ಮಕ್ಕಳ ಕಣ್ಣು, ಮೂಗು, ಕಿವಿ ಕಿತ್ತ ಬೀದಿ ನಾಯಿಗಳು

Team Udayavani, Jun 26, 2019, 2:59 AM IST

ಎಚ್‌.ಡಿ.ಕೋಟೆ: ಮನೆಯ ಮುಂದಿನ ರಸ್ತೆ ಬದಿಯಲ್ಲಿ ಆಟವಾಡುತ್ತಿದ್ದ ಇಬ್ಬರು ಮಕ್ಕಳ ಮೇಲೆ ಬೀದಿ ನಾಯಿಗಳು ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಪಟ್ಟಣದ ಶಿವಾಜಿ ರಸ್ತೆಯ ಮುಸ್ಲಿಂ ಬ್ಲಾಕ್‌ ಬಡಾವಣೆಯಲ್ಲಿ ಸಂಭವಿಸಿದೆ.

ಜೋಣಿಗೇರಿ ಬಡಾವಣೆಯ ಯಶ್ವಂತ್‌ (2) ಹಾಗೂ ರಜೈನ್‌ಖಾನ್‌ (3) ಬೀದಿನಾಯಿಗಳ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳು ಮಕ್ಕಳಿಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್‌.ಆಸ್ಪತ್ರೆಗೆ ಕರೆದ್ಯೊಯಲಾಯಿತು.

ಬೀದಿ ನಾಯಿಗಳ ದಾಳಿಯಿಂದ ಮಕ್ಕಳ ಕಣ್ಣು, ಮೂಗು, ಕಿವಿ, ಗಲ್ಲದ ಭಾಗದ ಮೇಲೆ ಕಚ್ಚಿ ಗಂಭೀರವಾಗಿ ಗಾಯಗೊಳಿಸಿವೆ. ಈ ಘಟನೆಯಿಂದ ಪಟ್ಟಣದ ಸಾರ್ವಜನಿಕರು ಭಯ ಭೀತರಾಗಿದ್ದು, ಬೀದಿ ನಾಯಿಗಳ ಹಾವಳಿ ತಡೆಗೆ ಯಾವುದೇ ಕ್ರಮ ಕೈಗೊಳ್ಳದ ಪುರಸಭೆ ಅಧಿಕಾರಿಗಳ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗೋಮಾಂಸದಂಗಡಿ ಮುಚ್ಚಿಸಿ: ಪಟ್ಟಣದ ಶಿವಾಜಿ ರಸ್ತೆಯ ಜೋಣಿಗೇರಿಯಲ್ಲಿ ಪ್ರತಿನಿತ್ಯ ಹಾಡು ಹಗಲೇ ಗೋಮಾಂಸ ಮಾರಾಟಗಾರರು ರಾಜರೋಷವಾಗಿ ಮಾಂಸ ಮಾರಾಟ ಮಾಡುತ್ತಿರುವುದರಿಂದ ನಾಯಿಗಳ ಸಂಖ್ಯೆ ಹೆಚ್ಚಾಗಿದ್ದು, ಮಾಂಸದ ರುಚಿ ನೋಡಿರುವ ಬೀದಿ ನಾಯಿಗಳು ಈಗ ಮಕ್ಕಳ ಮೇಲೆ ದಾಳಿ ಮಾಡಿ ಗಾಯಗೊಳಿಸಿವೆ.

ಇಲ್ಲಿ ಆಕ್ರಮವಾಗಿ ತಲೆ ಎತ್ತಿರುವ ಗೋಮಾಂಸ ಮಾರಾಟವನ್ನು ತಡೆಗಟ್ಟುವಂತೆ ಪುರಸಭೆ ಅಧಿಕಾರಿಗಳಿಗೆ, ಪೊಲೀಸ್‌ ಅಧಿಕಾರಿಗಳಿಗೆ ಹಾಗೂ ಸ್ಥಳೀಯ ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಕ್ರಮಕ್ಕೆ ಮುಂದಾಗದೇ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ ಎಂದು ಬಡಾವಣೆ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಆಕ್ರಮ ಗೋಮಾಂಸ ಮಾರಾಟ ಅಂಗಡಿಗಳನ್ನು ಮುಚ್ಚಿಸಿ, ಶೀಘ್ರ ಬೀದಿ ನಾಯಿಗಳನ್ನು ಸೆರೆಹಿಡಿಸಿ ಬಡಾವಣೆ ಜನರು ನೆಮ್ಮದಿಯಿಂದ ಬದುಕಲು ಅವಕಾಶ ಮಾಡಿಕೊಡಿ ಎಂದು ಆಗ್ರಹಿಸಿದ್ದಾರೆ.

ಇಂದು ಬೀದಿ ನಾಯಿ ಸೆರೆ ಹಿಡಿಯುವ ತಂಡ ನಗರಕ್ಕೆ: ಇಬ್ಬರು ಮಕ್ಕಳ ಮೇಲೆ ಹಾಗೂ ಬೀದಿ ನಾಯಿಗಳ ಮೇಲೆ ಹುಚ್ಚು ನಾಯಿಯೊಂದು ದಾಳಿ ಮಾಡಿದೆ. ಬೀದಿ ನಾಯಿ ಹಿಡಿಯುವ ತಂಡ ನಾಳೆ (ಬುಧವಾರ ) ಪಟ್ಟಣಕ್ಕೆ ಬರಲಿದ್ದು, ಶೀಘ್ರ ಹುಚ್ಚು ನಾಯಿಗಳನ್ನು ಸೆರೆಹಿಡಿಸಿ ನಾಶ ಪಡಿಸಲಾಗುವುದು. ಗಾಯಗೊಂಡಿರುವ ಮಕ್ಕಳ ಚಿಕಿತ್ಸೆಗಾಗಿ ಪುರಸಭೆಯಿಂದ 10 ಸಾವಿರ ರೂ ಪರಿಹಾರ ನೀಡಲಾಗುವುದು ಎಂದು ಎಚ್‌.ಡಿ.ಕೋಟೆ ಪುರಸಭೆ ಮುಖ್ಯಾಧಿಕಾರಿ ಡಿ.ಎನ್‌.ವಿಜಯಕುಮಾರ್‌ ತಿಳಿಸಿದ್ದಾರೆ.

ಪಟ್ಟಣದ ಶಿವಾಜಿ ರಸ್ತೆಯ ಜೋಣಿಗೇರಿಯಲ್ಲಿ ಆಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದಾರೆ. ಈ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇನೆ.
-ವಿ.ಎಸ್‌.ಅಶೋಕ್‌, ಸಬ್‌ಇನ್ಸ್‌ಪೆಕ್ಟರ್‌


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ