ದೇವರಸನಹಳ್ಳಿ ಮತ್ತೆ ಉದ್ವಿಗ್ನ : ಪೊಲೀಸ್ ಗಸ್ತು
Team Udayavani, Mar 5, 2021, 6:44 PM IST
ನಂಜನಗೂಡು: ಕಳೆದ ಶನಿವಾರ ಗುಂಪು ಘರ್ಷಣೆ, ಚಾಕು ಇರಿತಕ್ಕೆ ಒಳಗಾಗಿದ್ದ ತಾಲೂಕಿನ ದೇವರಸನಹಳ್ಳಿಯಲ್ಲಿ ಮತ್ತೆ ಬುಧವಾರ ರಾತ್ರಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು.
ಶನಿವಾರ ರಾತ್ರಿಯಿಂದಲೂ ಈ ಗ್ರಾಮದಲ್ಲಿ ಪೊಲೀಸ್ ಕಾವಲಿದ್ದು, 15ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದಿರುವ ಪೊಲೀಸರು 20ಕ್ಕೂ ಹೆಚ್ಚು ಜನರ ಪತ್ತೆಗಾಗಿ ಕಾರ್ಯಾಚರಣೆ ಕೈಗೊಂಡಿದ್ದಾರೆ.ಗ್ರಾಮವು ಅಶಾಂತಿಯಿಂದ ಶಾಂತಿಯತವಾದ ವಾತಾವರಣದತ್ತ ಸಾಗುತ್ತಿದೆ ಎನ್ನುವಾಗಲೇ ಬುಧವಾರ ಮಧ್ಯರಾತ್ರಿಯಲ್ಲಿ ಕಿಡಿಗೇಡಿಗಳು ಹುಲ್ಲಿನ ಮೆದೆ ಹಾಗೂ ಬಾಳೆತೋಟಕ್ಕೆ ಹಾನಿ ಮಾಡಿದ್ದಾರೆ.
ಶನಿವಾರ ರಾತ್ರಿ ಗ್ರಾಮದಿಂದ ಅರ್ಧ ಕಿ.ಮೀ.ದೂರದಲ್ಲಿರುವ ನಾಗರಾಜು ಅವರ ಆರು ಎಕರೆ ಹುಲ್ಲು ಬೆಂಕಿಗಾಹುತಿಯಾದರೆ, ಶಿವಣ್ಣ ಜಮೀನಿನಲ್ಲಿ ಬೆಳೆದು ನಿಂತಿದ್ದ ಬಾಳೆ ಗಿಡಗಳನ್ನು ಕತ್ತರಿಸಿ ಹಾಕಲಾಗಿದೆ. ಗ್ರಾಮದಲ್ಲಿ ಬೂದಿ ಮುಚ್ಚಿದ ಕೆಂಡದಂತ ವಾತಾವರಣವಿದೆ.