ಬರಗಾಲದಲ್ಲಿ ಕಾವೇರಿ ನಿರ್ವಹಣಾ ಪ್ರಾಧಿಕಾರ ಬರೆ

ಕಾವೇರಿ ಕಣಿವೆಯಲ್ಲಿ ಕಾವೇರಿ ವಿವಾದದ ಕಾರ್ಮೋಡ ,ಡೆಡ್‌ ಸ್ಟೋರೇಜ್‌ನಲ್ಲಿ ಕಾವೇರಿ ಕಣಿವೆ ಅಣೆಕಟ್ಟೆಗಳ ನೀರಿನ ಮಟ್ಟ

Team Udayavani, May 29, 2019, 1:03 PM IST

ಮಂಡ್ಯ: ಮತ್ತೆ ಕಾವೇರಿ ಕಣಿವೆ ಪ್ರದೇಶದಲ್ಲಿ ಕಾವೇರಿ ವಿವಾದದ ಕಾರ್ಮೋಡ ಆವರಿಸಿವೆ. ಇದಕ್ಕೆ ಮುನ್ನುಡಿ ಬರೆದಂತೆಮಂಗಳವಾರ ನವದೆಹಲಿಯಲ್ಲಿ ನಡೆದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ತಮಿಳು ನಾಡಿಗೆ ನೀರು ಹರಿಸುವಂತೆ ಸೂಚನೆ ನೀಡಿದೆ. ಇದು ಬರಗಾಲದಲ್ಲಿ ಜಲಾನಯನ ಪ್ರದೇಶದ ರೈತರ ಮೇಲೆ ಬರೆ ಎಳೆದಂತಾಗಿದೆ.

ಕಾವೇರಿ ಕಣಿವೆ ಪ್ರದೇಶದ ಜಲಾಶಯಗಳಲ್ಲಿ ಪ್ರಸ್ತುತ ಲಭ್ಯವಿರುವ ನೀರಿನ ಪ್ರಮಾಣ, ಮಳೆ ಮುನ್ಸೂಚನೆ, ಬರ ಪರಿಸ್ಥಿತಿ,ಜಲ ನಿರ್ವಹಣೆ, ನೀರು ಹಂಚಿಕೆ ಸೇರಿದಂತೆ ಅನೇಕ ವಿಷಯಗಳ ಕುರಿತು ಚರ್ಚಿಸಿ ಜಲಾಶಯಗಳಿಗೆ ಒಳ ಹರಿವು ಅಧಿಕವಾದರೆ ತಮಿಳುನಾಡಿಗೆ ನಿಗದಿಯಂತೆ ನೀರು ಹರಿಸಬೇಕು ಎಂದು ಹೇಳಲಾಗಿದೆ. ಹಾಗಾಗಿ ತಕ್ಷಣವೇ ನೀರು ಬಿಡುವ ಒತ್ತಡ ಹೇರಿಲ್ಲದ ಕಾರಣ ಸ್ವಲ್ಪ ನಿಟ್ಟುಸಿರು ಬಿಡಬಹುದು. ಕಾವೇರಿ ಕಣಿವೆ ಜಲಾಶಯಗಳಲ್ಲಿರುವುದೇ ಒಟ್ಟು 14 ಟಿಎಂಸಿ ಅಡಿ ನೀರು. ಈ ನೀರು ಕುಡಿಯುವುದಕ್ಕಷ್ಟೇ ಸಾಕು. ಆದರೂ ಜೂ.10ರೊಳಗೆ 3 ಟಿಎಂಸಿ ನೀರು ಬಿಡಲು ನೀರು ನಿರ್ವಹಣಾ ಪ್ರಾಧಿಕಾರ ಆದೇಶಿಸಿದ್ದು, ಪ್ರತಿ ಹತ್ತು ದಿನಗಳಿಗೊಮ್ಮೆ 3 ಟಿಎಂಸಿ ನೀರು ಹರಿಸುವುದು ಸದ್ಯದ ಪರಿಸ್ಥಿತಿಯಲ್ಲಿ ಕಷ್ಟಕರವಾಗಿದೆ.

ಮುಂಗಾರು ಕೈಕೊಟ್ಟರೆ ಕಷ್ಟ: ಮುಂಗಾರು ಮಳೆ ನಿರೀಕ್ಷೆಯಂತೆ ಬಂದು ಜಲಾಶಯಗಳ ಒಳಹರಿವಿನ ಪ್ರಮಾಣ ಹೆಚ್ಚಾದರೆತಮಿಳುನಾಡಿಗೆ ಸರಾಗವಾಗಿ ನೀರು ಹರಿಸಲು ಸಾಧ್ಯವಾಗುತ್ತದೆ. ಒಮ್ಮೆ ಜಲಾಶಯ ಗಳಿಗೆ ಒಳಹರಿವು ಬರದೇ ಇದ್ದಲ್ಲಿ ಪರಿಸ್ಥಿತಿ ಕಷ್ಟವಾಗಲಿದೆ. ಕೆಆರ್‌ಎಸ್‌, ಕಬಿನಿ, ಹಾರಂಗಿ ಹಾಗೂ ಹೇಮಾವತಿ ಜಲಾಶಯಗಳಲ್ಲಿ ಒಟ್ಟು 14 ಟಿಎಂಸಿ ನೀರಿದೆ. ಎಲ್ಲಾ ಜಲಾಶಯಗಳಲ್ಲೂ ನೀರಿನ ಮಟ್ಟ ಡೆಡ್‌ ಸ್ಟೋರೇಜ್‌ ಹಂತದಲ್ಲಿದೆ. ಬೆಂಗಳೂರಿಗೆ ಪ್ರತಿ ತಿಂಗ ಳಿಗೆ 4 ಟಿಎಂಸಿಯಷ್ಟು ಕುಡಿಯುವ ನೀರಿನ ಬೇಡಿಕೆ ಇದೆ. ಆದರೆ, ಈಗ ಲಭ್ಯವಿರುವ ನೀರಿನ ಪ್ರಮಾಣದಲ್ಲಿ ಕುಡಿಯುವ ನೀರಿನ ಪೂರೈಕೆಗೆ ಕಷ್ಟವಾಗುತ್ತಿದೆ.

ಡೆಡ್‌ ಸ್ಟೋರೇಜ್‌ ಹಂತ: ಕಾವೇರಿ ಕಣಿವೆ ಪ್ರದೇಶದ ಎಲ್ಲಾ ಜಲಾಶಯಗಳಲ್ಲೂ ನೀರಿನ ಮಟ್ಟ ಡೆಡ್‌ಸ್ಟೋರೇಜ್‌ ಹಂತ ತಲುಪಿವೆ. ಯಾವುದೇ ಜಲಾಶಯ ಗಳಿಗೂ ಒಳಹರಿವು ಇಲ್ಲದಂತಾಗಿದೆ. ಮಳೆಯಿಲ್ಲದೆ ನದಿ ಗಳು ಸೊರಗಿವೆ.ಲೋಕಪಾವನಿ ನದಿ ಬತ್ತುವ ಸ್ಥಿತಿಯಲ್ಲಿದೆ. ಎಲ್ಲೆಡೆ ಮಳೆ ಅಭಾವ ಎದುರಾಗಿರುವ ಸಮಯದಲ್ಲೇ ತಮಿಳುನಾಡಿಗೆ ನೀರು ಹರಿಸುವಂತೆ ಕಾವೇರಿ ನೀರಿಗೆ ನೀರು ನಿರ್ವಹಣಾ ಮಂಡಳಿ ಸೂಚಿಸಿರುವುದು ಕಾವೇರಿ ಕಣಿವೆ ರೈತರಿಗೆ ದೊಡ್ಡ ಆಘಾತವನ್ನು ಉಂಟುಮಾಡಿದೆ.

300 ಟಿಎಂಸಿ ನೀರು ಸಮುದ್ರ ಪಾಲು: ಕಳೆದ ವರ್ಷ ಪೂರ್ವ ಮುಂಗಾರು ಆಶಾದಾಯಕವಾಗಿತ್ತು. ನಿರೀಕ್ಷೆಗೂ ಮೀರಿದ ಪ್ರಮಾಣದಲ್ಲಿ ಮುಂಗಾರು ಮಳೆ ಆಗಿದ್ದರಿಂದ ಕಾವೇರಿ ವಿವಾದ ಮೇಲೇಳಲೇ ಇಲ್ಲ. ಸುಮಾರು 300 ಟಿಎಂಸಿ ಅಡಿಗೂ ಹೆಚ್ಚು ನೀರು ತಮಿಳುನಾಡಿಗೆ ಹರಿದುಹೋಯಿತು. ಅದನ್ನು ಹಿಡಿ ದಿಟ್ಟುಕೊಳ್ಳಲಾಗದೆ ತಮಿಳುನಾಡು ವ್ಯರ್ಥವಾಗಿ ಸಮುದ್ರಕ್ಕೆ ಹರಿಸಿತು. ಕೇರಳ, ಕೊಡಗಿನಲ್ಲಿ ಸುರಿದ ಕುಂಭದ್ರೋಣ ಮಳೆಯಿಂದ ಜಿಲ್ಲೆಯೊಳಗೆ ಪ್ರವಾಹ ಪರಿಸ್ಥಿತಿ ಎದುರಿಸುವಂತಾಗಿತ್ತು. ಆದರೆ, ಈ ಬಾರಿ ಮುಂಗಾರು ವಿಳಂಬವಾಗಿ ಶುರು ವಾಗುತ್ತಿದೆ. ಜೂ.8ರ ನಂತರ ಮುಂಗಾರು ರಾಜ್ಯಕ್ಕೆ ಕಾಲಿಡಲಿದೆ. ಕೇರಳದಲ್ಲಿ ಮುಂಗಾರು ಚುರುಕುಗೊಂಡು ಆಶಾದಾಯಕ ಮಳೆಯಾದಲ್ಲಿ ಜಲಾ ಶಯಗಳು ಜೀವಕಳೆ ಪಡೆದುಕೊಂಡಂತಾಗುವುದು. ಆಗ ನೀರು ಹರಿಸುವುದಕ್ಕೂ ಸುಲಭವಾಗ ಲಿದೆ. ಕಾವೇರಿ ನದಿ ನೀರು ಹಂಚಿಕೆ ಸಂಬಂಧ ಸಂಕಷ್ಟ ಕಾಲದಲ್ಲಿ ನೀರು ಹಂಚಿಕೆಗೆ ಒಂದು ಸೂತ್ರ ರೂಪಿಸಬೇಕೆಂಬ ಬೇಡಿಕೆ ಇಂದಿಗೂ ಬೇಡಿಕೆಯಾಗಿಯೇ ಉಳಿದು ಕೊಂಡಿದೆ.

ಅದಕ್ಕೆ ಯಾರೊಬ್ಬರೂ ಪರಿಹಾರ ಕಂಡು ಹಿಡಿಯುವ ಬದ್ಧತೆ ಪ್ರದರ್ಶಿಸಿಲ್ಲ. ಮಳೆ ಬರಲಿ, ಬರದಿರಲಿ ಜಲಾಶಯಗಳಲ್ಲಿರುವ ನೀರಿನ ಲಭ್ಯತೆಯನ್ನು ಆಧರಿಸಿ ತಮಿಳುನಾಡಿಗೆ ನೀರು ಹರಿಸುವಂತೆ ಕಾವೇರಿ ನ್ಯಾಯಮಂಡಳಿ ಆದೇಶಿಸಿರುವುದು, ಮಂಡಳಿ ಆದೇಶದಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸೂಚನೆ ಕೊಡುತ್ತಿರುವುದು ಕಾವೇರಿ ಕಣಿವೆ ಪ್ರದೇಶದ ರೈತರ ಮೇಲೆ ನಡೆಸುತ್ತಿರುವ ದೌರ್ಜನ್ಯ ಹಾಗೂ ಅನ್ಯಾಯದ ಪರಮಾವಧಿಯಾಗಿದ್ದರೂ ನ್ಯಾಯಮಂಡಳಿಗಳು ಹಾಗೂ ಸುಪ್ರೀಂಕೋಟ್‌ಗೆ ಕಣಿವೆ ಭಾಗದ ರೈತರ ಕೂಗು, ಬವಣೆ, ವೇದನೆ ಅರ್ಥವಾಗದಿರುವುದು ದುರಂತದ ಸಂಗತಿಯಾಗಿದೆ.

ಕೆಆರ್‌ಎಸ್‌ನಲ್ಲಿ 11 ಟಿಎಂಸಿ ನೀರು: ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜಸಾಗರ ಜಲಾಶಯದಲ್ಲಿ ಇಂದಿನ ನೀರಿನ ಮಟ್ಟ 80.50 ಅಡಿಗಳಷ್ಟು ನೀರಿದೆ. ಒಟ್ಟಾರೆ 11 ಟಿಎಂಸಿಯಷ್ಟು ನೀರು ಹೊಂದಿದ್ದು, ಅಣೆಕಟ್ಟೆಯಲ್ಲಿರುವ ನೀರು ಕುಡಿಯುವುದಕ್ಕೂ ಸಾಲದಂತಾಗಿದೆ. ಮಳೆ ಶುರುವಾಗಿ ಜಲಾಶಯಗಳ ಒಳಹರಿವಿನಲ್ಲಿ ಹೆಚ್ಚಳವಾದರೆ ಮಾತ್ರ ಆದೇಶ ಪಾಲಿಸಲು ಸಾಧ್ಯ. ಈಗಾಗಲೇ ಕೆಆರ್‌ಎಸ್‌ ಅಚ್ಚುಕಟ್ಟು ಪ್ರದೇಶದ ರೈತರು ಬೆಳೆದಿರುವ ಬೇಸಿಗೆ ಬೆಳೆಯನ್ನು ಉಳಿಸಿಕೊಳ್ಳುವುದಕ್ಕೆ ಕೆಆರ್‌ಎಸ್‌ ಅಣೆಕಟ್ಟೆಯಿಂದ ನೀರು ಹರಿಸುವಂತೆ ಒತ್ತಾಯಿಸುತ್ತಿದ್ದಾರೆ. ಇದೇ ಸಮಯದಲ್ಲಿ ಕಾವೇರಿ ನ್ಯಾಯಮಂಡಳಿಯ ಒಪ್ಪಂದದಂತೆ ಜೂನ್‌ ತಿಂಗಳಲ್ಲಿ ತಮಿಳುನಾಡಿಗೆ ಹರಿಸಬೇಕಿರುವ 9.25 ಟಿಎಂಸಿ ಅಡಿ ನೀರು ಹರಿಸುವಂತೆ ಸೂಚಿಸಿರುವುದು ದುರ್ಭಿಕ್ಷದಲ್ಲಿ ಅಧಿಕ ಮಾಸ ಬಂದಂತಾಗಿದೆ.

ಜೀವ ಜಲಕ್ಕಾಗಿ  ಜನರ ಪರದಾಟ: ಮುಂಗಾರು ಪೂರ್ವ ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಕೆರೆ-ಕಟ್ಟೆಗಳು ನೀರಿಲ್ಲದೆ ಬರಿದಾಗಿವೆ. ಕೊಳವೆ ಬಾವಿಗಳು ಬತ್ತಿಹೋಗಿವೆ. ಜೀವಜಲಕ್ಕಾಗಿ ಜಿಲ್ಲೆಯ ಜನರು ಪರದಾಡುತ್ತಿದ್ದಾರೆ. ನಾಗಮಂಗಲ ತಾಲೂಕಿನಲ್ಲಂತೂ ನೀರಿನ ಬವಣೆ ಹೇಳತೀರದಾಗಿದೆ. ನದಿ ಹರಿಯುವ ಪ್ರದೇಶಗಳಲ್ಲೂ ನೀರಿಗೆ ಹಾಹಾಕಾರವೆದ್ದಿದೆ. ಇಂತಹ ಸಂದರ್ಭದಲ್ಲಿ ತಮಿಳುನಾಡಿಗೆ 9.25 ಟಿಎಂಸಿ ಅಡಿ ನೀರು ಹರಿಸುವುದು ಎಲ್ಲಿಂದ ಎಂಬ ಪ್ರಶ್ನೆ ಉದ್ಭವಿಸಿದೆ.

ಪರ್ಯಾಯ ವ್ಯವಸೆ ಗಳೂ ಇಲ್ಲ: ರಾಜ್ಯಕ್ಕೆ ಹಂಚಿಕೆಯಾಗಿರುವ ನೀರನ್ನು ಸಮರ್ಥವಾಗಿ ಹಿಡಿದಿಟ್ಟುಕೊಳ್ಳಲು ಹಾಗೂ ಮಳೆ ಹೆಚ್ಚಾಗಿ ಬಿದ್ದಾಗ ನೀರನ್ನು ಸಮರ್ಪಕವಾಗಿ ಸಂಗ್ರಹಿಸಲು ಪೂರಕವಾದ ವ್ಯವಸ್ಥೆಗಳೇ ಕಾವೇರಿ ಕಣಿವೆ ಪ್ರದೇಶದಲ್ಲಿ ಇಲ್ಲ. ರಾಜ್ಯಸರ್ಕಾರ ಅಂತರ್ಜಲ ಸಂರಕ್ಷಣೆ, ಕೆರೆ-ಕಟ್ಟೆಗಳ ಸುರಕ್ಷತೆ, ಚೆಕ್‌ ಡ್ಯಾಂಗಳ ನಿರ್ಮಾಣ, ನದಿ ಪಾತ್ರಗಳನ್ನು ಸುರಕ್ಷಿತವಾಗಿಡುವಲ್ಲಿ ಸಂಪೂರ್ಣ ವಿಫ‌ಲವಾಗಿದೆ. ಕಳೆದ ವರ್ಷ 300 ಟಿಎಂಸಿ ಅಡಿಗಳಷ್ಟು ನೀರು ವ್ಯರ್ಥವಾಗಿ ಸಮುದ್ರ ಸೇರುವಂತಾಯಿತು. ಆ ನೀರನ್ನು ಹಿಡಿದಿಟ್ಟುಕೊಳ್ಳುವ ವ್ಯವಸ್ಥೆಗಳಿಲ್ಲದ ಕಾರಣ ಪ್ರತಿ ವರ್ಷ ಮೇ ಅಂತ್ಯಕ್ಕೆ ಕಾವೇರಿ ವಿವಾದದ ಕಾರ್ಮೋಡ ಆವರಿಸುತ್ತಲೇ ಇದೆ.

● ಮಂಡ್ಯ ಮಂಜುನಾಥ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ