ಪಶ್ಚಾತ್ತಾಪ, ಪ್ರಾಯಶ್ಚಿತ್ತ: ಸಿಎಂ ಬೆದರಿಕೆ ತಂತ್ರವೇ?

Team Udayavani, Apr 22, 2019, 5:00 PM IST

ಮಂಡ್ಯ: ಚುನಾವಣಾ ಫ‌ಲಿತಾಂಶದ ಬಳಿಕ ನನ್ನ ವಿರುದ್ಧವಾಗಿ ಹೇಳಿಕೆ ನೀಡಿರುವ ನಟರಿಗೆ ಪಶ್ಚಾತ್ತಾಪ ಹಾಗೂ ಪ್ರಾಯಶ್ಚಿತ್ತ ಕಾದಿದೆ ಎಂದು ಸಿಎಂ ಕುಮಾರಸ್ವಾಮಿ ಹೇಳಿರುವುದು ಬೆದರಿಕೆ ತಂತ್ರವೇ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್‌ ಪ್ರಶ್ನಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚುನಾವಣೆಯಲ್ಲಿ ನನ್ನ ಬೆಂಬಲಕ್ಕೆ ನಿಂತ ಕಾಂಗ್ರೆಸ್‌ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಿಕೊಂಡು ಈಗಾಗಲೇ ಕಿರುಕುಳ ನೀಡಲಾಗುತ್ತಿದೆ. ಮೊನ್ನೆಯಷ್ಟೇ ಮುಖ್ಯಮಂತ್ರಿ ಕುಮಾರಸ್ವಾಮಿ ದರ್ಶನ್‌ ಮತ್ತು ಯಶ್‌ ಅವರನ್ನು ಗುರಿಯಾಗಿಸಿಕೊಂಡು ಪ್ರಾಯಶ್ಚಿತ್ತ ಹಾಗೂ ಪಶ್ಚಾತ್ತಾಪದ ಮಾತುಗಳನ್ನಾಡಿದ್ದಾರೆ. ಅದು ಯಾವ ರೀತಿಯ ಪಶ್ಚಾತ್ತಾಪ, ಪ್ರಾಯಶ್ಚಿತ್ತ ಅನುಭವಿಸಬೇಕಾಗುತ್ತದೆ ಎನ್ನುವುದನ್ನು ಸಿಎಂ ಕುಮಾರಸ್ವಾಮಿ ಬಿಡಿಸಿ ಹೇಳಬೇಕು ಎಂದು ತಿಳಿಸಿದರು.

ಚುನಾವಣೆ ಮುಗಿದು ಆರೋಗ್ಯಕರ ವಾತಾವರಣ ಸೃಷ್ಟಿಯಾಗುತ್ತಿರುವಾಗ ಯಾರನ್ನೂ ಟಾರ್ಗೆಟ್ ಮಾಡಿಕೊಳ್ಳಬೇಡಿ. ಪೊಲೀಸ್‌ ಅಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಭದ್ರತೆ ಹಾಗೂ ಮುಂಜಾಗ್ರತೆ ವಹಿಸುವಂತೆ ಮನವಿ ಮಾಡಿದರು.

ಬೆಟ್ಟಿಂಗ್‌ ರಿಸ್ಕ್ ಬೇಡ: ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣಾ ಫ‌ಲಿತಾಂಶದ ಬಗ್ಗೆ ಹೈಸ್ಟೇಜ್‌ನಲ್ಲಿ ಬೆಟ್ಟಿಂಗ್‌ ನಡೆಯುತ್ತಿದೆ ಎಂಬ ಮಾತು ಕೇಳಿಬರುತ್ತಿದೆ. ಜಮೀನು, ಲಕ್ಷಾಂತರ ಹಣ, ಆಸ್ತಿಯನ್ನು ಪಣಕ್ಕಿಟ್ಟು ಬೆಟ್ಟಿಂಗ್‌ ನಡೆಸುತ್ತಿರುವುದು ನನ್ನ ಮನಸ್ಸಿಗೆ ನೋವು ತಂದಿದೆ. ಚುನಾವಣೆಯಲ್ಲಿ ಯಾರಿಗೆ ಸೋಲು-ಗೆಲುವು ಎನ್ನುವುದು ತಿಳಿಯೋಲ್ಲ. ಅದಕ್ಕಾಗಿ ಬೆಟ್ಟಿಂಗ್‌ ರಿಸ್ಕ್ನ್ನು ಯಾರೂ ತೆಗೆದುಕೊಳ್ಳಬೇಡಿ. ಕಷ್ಟಪಟ್ಟು ಗಳಿಸಿದ ಆಸ್ತಿ, ಹಣವನ್ನು ಕಳೆದುಕೊಳ್ಳಬೇಡಿ ಎಂದು ಮನವಿ ಮಾಡಿದರು.

ಪ್ರಣಾಳಿಕೆಗೆ ಅವಕಾಶ ಸಿಗಲಿಲ್ಲ: ಅಂಬರೀಶ್‌ ಕನಸುಗಳ ಜೊತೆಗೆ ಅಭಿವೃದ್ಧಿ ಕುರಿತು ನನ್ನದೇ ಪರಿಕಲ್ಪನೆಗಳಿಗೆ ಪ್ರಣಾಳಿಕೆಯ ರೂಪ ಕೊಡುವ ಪ್ರಯತ್ನ ನಡೆಸಿದ್ದೆ. ಆದರೆ, ವಿರೋಧಿಗಳು ಅದಕ್ಕೆ ಅವಕಾಶವನ್ನೇ ನೀಡಲಿಲ್ಲ. ಅವರಿಂದ ಎದುರಾಗುತ್ತಿದ್ದ ಟೀಕಾಸ್ತ್ರಗಳಿಗೆ ಉತ್ತರಿಸುವುದರಲ್ಲೇ ಕಾಲಹರಣವಾಯಿತು. ಅಭಿವೃದ್ಧಿ ವಿಚಾರವಾಗಿ ವೇದಿಕೆ ಸಿದ್ಧಪಡಿಸಿ ಬರುವಂತೆಯೂ ಹೇಳಿದೆ. ಅದಕ್ಕೂ ಅವರು ಒಪ್ಪಲಿಲ್ಲ ಎಂದರು. ಚುನಾವಣಾ ಮೈದಾನದಲ್ಲಿ ನಾನೊಬ್ಬಳೇ ಬ್ಯಾಟ್ಸ್‌ಮನ್‌. ವಿರೋಧಿಗಳೆಲ್ಲರೂ ನನ್ನನ್ನೇ ನೇರವಾಗಿ ಟಾರ್ಗೆಟ್ ಮಾಡಿಕೊಂಡು ವಾಗ್ಧಾಳಿ ನಡೆಸಿದರು. ಮುಖ್ಯಮಂತ್ರಿ, ಎಂಟು ಶಾಸಕರು, ವಿಧಾನಪರಿಷತ್‌ ಸದಸ್ಯರನ್ನು ಎದುರಿಸಬೇಕಾಯಿತು. ನನ್ನಲ್ಲಿ ಯಾವುದೇ ತಪ್ಪುಗಳಿಲ್ಲದ ಕಾರಣ ಅವುಗಳನ್ನು ಸಮರ್ಥವಾಗಿ ಎದುರಿಸುವ ಧೈರ್ಯ ಬಂದಿತು. ಈ ರಾಜಕೀಯ ಜೀವನದಲ್ಲಿ ಅದೊಂದು ನನಗೆ ಪಾಠವೂ ಆಯಿತು ಎಂದು ಹೇಳಿದರು.

ಸಿದ್ಧಾಂತ, ವಿಚಾರ ಬದಲಾಯಿಸೋಲ್ಲ: ನಾನು ನನ್ನದೇ ಸಿದ್ಧಾಂತ, ವಿಚಾರಗಳ ಮೇಲೆ ಬೆಳೆದು ಬಂದಿದ್ದೇನೆ. ಅವುಗಳನ್ನು ಬದಲಾಯಿಸುವ ಪ್ರಶ್ನೆಯೇ ಇಲ್ಲ. ಈ ಚುನಾವಣೆ ನ್ಯಾಯ ಹಾಗೂ ಅನ್ಯಾಯದ ವಿರುದ್ಧ ನಡೆದ ಹೋರಾಟ. ಇಲ್ಲಿ ಸೋಲು-ಗೆಲುವಿನ ಪ್ರಶ್ನೆ ಮುಖ್ಯವಲ್ಲ. ಜಿಲ್ಲೆಯ ಜನರೊಂದಿಗೆ ಇರುವ ಬಾಂಧವ್ಯ ಉಳಿಸಿಕೊಳ್ಳುವುದು ನನಗೆ ಮುಖ್ಯವಾಗಿದೆ. ಚುನಾವಣಾ ಸಮಯದಲ್ಲಿ ಕೆಲವೊಂದು ಅನವಶ್ಯಕ ವಿಚಾರಗಳು ಹೊರಬಂದವು. ಅಂತಹ ವಿಚಾರಗಳು ಮತ್ತೆ ಮರುಕಳಿಸಬಾರದು ಎನ್ನುವುದು ನನ್ನ ಉದ್ದೇಶ ಎಂದು ಹೇಳಿದರು.

ಗೋಷ್ಠಿಯಲ್ಲಿ ಚಿತ್ರನಟ ದೊಡ್ಡಣ್ಣ, ಎಸ್‌.ಸಚ್ಚಿದಾನಂದ, ಬೇಲೂರು ಸೋಮಶೇಖರ್‌ ಮತ್ತಿತರರು ಹಾಜರಿದ್ದರು.

ನನಗೆ ಜವಾಬ್ದಾರಿಗಳಿದ್ದವು: ಸುಮಲತಾ ಅಂಬರೀಶ್‌

ಮಂಡ್ಯ: ರಾಜಕಾರಣಕ್ಕೆ ಮೊದಲೇ ಬರುವುದಕ್ಕೆ ನನಗೆ ನನ್ನದೇ ಆದ ಜವಾಬ್ದಾರಿಗಳಿದ್ದವು. ಜವಾಬ್ದಾರಿ ಮರೆತು ರಾಜಕಾರಣಕ್ಕೆ ಬರಬಾರದು ಎನ್ನುವುದು ನನಗೆ ನಾನೇ ರೂಪಿಸಿಕೊಂಡಿರುವ ಸಿದ್ಧಾಂತ ಎಂದು ಸುಮಲತಾ ಅಂಬರೀಶ್‌ ಹೇಳಿದರು. ನಾನು ಹದಿನೈದನೇ ವರ್ಷಕ್ಕೆ ಚಿತ್ರರಂಗಕ್ಕೆ ಬಂದೆ. ಆಗ ನನಗೆ ಕುಟುಂಬದ ಜವಾಬ್ದಾರಿಯಿತ್ತು. ಆನಂತರ ಮದುವೆಯಾದ ಮೇಲೆ ಪತ್ನಿಯಾಗಿ, ನಂತರ ತಾಯಿಯಾಗಿ ಜವಾಬ್ದಾರಿಗಳನ್ನು ನಿಭಾಯಿಸಬೇಕಿತ್ತು. ತಾಯಿಯಾಗಿ ಒಂದು ಹೆಣ್ಣಿನ ಜವಾಬ್ದಾರಿ ಅತ್ಯಂತ ದೊಡ್ಡದು. ಅದು ಕಳೆಯುವವರೆಗೂ ರಾಜಕೀಯಕ್ಕೆ ಬರಬಾರದು ಎನ್ನುವುದು ನನ್ನ ವೈಯಕ್ತಿಕ ಸಿದ್ಧಾಂತ. ಇದನ್ನೇ ಎಲ್ಲರೂ ಪಾಲಿಸಬೇಕೆಂದಿಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಮತದಾರರಿಗೆ ಕೃತಜ್ಞತೆ ಸಲ್ಲಿಸಿದ ಸುಮಲತಾ

ಮಂಡ್ಯ: ಚುನಾವಣಾ ಪ್ರಚಾರದಲ್ಲಿ ನನ್ನ ಬೆಂಬಲಕ್ಕೆ ನಿಂತ ಕಾಂಗ್ರೆಸ್‌ ಕಾರ್ಯಕರ್ತರು, ಬೇಷರತ್‌ ಬೆಂಬಲ ನಿಂತ ರೈತಸಂಘ, ಬಿಜೆಪಿ, ದಲಿತ ಸಂಘರ್ಷ ಸಮಿತಿ, ಕ್ರೈಸ್ತ, ಮುಸ್ಲಿಂ, ಕನ್ನಡಪರ ಹಾಗೂ ವಿವಿಧ ಸಂಘಟನೆಗಳಿಗೆ ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸುಮಲತಾ ಅಂಬರೀಶ್‌ ಕೃತಜ್ಞತೆ ಸಲ್ಲಿಸಿದರು. ಪ್ರಚಾರದಲ್ಲಿ ಜೋಡೆತ್ತುಗಳಾಗಿ ನಿಂತ ನನ್ನ ಮನೆ ಮಕ್ಕಳಾದ ದರ್ಶನ್‌, ಯಶ್‌ ಅವರಿಗೆ ನಟ ದೊಡ್ಡಣ್ಣ, ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌, ನನ್ನ ಜಿಲ್ಲೆ-ನನ್ನ ಹೆಮ್ಮೆ ಎಂಬ ಧ್ಯೇಯ ದೊಂದಿಗೆ ಸ್ವಾಭಿಮಾನದ ಪಾದಯಾತ್ರೆ ನಡೆಸಿದ ಹೆಚ್.ಆರ್‌.ರವೀಂದ್ರ, ನನ್ನ ಗೆಲುವಿಗಾಗಿ ಹರಕೆ ಹೊತ್ತವರಿಗೆ, ಉರುಳು ಸೇವೆ ಮಾಡಿದವರಿಗೆ, ಶಿಸ್ತು ಕ್ರಮವನ್ನೂ ಲೆಕ್ಕಿಸದೆ ನನ್ನೊಟ್ಟಿಗಿದ್ದ ಕಾಂಗ್ರೆಸ್‌ ಕಾರ್ಯಕರ್ತರರೆಲ್ಲರಿಗೂ ಕೃತಜ್ಞತೆ ಸಮರ್ಪಿಸಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ