ಕುದೂರು ಬಸ್‌ ನಿಲ್ದಾಣದಲ್ಲಿ ಪಾರ್ಕಿಂಗ್‌ ಸಮಸ್ಯೆ

ಬಸ್‌ ನಿಲ್ಲಬೇಕಾದ ಸ್ಥಳದಲ್ಲಿ ಬೈಕ್‌, ಕಾರುಗಳದ್ದೇ ದರ್ಬಾರ್‌ „ ಚಾಲಕರು, ಸಾರ್ವಜನಿಕರಿಗೆ ತೊಂದರೆ

Team Udayavani, Sep 26, 2019, 7:53 PM IST

● ಕೆ.ಎಸ್‌.ಮಂಜುನಾಥ್‌
ಕುದೂರು:
ಬಸ್‌ಗಳು ನಿಲ್ಲಬೇಕಾದ ಸ್ಥಳದಲ್ಲಿ ಬೈಕ್‌, ಕಾರುಗಳದ್ದೇ ದರ್ಬಾರ್‌, ಕಿರಿದಾದ ಜಾಗದಲ್ಲಿ ಬಸ್‌ ತಿರುಗಿಸಲು ಚಾಲಕರು ಹರಸಾಹಸಪಡಬೇಕಾಗಿದೆ. ಕಾರು, ದ್ವಿಚಕ್ರ ವಾಹನಗಳ ನಿಲ್ದಾಣವಾಗಿ ಪರಿವರ್ತನೆಯಾದ ಕುದೂರು ಬಸ್‌ ನಿಲ್ದಾಣದಲ್ಲಿ ಪಾರ್ಕಿಂಗ್‌ ಸಮಸ್ಯೆ ದೊಡ್ಡ ಸವಾಲಾಗಿದೆ.

ಕುದೂರು ಬಸ್‌ ನಿಲ್ದಾಣವು ಹೆಸರಿಗೆ ಮಾತ್ರ ಬಸ್‌ ನಿಲ್ದಾಣದಂತಿದ್ದು, ಇಲ್ಲಿ ಬಸ್ಸಿಗಿಂತ ಹೆಚ್ಚಾಗಿ ದ್ವಿಚಕ್ರ ವಾಹನಗಳು ಹಾಗೂ ಕಾರು ನಿಲುಗಡೆಗೆ ಬಳಕೆಯಾಗುತ್ತಿದೆ. ಬಸ್‌ ಚಾಲಕರು ಬಸ್‌ ನಿಲುಗಡೆ ಹಾಗೂ ತಿರುವು ಪಡೆಯಲು ಮೈಯೆಲ್ಲಾ ಕಣ್ಣಾಗಿರಬೇಕು. ಇದರಿಂದ ಕೇವಲ ಬಸ್‌ ಚಾಲಕರಿಗಲ್ಲದೇ ಸಾರ್ವಜನಿಕರಿಗೂ ತೊಂದರೆಯಾಗಿದೆ. ಬೈಕ್‌ ಸವಾರರು ವಾಹನಗಳನ್ನು ನಿಲುಗಡೆ ಮಾಡಿ ಹೋದರೆ, ಅವರು ಮರಳಿ ಬರುವ ತನಕ ಬಸ್‌ನವರು ಕಾಯಬೇಕಾದ ಅನಿವಾರ್ಯ ಪರಿಸ್ಥಿತಿಯಿದೆ.

ಜಾಗರೂಕತೆಯ ಚಾಲನೆ ಅನಿವಾರ್ಯ: ಕಾರು ನಿಲ್ದಾಣ ಮೈದಾನಕ್ಕೆ ವರ್ಗಾಯಿಸಿದರೂ ಬಸ್‌ ನಿಲ್ದಾಣದಲ್ಲಿ ಕಾರುಗಳ ನಿಲುಗಡೆ ಮಾತ್ರ ತಪ್ಪಿಲ್ಲ. ನಿಲ್ದಾಣದ ಮಧ್ಯಭಾಗದಲ್ಲಿ ಕಾರು ನಿಲುಗಡೆ ಮಾಡುವ ಚಾಲಕರು, ತಮ್ಮ ಕಾರ್ಯಗಳಿಗೆ ತೆರಳುತ್ತಾರೆ. ಈ ವೇಳೆ ಕಿರಿದಾದ ಜಾಗದಲ್ಲಿ ಬಸ್‌ ಚಾಲಕರು ಜಾಗರೂಕತೆಯಿಂದ ಚಾಲನೆ ಮಾಡಬೇಕಿದೆ. ಅಪ್ಪಿತಪ್ಪಿ ಕಾರಿಗೆ ಸ್ಪರ್ಶಿಸಿದರೆ ಎಲ್ಲಾ ಕಾರುಗಳ ಚಾಲಕರೂ ಸೇರಿ ರಾದ್ದಾಂತ ಮಾಡುತ್ತಾರೆ. ತಮಗೆ ಅಂತ ಮೀಸಲಿರುವ ಸ್ಥಳದಲ್ಲಿ ಕಾರು ನಿಲುಗಡೆ ಮಾಡುವುದು ಬಿಟ್ಟು, ಬಸ್‌ಗಾಗಿ ಮೀಸಲಿಟ್ಟ ನಿಲ್ದಾಣದಲ್ಲಿ ಕಾರು ನಿಲುಗಡೆ ಮಾಡುವುದು ಏಕೆ ಎಂಬ ಪ್ರಶ್ನೆ ಸಾರ್ವಜನಿಕರನ್ನು
ಕಾಡುತ್ತಿದೆ.

ಪೊಲೀಸರ ಮಾತಿಗೆ ಕಿಮ್ಮತ್ತಿಲ್ಲ: ಬಸ್‌ ನಿಲ್ದಾಣದ ಎಸ್‌ಬಿಐ ಬ್ಯಾಂಕ್‌ ಮುಂಭಾಗದಲ್ಲಿ ಹಾಗೂ ರಸ್ತೆ ಬದಿ ಅಂಗಡಿಗಳ ಬಳಿ ವಾಹನಗಳನ್ನು ನಿಲ್ಲಿಸಬೇಡಿ ಎಂದು ಪೊಲೀಸರು ಸ್ವತಃ ತಿಳಿಸಿದರೂ ಅವರ ಮಾತಿಗೆ ಕಿಮ್ಮತ್ತನ್ನು ನೀಡದೇ ನಿಲ್ಲಿಸಿಯೇ ತೀರುತ್ತೇವೆ ಎಂಬಂತೆ ವಾಹನಗಳನ್ನು ನಿಲ್ಲಿಸುತ್ತಿದ್ದಾರೆ. ಬಸ್‌ ನಿಲ್ದಾಣದಲ್ಲಿ ನಿತ್ಯ ನೂರಾರು ವಾಹನಗಳನ್ನು ಪಾರ್ಕ್‌ ಮಾಡುತ್ತಿದ್ದಾರೆ.

ಇದರಿಂದ ಬಸ್‌ ತಿರುಗಿಸಲು ಹಾಗೂ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗಿದೆ. ಮಹಿಳಾ ಪೇದೆಗಳು ಹಾಗೂ ಹೋಮ್‌ ಗಾರ್ಡ್‌ಗಳ ಮಾತಿಗೆ ಕ್ಯಾರೇ ಎನ್ನದೇ ವಾಹನಗಳನ್ನು ಪಾರ್ಕ್‌ ಮಾಡುತ್ತಿದ್ದು, ಆರಕ್ಷಕ ಉಪನಿರೀಕ್ಷಕರು ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ.

ಖಾಸಗಿ ಕಂಪನಿಗಳ ಟೆಂಟ್‌ಗೆ ಬಳಕೆ: ವಾರಕ್ಕೆ 2-3 ದಿನ ಖಾಸಗಿ ಕಂಪನಿಗಳು ಬಸ್‌ ನಿಲ್ದಾಣದಲ್ಲಿ ಯಾವುದೇ ಅನುಮತಿ ಪಡೆಯದೆ ನಿಲ್ದಾಣದಲ್ಲಿ ಟೆಂಟ್‌ ಹಾಕಿಕೊಳ್ಳುವುದರಿಂದ ಬಸ್‌ ನಿಲುಗಡೆ ಹಾಗೂ ತಿರುವು ಪಡೆಯಲು ಸಮಸ್ಯೆಯಾಗುತ್ತಿದೆ. ವಾರಕ್ಕೆ ಎರಡು ದಿನ ಖಾಯಂ ಆಗಿ ಟೆಂಟ್‌ ಹಾಕುತ್ತಿದ್ದು, ಶನಿವಾರ ಸಂತೆಯಾದ ಕಾರಣ ಗ್ರಾಮದಲ್ಲಿ ಜನಜಂಗುಳಿ ಹೆಚ್ಚಿರುತ್ತದೆ. ಈ ವೇಳೆ ಇವರ ಟೆಂಟ್‌ನಿಂದ ಸಾರ್ವಜನಿಕರು ಹಾಗೂ ಬಸ್‌ ಚಾಲಕರಿಗೆ ತೀವ್ರ ತೊಂದರೆಯಾಗಿದೆ. ಆದ್ದರಿಂದ
ಖಾಸಗಿ ಕಂಪನಿಗಳಿಗೆ ಬಸ್‌ ನಿಲ್ದಾಣದಲ್ಲಿ ಟೆಂಟ್‌ ಹಾಕದಂತೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಬೇಕಾಬಿಟ್ಟಿ ನಿಲುಗಡೆ: ವಾಹನ ಸವಾರರು ಅದರಲ್ಲೂ ದ್ವಿಚಕ್ರ ವಾಹನ ಸವಾರರು ಬಸ್‌ ನಿಲ್ದಾಣದಲ್ಲಿ ಜಾಗವಿದ್ದೆಡೆ ವಾಹನ ನಿಲ್ಲಿಸಿ, ತಮ್ಮ ಕಾರ್ಯಗಳಿಗೆ ತೆರಳುವುದರಿಂದ ಅವರು ಮರಳಿ ಬರುವ ತನಕ ಮುಂಬದಿಯ ಬೈಕ್‌ ತೆಗೆಯುವಂತಿಲ್ಲ.

ಬಸ್‌ ಚಾಲಕರೂ ತಮ್ಮ ಬಸ್‌ನ ಮುಂದಿನ ವಾಹನ
ತೆಗೆಸಲು ನಿತ್ಯ ಹತ್ತಾರು ನಿಮಿಷ ಶಬ್ದ ಮಾಡುವುದು
ತಪ್ಪುತ್ತಿಲ್ಲ. ಈ ವೇಳೆ ಯಾರಾದರೂ ಬೈಕ್‌ ಹಿಡಿದು
ದೂರ ಸರಿಸಿದರೆ, ಬಸ್‌ ಚಾಲಕರು ನಿಧಾನವಾಗಿ ಬಸ್‌ ಸರಿಸಿಕೊಂಡು ಹೋಗಬೇಕಾದ ಅನಿವಾರ್ಯವಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ