ಹೆಸರು ಬೆಳೆಗೆ ಹಳದಿ ರೋಗ

•ತಾಲೂಕಿನ 13814 ಹೆಕ್ಟೇರ್‌ ಪ್ರದೇಶದಲ್ಲಿ ಹೆಸರು ಬಿತ್ತನೆ •ಕಮರುತ್ತಿದೆ ರೈತರ ಕನಸು

Team Udayavani, Jul 22, 2019, 11:34 AM IST

ಯಲಬುರ್ಗಾ: ಹೆಸರು ಬೆಳೆಗೆ ಹಳದಿ ರೋಗ ಕಾಣಿಸಿಕೊಂಡಿದೆ.

ಯಲಬುರ್ಗಾ: ಕಳೆದ ನಾಲ್ಕು ವರ್ಷ ನಿರಂತರ ಬರಗಾಲದ ಸಂಕಷ್ಟ ಅನುಭವಿಸಿದ ತಾಲೂಕಿನ ರೈತರು, ಈ ಬಾರಿಯಾದರೂ ಮುಂಗಾರು ಪೂರ್ವ ಅಲ್ಪ, ಸ್ವಲ್ಪ ಮಳೆ ಸುರಿದಿದ್ದರಿಂದ ತಾಲೂಕಿನ ರೈತರು ಹೆಸರನ್ನು ಬಿತ್ತನೆ ಮಾಡಿದ್ದರು. ಲಭ್ಯವಿರುವ ಪ್ರಮಾಣದ ತೇವಾಂಶದಿಂದ ಹೆಸರು ಬೆಳೆ ಚೆನ್ನಾಗಿಯೇ ಬೆಳೆದಿದೆ. ಆದರೆ ಇತ್ತೀಚೆಗೆ ಹಳದಿ ರೋಗ ಕಾಣಿಸಿಕೊಂಡಿದ್ದು, ರೈತರನ್ನು ಚಿಂತೆಗೀಡು ಮಾಡಿದೆ.

ಹವಾಮಾನ ವೈಪರೀತ್ಯದಿಂದ ಹೆಸರು ಬೆಳೆ ಹಳದಿ ಎಲೆ ನಂಜು ರೋಗಕ್ಕೆ ಹಾಗೂ ಕೀಟಬಾಧೆಗೆ ತುತ್ತಾಗಿದ್ದು, ರೈತ ವಲಯದಲ್ಲಿ ಆತಂಕ ಶುರುವಾಗಿದೆ. ಹೆಸರು ಕಡಿಮೆ ವೆಚ್ಚ, ಅಲ್ಪಾವಧಿಯಲ್ಲಿಯೇ ಹೆಚ್ಚು ಲಾಭ ತಂದುಕೊಡುವ ಬೆಳೆಯಾಗಿದ್ದರಿಂದ ಕೃಷಿಕರು ಹೆಚ್ಚಿನ ಪ್ರಮಾಣದಲ್ಲಿ ಮುಂಗಾರಿನ ಸಮಯದಲ್ಲಿ ಈ ಬೆಳೆಯನ್ನೇ ಬಿತ್ತನೆ ಮಾಡಿದ್ದಾರೆ. ಕೀಟ ಬಾಧೆ ಒಕ್ಕರಿಸಿ ಎಲೆಗಳು ಮುದುರಿಕೊಂಡಿವೆ. ಹೆಸರಿಗೆ ಜಿಗಿ ಹುಳು, ಹೇನು, ನಂಜು ರೋಗ ಹಾಗೂ ಬೂದಿ ರೋಗ ತಗುಲಿ ಬೆಳೆ ನೆಲಕಚ್ಚುತ್ತಿದೆ. ಬಂಪರ್‌ ಬೆಳೆಯ ನಿರೀಕ್ಷೆಯಲ್ಲಿದ್ದ ಅನ್ನದಾತನ ಕನಸು ಕಮರುತ್ತಿದೆ.

13814 ಹೆಕ್ಟೇರ್‌ ಬಿತ್ತನೆ: ಕೆಂಪು ಮಿಶ್ರಿತ ಭೂಮಿ, ಎರಿ ಭಾಗ ತಾಲೂಕಿನಲ್ಲಿ ಹೆಚ್ಚಿದೆ. ಯಲಬುರ್ಗಾ, ಮಂಗಳೂರು, ಕುಕನೂರು, ಹಿರೇವಂಕಲಕುಂಟಾ ಭಾಗದಲ್ಲಿ ಹೆಸರು ಬೆಳೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆ ಮಾಡಲಾಗಿದೆ.

ಕೃಷಿ ಇಲಾಖೆಯ ಅಂದಾಜಿನ ಪ್ರಕಾರ ಯಲಬುರ್ಗಾ ಹೋಬಳಿ 2850 ಹೆಕ್ಟೇರ್‌, ಕುಕನೂರು ಹೋಬಳಿ 6300 ಹೆಕ್ಟೇರ್‌, ಮಂಗಳೂರು 4574 ಹೆಕ್ಟೇರ್‌, ಹಿರೇವಂಕಲಕುಂಟಾ 90 ಹೆಕ್ಟೇರ್‌, ಈ ರೀತಿಯಾಗಿ ಹೋಬಳಿವಾರು ಬಿತ್ತನೆ ಆಗಿದೆ. ಈ ಪೈಕಿ ಎರಿ ಭಾಗ ಕುಕನೂರು ಹೋಬಳಿಯಲ್ಲಿ ಹೆಚ್ಚು ಹೆಸರು ಬಿತ್ತನೆ ಮಾಡಲಾಗಿದೆ.

ಕುಕನೂರು ಹೋಬಳಿಯ ಚಿಕೇನಕೊಪ್ಪ, ಬಿನ್ನಾಳ, ಸಿದ್ನೇಕೊಪ್ಪ, ಸೋಂಪುರ, ಯರೇಹಂಚಿನಾಳ ಗ್ರಾಮಗಳಲ್ಲಿ ಹೆಸರು ಬೆಳೆ ಚೆನ್ನಾಗಿ ಬೆಳೆದಿದೆ. ಬೆಳೆದು ನಿಂತು ಹೆಸರು ಬೆಳೆ ಕಂಡು ರೈತರು ಸದ್ಯ ಫಸಲಿನ ನಿರೀಕ್ಷೆ ಹೊಂದಿದ್ದಾರೆ. ಆದರೆ ಹಳದಿ ನಂಜು ರೋಗ ರೈತರ ಪಾಲಿಗೆ ಮತ್ತೆ ಶಾಪವಾಗಿದೆ.

ಹೊಲದಲ್ಲಿ ಹೆಸರು ಬೆಳೆ ಹಳದಿ ಬಣಕ್ಕೆ ತಿರುಗಿರುವುದು ಹಾಗೂ ಕೀಟಬಾಧೆಗೆ ತುತ್ತಾಗಿದ್ದರಿಂದ ಹಾಕಿದ ಬಂಡವಾಳ ವಾಪಸ್‌ ಬರತ್ತೋ ಇಲ್ಲವೋ ಎನ್ನೋ ಚಿಂತಿ ಆಗೈತಿ ಎನ್ನುವುದು ರೈತರ ಅಳಲು.

ರೋಗ ನಿಯಂತ್ರಣಕ್ಕೆ ಹರಸಾಹಸ ಪಡುತ್ತಿದ್ದಾರೆ. ತಾಲೂಕಿನ ನಾನಾ ಕಡೆಗಳಲ್ಲಿ ಖಾಸಗಿ ಅಂಗಡಿಯಲ್ಲಿ ಔಷಧ ಪಡೆದು ಸಿಂಪರಣೆ ಮಾಡುವ ಪ್ರಯತ್ನದಲ್ಲಿದ್ದಾರೆ. ಆದರೆ ಬಹುತೇಕ ರೈತರು ಯಾವ ಕ್ರಿಮಿನಾಶಕ ಸಿಂಪರಣೆ ಮಾಡಬೇಕು ಎನ್ನುವ ಮಾಹಿತಿ ಇಲ್ಲದೇ ಆತಂಕದಲ್ಲಿ ಜೀವನ ಕಳೆಯುತ್ತಿದ್ದಾರೆ. ಕೃಷಿ ಇಲಾಖೆ ಅಧಿಕಾರಿಗಳು ಕೂಡ ಜಮೀನುಗಳಿಗೆ ಭೇಟಿ ನೀಡಿ ಮಾಹಿತಿ ನೀಡದ ಕಾರಣ ರೈತರಿಗೆ ದಾರಿ ತೋಚದಾಗಿದೆ. ಸತತ ಬರದಿಂದ ತತ್ತರಿಸಿದ್ದ ರೈತರಿಗೆ ರೋಗ ಬಾಧೆಯಿಂದಾಗಿ ಪುನಃ ನಷ್ಟಕ್ಕೆ ಒಳಗಾಗುವ ಆತಂಕ ಶುರುವಾಗಿದೆ. ಕೃಷಿ ಇಲಾಖೆಯೇ ರೈತರ ನೆರವಿಗೆ ನಿಂತು ರೋಗ ನಿವಾರಣೆಗೆ ಶ್ರಮಿಸಬೇಕಿದೆ.

 

•ಮಲ್ಲಪ್ಪ ಮಾಟರಂಗಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಕಾರಟಗಿ: ಗುತ್ತಿಗೆ ಪೌರಕಾರ್ಮಿಕರಿಗೆ ವೇತನ ಪಾವತಿಸುವಂತೆ ಆಗ್ರಹಿಸಿ ಗುತ್ತಿಗೆ ಪೌರಕಾರ್ಮಿಕರು ಪುರಸಭೆ ಎದುರು ಸೋಮವಾರ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು....

  • ಕೊಪ್ಪಳ: ನಗರದ ಬನ್ನಿಕಟ್ಟಿ ಏರಿಯಾದ ಡಿ. ದೇವರಾಜ ಅರಸು ಮೆಟ್ರಿಕ್‌ ಪೂರ್ವ ವಸತಿ ನಿಲಯದಲ್ಲಿ ವಿದ್ಯುತ್‌ ಅವಘಡದಿಂದ ಐವರು ವಿದ್ಯಾರ್ಥಿಗಳ ಸಾವಿನ ಪ್ರಕರಣದಿಂದಾಗಿ...

  • ಕುಷ್ಟಗಿ: ತಾಲೂಕಿನ ತಹಶೀಲ್ದಾರ್‌ ಕಚೇರಿ ಪಕ್ಕದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳ ಮೆಟ್ರಿಕ್‌ ಪೂರ್ವ ಬಾಲಕ ವಸತಿ ನಿಲಯ ಅವ್ಯವಸ್ಥೆಯ...

  • ಕೊಪ್ಪಳ: ನನ್ನ ಮಗನನ್ನು ಚೆನ್ನಾಗಿ ಓದಿಸಬೇಕು ಅಂತಾ ಹಾಸ್ಟೆಲ್ಗೆ ಸೇರಿಸಿದ್ನೆ ರೀ..ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಬೇಸತ್ತು ದುಡಿಮೆ ಅರಸಿ ಬೆಂಗಳೂರಿಗೆ...

  • ಕೊಪ್ಪಳ: ತುಂಗಭದ್ರಾ ಗೇಟ್ ದುರಸ್ತಿ ಹಿನ್ನೆಲೆಯಲ್ಲಿ ಎಡದಂಡೆ ಮುಖ್ಯ ಕಾಲುವೆಗೆ ನೀರು ಹರಿಸಿಲ್ಲ. ಕೂಡಲೇ ಲಕ್ಷಾಂತರ ರೈತರ ಭತ್ತ ಉಳಿಸಲು ಕಾಲುವೆಗೆ ನೀರು ಹರಿಸಬೇಕೆಂದು...

ಹೊಸ ಸೇರ್ಪಡೆ