ನಿಖೀಲ್ ಸೋಲಿಗೆ ತಲೆದಂಡ ಯಾರದು?

ಸಾ.ರಾ.ಮಹೇಶ್‌, ಪುಟ್ಟರಾಜು, ತಮ್ಮಣ್ಣಗೆ ಎದುರಾಗಿದೆ ಭೀತಿ; ಸಚಿವರ ತವರಲ್ಲೇ ಸುಮಲತಾಗೆ ದಕ್ಕಿದೆ ಲೀಡ್‌

Team Udayavani, May 27, 2019, 6:00 AM IST

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ವಿರುದ್ಧ ಜೆಡಿಎಸ್‌ ಅಭ್ಯರ್ಥಿ ನಿಖೀಲ್ ಹೀನಾಯ ಸೋಲು ಅನುಭವಿಸಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಂಪುಟದಲ್ಲಿ ಸಚಿವರಾಗಿರುವ ಮೂವರಿಗೆ ತಲೆದಂಡದ ಭೀತಿ ಶುರುವಾಗಿದೆ.

ಲೋಕಸಭಾ ಚುನಾವಣಾ ಫ‌ಲಿತಾಂಶದ ಬಳಿಕ ಸರ್ಕಾರದ ಉಳಿವಿಗೆ ಕಾಂಗ್ರೆಸ್‌-ಜೆಡಿಎಸ್‌ ಕಸರತ್ತು ನಡೆಸುತ್ತಿದೆ. ಅತೃಪ್ತರ ಮನವೊಲಿಸಲು ಸಂಪುಟ ಪುನಾರಚನೆ ಮಾಡುವುದು ಅನಿವಾರ್ಯ ಎಂಬ ಮಾತುಗಳು ದಟ್ಟವಾಗಿ ಕೇಳಿ ಬರುತ್ತಿವೆ. ಸಂಪುಟ ಪುನಾರಚನೆಯಾದಲ್ಲಿ ಯಾರ್ಯಾರು ತಲೆದಂಡಕ್ಕೆ ಒಳಗಾಗಲಿದ್ದಾರೆ ಎನ್ನುವ ಬಗ್ಗೆ ಕುತೂಹಲ ಮೂಡಿಸಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಏಳಕ್ಕೆ ಏಳು ಸ್ಥಾನಗಳಲ್ಲೂ ಜೆಡಿಎಸ್‌ ಜಯಭೇರಿ ಬಾರಿಸಿದ ಹಿನ್ನೆಲೆಯಲ್ಲಿ ವರಿಷ್ಠರು ಮಂಡ್ಯ ಜಿಲ್ಲೆಗೆ ಎರಡು ಸಚಿವ ಸ್ಥಾನಗಳನ್ನು ಕೊಡುಗೆಯಾಗಿ ನೀಡಿದ್ದರು.

ಜೆಡಿಎಸ್‌ ಸೋಲಿಗೆ ದೇವೇಗೌಡರ ಕುಟುಂಬ ರಾಜಕಾರಣದ ವಿರೋಧಿ ಅಲೆಯೇ ಪ್ರಮುಖ ಕಾರಣವಾಗಿದ್ದರೂ, ಸೋಲು ನಾನಾ ರೀತಿಯಲ್ಲಿ ಪರಿಣಾಮ ಬೀರುತ್ತಿದೆ. ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಸೇರಿದ ಮೇಲುಕೋಟೆ, ಮದ್ದೂರು ಹಾಗೂ ಕೆ.ಆರ್‌.ನಗರ ಕ್ಷೇತ್ರಗಳಲ್ಲಿ ಜೆಡಿಎಸ್‌ ಮುಗ್ಗರಿಸಿದೆ. ಈ ಕ್ಷೇತ್ರದಲ್ಲೆಲ್ಲಾ ಸುಮಲತಾ ಮುನ್ನಡೆ ಸಾಧಿಸಿದ್ದಾರೆ. ಮೇಲುಕೋಟೆಯಲ್ಲಿ 15,886, ಮದ್ದೂರು ಕ್ಷೇತ್ರದಲ್ಲಿ 18,967 ಹಾಗೂ ಕೆ.ಆರ್‌.ನಗರದಲ್ಲಿ 2,765 ಮತಗಳ ಲೀಡ್‌ ಸಿಕ್ಕಿದೆ. ಎಚ್‌ಡಿಕೆ ಸಂಪುಟದಲ್ಲಿ ಮೇಲುಕೋಟೆ ಕ್ಷೇತ್ರದ ಸಿ.ಎಸ್‌.ಪುಟ್ಟರಾಜು, ಮದ್ದೂರು ಕ್ಷೇತ್ರದ ಡಿ.ಸಿ.ತಮ್ಮಣ್ಣ ಹಾಗೂ ಕೆ.ಆರ್‌.ನಗರ ಕ್ಷೇತ್ರದ ಸಾ.ರಾ.ಮಹೇಶ್‌ ಇದ್ದು ಈ ಮೂವರಲ್ಲಿ ಯಾರ ಸಚಿವ ಪಟ್ಟಕ್ಕೆ ಕುತ್ತು ಬೀಳಲಿದೆ ಎನ್ನುವುದು ಚರ್ಚೆಗೆ ಗ್ರಾಸವಾಗಿದೆ.

ಸಣ್ಣ ನೀರಾವರಿ ಸಚಿವರಾಗಿರುವ ಪುಟ್ಟರಾಜು, ಜೆಡಿಎಸ್‌ನ ನಿಷ್ಠಾವಂತ ನಾಯಕರೆಂದು ಗುರುತಿಸಿಕೊಂಡಿದ್ದರೆ, ಸಾರಿಗೆ ಸಚಿವರಾಗಿರುವ ಡಿ.ಸಿ.ತಮ್ಮಣ್ಣನವರು ಗೌಡರಿಗೆ ಸ್ವತಃ ಬೀಗರಾಗಿದ್ದಾರೆ. ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್‌ ಕೂಡ ವರಿಷ್ಠರ ಆಪ್ತರು.

ಫ್ಲೆಕ್ಸ್‌ನಲ್ಲಿ ರಾರಾಜಿಸುತ್ತಿರುವ ಕಾಂಗ್ರೆಸ್ಸಿಗರ ಫೋಟೋಗಳು: ಈ ಮಧ್ಯೆ, ಸುಮಲತಾಗೆ ಅಭಿನಂದನೆ ಸಲ್ಲಿಸುವ ಫ್ಲೆಕ್ಸ್‌ ನಲ್ಲಿ ಸಿದ್ದರಾಮ¿್ಯು, ಸಚಿವ ಜಮೀರ್‌ ಅಹ್ಮದ್‌, ಮಾಜಿ ಸಚಿವರಾದ ಎನ್‌.ಚಲುವÃಾಯಸ್ವಾಮಿ, ಪಿ.ಎಂ.ನರೇಂದ್ರಸ್ವಾಮಿ ಸೇರಿ ಅನೇಕ ಕಾಂಗ್ರೆಸ್ಸಿಗರ ಫೋಟೋಗಳು ರಾರಾಜಿಸುತ್ತಿವೆ. ಮಂಡ್ಯ ಜಿಲ್ಲೆಯ ಸ್ವಾಭಿಮಾನವನ್ನು ಇಂಡಿಯಾದಲ್ಲಿ ತೋರಿಸಿದ ಸ್ವಾಭಿಮಾನಿ ಮಂಡ್ಯದ ಮತಬಾಂಧವರಿಗೆ ಧನ್ಯವಾದಗಳು ಎಂದು ಫ್ಲೆಕ್ಸ್‌ನಲ್ಲಿ ಬರೆದಿದೆ.

ಸುಮಲತಾ ಗೆಲ್ಲಿಸಿದ ಒಕ್ಕಲಿಗೇತರ ಶಕ್ತಿಗಳು
ಬಹುತೇಕ ಅಲ್ಪಸಂಖ್ಯಾತ ಸಮುದಾಯವನ್ನು ಹೊರತುಪಡಿಸಿ, ಒಕ್ಕಲಿಗೇತರ ಶಕ್ತಿಗಳ ಮತಬ್ಯಾಂಕ್‌ ಸಂಘಟಿತವಾಗಿ ನಡೆಸಿದ ಹೋರಾಟದ ಪರಿಣಾಮ ಸುಮಲತಾ ಗೆಲ್ಲಲು ಕಾರಣವಾಯಿತು ಎಂಬ ಸಂಗತಿ ಚುನಾವಣೋತ್ತರ ಜಾತಿ ಸಮೀಕ್ಷೆಯಿಂದ ತಿಳಿದು ಬಂದಿದೆ.

ಜೆಡಿಎಸ್‌ನ ನಂಬಿಕಸ್ಥ ಮತ್ತು ಶಾಶ್ವತ ಮತಬ್ಯಾಂಕ್‌ ಆದ ಒಕ್ಕಲಿಗರ ಮತಗಳು ನಿಖೀಲ್ ಮತ್ತು ಸುಮಲತಾ ಪರ ಶೇ.65-35ರ ಅನುಪಾತದಲ್ಲಿ ವಿಭಜನೆಗೊಂಡರೆ, ಅದೇ ಸಮುದಾಯದ ಮಹಿಳಾ ಮತಗಳು ಶೇ.60ರಷ್ಟು ಸುಮಲತಾ ಪರ ವಾಲಿವೆ. ಸುಮಲತಾಗೆ ಬಿಜೆಪಿ ಬೆಂಬಲ ನೀಡಿದ ಹಿನ್ನೆಲೆಯಲ್ಲಿ ಅವರು ಫಲಿತಾಂಶದ ನಂತರ ಬಿಜೆಪಿಗೆ ಸೇರುತ್ತಾರೆಂಬ ರಾಜಕೀಯ ಗಾಸಿಪ್‌ನಿಂದಾಗಿ ಅಲ್ಪಸಂಖ್ಯಾತ ಮತವರ್ಗ ಸುಮಲತಾರಿಂದ ದೂರ ಸರಿಯಿತು. ಅಂದಾಜಿನ ಪ್ರಕಾರ ಶೇ.80ರಷ್ಟು ಮತಗಳು ಜೆಡಿಎಸ್‌ ಪರ ನಿಂತರೆ, ಅಂಬರೀಶ್‌ ಅನುಯಾಯಿಗಳು ಮತ್ತು ಪರಾಜಿತ ಕಾಂಗ್ರೆಸ್‌ ನಾಯಕರ ಬೆಂಬಲಿತ ಮತಗಳು ಮಾತ್ರ ಸುಮಲತಾ ಬೆನ್ನಿಗೆ ನಿಂತದ್ದು ಸ್ಪಷ್ಟವಾಗಿದೆ.

ಇನ್ನು, ಬಿಜೆಪಿಯ ಓಟ್ ಬ್ಯಾಂಕ್‌ ಎಂದೇ ಬಿಂಬಿತವಾಗಿರುವ ಲಿಂಗಾಯತರು, ಬ್ರಾಹ್ಮಣರು, ಜೈನರು ಮತ್ತಿತರ ಮೇಲ್ವರ್ಗದ ಶೇ.90ರಷ್ಟು ಮತದಾರರು ಸುಮಲತಾರನ್ನು ಬೆಂಬಲಿಸಿದ್ದಾರೆ. ಕಾಂಗ್ರೆಸ್‌ನ ಶಾಶ್ವತ ಮತ ಬ್ಯಾಂಕ್‌ ಆದ ಹಿಂದುಳಿದ ವರ್ಗದ ಕುರುಬ ಸಮುದಾಯ ಕೂಡ ಸಿದ್ದರಾಮಯ್ಯ ಅವರ ಚುನಾವಣಾ ಸೋಲಿನ ಸೇಡನ್ನು ತೀರಿಸಿಕೊಂಡಂತೆ ಮೇಲ್ನೋಟಕ್ಕೆ ಕಂಡು ಬಂದಿದೆ. ಉಳಿದಂತೆ ಅತಿ ಹಿಂದುಳಿದ ಸಮುದಾಯಗಳಾದ ಕುಂಬಾರ, ಮಡಿವಾಳ, ಗಾಣಿಗ, ಸವಿತಾ, ವಿಶ್ವಕರ್ಮ, ಗಂಗಾಮತ, ಉಪ್ಪಾರ, ನೇಕಾರ, ಭಾವಸಾರ ಕ್ಷತ್ರಿಯ ಸೇರಿ ಹಲವು ಸಮುದಾಯಗಳ ಮೂರು ಲಕ್ಷಕ್ಕೂ ಅಧಿಕ ಮತದಾರರಲ್ಲಿ ಶೇ.80ರಷ್ಟು ಜನ ಸುಮಲತಾ ಪರ ಮತ ಚಲಾವಣೆ ಮಾಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ಬಿಎಸ್ಪಿ ಅಭ್ಯರ್ಥಿ ಕೇವಲ 12 ಸಾವಿರ ಮತಗಳನ್ನು ಪಡೆದಿರುವುದನ್ನು ಗಮನಿಸಿದರೆ ದಲಿತ ಮತದಾರರು ಕೂಡ ಅಧಿಕ ಸಂಖ್ಯೆಯಲ್ಲಿ ಸುಮಲತಾರನ್ನು ಬೆಂಬಲಿಸಿದ್ದಾರೆ. ಸಂಸದ ಎಲ್.ಆರ್‌.ಶಿವರಾಮೇಗೌಡ ಅವರು ಒಕ್ಕಲಿಗ ಸಮುದಾಯದ ಮತಗಳ ಕ್ರೋಢೀಕರಣಕ್ಕಾಗಿ ಸುಮಲತಾ ವಿರುದ್ಧ ನಾಯ್ಡು ಎಂಬ ಜಾತಿಯ ಬ್ರಹ್ಮಾಸ್ತ್ರ ಪ್ರಯೋಗಿಸಿದರೂ ಅದು ನಿರೀಕ್ಷಿತ ಫಲ ಕೊಡಲಿಲ್ಲ.

ತಮ್ಮಣ್ಣ ದೇವೇಗೌಡರ ಬೀಗರು
ಸುಮಲತಾಗೆ ದೊರಕಿರುವ ಮುನ್ನಡೆ ಪರಿಗಣಿಸಿ ಸಚಿವ ಪಟ್ಟದಿಂದ ಇಳಿಸಲು ತೀರ್ಮಾನಿಸಿದರೆ ಮೊದಲ ಸ್ಥಾನದಲ್ಲಿ ಸಚಿವ ಡಿ.ಸಿ.ತಮ್ಮಣ್ಣ ಅವರೇ ಇದ್ದಾರೆ. ಸಚಿವ ಪಟ್ಟ ಅಲಂಕರಿಸಿರುವ ಮೂವರಲ್ಲಿ ಅತಿ ಹೆಚ್ಚು ಮುನ್ನಡೆ ಸಾಧಿಸಿರುವ ಕ್ಷೇತ್ರವೇ ಮದ್ದೂರು. ಹಾಗಾಗಿ, ಸಂಪುಟ ಪುನಾರಚನೆ ವೇಳೆ ತಮ್ಮಣ್ಣನವರಿಗೆ ಕೊಕ್‌ ಸಿಗಬಹುದೆಂದು ಹೇಳಲಾಗುತ್ತಿದೆ. ಆದರೆ, ತಮ್ಮಣ್ಣನವರು ದೇವೇಗೌಡರ ಬೀಗರೇ ಆಗಿರುವುದರಿಂದ ಅವರನ್ನು ಕೈಬಿಡುವರೇ ಅಥವಾ ಪ್ರಸ್ತುತ ಸನ್ನಿವೇಶದಲ್ಲಿ ಸಂಬಂಧವನ್ನು ಮರೆತು ವರಿಷ್ಠರು ಶಿಸ್ತಿನ ಕ್ರಮ ಕೈಗೊಳ್ಳುವರೇ ಎಂಬ ಪ್ರಶ್ನೆಗಳು ಮೂಡಿವೆ.

ಪಕ್ಷದ ನಿಷ್ಠಾವಂತ ನಾಯಕ
ಪಾಂಡವಪುರ ಕ್ಷೇತ್ರಕ್ಕೆ ಇದೇ ಮೊದಲ ಬಾರಿಗೆ ಸಚಿವ ಸ್ಥಾನ ಸಿಕ್ಕಿದ ಖುಷಿಯಲ್ಲಿದ್ದ ಸಿ.ಎಸ್‌.ಪುಟ್ಟರಾಜು ಅವರಿಗೆ ಲೋಕಸಭಾ ಚುನಾವಣಾ ಫ‌ಲಿತಾಂಶ ಸಂಕಷ್ಟವನ್ನು ತಂದೊಡ್ಡಿದೆ. ಮೇಲುಕೋಟೆ ಕ್ಷೇತ್ರದಲ್ಲಿ ಸುಮಲತಾ ಅವರ ಮುನ್ನಡೆಯನ್ನು ಯಾರೊಬ್ಬರೂ ನಿರೀಕ್ಷಿಸಿರಲಿಲ್ಲ. ಆದರೆ, ಕೆಲವೊಂದು ರಾಜಕೀಯ ಕಾರಣಗಳಿಂದಾಗಿ ಮೇಲುಕೋಟೆಯಲ್ಲಿ ಸುಮಲತಾ ಜೆಡಿಎಸ್‌ ಅಭ್ಯರ್ಥಿಯನ್ನು ಹಿಂದಿಕ್ಕುವಲ್ಲಿ ಯಶಸ್ವಿಯಾದರು.

ಆದರೆ, ಪುಟ್ಟರಾಜು ಜೆಡಿಎಸ್‌ನ ನಿಷ್ಠಾವಂತ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಸಂಘಟನಾ ಶೀಲ ನಾಯಕತ್ವವನ್ನು ಹೊಂದಿದ್ದಾರೆ.

ತಮ್ಮಣ್ಣ ಅವರನ್ನು ಸಂಬಂಧಿ ಎಂಬ ಕಾರಣಕ್ಕೆ ಸಂಪುಟದಲ್ಲಿ ಉಳಿಸಿಕೊಂಡು ಪುಟ್ಟರಾಜು ಅವರನ್ನು ಕೈಬಿಟ್ಟರೆ ಜಿಲ್ಲೆಯ ಜನರಿಗೆ ತಪ್ಪು ಸಂದೇಶ ರವಾನಿಸಿದಂತಾಗುತ್ತದೆ. ಅತಿ ಹೆಚ್ಚು ಮುನ್ನಡೆ ಸಾಧಿಸಿರುವ ಕ್ಷೇತ್ರದ ಸಚಿವರನ್ನು ಶಿಕ್ಷೆಗೆ ಗುರಿಪಡಿಸದೆ ಅವರಿಗಿಂತಲೂ ಕಡಿಮೆ ಲೀಡ್‌ ಕೊಟ್ಟ ಕ್ಷೇತ್ರದ ಸಚಿವರ ವಿರುದ್ಧ ಕ್ರಮ ಕೈಗೊಂಡಲ್ಲಿ ಪಕ್ಷ ಸಂಘಟನೆಗೆ ಮುಂದಿನ ದಿನಗಳಲ್ಲಿ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಗಳಿರುತ್ತವೆ. ಒಮ್ಮೆ ಕೈಬಿಡುವುದಾದರೆ ಇಬ್ಬರನ್ನೂ ಸಂಪುಟದಿಂದ ಕೈಬಿಡುವುದಕ್ಕೆ ವರಿಷ್ಠರು ತೀರ್ಮಾನಿಸುವರೇ ಎಂಬುದು ಕೂಡ ಚರ್ಚೆಯ ವಸ್ತು.

ಮಹೇಶ್‌ ವರಿಷ್ಠರ ಆಪ್ತರು
ಕೆ.ಆರ್‌.ನಗರದ ಸಾ.ರಾ.ಮಹೇಶ್‌ ಅವರು ವರಿಷ್ಠರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವವರಲ್ಲಿ ಒಬ್ಬರು. ಅವರ ಕ್ಷೇತ್ರದಲ್ಲಿ ಜೆಡಿಎಸ್‌ಗೆ ಅತ್ಯಲ್ಪ ಮುನ್ನಡೆ ದೊರಕಿದೆ. ಇವರಿಬ್ಬರನ್ನೂ ಉಳಿಸಿಕೊಂಡು ಮಹೇಶ್‌ ವಿರುದ್ಧ ಕ್ರಮ ಕೈಗೊಳ್ಳುತ್ತಾರಾ ಎಂಬ ಪ್ರಶ್ನೆಯೂ ಕಾಡುತ್ತಿದೆ.

-ಮಂಡ್ಯ ಮಂಜುನಾಥ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ