ಮೂಲಸೌಲಭ್ಯ ವಂಚಿತ ವಾಚನಾಲಯ

Team Udayavani, Oct 19, 2019, 3:20 PM IST

ಯಲಬುರ್ಗಾ: ಪಟ್ಟಣದಲ್ಲಿರುವ ತಾಲೂಕು ಕೇಂದ್ರದ ಸಾರ್ವಜನಿಕ ಗ್ರಂಥಾಲಯದಲ್ಲಿ ಮೂಲ ಸೌಕರ್ಯ ಕೊರತೆಯಿಂದ ಓದುಗರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ.

1984ರಲ್ಲಿ ಗ್ರಂಥಾಲಯ ಪಟ್ಟಣದಲ್ಲಿ ಆರಂಭಗೊಂಡಿದೆ. 1994ರಲ್ಲಿ ಸ್ವಂತ ಕಟ್ಟಡ ನಿರ್ಮಾಣ ಮಾಡಲಾಗಿದೆ. ಪಟ್ಟಣದ ಹೃದಯ ಭಾಗದಲ್ಲಿರುವ ಗ್ರಂಥಾಲಯಕ್ಕೆ ಶಾಲಾ, ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಹಿರಿಯ ನಾಗರಿಕರು ಪತ್ರಿಕೆ, ಪುಸ್ತಕ ಓದಲು ಬರುತ್ತಾರೆ. ಆದರೆ ಕಟ್ಟಡ ಇಕ್ಕಟ್ಟಿನಿಂದ ಕೂಡಿದೆ. ಕೇವಲ 30×20 ಅಳತೆ ಕಟ್ಟಡವಿದೆ. ಓದುಗರಿಗೆ ಸ್ಥಳದ ಅಭಾವ ಕಾಡುತ್ತಿದೆ. ನಿತ್ಯ 200 ಜನರು ಆಗಮಿಸುತ್ತಿದ್ದು, ಇವರಿಗೆ ಕುಳಿತುಕೊಳ್ಳಲು ಕೇವಲ 32 ಕುರ್ಚಿಗಳು ಮಾತ್ರ ಇವೆ. ಇನ್ನುಳಿದಂತೆ ಹಲವಾರು ಜನತೆ ಹೊರಗೆ ಕುಳಿತು ಅಭ್ಯಾಸ ಮಾಡುವ ಪರಸ್ಥಿತಿ ನಿರ್ಮಾಣವಾಗಿದೆ. ಗ್ರಂಥಾಲಯದಲ್ಲಿ 5 ಅಲ್ಮೆರಾ, 7 ರ್ಯಾಕ್‌, 32 ಕುರ್ಚಿಗಳು ಇವೆ. ಗ್ರಂಥಾಲಯದಲ್ಲಿ ಸುಮಾರು 10 ಸಾವಿರ ಪುಸ್ತಕಗಳಿವೆ. ಕನ್ನಡ ದಿನಪತ್ರಿಕೆಗಳನ್ನು ಹಾಕಿಸಲಾಗುತ್ತಿದೆ.

ಸೌಲಭ್ಯಗಳಿಲ್ಲ: ಗ್ರಂಥಾಲಯಕ್ಕೆ ಫ್ಯಾನ್‌, ಕುಡಿಯುವ ನೀರಿನ ವ್ಯವಸ್ಥೆ, ಸ್ಥಳ ಅಭಾವ, ಶೌಚಾಲಯ ಸೇರಿದಂತೆ ಹಲವಾರು ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದೆ.

ನಿರ್ವಹಣೆ ಕೊರತೆ: ಗ್ರಂಥಾಲಯ ನಿರ್ವಹಣೆ ಕೊರತೆಯಿಂದ ಬಳಲುತ್ತಿದೆ. ಸುಣ್ಣ ಬಣ್ಣ ಕಂಡಿಲ್ಲ, ಅಲ್ಲಲ್ಲಿ ಬಿರುಕು ಬಿಟ್ಟಿದ್ದು, ದುರಸ್ತಿ ಕಾರ್ಯ ಕೈಗೊಳ್ಳಬೇಕಿದೆ. ಸಮಯಕ್ಕೆ ಸರಿಯಾಗಿ ಗ್ರಂಥಾಲಯ ಬಾಗಿಲು ತೆರೆಯುವುದಿಲ್ಲ. ಮೇಲ್ವಿಚಾರಕು ವಿದ್ಯಾರ್ಥಿಗಳಿಗೆ ಸರಿಯಾಗಿ ಸ್ಪಂದನೆ ಮಾಡುತ್ತಿಲ್ಲ. ಸ್ವಚ್ಛತೆ ಎಂಬುದು ಮರೀಚಿಕೆಯಾಗಿದೆ. ಪುಸ್ತಕಗಳು ಧೂಳು ತಿನ್ನುತ್ತಿವೆ. ಮೇಲ್ವಿಚಾರಕ ಸರಿಯಾಗಿ ಕಾರ್ಯ ನಿರ್ವಹಣೆ ಮಾಡುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಇತ್ತೀಚೆಗೆ ಬಹಳಷ್ಟು ಯುವಕರು ಸ್ಪರ್ಧಾತ್ಮಕ ಪರೀಕ್ಷೆ ಬಗ್ಗೆ ಆಸಕ್ತಿ ತಳೆದಿದ್ದು, ಗ್ರಂಥಾಲಯದತ್ತ ಮುಖ ಮಾಡುತ್ತಿದ್ದಾರೆ. ಆದರೆ ಗ್ರಂಥಾಲಯ ಮೂಲ ಸೌಕರ್ಯ ಕೊರತೆಯಿಂದ ಓದುಗರು ನಿರಾಸೆ ಅನುಭವಿಸುವಂತಾಗಿದೆ. ಗ್ರಂಥಾಲಯಗಳ ಪುನಶ್ಚೇತನಕ್ಕೆ ಸಂಬಂಧಿ ಸಿದ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಈ ಬಗ್ಗೆ ಯಾರೊಬ್ಬರೂ ಸ್ಪಂದಿಸಿಲ್ಲ. ಹಾಗಾಗಿ ಗ್ರಂಥಾಲಯ ಕೇಳುವವರೇ ಇಲ್ಲದಂತಾಗಿದೆ. ಪಟ್ಟಣ ಸೇರಿದಂತೆ ಸುತ್ತಮುತ್ತಲಿನ 25ಕ್ಕೂ ಹೆಚ್ಚು ಗ್ರಾಮಗಳಿಂದ ವಿದ್ಯಾರ್ಥಿಗಳು ಆಗಮಿಸುತ್ತಾರೆ

ಸದಸ್ಯತ್ವ ದರ ಹೆಚ್ಚು: ಗ್ರಂಥಾಲಯ ಸದಸ್ಯತ್ವ ಪಡೆಯಲು 100 ರೂ. ನಿಗದಿ ಮಾಡಿದ್ದಾರೆ. ಈ ಮೊದಲು 10 ರೂ. ಇತ್ತು, ಮತ್ತೆ 10 ರೂ.ಗೆ ಸದಸ್ಯತ್ವ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಇವರೆಗೂ 239 ಸದಸ್ಯತ್ವ ನೋಂದಣಿ ಮಾಡಿಸಿದ್ದಾರೆ. ಒಟ್ಟಾರೆಯಾಗಿ ಗ್ರಂಥಾಲಯಕ್ಕೆ ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕ, ಇಂಗ್ಲಿಷ್‌ ದಿನಪತ್ರಿಕೆಗಳು, ಸಾಹಿತ್ಯಕ ಪುಸ್ತಕಗಳ ಬೇಡಿಕೆ ಇದೆ. ಪುಸ್ತಕ ಸಂಗ್ರಹಣೆಗೆ ಇನ್ನೊಂದು ಕಟ್ಟಡ ಅವಶ್ಯಕತೆ ಇದೆ. ಮತ್ತೆ ಒಂದು ಕಟ್ಟಡ ಅವಶ್ಯಕತೆ ಈ ಗ್ರಂಥಾಲಯಕ್ಕೆ ಇದೆ. ತಾಲೂಕು ಕೇಂದ್ರದಲ್ಲೇ ಇರುವ ಗ್ರಂಥಾಲಯ ದುಸ್ಥಿತಿ ಈ ರೀತಿಯಾದರೆ ಗ್ರಾಮೀಣ

ಪ್ರದೇಶಗಳ ಗ್ರಂಥಾಲಯಗಳ ದುಸ್ಥಿತಿ ಹರೋಹರ ಎನ್ನುವಂತಾಗಿದೆ. ಯಲಬುರ್ಗಾ ಹಿಂದುಳಿದ ತಾಲೂಕು ಆಗಿದ್ದು, ವಿದ್ಯಾವಂತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆದರಿಂದ ಸೌಲಭ್ಯ ಕಲ್ಪಿಸಲು ಮುಂದಾಗುವಂತೆ ಓದುಗರು ಆಗ್ರಹಿಸಿದ್ದಾರೆ.

 

-ಮಲ್ಲಪ್ಪ ಮಾಟರಂಗಿ


ಈ ವಿಭಾಗದಿಂದ ಇನ್ನಷ್ಟು

  • ಕೊಪ್ಪಳ: ಜಿಲ್ಲೆಯಲ್ಲಿ ಕಲ್ಲು ಗಣಿಗಾರಿಕೆ ಸೇರಿದಂತೆ ಕಲ್ಲುಕ್ವಾರಿಗಳ ಉದ್ಯಮದಿಂದ 70 ಗ್ರಾಮಗಳು ಬಾಧಿತ ಪ್ರದೇಶ ವ್ಯಾಪ್ತಿಯಲ್ಲಿ ಬರುವುದನ್ನು ಗಣಿ ಮತ್ತು...

  • ಕೊಪ್ಪಳ: ಜಿಲ್ಲೆಯಲ್ಲಿ ಮಳೆ ಆರ್ಭಟ ಹಾಗೂ ವಾಹನ ಸಂಚಾರದಿಂದ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಗ್ರಾಮೀಣ ಪ್ರದೇಶದ 275 ರಸ್ತೆಗಳು ಹಾಳಾಗಿವೆ. ಇವುಗಳ ದುರಸ್ತಿಗಾಗಿ...

  • ದತ್ತು ಕಮ್ಮಾರ ಕೊಪ್ಪಳ: ಜಿಲ್ಲೆಯಲ್ಲಿ ಕಳೆದ ವರ್ಷ ಮಳೆ ಕೊರತೆಯಿಂದ ಬರದ ಪರಿಸ್ಥಿತಿಯಲ್ಲಿ ಬೆಳೆ ವಿಮೆಯಾದರೂ ಕೈ ಹಿಡಿಯಲಿದೆ ಎಂಬ ಭರವಸೆಯಿಂದ ರೈತರು ವಿಮೆ...

  • ಕೊಪ್ಪಳ: ಜಿಲ್ಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ 277 ಮುಖ್ಯ ಶಿಕ್ಷಕರ ಹುದ್ದೆಗಳಿಗೆ ನಡೆದ ಎರಡು ದಿನದ...

  • ಗಂಗಾವತಿ: ಆನೆಗೊಂದಿ ಉತ್ಸವವನ್ನು ಜನೋತ್ಸವವಾಗಿ ಆಚರಣೆ ಮಾಡಲು ಸ್ಥಳೀಯರ ಪೂರ್ಣ ಸಹಕಾರ ನೀಡಬೇಕು. ಆನೆಗೊಂದಿ ಉತ್ಸವವನ್ನು ಪ್ರತಿ ವರ್ಷ ಆಚರಣೆ ಮಾಡುವಂತೆ...

ಹೊಸ ಸೇರ್ಪಡೆ