ಕೆಂಪೇಗೌಡ ಜಯಂತಿ ಆಚರಣೆ ಅರ್ಥಪೂರ್ಣವಾಗಿರಲಿ

ಕೆಂಪೇಗೌಡ ಕಾಲದ ಪಳೆಯುಳಿಕೆ ಉಳಿಸುವ ಕೆಲಸವಾಗಲಿ, ರಾಜಕಾರಣಿಗಳು ಭಾಷಣಕ್ಕೆ ಸಿಮೀತ ಬೇಡ

Team Udayavani, Jun 27, 2019, 4:54 PM IST

ಮಾಗಡಿ ತಾಲೂಕಿನ ಕೆಂಪಾಪುರದಲ್ಲಿರುವ ಹಿರಿಯ ಕೆಂಪೇಗೌಡ ಐಕ್ಯ ಸ್ಥಳ.

ಮಾಗಡಿ: ಬೃಹತ್‌ ಬೆಂಗಳೂರು ಕಟ್ಟಿದ ನಾಡಪ್ರಭು ಕೆಂಪೇಗೌಡ ಜಯಂತಿ ಕೇವಲ ರಾಜಕಾರಣಿಗಳ ಭಾಷಣಕ್ಕೆ ಸಿಮೀತವಾಗಿದೆ. ಅವರು ಕಟ್ಟಿದ ಗುಡಿ, ಗೋಪುರಗಳು, ಕೋಟೆ ಕೊತ್ತಲುಗಳು, ಕೆರೆಕಟ್ಟೆ, ಕಲ್ಯಾಣಿಗಳು ಕಣ್ಮರೆಯಾಗಿವೆ. ಅವುಗಳನ್ನು ಪತ್ತೆ ಮಾಡಿ ಸಂರಕ್ಷಿಸುವ ಕೆಲಸವೂ ಆಗಿಲ್ಲ. ಪ್ರವಾಸಿ ತಾಣವೂ ಇಲ್ಲ. ಜೂ.27ರ ಗುರುವಾರ ನಡೆಯಲಿರುವ ಕೆಂಪೇಗೌಡ ಜಯಂತಿ ಆರ್ಥಪೂರ್ಣವಾಗಿರಲಿ, ಅವರ ಕಾಲದ ಪಳೆಯುಳಿಕೆಗಳನ್ನು ಉಳಿಸುವ ಕೆಲಸವಾಗಲಿ ಎಂಬುದೇ ಎಲ್ಲರ ಆಶಯ.

ಐಕ್ಯ ಸ್ಥಳ ಪತ್ತೆಯಾಗಿ 4 ವರ್ಷ: ಮಾಗಡಿ ತಾಲೂಕಿನ ಕೆಂಪಾಪುರದಲ್ಲಿ ಹಿರಿಯ ಕೆಂಪೇಗೌಡ ಐಕ್ಯ ಸ್ಥಳ ಪತ್ತೆಯಾಗಿ 4 ವರ್ಷಗಳೇ ಕಳೆದಿದೆ. ರಾಷ್ಟ್ರ ನಾಯಕರು, ರಾಜ್ಯದ ಸಚಿವರು, ಬಿಬಿಎಂಪಿ ಮೇಯರ್‌, ಸದಸ್ಯರು, ಮಠಾಧೀಶರು, ಕೆಂಪೇಗೌಡ ಅಭಿಮಾನಿಗಳು ಭೇಟಿ ನೀಡಿದ್ದಾರೆ. ಪೂಜೆ ಪುರಸ್ಕಾರಗಳ ಮಾಡಿ ಅವರ ಆದರ್ಶ ತತ್ವಗಳನ್ನು ಹಾಡಿ ಹೊಗಳಿ ಹೋದರು. ಈ ಐಕ್ಯಸ್ಥಳವನ್ನು ಪ್ರವಾಸಿ ತಾಣವನ್ನಾಗಿಸುವುದಾಗಿ ವೇದಿಕೆ ಏರಿ ಮಾರುದ್ದ ಭಾಷಣ ಬಿಗಿದು ಹೋದವರು ಇಲ್ಲಿಯವರೆವಿಗೂ ಒಬ್ಬ ನಾಯಕನಾಗಲಿ ಹಿಂತಿರುಗಿ ನೋಡಿಲ್ಲ. ಕೆಂಪೇಗೌಡ ಪ್ರಾಧಿಕಾರ ರಚನೆ ಮಾಡಿದೆ. ಸರ್ಕಾರ ಸಹ ಕೋಟ್ಯಂತರ ರೂ. ಮಂಜೂರು ಮಾಡಿದ್ದಾಗಿ ಮಾಧ್ಯಮಗಳ ಮೂಲಕ ಪ್ರಚಾರಗಿಟ್ಟಿಸಿಕೊಂಡರು. ಬಿಬಿಎಂಪಿ ಸಹ 5 ಕೋಟಿ ರೂ. ಅನುದಾನ ಮಂಜೂರು ಮಾಡಿರುವುದಾಗಿ ಹೇಳಿಕೆ ಸಹ ನೀಡಿ ನಾಲ್ಕುವರ್ಷಗಳೆ ಕಳೆದಿದೆ. ನಯಾ ಪೈಸೆ ಖರ್ಚಾಗಿಲ್ಲ.

ಹಿರಿಯ ಕೆಂಪೇಗೌಡರ ಸಮಾಧಿ ಶಿಥಿಲ:
ಇಲ್ಲಿನ ಕೆಂಪಾಪುರದಲ್ಲಿನ ಹಿರಿಯ ಕೆಂಪೇಗೌಡ ಅವರ ಸಮಾಧಿ ಶಿಥಿಲಗೊಂಡಿದೆ. ದಿನೇ ದಿನೆ ಕಾಲನ ಲೀಲೆಗೆ ಕರಗಿ ಹೋಗುತ್ತಿದೆ. ಇದರ ಸಂರಕ್ಷಣೆಗೆ ಸರ್ಕಾರ ಮುಂದಾಗಿಲ್ಲ. ವರ್ಷಕ್ಕೊಮ್ಮೆ ಕೆಂಪೇಗೌಡ ಹೆಸರಿನಲ್ಲಿ ಜಯಂತಿ ಆಚರಿಸಿಕೊಂಡು ಬರಲಾಗುತ್ತಿದೆ. ಕೆಂಪೇಗೌಡ ಹೆಸರಿನಲ್ಲಿ ಪ್ರಶಸ್ತಿಗಳನ್ನು ಪ್ರಧಾನ ಮಾಡುತ್ತಿದೆ. ಕೆಂಪೇಗೌಡರ ಕಾಲದ ಪಳಯುಳಿಕೆಗಳ ಸಂರಕ್ಷಣೆ ಮಾಡುವಲ್ಲಿ ಸಂಪೂರ್ಣ ನಿರ್ಲಕ್ಷ್ಯ ವಹಿಸಿÃ‌ುವುದು ನಿಜಕ್ಕೂ ಕೆಂಪೇಗೌಡರಿಗೆ ಮಾಡುವ ಅಪಮಾನವಾಗಿದೆ.

ಇನ್ನಾದರೂ ಸರ್ಕಾರ ಎಚ್ಚೆತ್ತು ಇಲ್ಲಿನ ಕೆಂಪಾಪುರದಲ್ಲಿನ ಹಿರಿಯ ಕೆಂಪೇಗೌಡ ಐಕ್ಯ ಸ್ಥಳವನ್ನು ಅಭಿವೃದ್ಧಿಪಡಿಸಿ ಪ್ರವಾಸಿ ತಾಣವನ್ನಾಗಿಸಬೇಕು. ಅವರ ಕಾಲದ ಎಲ್ಲಾ ಗುಡಿಗೋಪುರಗಳು, ಕೋಟೆ ಕೊತ್ತಲುಗಳು, ಕೆರೆಕಟ್ಟೆ, ಕಲ್ಯಾಣಿಗಳ ಸಂರಕ್ಷಣೆ ಮಾಡುವ ಮೂಲಕ ನಾಡಪ್ರಭು ಕೆಂಪೇಗೌಡರಿಗೆ ಗೌರವ ಸಲ್ಲಿಸಬೇಕು ಎಂದು ಅಭಿಮಾನಿಗಳ ಆಶಯವಾಗಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ