ಕೈಗಾರಿಕೆಗಳ ಸ್ಥಾಪನೆಗೆ ಸಿಗುವುದೇ ಗ್ರೀನ್‌ಸಿಗ್ನಲ್?

ಹೊಸ ಕಟ್ಟಡ ನಿರೀಕ್ಷೆಯಲ್ಲಿ ಕೇಂದ್ರೀಯ ವಿದ್ಯಾಲಯ • ಮೈಷುಗರ್‌ಗೆ ಕೇಂದ್ರದ ಅನುದಾನ ನಿರೀಕ್ಷೆ

Team Udayavani, Jul 4, 2019, 4:13 PM IST

ಮೈಷುಗರ್‌ ಕಾರ್ಖಾನೆ.

ಮಂಡ್ಯ: ಎರಡನೇ ಬಾರಿಗೆ ಕೇಂದ್ರದಲ್ಲಿ ಅಧಿಕಾರದ ಗದ್ದುಗೆ ಏರಿದ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಯುಪಿಎ ಸರ್ಕಾರ ಶುಕ್ರವಾರ (ಜು.5) ಚೊಚ್ಚಲ ಬಜೆಟ್ ಮಂಡಿಸಲಿದೆ. ಪ್ರತಿ ವರ್ಷ ಕೇಂದ್ರ ಬಜೆಟ್ ಸಮಯದಲ್ಲಿ ಜಿಲ್ಲೆಯಿಂದ ಸಾಕಷ್ಟು ನಿರೀಕ್ಷೆಗಳಿವೆ. ಆದರೆ, ನಿರೀಕ್ಷಿತ ಪ್ರಮಾಣದಲ್ಲಿ ಕೇಂದ್ರದಿಂದ ಇಲ್ಲಿಯವರೆಗೆ ಸ್ಪಂದನೆ ದೊರಕಿಲ್ಲ. ಇದೀಗ ಬಿಜೆಪಿ ಬೆಂಬಲದೊಂದಿಗೆ ಮಂಡ್ಯ ಲೋಕ ಸಭಾ ಕ್ಷೇತ್ರದಿಂದ ಸುಮಲತಾ ಅಂಬರೀಶ್‌ ಆಯ್ಕೆಯಾಗಿದ್ದು, ಸಹಜವಾಗಿಯೇ ಹಿಂದೆಂದಿಗಿಂತಲೂ ಈಗ ಜನರ ನಿರೀಕ್ಷೆ ಹಾಗೂ ಕುತೂಹಲ ಹೆಚ್ಚಿದೆ.

ಜಿಲ್ಲಾ ಕೇಂದ್ರದಲ್ಲಿ ಕೇಂದ್ರೀಯ ವಿದ್ಯಾಲಯ ಸ್ಥಾಪನೆಗೊಂಡು ಐದು ವರ್ಷಗಳಾದರೂ ಹೊಸ ಕಟ್ಟಡ ನಿರ್ಮಾಣವಾಗಿಲ್ಲ. ಜಿಲ್ಲೆಯ ಆರ್ಥಿಕ ಜೀವನಾಡಿ ಮೈಸೂರು ಸಕ್ಕರೆ ಕಾರ್ಖಾನೆ ಒಂದೂವರೆ ದಶಕದಿಂದ ರೋಗಗ್ರಸ್ಥ ಕಾರ್ಖಾನೆ ಹಣೆಪಟ್ಟಿಯಿಂದ ಹೊರಬಂದಿಲ್ಲ. ಮುಂಗಾರು ಕೈಕೊಟ್ಟಿರುವುದರಿಂದ ನೀರಿನ ಸಮಸ್ಯೆಗೆ ಜಿಲ್ಲೆಯ ಜನರಿಗೆ ಮುಕ್ತಿ ಸಿಗುತ್ತಿಲ್ಲ. ಬೆಂಗಳೂರಿನಿಂದ ಮಳವಳ್ಳಿ ಮಾರ್ಗವಾಗಿ ಚಾಮರಾಜನಗರಕ್ಕೆ ಸಂಪರ್ಕ ಕಲ್ಪಿಸುವ ರೈಲ್ವೆ ಮಾರ್ಗದ ಸಮೀಕ್ಷೆ ಮುಗಿದರೂ ಹಲವು ವರ್ಷಗಳಿಂದ ಕಾಮಗಾರಿಗೆ ಚಾಲನೆಯೇ ದೊರಕಿಲ್ಲ.

ಹೊಸ ಕಟ್ಟಡ ಮರೀಚಿಕೆ: ಲೋಕಸಭಾ ಚುನಾವಣೆ ನಂತರದಲ್ಲಿ ಸಂಸದೆ ಸುಮಲತಾ ಅಂಬರೀಶ್‌ ಮಂಡ್ಯ ಹೊರವಲಯದ ಬಿ.ಹೊಸೂರು ಕಾಲೋನಿಯಲ್ಲಿರುವ ಕೇಂದ್ರೀಯ ವಿದ್ಯಾಲಯಕ್ಕೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯ ಅವಲೋಕನ ನಡೆಸಿದ್ದಾರೆ. ಹೊಸ ಕಟ್ಟಡ ಮಂಜೂರು ಮಾಡಿಸಿಕೊಡುವುದರ ಜೊತೆಗೆ ಶಾಲೆಗೆ ಅಗತ್ಯವಿರುವ ಮೂಲ ಸೌಕರ್ಯಗಳನ್ನು ದೊರಕಿಸಿಕೊಡುವ ಮೂಲಕ ಸುಧಾರಣೆ ತರುವ ಭರವಸೆ ನೀಡಿದ್ದಾರೆ.

ಮಂಡ್ಯಕ್ಕೆ ಕೇಂದ್ರೀಯ ವಿದ್ಯಾಲಯ ಮಂಜೂರಾದ ಸಮಯದಲ್ಲೇ ಚಾಮರಾಜನಗರಕ್ಕೂ ಕೇಂದ್ರೀಯ ವಿದ್ಯಾಲಯ ಮಂಜೂರಾಗಿದ್ದು, ಈಗಾಗಲೇ ಅಲ್ಲಿ ಶಾಲೆಗೊಂದು ಸುಸಜ್ಜಿತ ಕಟ್ಟಡ ನಿರ್ಮಾಣವಾಗಿದೆ. ಆದರೆ, ಮಂಡ್ಯಕ್ಕೆ ಹೊಸ ಕಟ್ಟಡ ಮರೀಚಿಕೆಯಾಗಿಯೇ ಉಳಿದಿದೆ. ಕೇಂದ್ರೀಯ ವಿದ್ಯಾಲಯದ ಮಕ್ಕಳು ಕೊಠಡಿ ಕೊರತೆಯಿಂದ ಇಕ್ಕಟ್ಟಾದ ಜಾಗದಲ್ಲಿ ಹಲವು ಅವ್ಯವಸ್ಥೆಗಳ ನಡುವೆ ಪಾಠ ಕಲಿಯುವಂತಾಗಿದೆ.

ಮರದಡಿ ಪಾಠ: ವರ್ಷಕ್ಕೆ ಒಂದೊಂದು ಕೊಠಡಿಯನ್ನು ಮಾತ್ರ ನಿರ್ಮಾಣ ಮಾಡಿಕೊಂಡು ಬರಲಾಗುತ್ತಿದೆ. ಇದರಿಂದ ಮಕ್ಕಳು ಕೊಠಡಿಗಳ ಕೊರತೆಯಿಂದ ಮರದ ಕೆಳಗೆ ಕುಳಿತು ಪಾಠ ಕಲಿಯುವಂತಾಗಿದೆ. ಬೇಸಿಗೆ ಸಮಯದಲ್ಲಂತೂ ಉರಿಬಿಸಿಲಿಗೆ ಕಾದ ಕಲ್ನಾರು ಶೀಟುಗಳ ಅಡಿ ಕುಳಿತು ಅಧಿಕ ತಾಪದ ನಡುವೆಯೇ ಪಾಠ ಕೇಳುವ ಸ್ಥಿತಿ ಮಕ್ಕಳದ್ದಾಗಿದೆ. ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಕೇಂದ್ರೀಯ ವಿದ್ಯಾಲಯಕ್ಕೆ ಹೊಸ ಕಟ್ಟಡ ನಿರ್ಮಾಣ ಮಾಡುವಲ್ಲಿ ಹಿಂದಿನ ಸಂÓ‌ದರು ವಿಫ‌ಲರಾಗಿದ್ದರು. ಈಗ ಸುಮಲತಾ ಅಂಬರೀಶ್‌ ಪ್ರಯತ್ನದಲ್ಲಿ ನೂತನ ಕಟ್ಟಡ ತಲೆ ಎತ್ತಲಿದೆಯೇ ಎನ್ನುವುದನ್ನು ಕಾದು ನೋಡಬೇಕಿದೆ.

ರೋಗಗ್ರಸ್ಥ ಕಾರ್ಖಾನೆಗಳ ಸುಧಾರಣೆ: ಕಳೆದ ಒಂದೂವರೆ ದಶಕದಿಂದ ಮೈಸೂರು ಸಕ್ಕರೆ ಕಾರ್ಖಾನೆ ರೋಗಗ್ರಸ್ಥವಾಗಿದ್ದರೂ ಸುಧಾರಣೆಯೇ ಕಾಣದಂತಾಗಿದೆ. ಹತ್ತು ವರ್ಷಗಳಲ್ಲಿ ರಾಜ್ಯ ಸರ್ಕಾರದಿಂದ 400 ಕೋಟಿ ರೂ.ಗಳಿಗೂ ಹೆಚ್ಚು ಹಣ ಬಂದಿದ್ದರೂ ಪ್ರಗತಿ ಮಾತ್ರ ಕಂಡಿಲ್ಲ. ರೋಗಗ್ರಸ್ಥ ಹಣೆಪಟ್ಟಿಯಿಂದಲೂ ಹೊರಬರುವ ಲಕ್ಷಣಗಳೇ ಕಾಣುತ್ತಿಲ್ಲ. ದುರಸ್ತಿ ನೆಪದಲ್ಲಿ ನೂರಾರು ಕೋಟಿ ರೂ.ಗಳನ್ನು ವ್ಯಯ ಮಾಡಿದ್ದರೂ ನಿತ್ಯ 5000 ಟನ್‌ ಕಬ್ಬು ಅರೆಯುವ ಸಾಮರ್ಥ್ಯವನ್ನು ಕಾರ್ಖಾನೆ ಹೊಂದಿಲ್ಲ.

ಕಾರ್ಖಾನೆಯಲ್ಲಿ ಸಹ ವಿದ್ಯುತ್‌ ಘಟಕ ಸ್ಥಾಪನೆಯಾಗಿ ಹತ್ತಾರು ವರ್ಷಗಳಾದರೂ ಇದುವರೆಗೂ ಒಂದೇ ಒಂದು ಯೂನಿಟ್ ವಿದ್ಯುತ್‌ ಉತ್ಪಾದನೆ ಮಾಡಲು ಸಾಧ್ಯವಾಗಿಲ್ಲ. ಕಾರ್ಖಾನೆಗೆ ಅಗತ್ಯವಿರುವಷ್ಟು ವಿದ್ಯುತ್‌ ಉತ್ಪಾದನೆ ಮಾಡಿಕೊಂಡು ಸ್ವಾವ ಲಂಬಿಯಾಗುವಲ್ಲೂ ಯಶಸ್ಸನ್ನು ಕಂಡಿಲ್ಲ. ಇಂದಿಗೂ ಕೆಪಿಟಿಸಿಎಲ್ ವಿದ್ಯುತ್‌ನಿಂದಲೇ ಕಾರ್ಖಾನೆ ಚಾಲನೆಯಾಗುತ್ತಿದೆ.

ರೋಗಗ್ರಸ್ಥ ಕಾರ್ಖಾನೆಯಾಗಿರುವ ಮೈಷುಗರ್‌ ಕಾರ್ಖಾನೆಗೆ ಕೇಂದ್ರ ಸರ್ಕಾರದಿಂದ ವಿಶೇಷ ಅನುದಾನ ತರುವುದಕ್ಕೆ ಅವ ಕಾಶಗಳಿವೆ. ಅನುದಾನ ಸಿಗುವ ಅವಕಾಶಗಳ ಬಾಗಿಲನ್ನು ಮುಕ್ತ ಗೊಳಿಸಬೇಕಿದೆ. ಕಾರ್ಖಾನೆ ಉಳಿವಿನ ಅಗತ್ಯತೆ, ರೈತರ ಅವ ಲಂಬನೆ, ಕಬ್ಬು ಬೆಳೆ ಪ್ರದೇಶದ ವ್ಯಾಪ್ತಿ ಎಲ್ಲವನ್ನೂ ಕೇಂದ್ರದ ಗಮನಕ್ಕೆ ತಂದು ವಿಶೇಷ ಅನುದಾನ ತಂದು ಕಂಪನಿಯನ್ನು ಪ್ರಗತಿಯತ್ತ ಮುನ್ನಡೆಸಬಹುದು.

ಮೈಷುಗರ್‌ ಕಾಯಕಲ್ಪ ನೀಡಿ: ಬಿಜೆಪಿ ಬೆಂಬಲ ಪಡೆದು ಸಂಸದೆ ಯಾಗಿ ಆಯ್ಕೆಯಾಗಿರುವ ಸುಮಲತಾ ಅಂಬರೀಶ್‌ ಕೇಂದ್ರ ಸರ್ಕಾರದ ಗಮನ ಸೆಳೆದು ರೋಗಗ್ರಸ್ಥ ಕಾರ್ಖಾನೆಗೆ ಕಾಯಕಲ್ಪ ನೀಡಬೇಕಾದ ತುರ್ತು ಅಗತ್ಯವಿದೆ. ಕೇಂದ್ರದಿಂದ ಕಾರ್ಖಾನೆ ಪುನಶ್ಚೇತನಕ್ಕೆ ವಿಶೇಷ ಅನುದಾನವನ್ನು ತಂದು ಕಂಪನಿಗೆ ಹೊಸ ಚೈತನ್ಯ ನೀಡುವರು ಎಂಬ ನಿರೀಕ್ಷೆ ಜನರಲ್ಲಿ ಮನೆಮಾಡಿದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ