ಮೌನಕ್ಕೆ ಶರಣಾದ‌ ಜಿಲ್ಲಾ ಜೆಡಿಎಸ್‌ ನಾಯಕರು

ವರಿಷ್ಠರ ವಿರುದ್ಧದ ವಾಗ್ಧಾಳಿಗಳಿಗೆ ದನಿ ಎತ್ತದ ನಾಯಕರು • ನಂಬಿಕಸ್ಥ ಜಿಲ್ಲೆಯಲ್ಲೇ ಆಘಾತಕಾರಿ ಸ್ಥಿತಿ

Team Udayavani, Sep 18, 2019, 12:50 PM IST

ಮಂಡ್ಯ: ಜೆಡಿಎಸ್‌ ನಾಯಕತ್ವದ ಸರ್ಕಾರ ಪತನದ ನಂತರ ಜಿಲ್ಲೆಯ ಜೆಡಿಎಸ್‌ ನಾಯಕರು ರಾಜಕೀಯ ವಾಗಿ ಹತಾಶ ಮನಸ್ಥಿತಿಯನ್ನು ಹೊಂದಿದ್ದು, ಇತ್ತೀಚಿನ ಪ್ರಮುಖ ಘಟ್ಟಗಳಲ್ಲಿ ಜೆಡಿಎಸ್‌ ನಾಯಕರು ಮೌನದ ನಿಲುವನ್ನು ತಳೆದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಕಳೆದ ಒಂದೂಕಾಲು ವರ್ಷದ ಹಿಂದೆ ಎಚ್.ಡಿ.ಕುಮಾರಸ್ವಾಮಿ ನಾಯಕತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ಸಂದರ್ಭದಲ್ಲಿ ಜಿಲ್ಲೆಯ ಜೆಡಿಎಸ್‌ ನಾಯಕರಲ್ಲಿದ್ದ ಉತ್ಸಾಹ, ಭರವಸೆಯ ಮಾತುಗಳು ಹಾಗೂ ವರಿಷ್ಠರ ಬಗ್ಗೆ ತೋರುತ್ತಿದ್ದ ಅತೀವ ಕಾಳಜಿ ಈಗ ದೂರವಾದಂತೆ ಕಂಡುಬರುತ್ತಿದೆ.

ಟೀಕೆಗಳಿಗೂ ಪ್ರತಿಕ್ರಿಯೆ ಇಲ್ಲ: ಕೆ.ಆರ್‌.ಪೇಟೆ ಕ್ಷೇತ್ರದ ಅನರ್ಹ ಶಾಸಕ ಕೆ.ಸಿ.ನಾರಾಯಣಗೌಡ, ಮಾಜಿ ಸಚಿವ ಎನ್‌.ಚಲುವರಾಯಸ್ವಾಮಿ ಸೇರಿದಂತೆ ಅನೇಕರು ಮಾಜಿ ಮೈತ್ರಿಪಕ್ಷವಾದ ಜೆಡಿಎಸ್‌ ವಿರುದ್ಧ ಸಿಡಿಯುತ್ತಿದ್ದರೂ ವಿಶೇಷವಾಗಿ ಜೆಡಿಎಸ್‌ ವರಿಷ್ಠರ ವಿರುದ್ಧ ನಿರಂತರವಾಗಿ ಟೀಕಾ ಪ್ರಹಾರ ನಡೆಸುತ್ತಿದ್ದರೂ ಜಿಲ್ಲೆಯ ಶಾಸಕರು ಮತ್ತು ಮುಖಂಡರು ಅದರ ವಿರುದ್ಧ ಗಟ್ಟಿ ಧ್ವನಿ ಎತ್ತುವ ಅಥವಾ ಜೆಡಿಎಸ್‌ ನಿಲುವುಗಳನ್ನು ಸಮರ್ಥಿಸಿ ಕೊಳ್ಳುವ ಕನಿಷ್ಠ ಪ್ರಯತ್ನಗಳನ್ನೂ ಮಾಡದಿರುವುದು ಗುಮಾನಿಯನ್ನು ಹುಟ್ಟುಹಾಕುತ್ತಿದೆ.

ಜೆಡಿಎಸ್‌ನ ನಿಷ್ಠರಲ್ಲಿ ಆತಂಕ: ಜೆಡಿಎಸ್‌ನ ಭದ್ರಕೋಟೆ ಎಂದೇ ಬಿಂಬಿತವಾಗಿದ್ದ ಮಂಡ್ಯದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಏಳಕ್ಕೆ ಏಳೂ ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದ್ದ ಜೆಡಿಎಸ್‌ ಈಗಲೂ ಆರು ಮಂದಿ ಶಾಸಕರನ್ನು ಹೊಂದಿದೆ. ಅಲ್ಲದೆ, ಸ್ಥಳೀಯ ಸಂಸ್ಥೆಗಳಲ್ಲೂ ಕೂಡ ತನ್ನ ಅಧಿಪತ್ಯವನ್ನು ಕಾಯ್ದುಕೊಂಡಿದೆ. ಇತ್ತೀಚೆಗೆ ನಡೆದ ಮನ್‌ಮುಲ್ ಚುನಾವಣೆಯಲ್ಲೂ ಜೆಡಿಎಸ್‌ ಎಂಟು ಸ್ಥಾನಗಳಲ್ಲಿ ಗೆಲ್ಲುವ ಮೂಲಕ ತನ್ನ ಶಕ್ತಿಯನ್ನು ಪುನರ್‌ ಪ್ರದರ್ಶಿಸಿದೆ. ಇಷ್ಟಾದರೂ ಜೆಡಿಎಸ್‌ ವಿರುದ್ಧ ನಡೆಯುತ್ತಿರುವ ವಾಗ್ಧಾಳಿ ಪ್ರತಿರೋಧವೇ ವ್ಯಕ್ತವಾಗದಿರುವುದು ಜೆಡಿಎಸ್‌ನ ನಿಷ್ಠರಲ್ಲಿ ಆತಂಕವನ್ನು ಉಂಟುಮಾಡಿದೆ.

ಸಿಆರ್‌ಎಸ್‌ ಬಹಿರಂಗ ವಾಗ್ಧಾಳಿ: ಡಿ.ಕೆ.ಶಿವಕುಮಾರ್‌ ಬಂಧನದ ಸಂದರ್ಭದಲ್ಲಿ ನಡೆದ ಒಕ್ಕಲಿಗರ ಶಕ್ತಿ ಪ್ರದರ್ಶನದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಅವರ ಕುಟುಂಬದವರು ಭಾಗವಹಿಸದಿರುವುದನ್ನೇ ಮುಂದಿಟ್ಟುಕೊಂಡು ಮಾಜಿ ಸಚಿವ ಎನ್‌.ಚಲುವರಾಯಸ್ವಾಮಿ ಜೆಡಿಎಸ್‌ ವಿರುದ್ಧ ಬಹಿರಂಗ ವಾಗ್ಧಾಳಿ ನಡೆಸಿದರೂ ಅದನ್ನು ಜಿಲ್ಲೆಯ ಜೆಡಿಎಸ್‌ ನಾಯಕರು ಸಹಿಸಿಕೊಂಡರೇ ವಿನಃ ತಮ್ಮ ವರಿಷ್ಠರ ಪರ ವಕಾಲತ್ತು ವಹಿಸುವ ಪ್ರಯತ್ನವನ್ನೇ ಮಾಡಲಿಲ್ಲ.

ಈ ಎಲ್ಲಾ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಮಂಡ್ಯ ಜೆಡಿಎಸ್‌ ಶಾಸಕರ ಮೌನದ ಹಿಂದಿನ ಉದ್ದೇಶವೇನು? ಅವರು ಯಾವ ಧಿಕ್ಕಿಗೆ ಸಾಗುತ್ತಿದ್ದಾರೆ? ಮತ್ತು ಮಂಡ್ಯ ಜೆಡಿಎಸ್‌ನಲ್ಲಿ ಏನು ನಡೆಯುತ್ತಿದೆ ಎನ್ನುವುದೇ ಪ್ರಶ್ನಾರ್ಥಕವಾಗಿದೆ.

ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಗದ್ದುಗೆಯಲ್ಲಿದ್ದ ಸಮಯದಲ್ಲಿ ಕೊನೆಯ ಉಸಿರಿರುವ ವರೆಗೂ ಜೆಡಿಎಸ್‌ನಲ್ಲಿರುತ್ತೇನೆಂದು ಹೇಳಿಕೊಂಡು ಓಡಾಡುತ್ತಿದ್ದ ನಾಯಕರು ಈಗ ಭವಿಷ್ಯದ ರಾಜಕೀಯದ ದೃಷ್ಟಿಯಿಂದ ಪಕ್ಷಾಂತರ ಮಾಡಲು ನಿರ್ಧರಿಸಿದ್ದಾರೆಂಬ ಮಾತುಗಳು ಕೇಳಿಬರುತ್ತಿವೆ. ಜೆಡಿಎಸ್‌ನ ಪ್ರಬಲ ನಂಬಿಕೆಯ ಜಿಲ್ಲೆಯಾದ ಮಂಡ್ಯದ ಜೆಡಿಎಸ್‌ನಲ್ಲೇ ಇಂತಹ ಆಘಾತಕಾರಿ ಪರಿಸ್ಥಿತಿಗಳು ಎದುರಾಗುತ್ತಿರುವುದು ಜೆಡಿಎಸ್‌ ವರಿಷ್ಠರನ್ನು ಇನ್ನಷ್ಟು ಆತಂಕಕ್ಕೆ ಗುರಿಪಡಿಸಿದೆ.

ಜೆಡಿಎಸ್‌ ಶಾಸಕರನ್ನು ಒಂದೆಡೆ ಕಾಂಗ್ರೆಸ್‌ ಹಾಗೂ ಮತ್ತೂಂದೆಡೆ ಬಿಜೆಪಿ ತೆಕ್ಕೆಗೆ ತೆಗೆದುಕೊಳ್ಳುವ ಪ್ರಯತ್ನದಲ್ಲಿವೆ. ಅವರನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನವನ್ನು ದಳಪತಿಗಳು ನಡೆಸದೆ ಮೌನ ವಹಿಸಿರುವುದರ ಹಿಂದಿನ ಉದ್ದೇಶವೂ ಅರ್ಥವಾಗುತ್ತಿಲ್ಲ.

ಜಿಲ್ಲಾ ಜೆಡಿಎಸ್‌ ಶಾಸಕರು ಭವಿಷ್ಯದ ರಾಜಕೀಯ ದೃಷ್ಠಿಯಿಂದ ಅನ್ಯ ಮಾರ್ಗಗಳನ್ನು ಕಂಡು ಕೊಂಡಿದ್ದಾರೆಯೇ ಅಥವಾ ಸೂಕ್ತ ಕಾಲಕ್ಕೆ ಕಾಯುತ್ತಿದ್ದಾರೆಯೇ ನಿಖರವಾಗಿ ತಿಳಿಯುತ್ತಿಲ್ಲ. ಆದರೆ, ಜೆಡಿಎಸ್‌ ನಾಯಕರ ಮೌನದ ನಡೆ ನಿಗೂಢವಾಗಿದೆ.

ಬಿಜೆಪಿ ಆಪರೇಷನ್‌ ಕಮಲದ 2ನೇ ಭಾಗ:

ಈಗಾಗಲೇ ಬಿಜೆಪಿ ಆಪರೇಷನ್‌ ಕಮಲದ ಎರಡನೇ ಭಾಗವನ್ನು ಆರಂಭಿಸಿದ್ದು, ಇದಕ್ಕೆ ಪೂರಕವಾಗಿ ಅನರ್ಹ ಶಾಸಕ ಕೆ.ಸಿ.ನಾರಾಯಣಗೌಡರು ಜೆಡಿಎಸ್‌ನ 20 ಶಾಸಕರು ರಾಜೀನಾಮೆ ನೀಡುವರು ಎಂಬ ಬಾಂಬ್‌ ಸಿಡಿಸಿದ್ದಾರೆ. ಈ ನಡುವೆ ಮಂಡ್ಯ ಜಿಲ್ಲೆಯ ಇಬ್ಬರು ಶಾಸಕರಾದ ರವೀಂದ್ರ ಶ್ರೀಕಂಠಯ್ಯ ಮತ್ತು ಕೆ.ಸುರೇಶ್‌ಗೌಡರ ಹೆಸರನ್ನು ತೇಲಿಬಿಡಲಾಗಿದೆ. ಮತ್ತೂಂದು ಮೂಲದ ಪ್ರಕಾರ ಜಿಲ್ಲೆಯ ಶಾಸಕರೊಬ್ಬರು ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಬಳಿ ತೆರಳಿ ದೇವೇಗೌಡರ ಕುಟುಂಬದಿಂದ ನನಗೆ ರಾಜಕೀಯ ಕಿರುಕುಳ ಹೆಚ್ಚಾಗಿದೆ. ಆದ್ದರಿಂದ ನನಗೆ ರಾಜಕೀಯ ನಿವೃತ್ತಿಯ ಆಸಕ್ತಿ ಉಂಟಾಗಿದ್ದು, ನನ್ನನ್ನು ಬಿಜೆಪಿ ಸೇರಿಸಿಬಿಡಿ. ನಾನು ಚುನಾವಣೆ ಹಾಗೂ ರಾಜಕೀಯದಿಂದ ದೂರ ಉಳಿದು ಬಿಜೆಪಿಯಲ್ಲಿ ಸುರಕ್ಷಿತವಾಗಿರುತ್ತೇನೆಂದು ಹೇಳಿಕೊಂಡಿರುವ ಸ್ಫೋಟಕ ಮಾಹಿತಿ ಬಹಿರಂಗಗೊಂಡಿದೆ.
● ಮಂಡ್ಯ ಮಂಜುನಾಥ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬ ನಾಗರಿಕನು ಕಾನೂನಿನ ಅರಿವು ಹೊಂದಿರುವುದು ಅಗತ್ಯ. ಮಾನವ ಸಂಘಜೀವಿ ಆಗಿರುವವರೆಗೂ ಕಾನೂನು ಅಸ್ತಿತ್ವ ದಲ್ಲಿರುತ್ತದೆ....

  • ಅಡುಗೆಗೆ ಬಳಸುವ ಕಾಳು, ಹಿಟ್ಟು, ತಾಜಾ ತರಕಾರಿ, ಸೊಪ್ಪು, ಉಪ್ಪು, ಹಣ್ಣು... ಇವನ್ನೆಲ್ಲ ಇಡುವುದೇ ಪ್ಲಾಸ್ಟಿಕ್‌ಡಬ್ಬಿಗಳಲ್ಲಿ/ ಕವರ್‌ಗಳಲ್ಲಿ. ಹೀಗೆ ಮಾಡುವ ಮೂಲಕ,...

  • ಹೊಸದಿಲ್ಲಿ: ಸೇನೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ದೇಶೀ ಶಸ್ತ್ರಾಸ್ತ್ರಗಳನ್ನು ಅಳವಡಿಸಿಕೊಳ್ಳುವ ಬಗ್ಗೆ ಸೇನಾಪಡೆ ಮುಖ್ಯಸ್ಥ ಜ| ಬಿಪಿನ್‌ ರಾವತ್‌ ಮಾತನಾಡಿದ್ದಾರೆ....

  • ಪುಟ್ಟ ಮಗಳನ್ನು ಆ ಅಜ್ಜ-ಅಜ್ಜಿ ಪಕ್ಕ ಕೂರಿಸಿ, ಕೈಯಲ್ಲಿ ಕಚೀìಫ್ ಹಿಡಿದು, ಓಡುವ ಭಂಗಿಯಲ್ಲಿ ಸಿದ್ಧಳಾಗಿ ನಿಂತೆ. ಅಷ್ಟರಲ್ಲೇ ಚಿತ್ರದುರ್ಗದ ಮತ್ತೂಂದು ಬಸ್ಸು...

  • ಹೊಸದಿಲ್ಲಿ: ಪಾಕಿಸ್ಥಾನದಿಂದ ಗಡಿ ನುಸುಳಿ ಭಾರತಕ್ಕೆ ಪ್ರವೇಶಿಸಿರುವ ಉಗ್ರರನ್ನು ನಿರ್ಮೂಲಗೊಳಿಸಲು ಕಳೆದ ಎರಡು ವಾರಗಳಿಂದಲೂ ಸೇನಾ ಪಡೆ ಕಾಶ್ಮೀರದ ಗಂದರ್‌ಬಾಲ್‌...