ಅರಣ್ಯ ಕೃಷಿಗೆ ಸಸಿ ಬೇಕಾ?, ಅರ್ಜಿ ಸಲ್ಲಿಸಿ

Team Udayavani, May 15, 2019, 3:00 AM IST

ಹುಣಸೂರು: ಅರಣ್ಯ ಇಲಾಖೆ ಆವರಣದೊಳಗೆ ಪ್ರವೇಶಿಸುತ್ತಿದ್ದಂತೆ ಎತ್ತ ಕಣ್ಣು ಹಾಯಿಸಿದರೂ ಹಚ್ಚ ಹಸಿರಿನ ತಪ್ಪಲಿಗೆ ಬಂದಿದ್ದೇವೇನೋ ಎಂಬಂತೆ ಭಾಸವಾಗುತ್ತದೆ. ಇಲ್ಲಿನ 6 ಎಕರೆ ವಿಸ್ತೀರ್ಣದಲ್ಲಿ ವಿವಿಧ ಜಾತಿಯ ಸಸಿಗಳು ಆರೋಗ್ಯಪೂರ್ಣವಾಗಿ ಬೆಳೆದಿದ್ದು, ಎಲ್ಲಿ ನೋಡಿದರಲ್ಲಿ ಸಸ್ಯಕಾಶಿ ನಳನಳಿಸುತ್ತಿದೆ.

ಹೌದು, ಇದು ಕೊಡಗಿನ ಹೆಬ್ಟಾಗಿಲು ಹುಣಸೂರಿನ ಹುಣಸೂರು ಪ್ರಾದೇಶಿಕ ಅರಣ್ಯ ವಿಭಾಗದ ವತಿಯಿಂದ 2019-20ನೆ ಸಾಲಿಗಾಗಿ ವಿವಿಧ ಅರಣ್ಯ ಪ್ರೋತ್ಸಾಹ ಯೋಜನೆಗಾಗಿ ನರ್ಸರಿಯಲ್ಲಿ 6.50 ಲಕ್ಷ ವಿವಿಧ ಜಾತಿಯ ಸಸಿಗಳನ್ನು ಬೆಳೆಸಲಾಗಿದೆ. ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ ರೈತರು ಅರ್ಜಿ ಸಲ್ಲಿಸಿ ಸಸಿಗಳನ್ನು ಪಡೆಯಬಹುದಾಗಿದೆ. ಸಣ್ಣ ಸಸಿಗಳಿಗೆ 1 ರೂ. ಹಾಗೂ ದೊಡ್ಡ ಸಸಿಗಳಿಗೆ 3 ರೂ. ನಿಗದಿಪಡಿಸಲಾಗಿದೆ.

ವಿವಿಧ ಜಾತಿಯ ಸಸ್ಯ ಕಾಶಿ: ನರ್ಸರಿಯಲ್ಲಿ ಶ್ರೀಗಂಧ, ತೇಗ, ಮಾವು, ಹಲಸು, ಗೋಣಿ, ಹಿಪ್ಪೆ, ಬಸರಿ, ಬೀಟೆ, ಹೊನ್ನೆ, ನೆಲ್ಲಿ, ನಿಂಬೆ, ದಾಳಿಂಬೆ, ಕರಿಬೇವು, ಕಹಿಬೇವು, ಮಹಾಗನಿ, ಹೊಂಬೆ, ನೇರಳೆ, ಹುಣಸೆ, ಬಿಲ್ವಾರ, ಹೆಬ್ಬೇವು, ಹತ್ತಿ, ಸಿಲ್ವಾರ ಹೀಗೆ ತರಹೇವಾರಿ ಸಸಿಗಳನ್ನು ಬೆಳೆಸಲಾಗಿದೆ. ಇಲಾಖೆಯ ಅನುಭವಿ ವಾಚರ್‌ ರಮೇಶ್‌ ಇಡೀ ನರ್ಸರಿಯ ಪಾಲನೆಯನ್ನು ನೋಡಿಕೊಳ್ಳುತ್ತಾರೆ. ನರ್ಸರಿಯಲ್ಲಿ ಸಸಿಗಳು ಬೆಳೆಯುತ್ತಿದ್ದರೆ, ತನ್ನ ಮಗುವೇ ನಗುನಗುತ್ತಾ ಬೆಳೆಯುತ್ತಿದೆ ಎನ್ನುವಷ್ಟು ಸಂತೋಷದಿಂದ ನರ್ಸರಿಯನ್ನು ಕಾಪಾಡುತ್ತಿದ್ದಾರೆ.

ಈ ವರ್ಷ 6.50 ಲಕ್ಷ ಸಸಿ ರೆಡಿ: ಇಲಾಖೆ 6,50,980 ಸಸಿಗಳನ್ನು ನರ್ಸರಿಯಲ್ಲಿ ಬೆಳೆಸಿದ್ದು, ಈ ಪೈಕಿ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ 5.44 ಲಕ್ಷ ಸಸಿಗಳನ್ನು ಮೀಸಲಿಡಲಾಗಿದೆ. 1.5 ಲಕ್ಷ ಹೆಬ್ಬೇವು, 3.85 ಲಕ್ಷ ಸಿಲ್ವಾರ ಸಸಿಗಳನ್ನು ಬೆಳೆಸಲಾಗಿದೆ. 6 ಸಾವಿರ ಶ್ರೀಗಂಧದ ಮರ, 10 ಸಾವಿರ ತೇಗದ ಮರಗಳನ್ನು ಬೆಳೆಸಲಾಗುತ್ತಿದೆ. ನೆಡುತೋಪು, ರಸ್ತೆ ಬದಿ ಮರಗಳು ಮುಂತಾದ ಕಾರ್ಯಕ್ರಮಗಳ ಅಡಿಯಲ್ಲಿ ಉಳಿದ (10 ಸಾವಿರ ಸಸಿಗಳು) ಸಸಿಗಳನ್ನು ಇಲಾಖೆ ನಡೆಲಿದೆ.

ಮಗುವಿಗೊಂದು ಮರ, ಶಾಲೆಗೊಂದು ವನ ಯೋಜನೆಯಡಿ 2,500 ಸಾವಿರ ಗಿಡಗಳನ್ನು ಮೀಸಲಿಡಲಾಗಿದೆ. ಮಕ್ಕಳಿಗಾಗಿ ದಾಳಿಂಬೆ, ನಿಂಬೆ, ಸೀಗೆ, ಹೊಂಗೆ ಸಸಿ ಸಿದ್ಧವಿದೆ. ಅಲ್ಲದೇ ತಾಲೂಕಿನ ಮರದೂರು ನರ್ಸರಿಯಲ್ಲಿ ಸಿಲ್ವರ್‌, ಶ್ರೀಗಂಧ, ಹೆಬ್ಬೇವು, ನುಗ್ಗೆ, ಹುಣಸೆ, ಕರಿಬೇವು ಸೇರಿದಂತೆ 83 ಸಾವಿರ ಸಸಿ ಬೆಳೆಸಲಾಗಿದೆ. ಈ ಪೈಕಿ 55 ಸಾವಿರ ಸಸಿ ಮಾತ್ರ ವಿತರಿಸಲಾಗುವುದು.

ಶ್ರೀಗಂಧ ಸಸಿಗಳಿಗೆ ಬೇಡಿಕೆ: ಬಹು ಬೇಡಿಕೆ ಇರುವ ಶ್ರೀಗಂಧದ 8 ಸಾವಿರ ಸಸಿಯನ್ನು ನರ್ಸರಿ ಮಾಡಲಾಗಿದ್ದು, ಬೇಡಿಕೆ ಸಲ್ಲಿಸುವ ರೈತರಿಗೆ ವಿತರಿಸಲಿದ್ದಾರೆ. ಇದೇ ಮಾದರಿಯಲ್ಲಿ ತೇಗ ಸಹ ನರ್ಸರಿ ಮಾಡಲಾಗಿದೆ.

ತಂಬಾಕು ಮಂಡಳಿಗೆ ಲಕ್ಷ ಸಸಿ: ತಂಬಾಕು ಮಂಡಳಿಯು ತನ್ನ ತಂಬಾಕು ಬೆಳೆಗಾರರಿಗೆ ವಿತರಿಸಲು ಒಂದು ಲಕ್ಷ ಸಿಲ್ವರ್‌ ಸಸಿಗಳನ್ನು ಇಲಾಖೆಯ ನರ್ಸರಿಯಲ್ಲೇ ಬೆಳೆಸಲಾಗಿದೆ. ಮಂಡಳಿ ವತಿಯಿಂದಲೇ ರೈತರಿಗೆ ಸಸಿ ವಿತರಣೆ ನಡೆಯಲಿದೆ.

ಕೃಷಿ-ಅರಣ್ಯಕ್ಕೆ ಆದ್ಯತೆ: ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ ಪ್ರತಿ ರೈತರಿಗೆ 400 ಸಸಿಗಳನ್ನು ನಿಗದಿಗಿಳಿಸಿದ್ದು, ಸಾಮಾನ್ಯರಿಗೆ ಎಕರೆಗೆ 160 ಸಸಿಗಳನ್ನು ನೀಡಲಾಗುವುದು. ಸಸಿಗಳನ್ನು ಸಮರ್ಪಕವಾಗಿ ಪಾಲನೆ ಮಾಡುವವರಿಗೆ ಮಾತ್ರ ಈ ಸೌಲಭ್ಯ ಸಿಗಲಿದೆ.

ಇತ್ತೀಚಿನ ದಿನಗಳಲ್ಲಿ ಕೃಷಿ-ಅರಣ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ಪಡೆಯುತ್ತಿದ್ದು, ಜಮೀನಿನಲ್ಲಿ ಮರಗಳನ್ನು ಬೆಳೆಸಿ ಮಧ್ಯದಲ್ಲಿ ತೋಟಗಾರಿಕಾ ಬೆಳೆಗಳನ್ನು ಬೆಳೆಯುವ ಪದ್ಧತಿ ಚಾಲ್ತಿಯಲ್ಲಿದ್ದು, ಅಂತಹ ರೈತರಿಗೂ ಸಸಿಗಳನ್ನು ವಿತರಿಸಲಾಗುತ್ತಿದೆ. ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ ಸಸಿಗಳನ್ನು ಪಡೆಯಲು ರೈತರು ಈಗಿಂದಲೇ ಅರ್ಜಿಯನ್ನು ಸಲ್ಲಿಸುವುದು ಸೂಕ್ತ.

ಹಿರಿಯ ಅಧಿಕಾರಿಗಳ ಪ್ರಶಂಸೆ: ನರ್ಸರಿಗೆ ಇತ್ತೀಚಿಗೆ ಭೇಟಿ ನೀಡಿದ ಎಪಿಸಿಸಿಎಫ್‌ ಕರಿಯಪ್ಪ, ಮೈಸೂರು ವಿಭಾಗದ ಪಿಸಿಸಿಎಫ್‌ ಅಂಬಟಿ ಮಾಧವ ಇನ್ನಿತರ ಹಿರಿಯ ಅಧಿಕಾರಿಗಳು ನರ್ಸರಿಯನ್ನು ಕಂಡು ಮೆಚ್ಚುಗೆ ಸೂಚಿಸಿದ್ದು, ಅತ್ಯಂತ ಸುವ್ಯವಸ್ಥಿತವಾಗಿ ನಡೆಯುತ್ತಿರುವುದಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಹುಣಸೂರು ರಾಜ್ಯಕ್ಕೆ ಪ್ರಥಮ: ಕಳೆದ 8 ವರ್ಷಗಳ ಹಿಂದೆ ರಾಜ್ಯದಲ್ಲಿ ಆರಂಭಗೊಂಡ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ ಅತಿಹೆಚ್ಚು ಸಸಿಗಳನ್ನು ವಿತರಿಸಿರುವ ಖ್ಯಾತಿ ಹುಣಸೂರು ಪ್ರಾದೇಶಿಕ ವಿಭಾಗ ಪಡೆದಿದೆ. ತಾಲೂಕಿನಲ್ಲಿ ಇದುವರೆಗೂ ಸುಮಾರು 35 ಲಕ್ಷ ಸಸಿಗಳನ್ನು ರೈತರಿಗೆ ವಿತರಿಸಲಾಗಿದೆ. ಹಾಗೂ ಇಲಾಖೆ ವತಿಯಿಂದ ವಿವಿಧ ಯೋಜನೆಗಳ ಮೂಲಕ ನೆಡಲಾಗಿದೆ. ಇಲಾಖೆಯಲ್ಲಿ 8 ವರ್ಷಗಳಿಂದಲೂ ವಾಚರ್‌ ಆಗಿರುವ ರಮೇಶ್‌ ಇಲ್ಲಿನ ಸಸ್ಯ ಕಾಶಿಯ ಉಸ್ತುವಾರಿ. ಇದಕ್ಕಾಗಿ ಇಲಾಖೆ ವತಿಯಿಂದ ವರ್ಷದ ಹಿಂದೆ ಪ್ರಶಂಸೆಗೂ ರಮೇಶ್‌ ಪಾತ್ರರಾಗಿದ್ದರು.

ವಿವಿಧ ಅರಣ್ಯ ಪ್ರೋತ್ಸಾಹ ಯೋಜನೆಯಡಿ ಈ ಬಾರಿ ಅತಿಹೆಚ್ಚು ಸಸಿಗಳನ್ನು ನರ್ಸರಿಯಲ್ಲಿ ಬೆಳೆಸಿದ್ದು, ರೈತರು ಸದುಪಯೋಗಪಡೆಯಬೇಕು. ಇನ್ನೂ ಕಾಲಾವಕಾಶವಿದೆ. ತಾಲೂಕಿನಲ್ಲಿ ಇಲ್ಲಿಯವರೆಗೆ ವಿತರಿಸಿರುವ ಸಸಿಗಳ ಪೈಕಿ ಶೇ.50ರಷ್ಟು ಸಸಿಗಳು ಉಳಿದು ಬೆಳೆಯತ್ತಿರುವುದು ಸಂತಸ ತಂದಿದ್ದು, ಇದರಿಂದ ಮತ್ತಷ್ಟು ಮಂದಿಗೆ ಪ್ರೇರೇಪಣೆ ನೀಡಿದಂತಾಗಲಿದೆ. ಬೇಡಿಕೆ ಇರುವಷ್ಟು ಸಸಿ ವಿತರಿಸಲು ಎಲ್ಲಾ ರೀತಿಯ ಕ್ರಮ ವಹಿಸಲಾಗಿದೆ.
-ಎಂ.ಸಂದೀಪ್‌. ಆರ್‌ಎಫ್‌ಓ ಸಾಮಾಜಿಕ ಅರಣ್ಯ ವಿಭಾಗ

* ಸಂಪತ್‌ ಕುಮಾರ್‌


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ