ಕೊಳಚೆಯಲ್ಲಿದೆ ಜ್ಞಾನದೇಗುಲ!

ಗ್ರಂಥಾಲಯ ಮುಂಭಾಗದಲ್ಲಿ ಮಾಂಸದಂಗಡಿ ಪಕ್ಕದಲ್ಲಿ ಮೂತ್ರ ವಿಸರ್ಜನೆ ತಾಣ ಪುಸ್ತಕಗಳಿದ್ಧರೂ ಓದುಗರಿಲ್ಲ

Team Udayavani, Nov 2, 2019, 5:59 PM IST

ಮರಿಯಮ್ಮನಹಳ್ಳಿ: ರಂಗಕಲೆ, ಕ್ರೀಡೆ, ಜನಪದ ಕಲೆಗೆ ತುಂಬಾ ಹೆಸರುವಾಸಿಯಾದ ಮರಿಯಮ್ಮನಹಳ್ಳಿ ಪಟ್ಟಣದ ಜ್ಞಾನದೇಗುಲವಾದ ಗ್ರಂಥಾಲಯ ಮಾತ್ರ ಕೊಳಚೆ ಪ್ರದೇಶದಲ್ಲಿ ಒಂದು ಹಳೆ ಸ್ಮಾರಕದಂತಿದೆ.

ಮರಿಯಮ್ಮನಹಳ್ಳಿ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದರೂ ಇಲ್ಲಿನ ಸಾರ್ವಜನಿಕ ಗ್ರಂಥಾಲಯ ಗ್ರಾಪಂ ಗ್ರಂಥಾಲಯವಾಗಿಯೇ ಉಳಿದಿದೆ. ಪಟ್ಟಣ ಪಂಚಾಯಿತಿ ಕಟ್ಟಡದಲ್ಲಿ ಈ ಸಾರ್ವಜನಿಕ ಗ್ರಂಥಾಲಯವಿದ್ದರೂ ಇದರ ಅಭಿವೃದ್ಧಿ ಬಗ್ಗೆ ಗ್ರಂಥಾಲಯದ ತೆರಿಗೆ ಕಟ್ಟಿಸಿಕೊಳ್ಳುವ ಪಟ್ಟಣ ಪಂಚಾಯಿತಿಯಾಗಲೀ ಈ ಕ್ಷೇತ್ರದಲ್ಲಿ ಎರಡು ಬಾರಿ ಗೆದ್ದು ಬಂದ ಶಾಸಕರಾಗಲಿ ಗಮನಹರಿಸುತ್ತಿಲ್ಲ.

ಈ ಗ್ರಂಥಾಲಯದಲ್ಲಿ ಸದ್ಯಕ್ಕೆ 3000 ಪುಸ್ತಕಗಳಿವೆಯಾದರೂ ಅವುಗಳ ಬಳಕೆ ಮಾಡಲೂ ಜನರ್ಯಾರೂ ಬರುತ್ತಿಲ್ಲ. ಈ ಗ್ರಂಥಾಲಯದ ಮುಂಭಾಗದಲ್ಲಿ ಮಾಂಸದಂಗಡಿಗಳಿವೆ. ಅವುಗಳ ಬಳಿ ಯಾವಾಗಲೂ ನಾಯಿಗಳು ಕಚ್ಚಾಡುತ್ತಲೇ ಇರುತ್ತವೆ. ಅಲ್ಲದೆ ಗ್ರಂಥಾಲಯದ ಪಕ್ಕದಲ್ಲಿ ಇರುವ ಸ್ಥಳ ಮಲಮೂತ್ರ ವಿಸರ್ಜನೆ ತಾಣವಾಗಿರುವುದರಿಂದ ಸದಾ ಮೂಗಿಗೆ ವಾಸನೆ ರಾಚುತ್ತದೆ. ಹೀಗಾಗಿ ಈ ಗ್ರಂಥಾಲಯದಲ್ಲಿ 170 ಜನ ಸದಸ್ಯರಿದ್ದರೂ ಪ್ರತಿದಿನ ಐದು ಮಂದಿಯೂ ಭೇಟಿ ನೀಡುವುದಿಲ್ಲ.

ಈಗಿರುವ ಪುಸ್ತಕಗಳನ್ನು ಸರಿಯಾಗಿ ಕಾಪಾಡಿಕೊಳ್ಳಲು ಸೂಕ್ತ ಪುಸ್ತಕದ ರ್ಯಾಕ್‌ಗಳಿಲ್ಲದೇ ಧೂಳು ಹಿಡಿದಿವೆ. ಪ್ರತಿದಿನ ಎರಡು ಕನ್ನಡ ದಿನಪತ್ರಿಕೆಗಳು, ಸರ್ಕಾರದ ರಾಜ್ಯಪತ್ರ, ಜನಪದ, ಐಶ್ವರ್ಯ, ಕೃಷಿ, ಕನ್ನಡ ನಾಡು ಮಾಸಿಕ, ತ್ತೈಮಾಸಿಕ ಪತ್ರಿಕೆಗಳು ಬಿಟ್ಟರೆ ಯಾವ ಹೆಚ್ಚಿನ ದಿನಪತ್ರಿಕೆಗಳು, ವಾರ ಪತ್ರಿಕೆಗಳು ಬರುತ್ತಿಲ್ಲ.

ಸರ್ಕಾರ ಕೊಡುವ ಪ್ರತಿ ತಿಂಗಳ 400 ರೂಪಾಯಿಗಳಲ್ಲಿ ಹೆಚ್ಚಿನ ದಿನಪತ್ರಿಕೆಗಳಾಗಲಿ, ವಾರಪತ್ರಿಕೆಗಳಾಗಲಿ ಖರೀದಿ ಸಲು ಆಗುತ್ತಿಲ್ಲ ಎಂಬುದು ಗ್ರಂಥಪಾಲಕ ರಾಘವೇಂದ್ರರಾವ್‌ ಅವರ ಅಳಲು. ಇಲ್ಲಿ ಹೆಚ್ಚು ಸಮಯ ಕೂತು ಓದಲಾಗುತ್ತಿಲ್ಲ. ಸದಾ ಗಬ್ಬುವಾಸನೆ ಹೊಡೆಯುತ್ತದೆ. ಓದುವ ಜಾಗ ಶುಭ್ರವಾಗಿದ್ದರೆ ಮಾತ್ರ ಯಾರಾದರೂ ಬರುತ್ತಾರೆ. ನಾನು ನಿತ್ಯವೂ ಇಲ್ಲಿಗೆ ಬರುತ್ತೇನೆ. ಈ ಗ್ರಂಥಾಲಯದ ಸುತ್ತಲ ಆವರಣ ನೋಡಿದರೇನೆ ವಾಕರಿಕೆ ಬರುತ್ತದೆ.

ಅನಿವಾರ್ಯವಾಗಿ ಸ್ವಲ್ಪಹೊತ್ತು ಇದ್ದು ಪತ್ರಿಕೆಗಳನ್ನು ಓದಿ ಹೋಗುತ್ತೇನೆ ಎನ್ನುತ್ತಾರೆ ಓದುಗ ಕುಂಬಾರ ಈರಣ್ಣ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ