ಇಂಜಿನಿಯರ್‌ ನೇಮಕಾತಿಗೆ ಮರು ಅಧಿಸೂಚನೆ ಹೊರಡಿಸಿ

Team Udayavani, Mar 29, 2019, 11:47 AM IST

ಕಲಬುರಗಿ: ರಾಜ್ಯ ಲೋಕೋಪಯೋಗಿ ಇಲಾಖೆಯ 870 ಎಂಜಿನಿಯರ್‌ ಹುದ್ದೆಗಳ ನೇಮಕಾತಿಯಲ್ಲಿ 371ನೇ (ಜೆ) ಕಲಂ ಅಡಿ ಮೀಸಲಾತಿ ನೀಡದೆ ಹೈದಾಬಾದ ಕರ್ನಾಟಕ ಭಾಗಕ್ಕೆ ಅನ್ಯಾಯ ಮಾಡಲಾಗಿದೆ. ಕೂಡಲೇ ನೇಮಕಾತಿ ಅಧಿಸೂಚನೆ ರದ್ದುಪಡಿಸಿ ಹೈ.ಕ ಭಾಗದ ಅಭ್ಯರ್ಥಿಗಳಿಗೆ ಮೀಸಲಾತಿ ಒದಗಿಸಿದ ಮರು ಅಧಿಸೂಚನೆ ಹೊರಡಿಸಬೇಕೆಂದು ಒತ್ತಾಯಿಸಿ ಹೈ.ಕ ಹೋರಾಟ ಸಮಿತಿ ವತಿಯಿಂದ ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಹೈ.ಕ ಹೋರಾಟ ಸಮಿತಿ ಅಧ್ಯಕ್ಷ, ಮಾಜಿ ಸಚಿವ ವೈಜನಾಥ ಪಾಟೀಲ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ನಗರದ ಸರ್ದಾರ ವಲ್ಲಭಭಾಯಿ ಪಟೇಲ್‌ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಮೆರವಣಿಗೆಯಲ್ಲಿ ರಾಜ್ಯ ಸರ್ಕಾರ ವಿರುದ್ಧಧಿಕ್ಕಾರದ ಷಣೆ
ಕೂಗಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ನಂತರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಹಕ್ಕೊತ್ತಾಯದ ಮನವಿ ಪತ್ರ ಸಲ್ಲಿಸಿದರು.

ಲೋಕೋಪಯೋಗಿ ಇಲಾಖೆಯಲ್ಲಿ ಖಾಲಿ ಇರುವ ಸಹಾಯಕ ಎಂಜಿನಿಯರ್‌570, ಕಿರಿಯ ಎಂಜಿನಿಯರ್‌300 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆದರೆ, ಹಿಂದುಳಿದ ಹೈ.ಕ ಭಾಗಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ 371ನೇ (ಜೆ) ಕಲಂ ಅಡಿ ಮೀಸಲಾತಿಯನ್ನು ನೇಮಕಾತಿಗೆ ಅನ್ವಯಿಸಿಲ್ಲ. ಇದರಿಂದ ಈ ಭಾಗದ ಅರ್ಹ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ. ಆದ್ದರಿಂದ ತಕ್ಷಣವೇ ನೇಮಕಾತಿ ಅಧಿಸೂಚನೆ ರದ್ದುಪಡಿಸಿ ಹೊಸ ನೇಮಕಾತಿ ಅಧಿಸೂಚನೆ ಹೊರಡಿಸಬೇಕೆಂದು ಆಗ್ರಹಿಸಿದರು.

ಹೊಸ ಅಧಿಸೂಚನೆಯಲ್ಲಿ 371ನೇ (ಜೆ) ಕಲಂ ಅನ್ವಯ ಹೈ.ಕ ಭಾಗದಲ್ಲಿ ಇದೇ ಭಾಗದ ಅಭ್ಯರ್ಥಿಗಳಿಗೆ ಶೇ.80ರಷ್ಟು ಮೀಸಲಾತಿ ಹಾಗೂ ರಾಜ್ಯದ ಇತರ ಜಿಲ್ಲೆಗಳಲ್ಲಿ ಶೇ.8ರಷ್ಟು ಮೀಸಲಾತಿ ಒದಗಿಸಬೇಕು. ಅಲ್ಲದೇ, ಈ ಭಾಗದ ಅಭ್ಯರ್ಥಿಗಳಿಗೆ ಟಿಇಟಿ, ಸಿಇಟಿ, ನೆಟ್‌ ಸೇರಿದಂತೆ ಇತರ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೃಪಾಂಕ ನೀಡಬೇಕು. ವಯೋಮಿತಿಯಲ್ಲಿ ಸಡಿಲಿಕೆ ಮಾಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ರಾಜ್ಯ ಸರ್ಕಾರ ಹೈ.ಕ ಭಾಗಕ್ಕೆ ಮಾಡುತ್ತಿರುವ ಅನ್ಯಾಯ ಸರಿಪಡಿಸಬೇಕು. ಇಲ್ಲವಾದಲ್ಲಿ ಪ್ರಾದೇಶಿಕ ಅಸಮಾನತೆ ವಿರುದ್ಧ ಹೋರಾಟ ಮುಂದುವರಿಯಲಿದೆ. ಅಲ್ಲದೇ, ನೇಮಕಾತಿಯಲ್ಲಿ ಮೀಸಲಾತಿ ಕಲ್ಪಿಸದೇ ಇರುವ ಬಗ್ಗೆ ನ್ಯಾಯಾಲಯ ಮೆಟ್ಟಿಲೇರಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಎಂ.ಎಸ್‌. ಪಾಟೀಲ ನರಿಬೋಳ, ಅಲ್ಲಮಪ್ರಭು ಬೆಟ್ಟದೂರ, ಶಿವಶಂಕರ ಗಾರಂಪಳ್ಳಿ, ರಾಮಚಂದ್ರ ಜಾಧವ್‌, ಗಣಪತರಾವ್‌ ಖೂಬಾ, ಚಂದ್ರಶೇಖರ ಹರಸೂರ, ರಾಜೇಂದ್ರ ಕರೇಕಲ್‌, ಅಶೋಕ ಗುರೂಜಿ, ರಾಜುಗೌಡ ನಾಗನಳ್ಳಿ, ಶಿವಶಂಕರ ಹಾಗೂ ಮತ್ತಿತರರು ಪಾಲ್ಗೊಂಡಿದ್ದರು.

ವ್ಹೀಲ್‌ಚೇರ್‌ನಲ್ಲಿ ಬಂದ ವೈಜನಾಥ ಹೈದಾಬಾದ ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷ, ಮಾಜಿ ಸಚಿವ ವೈಜನಾಥ ಪಾಟೀಲ ವ್ಹೀಲ್‌ ಚೇರ್‌ನಲ್ಲಿ ಬಂದು ಪ್ರತಿಭಟನೆಯಲ್ಲಿ ಭಾಗಹಿಸಿದರು. ಸರ್ದಾರ ವಲ್ಲಭಭಾಯಿ ಪಟೇಲ್‌ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಸುಡು ಬಿಸಿಲಿನಲ್ಲೂ ವ್ಹೀಲ್‌ ಚೇರ್‌ನಲ್ಲಿ ಕುಳಿತೇ ಸಾಗಿದರು. ಲೋಕಸಭೆ ಚುನಾವಣೆ ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಆವರಣದ ಪ್ರತಿಭಟನೆಗೆ ನಿಷೇಧ ಹೇರಲಾಗಿದ್ದು, ಕಚೇರಿ ದ್ವಾರದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರಿಗೆ ಬೇಡಿಕೆ ಪತ್ರವನ್ನು ವೈಜನಾಥ ಪಾಟೀಲ ಸಲ್ಲಿಸಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ