ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ

ಚುನಾವಣೆಯಲ್ಲಿ ಒಟ್ಟು 65 ಮಂದಿ ಮತ, ಚಲಾವಣೆ ಗುರುವಾರದಿಂದ ನಾಮಪತ್ರ ಸಲ್ಲಿಕೆ ಆರಂಭ

Team Udayavani, Jul 5, 2019, 12:05 PM IST

ರಾಮನಗರ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ, ಖಜಾಂಚಿ ಹಾಗೂ ರಾಜ್ಯ ಪರಿಷತ್ತು ಸದಸ್ಯ ಸ್ಥಾನಕ್ಕೆ ಅಭ್ಯರ್ಥಿಗಳು ಗುರುವಾರ ನಾಮಪತ್ರ ಸಲ್ಲಿಸಿದರು.

ರಾಮನಗರ: 2019-24ನೇ ಅವಧಿಗೆ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ, ಖಜಾಂಚಿ ಹಾಗೂ ರಾಜ್ಯ ಪರಿಷತ್ತು ಸದಸ್ಯ ಸ್ಥಾನಕ್ಕೆ ಇದೇ ಜುಲೈ 11 ರಂದು ಚುನಾವಣೆ ನಿಗದಿಯಾಗಿದೆ. ಗುರುವಾರದಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದೆ.

ಅಧ್ಯಕ್ಷ ಸ್ಥಾನಕ್ಕೆ ನಿಕಟ ಪೂರ್ವ ಅಧ್ಯಕ್ಷ ಆರ್‌.ಕೆ.ಬೈರಲಿಂಗಯ್ಯ, ರಾಜ್ಯ ಪರಿಷತ್ತು ಸದಸ್ಯ ಸ್ಥಾನಕ್ಕೆ ಕೆ.ಸತೀಶ್‌ ಮತ್ತು ಖಜಾಂಚಿ ಸ್ಥಾನಕ್ಕೆ ನರಸಯ್ಯ ಅವರುಗಳು ಗುರುವಾರ ನಾಮಪತ್ರ ಸಲ್ಲಿಸಿದರು.

ಅಧ್ಯಕ್ಷ, ಖಜಾಂಚಿ ಸ್ಥಾನಕ್ಕೆ ಚುನಾವಣೆ: ನಗರದ ಜಿಲ್ಲಾ ಸರ್ಕಾರಿ ನೌಕರರ ಸ್ಫೂರ್ತಿ ಭವನದಲ್ಲಿರುವ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ನಂತರ ಆರ್‌.ಕೆ.ಬೈರಲಿಂಗಯ್ಯ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆಯ ಅಧ್ಯಕ್ಷ, ರಾಜ್ಯ ಪರಿಷತ್ತು ಮತ್ತು ಖಜಾಂಚಿ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಜಿಲ್ಲಾ ಕೇಂದ್ರ ಸ್ಥಾನದಲ್ಲಿ 62 ನಿರ್ದೇಶಕರು ಮತ್ತು 3 ತಾಲೂಕಿನ ಅಧ್ಯಕ್ಷರು ಸೇರಿ ಒಟ್ಟು 65 ಮತದಾರರು ಮತ ಚಲಾಯಿಸಲಿದ್ದಾರೆ ಎಂದರು.

ಆಯ್ಕೆಯಾಗುವ ವಿಶ್ವಾಸ: ಇತ್ತೀಚೆಗಷ್ಟೆ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ತಮ್ಮ ಸಿಂಡಿಕೇಟ್‌ನ ಬಹುತೇಖ ಸದಸ್ಯರು ಆಯ್ಕೆಯಾಗಿದ್ದಾರೆ. ಅವರೆಲ್ಲರ ಸಹಕಾರದಿಂದ ತಾವು, ಸತೀಶ್‌ ಹಾಗೂ ನರಸಯ್ಯ ಆಯ್ಕೆಯಾಗುವ ವಿಶ್ವಾಸ ವ್ಯಕ್ತಪಡಿಸಿದರು.

ಕಳೆದ ಅವಧಿಯಲ್ಲಿ ಸದಸ್ಯರೆಲ್ಲ ಸಹಕಾರದಲ್ಲಿ ಸಂಘ ಅತ್ಯಂತ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಿದೆ. ತಮ್ಮ ಕಾರ್ಯನಿರ್ವಹಣೆಯ ಬಗ್ಗೆಯೂ ತಮಗೆ ತೃಪ್ತಿ ಇದೆ. ಮೂರನೇ ಬಾರಿಗೂ ತಾವು ಅಧ್ಯಕ್ಷರಾಗಿ ಆಯ್ಕೆಯಾಗುವ ವಿಶ್ವಾಸವಿದೆ. ಇದಕ್ಕೆ ನಿರ್ದೇಶಕರು ತಮಗೆ ಶಕ್ತಿ ತುಂಬಲಿದ್ದಾರೆ ಎಂದು ತಿಳಿಸಿದರು.

ಸಂಘ ಬಲಿಷ್ಟಗೊಳಿಸಲು ಚಿಂತನೆ: ಸಂಘವನ್ನು ಇನ್ನಷ್ಟು ಬಲಿಷ್ಟಗೊಳಿಸುವ ಉದ್ದೇಶವಿದೆ. ಇದಕ್ಕೆ ಪೂರಕವೆಂಬಂತೆ ಉತ್ತಮ ಚಿಂತನೆ ಮಾಡುವ ನಿರ್ದೇಶಕರ ತಂಡ ತಮ್ಮೊಂದಿಗಿದೆ. ಸಂಘದ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಉಳಿದ ಪದಾಧಿಕಾರಿಗಳನ್ನು ನೂತನ ಅಧ್ಯಕ್ಷರೇ ನೇಮಕ ಮಾಡಲಿದ್ದಾರೆ ಎಂದು ಅವರು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ನಾಮಪತ್ರ ಸಲ್ಲಿಸುವ ವೇಳೆ ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜು, ನಿರ್ದೇಶಕರಾದ ಸತೀಶ್‌, ನರಸಯ್ಯ, ಶಿವಸ್ವಾಮಿ, ಎಂ.ರಾಜೇಗೌಡ, ಪುಟ್ಟಸ್ವಾಮಿಗೌಡ, ಮಂಜುನಾಥ್‌, ಮಹೇಶ್‌, ಯೋಗೇಶ್‌ಗೌಡ, ಎಂ. ಅನಿತಾ, ಸಂಜೀವೇಗೌಡ, ಕೃಷ್ಣೇಗೌಡ, ಹೊನ್ನಯ್ಯ, ಪ್ರೌಢಶಾಲಾ ಶಿಕ್ಷಕರಾದ ಕರಡೀಗೌಡ, ಸತೀಶ್‌ ಸೇರಿದಂತೆ ಅನೇಕರು ಹಾಜರಿದ್ದರು. ಚುನಾವಣಾಧಿಕಾರಿಯಾಗಿ ಕರೀಗೌಡ ಮತ್ತು ಸಹಾಯಕ ಚುನಾವಣಾಧಿಕಾರಿಯಾಗಿ ವೆಂಕಟಪ್ಪ ಕರ್ತವ್ಯ ನಿರ್ವಹಿಸುತ್ತಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ