ಖಾಸಗಿ ಶಾಲೆಗಳಲ್ಲಿ ಡೋನೇಶನ್: ಖಂಡನೆ
•ವಿವಿಧ ಸಂಘಟನೆಗಳಿಂದ ಪ್ರತಿಭಟನೆ-ಮನವಿ•ಖಾಸಗಿ ಶಾಲೆಗಳು ಸರ್ಕಾರದ ನಿಯಮ ಪಾಲಿಸುತ್ತಿಲ್ಲ
Team Udayavani, Jun 20, 2019, 11:33 AM IST
ಕುಷ್ಟಗಿ: ಹೆಚ್ಚುವರಿ ಡೋನೇಶನ್ ವಸೂಲಿ ಮಾಡುತ್ತಿರುವ ಶಾಲೆಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಕರ್ನಾಟಕ ವಿದ್ಯಾರ್ಥಿ ಸಂಘಟನೆ ಸದಸ್ಯರು ಬಿಇಒ ಚನ್ನಬಸಪ್ಪ ಮಗ್ಗದ್ ಅವರಿಗೆ ದೂರು ನೀಡಿದರು.
ಕುಷ್ಟಗಿ: ಖಾಸಗಿ ಶಾಲೆಗಳಲ್ಲಿ ಡೋನೇಶನ್ ಸುಲಿಗೆ ಖಂಡಿಸಿ ಕರ್ನಾಟಕ ವಿದ್ಯಾರ್ಥಿ ಸಂಘಟನೆ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಹಾಗೂ ವಿದ್ಯಾರ್ಥಿಗಳು ಇಲ್ಲಿನ ಬಿಇಒ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಇಲ್ಲಿನ ಕಾರ್ಗಿಲ್ ವೃತ್ತದಿಂದ ಕರ್ನಾಟಕ ವಿದ್ಯಾರ್ಥಿ ಸಂಘಟನೆ, ಕರವೇ ಸ್ವಾಭಿಮಾನಿ ಬಣ, ರೈತ ಸಂಘಗಳ ಸಹಯೋಗದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು. ನಂತರ ಬಿಇಒ ಕಚೇರಿಗೆ ಮುತ್ತಿಗೆ ಹಾಕಿದ ಕಾರ್ಯಕರ್ತರು, ಸರ್ಕಾರ ನಿಗದಿ ಪಡಿಸಿದ ಶುಲ್ಕದ ಹೊರತಾಗಿಯೂ ಹೆಚ್ಚುವರಿ ವಸೂಲಿ ಮಾಡುತ್ತಿದ್ದಾರೆ. ಪಟ್ಟಣದ ವಿವಿಧ ಖಾಸಗಿ ಶಾಲೆಗಳಲ್ಲಿ ಸರ್ಕಾರಿ ಶುಲ್ಕ ನೀತಿ ಉಲ್ಲಂಘಿಸಿ ಹೆಚ್ಚುವರಿ ಡೋನೇಶನ್ ವಸೂಲಿಗೆ ಸಾಕ್ಷಿಯಾಗಿ ವೀಡಿಯೋ ಮಾಡಿರುವುದನ್ನು ಬಿಇಒ ಅವರಿಗೆ ಪ್ರದರ್ಶಿಸಿದರೂ ಯಾವುದೇ ಶಿಸ್ತು ಕ್ರಮ ಕೈಗೊಳ್ಳದೇ ಇರುವುದಕ್ಕೆ ರಾಜೀನಾಮೆಗೆ ಒತ್ತಾಯಿಸಿದರು.
ಕರ್ನಾಟಕ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷ ದೇವರಾಜ್ ಹಜಾಳ ಮಾತನಾಡಿ, ಜೂ. 18ರಂದು ಪಟ್ಟಣದ ವಿವಿಧ ಖಾಸಗಿ ಶಾಲೆಗಳಲ್ಲಿ ಪಾಲಕರಿಂದ ಡೋನೇಶನ್ ವಸೂಲಿ ಮಾಡಿದ ವೀಡಿಯೋ ಸಾಕ್ಷಿ ನೀಡಿದರೂ ಕ್ರಮ ಕೈಗೊಂಡಿಲ್ಲ. ಇದರಲ್ಲಿ ಅಧಿಕಾರಿಗಳು ಶಾಮೀಲಾಗಿದ್ದಾರೆ. ಖಾಸಗಿ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದರು.
ರೈತ ಸಂಘದ ಜಿಲ್ಲಾಧ್ಯಕ್ಷ ಅಬ್ದುಲ್ ನಜೀರಸಾಬ್ ಮೂಲಿಮನಿ ಮಾತನಾಡಿ, ಶೈಕ್ಷಣಿಕವಾಗಿ ಖಾಸಗಿ ಶಾಲೆಗಳು ಆರಂಭಿಸಲು ಯಾವುದೇ ಅಭ್ಯಂತರವಿಲ್ಲ. ಆದರೆ ಸರ್ಕಾರ ನಿಯಮ ಉಲ್ಲಂಘಿಸಿದರೆ ನಮ್ಮ ವಿರೋಧವಿದೆ ಎಂದರು.
ಮನವಿ ಸ್ವೀಕರಿಸಿದ ಬಿಇಒ ಚನ್ನಬಸಪ್ಪ ಮಗ್ಗದ್ ಅವರು, ಸರ್ಕಾರದ ನಿಗದಿತ ಶುಲ್ಕ ಬದಲಿಗೆ ಹೆಚ್ಚುವರಿ ಶುಲ್ಕದ ರಶೀದಿ ನೀಡಿದರೆ ಆ ಶಾಲೆಯ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಖಾಸಗಿ ಶಾಲೆಗಳ ಶಾಲಾ ವಾರು ಶುಲ್ಕ ಪ್ರತ್ಯೇಕವಾಗಿದ್ದು ಏಕರೂಪವಾಗಿಲ್ಲ. ಲೆಕ್ಕ ಪರಿಶೋಧನಾ ವರದಿಯಾನುಸಾರ ಶುಲ್ಕ ನಿಗದಿಯಾಗಿರುತ್ತದೆ. ಹೆಚ್ಚವರಿ ಹಣ ತೆಗೆದುಕೊಂಡಿದ್ದರೆ ಪಾಲಕರಿಗೆ ವಾಪಾಸ್ ದೊರಕಿಸಿಕೊಡುವ ಜವಾಬ್ದಾರಿ ನಮ್ಮದು. ಸಂಘಟನೆಗಳು ದೂರು ನೀಡಿರುವ ಶಾಲೆಗಳಿಗೆ ನೋಟಿಸ್ ನೀಡಲಾಗುವುದು ಎಂದರು.
ರೈತ ಸಂಘದ ಮಹಿಳಾ ಘಟಕದ ಮಹಾಂತಮ್ಮ ಪಾಟೀಲ, ಮಾರುತಿ ನಾಯಕ್, ಮುರಳೀಧರ, ಸಂಚಾಲಕ ತೊಂಡೆಪ್ಪ ಚೂರಿ, ರಾಘವೇಂದ್ರ ದಾಸ್, ಮನೋಜ್ ಪಟ್ಟಣಶೆಟ್ಟರ, ಪ್ರಕಾಶ ತಾಳಕೇರಿ, ಹುಲಗಪ್ಪ ಚೂರಿ, ಹನುಮೇಶ ಬೂತಬಿಲ್ಲಿ, ರಾಘವೇಂದ್ರ, ರಫಿ ಬಂಗಾಳಿಮ ಅಡಿವೆಪ್ಪ ನಾಯಕ್, ಮುತ್ತುರಾಜ್, ರಾಜಶೇಖರ, ನವೀನ್ ಕಲಾಲ್ ಇತರರಿದ್ದರು.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444