ಮಂಗಳೂರು ದಸರಾ ಮಹೋತ್ಸವ: ವಿಶೇಷ ಸಿದ್ಧತೆ ಆರಂಭ

Team Udayavani, Sep 27, 2019, 6:33 PM IST

ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಮಂಗಳೂರು ದಸರಾ ಹಾಗೂ ನವರಾತ್ರಿ ಮಹೋತ್ಸವಕ್ಕಾಗಿ ವಿಶೇಷ ಸಿದ್ಧತೆಗಳು ನಡೆಯುತ್ತಿದೆ. ನವರಾತ್ರಿ ಮಹೋತ್ಸವ ಕಾರ್ಯಕ್ರಮ ಸೆ. 29ರಂದು ನವದುರ್ಗೆಯರ ಹಾಗೂ ಶ್ರೀ ಶಾರದಾ ಮಾತೆಯ ಪ್ರತಿಷ್ಠಾಪನೆಯೊಂದಿಗೆ ಆರಂಭಗೊಂಡು ಅ. 9ರವರೆಗೆ ನಾನಾ ಧಾರ್ಮಿಕ ಹಾಗೂ ಸಾಂಸ್ಕೃತಿಕ ವೈಭವದೊಂದಿಗೆ ನಡೆಯಲಿದೆ.

ಕುದ್ರೋಳಿ ಕ್ಷೇತ್ರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಶುಕ್ರವಾರ ಮಾಹಿತಿ ನೀಡಿದ ಕ್ಷೇತ್ರದ ನವೀಕರಣದ ರೂವಾರಿ, ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ, ಈ ಬಾರಿಯ ದಸರಾ ಶೋಭಾ ಯಾತ್ರೆಯಲ್ಲಿ ಶಾರದಾ ಮಾತೆಗೆ ಪ್ರಥಮ ಸ್ಥಾನವನ್ನು ನೀಡಲಾಗಿದೆ. ಬಳಿಕ ಇತರ ಟ್ಯಾಬ್ಲೋಗಳು ಶೋಭಾಯಾತ್ರೆಯಲ್ಲಿ ಸಂಚರಿಸಲಿವೆ. ಇದೊಂದು ಮಹತ್ವದ ಬದಲಾವಣೆಯಾಗಿದ್ದು, ಕ್ಷೇತ್ರದ ಆಡಳಿತ ಮಂಡಳಿ ಖಜಾಂಚಿ ಪದ್ಮರಾಜ್ ಆರ್. ಅವರ ಸಲಹೆಯಂತೆ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.

ದಸರಾ ಮಹೋತ್ಸವ ಉದ್ಘಾಟನೆ ಈ ಬಾರಿಯೂ ವಿಶೇಷ ಅತಿಥಿಯಿಂದ ನಡೆಯಲಿದ್ದು, ಅತಿಥಿಯ ಹೆಸರು ಇನ್ನಷ್ಟೆ ಅಂತಿಮಗೊಳ್ಳಬೇಕಿದೆ. 10 ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆಯಿದೆ. ಮಹೋತ್ಸವಕ್ಕಾಗಿ ದೇವಸ್ಥಾನದಲ್ಲಿ ಸಕಲ ಸಿದ್ಧತೆ ನಡೆಸಲಾಗುತ್ತಿದೆ. ದೇವಾಲಯದ ಹೊರಭಾಗವನ್ನು ಚಿನ್ನದ ಬಣ್ಣದಿಂದ ಶೋಭಿಸುವಂತೆ ಮಾಡಲಾಗಿದೆ ಎಂದವರು ತಿಳಿಸಿದರು.

ಸೆ. 29ರಂದು ಬೆಳಗ್ಗೆ 8.30ಕ್ಕೆ ಗುರು ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡು 11.20ಕ್ಕೆ ನವದುರ್ಗೆಯರು ಹಾಗೂ ಶಾರದಾ ಪ್ರತಿಷ್ಠೆ ನಡೆಯಲಿದೆ. 30ರಂದು ದುರ್ಗಾ ಹೋಮ, ಅ. 1ರಂದು ಬೆಳಗ್ಗೆ ಆರ್ಯ ದುರ್ಗಾ ಹೋಮ, 2ರಂದು ಭಗವತೀ ದುರ್ಗಾ ಹೋಮ, 3ರಂದು ಕುಮಾರಿ ದುರ್ಗಾ ಹೋಮ, 4ರಂದು ಅಂಬಿಕಾ ದುರ್ಗಾ ಹೋಮ, 5ರಂದು ಮಹಿಷಮರ್ದಿನಿ ದುರ್ಗಾ ಹೋಮ, 6ರಂದು ಚಂಡಿಕಾ ಹೋಮ, 7ರಂದು ಸರಸ್ವತಿ ದುರ್ಗಾ ಹೋಮ, 8ರಂದು ವಾಗೀಶ್ವರಿ ದುರ್ಗಾ ಹೋಮ ನಡೆಯಲಿದೆ. 8ರಂದು ಸಂಜೆ 4 ಗಂಟೆಗೆ ದಸರಾ ಶೋಭಾಯಾತ್ರೆ ಆರಂಭವಾಗಲಿದೆ. 9ರಂದು ಬೆಳಗ್ಗೆ 4 ಗಂಟೆಗೆ ಪೂಜೆ ಬಲಿ, ಮಂಟಪ ಬಲಿ, ಮಂಟಪ ಪೂಜೆ ನಡೆದು ಶಾರದಾ ವಿಸರ್ಜನೆ, ಅವಭೃತ ಸ್ನಾನ ನಡೆಯಲಿದೆ.

ಮಂಗಳೂರು ದಸರಾ ಮಹೋತ್ಸವ ಭವ್ಯ ಶೋಭಾಯಾತ್ರೆ ಅ. 8ರಂದು ಸಂಜೆ 4ರಿಂದ ನಡೆಯಲಿದೆ. ಶ್ರೀ ಕ್ಷೇತ್ರದಿಂದ ಹೊರಟ ಶೋಭಾಯಾತ್ರೆಯು ಕಂಬ್ಳಾ ರಸ್ತೆ, ಮಣ್ಣಗುಡ್ಡ ಮಾರ್ಗವಾಗಿ ಲೇಡಿಹಿಲ್ ಸರ್ಕಲ್, ಲಾಲ್‍ಭಾಗ್, ಬಲ್ಲಾಳ್‍ಬಾಗ್, ಪಿವಿಎಸ್, ನವಭಾರತ್ ಸರ್ಕಲ್, ಕೆ.ಎಸ್. ರಾವ್ ರಸ್ತೆ, ಹಂಪನಕಟ್ಟೆ, ವಿ.ವಿ. ಕಾಲೇಜು ವೃತ್ತದಿಂದ ಬಲಕ್ಕೆ ತಿರುಗಿ, ಗಣಪತಿ ಹೈಸ್ಕೂಲ್ ಮಾರ್ಗವಾಗಿ ಶ್ರೀ ವೆಂಕಟರಮಣ ದೇವಸ್ಥಾನದ ಮುಂಭಾಗದಿಂದ ರಥಬೀದಿ, ಚಿತ್ರಾ ಟಾಕೀಸು, ಅಳಕೆಯಾಗಿ ಶ್ರೀ ಕ್ಷೇತ್ರಕ್ಕೆ ಬರಲಿದೆ ಎಂದು ಪದ್ಮರಾಜ್ ಆರ್. ತಿಳಿಸಿದರು. ದಸರಾ ಮಹೋತ್ಸವ ಅಂಗವಾಗಿ ರಾಜ್ಯ, ರಾಷ್ಟ್ರಮಟ್ಟದ ನಾನಾ ಕಲಾ ತಂಡಗಳಿಂದ ಪ್ರತಿನಿತ್ಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದರು.

 

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ