ಕೊರೊನಾ ವೈರಸ್ ಆತಂಕ ಬೇಡ
Team Udayavani, Mar 7, 2020, 3:00 AM IST
ಮೈಸೂರು: ಮೈಸೂರು ಜಿಲ್ಲೆಯಲ್ಲಿ ಕೊರೊನಾ ವೈರಸ್ ಹರಡದಂತೆ ಕಟ್ಟೆಚ್ಚರ ವಹಿಸಲಾಗಿದ್ದು, ಜನತೆ ಭಯಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೊರೊನಾ ಸೋಂಕಿಗೆ ಸಂಬಂಧಿಸಿದಂತೆ ವಿಡಿಯೋ ಕಾನ್ಫೆರೆನ್ಸ್ ಮೂಲಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಎಲ್ಲಾ ಜಿಲ್ಲಾಧಿಕಾರಿಗಳ ಸಭೆ ನಡೆಸಿ ಅಗತ್ಯ ಮುಂಜಾಗ್ರತಾ ಕ್ರಮವಹಿಸುವಂತೆ ಸೂಚಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಜಿಲ್ಲೆಯ ಜನರ ಹಿತ ಕಾಪಾಡಲು ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಇದುವರೆಗೆ ಕೊರೊನಾ ಬಾಧಿತ ಪ್ರಕರಣ ಪತ್ತೆಯಾಗಿಲ್ಲ. ಪ್ರತಿದಿನ ಚೀನಾ, ಯುಎಸ್‌ಎ, ಜಪಾನ್, ಹಾಂಗ್‌ಕಾಂಗ್, ಫಿಲಿಫೈನ್ಸ್, ಸಿಂಗಾಪುರ, ಥಾಯ್‌ಲ್ಯಾಂಡ್, ಮಲೇಷ್ಯಾ, ದಕ್ಷಿಣ ಕೊರಿಯಾ, ವಿಯೆಟ್ನಾಮ್, ಇಂಡೋನೇಷ್ಯಾ, ಆಸ್ಟ್ರೇಲಿಯಾ, ನೇಪಾಳ ಸೇರಿದಂತೆ ವಿವಿಧ ದೇಶಗಳಿಂದ ಮಾಹಿತಿ ದೊರೆಯುತ್ತಿದೆ ಎಂದರು.
ವಿದೇಶದಿಂದ ಬರುವವರಿಗೆ ಕೊರೊನಾ ಸೋಂಕು ತಗುಲಿರುವ ಸಾಧ್ಯತೆ ಇರುತ್ತದೆ. ಆರೋಗ್ಯ ಇಲಾಖೆ ವಿದೇಶದಿಂದ ಜಿಲ್ಲೆಗೆ ಬಂದ ವ್ಯಕ್ತಿಗಳನ್ನು ಹಾಗೂ ಕುಟುಂಬದವರನ್ನು ಅವರವರ ಮನೆಯಲ್ಲಿಟ್ಟು ಎರಡು ವಾರಗಳ ಕಾಲ ಗಮನಿಸಲಾಗುತ್ತದೆ. ಇದುವರೆಗೆ ಯಾವುದೇ ವ್ಯಕ್ತಿಗೆ ಜ್ವರ, ಕೆಮ್ಮು, ನೆಗಡಿಯ ಬಂದಿರುವುದು ಕಂಡು ಬಂದಿಲ್ಲ. ಆದರೂ ಸೋಂಕಿತರು ಕಂಡು ಬಂದರೆ ಚಿಕಿತ್ಸೆ ನೀಡಲು ಇಡೀ ಆಸ್ಪತ್ರೆಯಲ್ಲಿ 10 ಬೆಡ್‌ಗಳುಳ್ಳ ಐಸೋಲೆಷನ್ ವಾರ್ಡ್ ತೆರೆಯಲಾಗಿದೆ.
ಇನ್ನು ತೀವ್ರತರ ಸೋಂಕು ಬಾಧಿತರಾದ ವ್ಯಕ್ತಿ ಚಿಕಿತ್ಸೆಗೆ ಕೆಆರ್‌ಎಸ್ ಆಸ್ಪತ್ರೆಯಲ್ಲಿ 5 ಬೆಡ್ ಹಾಗೂ ಒಂದು ವೆಂಟಿಲೇಟರ್ ಕಾಯ್ದಿರಿಸಲಾಗಿದೆ ಎಂದು ತಿಳಿಸಿದರು. ಮೈಸೂರಿನ ಪ್ರವಾಸಿ ತಾಣಗಳ ವೀಕ್ಷಣೆಗಾಗಿ ಜಿಲ್ಲೆಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುತ್ತಾರೆ. ಆದ್ದರಿಂದ ಬೆಂಗಳೂರು, ಮಂಗಳೂರು ವಿಮಾಣ ನಿಲ್ದಾಣಗಳಲ್ಲಿ ಸ್ವಯಂ ಪ್ರೇರಿತವಾಗಿ ಘೋಷಣೆ ಮಾಡಿಕೊಂಡು ತಪಾಸಣೆ ಮಾಡಲಾಗುತ್ತಿದ್ದು, ಅಲ್ಲಿಂದಲೂ ದಿನ ಮಾಹಿತಿ ಪಡೆಯುತ್ತಿದ್ದೇವೆ ಎಂದು ಹೇಳಿದರು.
ಸುಳ್ಳು ಮಾಹಿತಿ: ಕೊರೊನಾ ವೈರಸ್ ಪತ್ತೆಯಾಗಿದೆ ಎಂದು ವೈದ್ಯರು ತಿಳಿಸಿದ್ದಾರೆಂದು ವಾಟ್ಸಾಪ್, ಟ್ವೀಟರ್, ಫೇಸ್‌ಬುಕ್‌ನಲ್ಲಿ ಸುಳ್ಳು ಮಾಹಿತಿ ಹರಿದಾಡುತ್ತಿದೆ. ಮೈಸೂರಿನಲ್ಲಿ ಯಾವುದೇ ಪ್ರಕರಣ ಪತ್ತೆಯಾಗಿಲ್ಲ. ಸಾರ್ವಜನಿಕರು ಯಾರು ಆತಂಕಪಡುವ ಅವಶ್ಯಕತೆಯಿಲ್ಲ ಎಂದು ಸ್ಪಷ್ಟನೆ ನೀಡಿದರು.
ಸೂಚನ ಫಲಕ: ವಿಶ್ವ ಆರೋಗ್ಯ ಸಂಸ್ಥೆಯ ಸೂಚನೆಯಂತೆ ಕಂದಾಯ ಇಲಾಖೆ, ಆರೋಗ್ಯ ಇಲಾಖೆಗಳಿಗೆ ಕೇಂದ್ರ ಸರ್ಕಾರ ಮತ್ತು ಆರೋಗ್ಯ ಇಲಾಖೆಗೆ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಪೋಸ್ಟರ್‌ಗಳನ್ನು ನೀಡಲಾಗಿದ್ದು, ಶಾಲೆ, ಅಂಗನವಾಡಿ, ಆಸ್ಪತ್ರೆಗಳು ಸೇರಿದಂತೆ ಆಯಾ ಇಲಾಖೆಯ ಕಚೇರಿ ಸೂಚನ ಫಲಕದಲ್ಲಿ ಅಳವಡಿಸುವ ಮೂಲಕ ಜನರಿಗೆ ತಿಳಿವಳಿಕೆಯನ್ನು ಮೂಡಿಸಲು ಸೂಚನೆ ನೀಡಿದರು.
ಕರಪತ್ರ: ಆರೋಗ್ಯಕ್ಕೆ ಸಂಬಂಧಿಸಿದಂತೆ ಜನರಲ್ಲಿ ಅರಿವು ಮೂಡಿಸಲು ಈಗಾಗಲೇ ವಾರ್ತಾ ಇಲಾಖೆಗೆ ಸಹ ಕರಪತ್ರವನ್ನು ನೀಡಲಾಗಿದ್ದು, ಮಾಧ್ಯಮದವರು ಸಹಕರಿಸಬೇಕು. ಇನ್ನು ಜನರು ಸಾರ್ವಜನಿಕರು ಓಡಾಡುವ ಸ್ಥಳದಲ್ಲಿ ಉಗುಳಬಾರದು, ಕರವಸ್ತ್ರವನ್ನು ಇಟ್ಟುಕೊಂಡು ಕೆಮ್ಮು, ಸೀನುವುದು, ಕೈಗಳನ್ನು ಸೋಪಿನಿಂದ ತೊಳೆಯುವುದು ಮೊದಲಾದವುಗಳನ್ನು ಸಹ ಪಾಲಿಸುವಂತೆ ಅವರು ಮನವಿ ಮಾಡಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೆಂಕಟೇಶ್, ಜಿಲ್ಲಾ ರೋಗವಾಹಕ ನಿಯಂತ್ರಣಾಧಿಕಾರಿ ಡಾ.ಚಿದಂಬರ, ಆರ್‌ಸಿಹೆಚ್ ಅಧಿಕಾರಿ ಡಾ.ಎಲ್. ರವಿ, ತಾಲೂಕು ಆರೋಗ್ಯಾಧಿಕಾರಿ ಡಾ.ಪಿ.ರವಿ, ಡಿಡಿಪಿಐ ಪಾಂಡುರಂಗ ಇತರರಿದ್ದರು.
ಎಲ್ಲರೂ ಮಾಸ್ಕ್ ಹಾಕಿಕೊಳ್ಳಬೇಕಿಲ್ಲ: ಜಿಲ್ಲೆಯಲ್ಲಿ ಬೇಡಿಕೆಗೆ ಅನುಗುಣವಾಗಿ ಮಾಸ್ಕ್ಗಳು ದೊರೆಯುತ್ತಿವೆ. ಎಲ್ಲಿಯೂ ಮಾಸ್ಕ್ ಕೊರತೆ ಕಾಣುತ್ತಿಲ್ಲ. ಕೆಲವರು ಮಾಸ್ಕ್ ದೊರೆಯುತ್ತಿಲ್ಲ ಎಂದು ಸುಳ್ಳು ವದಂತಿ ಹರಡಿದ್ದಾರೆ. ಮುಖ ಕವಸುಗಳು(ಮಾಸ್ಕ್) ಅವಶ್ಯಕತೆಯಿರುವಷ್ಟು ಲಭ್ಯವಿದೆ. ಅನಗತ್ಯವಾಗಿ ಎಲ್ಲರೂ ಮಾಸ್ಕ್ ಹಾಕಿಕೊಂಡು ಓಡಾಡುವಂತಹ ಪರಿಸ್ಥಿತಿ ಎಲ್ಲಿಯೂ ಇರುವುದಿಲ್ಲ. ಆದ್ದರಿಂದ ರೋಗದ ಲಕ್ಷಣಗಳು ಕಂಡು ಬಂದರೆ ಮಾಸ್ಕ್ ಹಾಕಿಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದರು.