3 ತಿಂಗಳಿಂದ ಸಂಬಳವೇ ಬಂದಿಲ್ಲ

Team Udayavani, Sep 10, 2019, 3:41 PM IST

ಮುಳಬಾಗಿಲು: ಎರಡು ಮೂರು ತಿಂಗಳಿನಿಂದ ಸಂಬಳವಿಲ್ಲದೇ ಶಾಲಾ ಶಿಕ್ಷಕರು ಸಾಲ ಮಾಡಿ ಜೀವನ ಸಾಗಿಸುತ್ತಿದ್ದಾರೆ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಕೆ.ವಿ.ಜಗನ್ನಾಥ್‌ ಅಳಲು ತೋಡಿಕೊಂಡರು.

ನಗರದ ನೇತಾಜಿ ಕ್ರೀಡಾಂಗಣದಲ್ಲಿ ಸೆ.12ರಂದು ನಡೆಯುವ ಶಿಕ್ಷಕರ ದಿನಾಚರಣೆ ಪ್ರಯುಕ್ತ ಶಿಕ್ಷಕರಿಗೆ ಹಮ್ಮಿಕೊಂಡಿದ್ದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿ, ಬ್ಯಾಂಕ್‌ಗಳಲ್ಲಿ ಗೃಹ ಸಾಲ ಪಡೆದಿರುವ ಶಿಕ್ಷಕರಿಗೆ ಸಮಯಕ್ಕೆ ಸರಿಯಾಗಿ ಸಾಲ ಪಾವತಿ ಮಾಡಲಾಗದೇ ಬ್ಯಾಂಕ್‌ ಅಧಿಕಾರಿಗಳು ಬಡ್ಡಿ ವಿಧಿಸುತ್ತಿದ್ದಾರೆ. 2019-20ನೇ ಸಾಲಿನ ಹಣಕಾಸು ಬಜೆಟ್ ಮಾಡುವಾಗ ಬಿಇಒ ಕಚೇರಿಯಿಂದ 40 ಕೋಟಿ ರೂ., ಹಣವನ್ನು ಕಡಿಮೆ ಮಾಡಿ ಇಲಾಖೆಗೆ ಮಾಹಿತಿ ನೀಡಿರುವುದರಿಂದ ಪ್ರಸ್ತುತ ನಾವು ಸಂಬಳವಿಲ್ಲದೇ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.

ಜಮಾ ಆಗಿಲ್ಲ: ಅಧಿಕಾರಿಗಳು ಮಾಡಿದ ತಪ್ಪಿಗೆ ಶಿಕ್ಷಕರು ಶಿಕ್ಷೆಗೆ ಗುರಿಯಾಗಿರುವುದು ತುಂಬ ನೋವಾಗುತ್ತಿದೆ. ಈಗ 10 ಕೋಟಿ ರೂ. ಅನುದಾನ ಬಂದಿದ್ದರೂ ವಾರದಿಂದ ಶಿಕ್ಷಕರ ಬಿಲ್ಲುಗಳು ಉಪಖಜಾನೆಯಲ್ಲಿ ಇದ್ದು, ಇದುವರೆಗೂ ಹಣ ಕೆ2(ಗ್ರೇಡ್‌) ನಿಂದ ಕೆ1ಗೆ ಜಮಾ ಆಗದೇ, ಖಜಾನೆ ಅಧಿಕಾರಿಗಳು ಬೆಂಗಳೂರಿಗೆ ಹೋಗಿ ಎನ್‌ಎಂಸಿಯಲ್ಲಿ ಸರಿಪಡಿಸಿಕೊಂಡು ಬನ್ನಿ ಎಂದು ಉತ್ತರಿಸು ತ್ತಾರೆ. ಕೂಡಲೇ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಶಿಕ್ಷಕರಿಗೆ ಸಂಬಳವನ್ನು ನೀಡಬೇಕೆಂದು ಒತ್ತಾಯಿಸಿದರು.

ಗೈರಾದ ಶಿಕ್ಷಕರು: ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಎನ್‌.ರೆಡ್ಡಪ್ಪ ಮಾತನಾಡಿ, ತಾಲೂಕಿನಲ್ಲಿ 1500 ಶಿಕ್ಷಕರು ಇದ್ದು, ಕೆಲವೇ ಶಿಕ್ಷಕರು ಭಾಗವಹಿಸಿರುವುದು ಬೇಸರವಾಗಿದೆ. ನಮ್ಮ ತಾಲೂಕಿನಲ್ಲಿ ಮಾತ್ರ ಈ ಶಿಕ್ಷಕರ ದಿನಾಚರಣೆ ಪ್ರಯುಕ್ತ ಇಂತಹ ಕ್ರೀಡಾಕೂಟ ಹಮ್ಮಿಕೊಂಡಿರುವುದು ವಿಶೇಷ. ಇದನ್ನು ಎಲ್ಲಾ ಶಿಕ್ಷಕರು ಸದುಪಯೋಗಪಡಿಸಿಕೊಳ್ಳಬೇಕೆಂದು ವಿನಂತಿಸಿದರು.

ಪ್ರತಿಭೆ ಅನಾವರಣಗೊಳಿಸಿ: 6 ದಿನದಿಂದ ಖಜಾನೆಗೆ ತಿರುಗಾಡುತ್ತಿದ್ದು, ಖಜಾನೆ ಅಧಿಕಾರಿಗಳು ಸಬೂಬನ್ನು ಹೇಳುತ್ತಿದ್ದಾರೆ. ಈ ದಿನ ಶಿಕ್ಷಕರು ಕ್ರೀಡಾಕೂಟಗಳಲ್ಲಿ ಪಾಲ್ಗೊಂಡು ತಮ್ಮಲ್ಲಿರುವ ಪ್ರತಿಭೆ ಅನಾವರಣಗೊಳಿಸಬೇಕು. ಸೆ.12ರಂದು ಶ್ರೀನಿವಾಸಕಲ್ಯಾಣ ಮಂಟಪದಲ್ಲಿ ಶಿಕ್ಷಕರ ದಿನಾಚರಣೆ ಹಮ್ಮಿಕೊಂಡಿದ್ದು, ತಾಲೂಕಿನ ಎಲ್ಲಾ ಶಿಕ್ಷಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ವಿನಂತಿಸಿದರು.

ಶಿಕ್ಷಕರು ಮತ್ತು ಶಿಕ್ಷಕಿಯರು ಷಾಟ್ಪುಟ್, ಡಿಸ್ಕಸ್‌ ಥ್ರೋ, 100 ಮೀ., 200ಮೀ. ಓಟ. ನಡಿಗೆ, ಜಾನಪದ ಗೀತೆ, ಥ್ರೋಭಾಲ್, ವಾಲಿಬಾಲ್ ಮುಂತಾದ ಕ್ರೀಡೆಗಳನ್ನು ಏರ್ಪಡಿಸಲಾಗಿತ್ತು. ರಾಜ್ಯ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಇ.ಶ್ರೀನಿವಾಸಗೌಡ, ಪ್ರಭಾರಿ ಕ್ಷೇತ್ರ ಸಮನ್ವಯಾಧಿಕಾರಿ ವನಜಾಕ್ಷಮ್ಮ, ಇಸಿಒಗಳಾದ ಅಂಜಿತ್‌ಕುಮಾರ್‌, ಮುನಿಶಾಮಿ, ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ವಿ.ಜನಾರ್ದನ್‌, ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳಾದ ಸೋಮಶೇಖರ್‌, ಆನಂದ್‌, ಖಾಸಗಿ ಶಾಲೆಗಳ ಶಿಕ್ಷಕರ ಸಂಘದ ಅಧ್ಯಕ್ಷ ಶಂಕರ್‌, ಕಾರ್ಯದರ್ಶಿ ಆದಿಲ್ಪಾಷ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಗೌರವಾಧ್ಯಕ್ಷ ಶಿವಣ್ಣ, ಉಪಾಧ್ಯಕ್ಷರಾದ ಮಂಜುನಾಥ್‌, ಗೌರವ್ವ ಗಾಣಿಗೇರ್‌, ಪ್ರಧಾನ ಕಾರ್ಯದರ್ಶಿ ತಾಯಲೂರಪ್ಪ, ಸಂಘಟನಾ ಕಾರ್ಯದರ್ಶಿ ರಾಮಕೃಷ್ಣ, ಜಿಲ್ಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಆವಣಿ ಆನಂದ್‌, ಸಂಘಟನಾ ಕಾರ್ಯದರ್ಶಿ ಶಾಂತಕುಮಾರಿ, ಜಿಲ್ಲಾ ಪದಾಧಿಕಾರಿಗಳಾದ ಎಚ್.ವೆಂಕಟಗಿರಿಯಪ್ಪ, ನಾಗರತ್ನಮ್ಮ, ಬೇಬಿ, ಕಲಾವತಿ, ನಾಗರಾಜ್‌, ಎನ್‌ಪಿಎಸ್‌ ನೌಕರರ ಸಂಘದ ಅಧ್ಯಕ್ಷ ಸುಬ್ರಮಣಿ, ಮುಖಂಡರಾದ ಪೈಜುಲ್ಲಾ, ರಾಜ್‌ಕುಮಾರ್‌, ನಟರಾಜ್‌ ಪಾಲ್ಗೊಂಡಿದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ