ಕುದೂರು ನಾಡಕಚೇರಿ ಕಟ್ಟಡ ಸಂಪೂರ್ಣ ಕಳಪೆ
ಉದ್ಘಾಟನೆ ದಿನವೇ ಮುರಿದು ಬಿದ್ದ ಕಿಟಕಿ
Team Udayavani, Jun 28, 2022, 2:44 PM IST
ಕುದೂರು: ಉತ್ತಮ ಕಟ್ಟಡ ನಿರ್ಮಾಣಕ್ಕೆಂದು ಸರ್ಕಾರ ಕೋಟ್ಯಂತರ ರೂಪಾಯಿ ಅನುದಾನ ಬಿಡುಗಡೆ ಮಾಡುತ್ತದೆ. ಆದರೆ, ಗುತ್ತಿಗೆದಾರರು ಈ ಅನುದಾನವನ್ನು ಬಳಸಿಕೊಂಡು ಕಳಪೆ ಕಾಮಗಾರಿ ಮಾಡಿ, ಜನರಿಗೂ ಹಾಗೂ ಸರ್ಕಾರಕ್ಕೆ ಮಕ್ಮಲ್ ಟೋಪಿ ಹಾಕ್ತಾರೆ ಎನ್ನುವುದಕ್ಕೆ ಇದೊಂದು ಒಳ್ಳೆಯ ಉದಾಹರಣೆ.
ಹೌದು, ಕುದೂರು ಗ್ರಾಮದಲ್ಲಿ ರೈತಾಪಿ ವರ್ಗಗಳಿಗೆ ಅನುಕೂಲವಾಗಲಿ ಎಂದು ನೂತನವಾಗಿ ಕಟ್ಟಿರುವ ನಾಡಕಚೇರಿ ಕಟ್ಟಡ ಸಂಪೂರ್ಣ ಕಳಪೆಯಾಗಿದೆ ಉದ್ಘಾಟನೆಯಾದ ದಿನವೇ ಮುರಿದು ಬಿದ್ದ ಕಿಟಕಿ, ಕಟ್ಟಡದಲ್ಲಿ ವಿದ್ಯುತ್ ಸಂಪರ್ಕ ಸರಿಯಿಲ್ಲ, ಕಟ್ಟಡದ ಬಾಗಿಲನ್ನು ಕೂಡ ಸಿಮೆಂಟ್‌ನಲ್ಲೇ ಕಟ್ಟಿದ್ದಾರೆ. ಇಲ್ಲಿ ಯಾವುದೇ ಭದ್ರತೆ ಇಲ್ಲ ಎನ್ನುವುದು ಕುದೂರು ಗ್ರಾಮಸ್ಥರ ದೂರಾಗಿದೆ.
ಉದ್ಘಾಟನೆ ದಿನವೇ ಮುರಿದು ಬಿತ್ತು ಕಿಟಕಿ: ನಾಡಕಚೇರಿಯ ಉದ್ಘಾಟನೆ ದಿನವೇ ಕಿಟಕಿ ಯೊಂದು ಮುರಿದು ಬಿದ್ದಿದೆ. ಕಟ್ಟಡಕ್ಕೆ ಬಳಸಿರುವ ವಸ್ತುಗಳು ಕೂಡ ಅತ್ಯಂತ ಕಳಪೆಮಟ್ಟದಾಗಿದೆ. ಇಷ್ಟೆಲ್ಲಾ ಕಳಪೆ ಮಟ್ಟದಿಂದ ಕೂಡಿದ್ದರೂ, ಈ ಕುರಿತು ಯಾವೊಬ್ಬ ಅಧಿಕಾರಿಯಾಗಲಿ, ಎಂಜಿನಿಯರ್ ಆಗಲಿ ಗುತ್ತಿಗೆ ದಾರರನ್ನು ಪ್ರಶ್ನಿಸುವ ಗೋಜಿಗೆ ಹೋಗದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಅಧಿಕಾರಿಗಳು ಸಹ ಇದರಲ್ಲಿ ಶಾಮೀಲು ಆಗಿದ್ದಾರೆಯೇ ಎನ್ನುವ ಅನುಮಾನ ಮೂಡುತ್ತಿದೆ.
ಅನುಕೂಲಕ್ಕಿಂತ ಅನನುಕೂಲವೇ ಹೆಚ್ಚು: ಇಲ್ಲಿ ನಾಡಕಚೇರಿ ಆರಂಭಿಸಿದರೆ ರೈತಾಪಿ ವರ್ಗದವರಿಗೆ ಮತ್ತು ಸಾರ್ವಜನಿಕರಿಗೆ ಅನುಕೂಲಕ್ಕಿಂತ ಅನನು ಕೂಲವೇ ಹೆಚ್ಚು. ಏಕೆಂದರೆ, ರೈತರಿಗೆ, ವೃದ್ಧರಿಗೆ, ಮಹಿಳೆಯರಿಗೆ ಊರ ಹೊರಗಡೆ ಇರುವುದರಿಂದ ಜೆರಾಕ್ಸ್ ಮಾಡಿಸುವುದಕ್ಕೆ, ಹಾಳೆ, ಪೆನ್ನು ತರುವುದಕ್ಕೆ ಒಂದೂವರೆ ಕಿ.ಮೀ. ಹೋಗಬೇಕು. ಮತ್ತೆ ಒಂದೂವರೇ ಕಿ.ಮೀ. ಬರಬೇಕು. ಆಟೋದಲ್ಲಿ ಹೋಗಿ ಬರೋಣವೆಂದರೆ 80 ರೂ. ಖರ್ಚು ಆಗುತ್ತದೆ. ಅಧಿಕಾರಿಗಳು ಸಹ ಕಚೇರಿಯಲ್ಲಿ ಜನರು ಹೋದ ತಕ್ಷಣ ಕೆಲಸ ಮಾಡಿ ಕೊಡುವುದಿಲ್ಲ.
18.84 ಲಕ್ಷ ರೂಪಾಯಿ ವೆಚ್ಚ: ಕುದೂರಿನ ಮಧ್ಯಭಾಗದಲ್ಲಿರುವ ಕೆನರಾ ಬ್ಯಾಂಕ್ ಮೇಲ್ಭಾಗದಲ್ಲಿ ವಿಶಾಲವಾದ ಬಾಡಿಗೆ ಕಟ್ಟಡದಲ್ಲಿ ನಾಡಕಚೇರಿ ಇತ್ತು. ಅದಕ್ಕೆ ಸ್ವಂತ ಕಟ್ಟಡ ಬೇಕೆಂದು ಕುದೂರು-ಮರೂರು ರಸ್ತೆ ಸರ್ಕಾರಿ ಜಾಗದಲ್ಲಿ ಕಟ್ಟಡ ನಿರ್ಮಿಸಲಾಗಿದೆ. ಆದರೆ, ಅದು ಅತ್ಯಂತ ಕಳಪೆಮಟ್ಟದ ಕಟ್ಟಡವಾಗಿದ್ದು, ಕಚೇರಿಯ ದಾಖಲೆಗಳು ಭದ್ರವಾಗಿ ಇಟ್ಟುಕೊಳ್ಳಲಾಗದಂತಹ ಸ್ಥಿತಿಯಲ್ಲಿ ಕಟ್ಟಡ ನಿರ್ಮಾಣ ಆಗಿದೆ. ಕೊಠಡಿಯೊಳಗೆ ಏಕ ಕಾಲದಲ್ಲಿ ಇಬ್ಬರು ಒಳಗೆ ಹೋಗಿ ನಿಂತುಕೊಳ್ಳುವುಕ್ಕೂ ಜಾಗವಿಲದಷ್ಟು ಕಟ್ಟಡ ನಿರ್ಮಾಣ ಮಾಡಲಾಗಿದೆ.
ಇಂತಹ ಕಳಪೆ ಕಟ್ಟಡಕ್ಕೆ ಖರ್ಚಾಗಿರುವ ವೆಚ್ಚ 18.84 ಲಕ್ಷ ರೂಪಾಯಿ ನೀರಿನಲ್ಲಿ ಹೋಮ ಮಾಡಿದ ಆಗಿದೆ. ನೂತನವಾಗಿ ಕಟ್ಟಿರುವ ನಾಡಕಚೇರಿ ಗ್ರಾಮದಿಂದ ಒಂದೂವರೆ ಕಿ.ಮೀ. ದೂರದಲ್ಲಿ ನಿರ್ಮಿಸಲಾಗಿದೆ. ಕಚೇರಿ ಕೆಲಸಕ್ಕೆ ಬಂದಂತಹವರಿಗೆ ಕುಳಿತು ಕೊಳ್ಳುವುದಕ್ಕಾಗಲಿ, ನಿಲ್ಲುವುದಕ್ಕಾಗಲಿ ಕಚೇರಿಯೊಳಗೆ ಜಾಗವಿಲ್ಲ. ಹೊರಗೆ ಕುಳಿತುಕೊಳ್ಳಲು ಸಹ ಜಾಗವಿಲ್ಲ. ಮಳೆ ಬಂದರಂತೂ ರೈತರ ಹಾಗೂ ಜನರ ಪಾಡು ಚಿಂತಾಜನಕ.
ಸ್ಟಾಕ್ ರೂಮ್ ಚಿಕ್ಕದ್ದು: ಕಚೇರಿಯ ದಾಖಲಾತಿ, ರೆವಿನ್ಯೂ ಇಲಾಖೆಯ ಕಡತ ಸುರಕ್ಷಿತವಾಗಿಡಲು ಸ್ಟಾಕ್ ರೂಮ್ ಅತ್ಯಂತ ಚಿಕ್ಕದಾಗಿದ್ದು, ಅದು ಕೂಡ ಬದ್ರ ಇಲ್ಲ. ಗಾಜಿನ ಕಿಟಕಿಯನ್ನು ಹೊಡೆದು ಹಾಕಿ ಅದರ ಮೂಲಕ ದಾಖಲೆ ಹಾಳು ಮಾಡುವ ಸಾಧ್ಯತೆಗಳಿವೆ. ರಾತ್ರಿಯಾಯಿತೆಂದರೆ ಇಲ್ಲಿ ಹೇಳುವವರು, ಕೇಳುವವರೂ ಇಲ್ಲದಂತಾಗುತ್ತದೆ. ಹಾಗಾಗಿ, ಕುದೂರು ಗ್ರಾಮದೊಳಗೆ ನಾಡಕಚೇರಿಯನ್ನು ಆರಂಭಿಸಿದರೆ ರೈತರಿಗೆ ಅನುಕೂಲ ಆಗುತ್ತದೆ. ಇನ್ನಾದರೂ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಜನರಿಗೆ ಅನುಕೂಲವಾಗುವ ಕಡೆ ಕಚೇರಿ ನಿರ್ಮಾಣ ಮಾಡಬೇಕೆಂದು ಕುದೂರು ಹೋಬಳಿ ಜನರ ಮನವಿ.
ಅಧಿಕಾರಿಗಳನ್ನು ಪ್ರಶ್ನಿಸದ ಜನಪ್ರತಿನಿಧಿಗಳು : ಹತ್ತಾರು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಮಾಗಡಿ ಶಾಸಕರು ಈ ಕಟ್ಟಡ ಮುಂದೆಯೇ ಹೋಗಿ ಬರುತ್ತಾರೆ. ಒಮ್ಮೆಯೂ ಈ ಕಟ್ಟಡ ಬಳಿ ಇಳಿದು ಕಾಮಗಾರಿಯ ಗುಣಮಟ್ಟ ಪರೀಕ್ಷಿಸಲಿಲ್ಲ. ಮುಂದಾಲೋಚನೆ ಯಿಲ್ಲದ ಕಾರ್ಯಕ್ರಮ ಗಳಿಂದ ಜನರ ತೆರಿಗೆ ಹಣ ವ್ಯಯವಾಗುತ್ತಿದೆ. ಕಳಪೆ ಕಾಮಗಾರಿ ಮಾಡಿದವರಿಗೆ ದಂಡಿಸುವ ಹಾಗೂ ಇದನ್ನು ನಿಗಾವಹಿಸದ ಸಂಬಂಧಪಟ್ಟ ಅಧಿಕಾರಿಗಳನ್ನು ಪ್ರಶ್ನಿಸುವ ಕೆಲಸವನ್ನು ಜನಪ್ರತಿನಿಧಿಗಳು ಮಾಡುತ್ತಿಲ್ಲ. ಪ್ರಶ್ನೆ ಮಾಡದೇ ಇರುವುದನ್ನು ನೋಡಿದರೆ ಭ್ರಷ್ಟರಿಗೆ ಜನಪ್ರತಿನಿಧಿಗಳೇ ಸಾಥ್ ನೀಡುತ್ತಿದ್ದಾರೆಯೇ ಎಂಬ ಅನುಮಾನ ಮೂಡುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ನಾಡಕಚೇರಿ ಉದ್ಘಾಟನೆಯಾಗಿರುವುದು ನನ್ನ ಗಮನಕ್ಕೆ ಬಂದಿಲ್ಲ. ಜನರಿಗೆ ಅನನುಕೂಲವಾಗುವುಂತಹ ಕೆಲಸ ಯಾವತ್ತೂ ಕೂಡ ಮಾಡುವುದಿಲ್ಲ. ಕಟ್ಟಡ ಕಳಪೆಯಾಗಿದ್ದರೆ ಅದಕ್ಕೆ ಕಾರಣ ಆಗಿರುವವರನ್ನು ಹೊಣೆಗಾರಿಕೆಯನ್ನಾಗಿ ಮಾಡಲಾಗುತ್ತದೆ. ಕುದೂರಿನ ನಾಡ ಕಚೇರಿಗೆ ಭೇಟಿ ನೀಡಿ ಪರಿಶೀಲಿಸುತ್ತೇನೆ. – ಎ.ಮಂಜುನಾಥ್, ಶಾಸಕ ಮಾಗಡಿ
ನೂತನವಾಗಿ ನಿರ್ಮಾಣ ಆಗಿರುವ ನಾಡಕಚೇರಿಯನ್ನು ಯಾರಾದರೂ ಪರಸ್ಥಳದವರು ನೋಡಿದರೇ, ಯಾವುದೂ ಶೌಚಾಲಯ ಇರಬಹುದೆಂದು ಅಂದು ಕೊಳ್ಳುತ್ತಾರೆ. ಆ ರೀತಿ ಕಟ್ಟಡ ನಿರ್ಮಾಣ ಮಾಡಿದ್ದಾರೆ. – ಕೆ.ಆರ್. ಯತಿರಾಜು, ತಾಪಂ ಮಾಜಿ ಅಧ್ಯಕ್ಷ
ಊರ ಹೊರಗೆ ನಾಡಕಚೇರಿ ಮಾಡಿ ರುವುದರಿಂದ ಓಡಾಡಲು ತುಂಬಾ ತೊಂದರೆ ಆಗುತ್ತದೆ. ಇಲ್ಲಿ ಯಾವುದೇ ಮೂಲಸೌಕರ್ಯವಿಲ್ಲ. ಜನರಿಗೆ ಅನುಕೂಲಕ್ಕಿಂತ ಅನನುಕೂಲವೇ ಹೆಚ್ಚು.– ಗಂಗರಾಜು, ರೈತ
– ಕೆ.ಎಸ್.ಮಂಜುನಾಥ್ ಕುದೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎಸಿಬಿ ರಚನೆ ಆದೇಶ ರದ್ದುಗೊಳಿಸಿ ಹೈಕೋರ್ಟ್ ಮಹತ್ವದ ಆದೇಶ
ವರ್ಗಾವಣೆಗೊಂಡ ಚಿಕ್ಕಮಗಳೂರು ಎಸ್.ಪಿ ಗೆ ಹೂಮಳೆಗೈದು ಬೀಳ್ಕೊಟ್ಟ ಸಿಬ್ಬಂದಿ…
3 ವರ್ಷಗಳ ಬಳಿಕ ಕೆಆರ್ಎಸ್ ಡ್ಯಾಂನಿಂದ 1 ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ರಿಲೀಸ್
ನಟ ದರ್ಶನ್ ವಿರುದ್ದ ದೂರು ದಾಖಲಿಸಿದ ನಿರ್ಮಾಪಕ
ಪ್ರವೀಣ್ ಹತ್ಯೆ ಪ್ರಕರಣ : ಮುಖ್ಯ ಆರೋಪಿಗಳ ಕುರಿತು ಮಹತ್ವದ ಮಾಹಿತಿ ಬಿಚ್ಚಿಟ್ಟ ಎಡಿಜಿಪಿ
ಹೊಸ ಸೇರ್ಪಡೆ
ಎಮ್ಮೆ ಅಪಘಾತ ವಿಮೆ ನಿರಾಕರಿಸಿದ ವಿಮಾ ಕಂಪನಿಗೆ 95 ಸಾವಿರ ರೂ.ದಂಡ
ಚೀಲಗಾನಹಳ್ಳಿ: ನೆರೆಸಂತ್ರಸ್ತರಿಗೆ ರಾಮಕೃಷ್ಣ ಸೇವಾಶ್ರಮದಿಂದ ಪರಿಹಾರ ಸಾಮಗ್ರಿ ವಿತರಣೆ
10 ಕೋಟಿ ರೂ. ಜಾಹೀರಾತು ಆಫರ್ ತಿರಸ್ಕರಿಸಿದ ಅಲ್ಲು ಅರ್ಜುನ್: ಫ್ಯಾನ್ಸ್ ಫುಲ್ ಖುಷ್
ಆಧ್ಯಾತ್ಮ ಚಿಂತನೆಯಿಂದ ತಾಪತ್ರಯಗಳು ದೂರ: ಸ್ವಾಮೀಜಿ
ಉತ್ತರಪ್ರದೇಶ: ಯಮುನಾ ನದಿಯಲ್ಲಿ ದೋಣಿ ಮುಳುಗಿ 20ಕ್ಕೂ ಅಧಿಕ ಮಂದಿ ಸಾವು?