವಾಗಿ ಸರ್ಕಾರಕ್ಕೆ ಮಾರಾಟ ಮಾಡಬಹುದಾಗಿದೆ ಎಂದು ಹೇಳಿದರು. 

ಜಿಪಂ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ ಉದ್ಘಾಟಿಸಿದರು. ಮಹಾನಗರ ಪಾಲಿಕೆ ಮಹಾಪೌರ ಶರಣಕುಮಾರ ಮೋದಿ, ಜಿಪಂ ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ, ಜಿಪಂ ಮಾಜಿ ಸದಸ್ಯ ಅರುಣಕುಮಾರ ಪಾಟೀಲ, ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕ ಸಿ.ಹೆಚ್‌. ಹವಾಲ್ದಾರ್‌, ನಬಾರ್ಡ್‌ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ರಮೇಶ ಭಟ್ಟ ಎಸ್‌., ಕರ್ನಾಟಕ ರಾಜ್ಯ ಖಾದಿ ಗ್ರಾಮೋದ್ಯೋಗ ಮಂಡಳಿಯ ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ ಅಮೃತ ಬಿರಾದಾರ ಹಾಗೂ ಅಧಿಕಾರಿಗಳು ಇದ್ದರು.

ಕರ್ನಾಟಕ ರಾಜ್ಯ ಖಾದಿ ಗ್ರಾಮೋದ್ಯೋಗ ಮಂಡಳಿಯ ಆರ್ಥಿಕ ಸಲಹೆಗಾರರು ಹಾಗೂ ಮುಖ್ಯ ಲೆಕ್ಕಾಧಿಕಾರಿ ಬಿ.ಎಸ್‌. ಸಿದ್ದರಾಜಮ್ಮಾ ಪ್ರಾಸ್ತಾವಿಕವಾಗಿ ಮಾತನಾಡಿದರು. 


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ