ಕೊಳೆ ಪರಿಹಾರದಲ್ಲಿ ಅನ್ಯಾಯ

ಕೈಗೆ ಬರಬೇಕಾದ ಪರಿಹಾರದ ಬಿಡಿಗಾಸಿನ ವಿಚಾರದಲ್ಲೂ ಅಧಿಕಾರಿಗಳ ಆಟ

Team Udayavani, Sep 9, 2019, 3:13 PM IST

ಸಾಗರ: ತಾಲೂಕಿನಾದ್ಯಂತ ಹಬ್ಬಿರುವ ಕೊಳೆಯಿಂದ ಈ ವರ್ಷದ ಅಡಕೆ ಬೆಳೆ ಸಂಪೂರ್ಣ ನೆಲಕಚ್ಚಿದೆ.

•ಮಾ.ವೆಂ.ಸ. ಪ್ರಸಾದ್‌
ಸಾಗರ:
ಸತತ ಮೂರನೇ ವರ್ಷ ಘೋರ ಕೊಳೆ ರೋಗದ ಬಲೆಗೆ ಸಿಲುಕಿರುವ ಅಡಕೆ ಬೆಳೆಗಾರರು ಸರ್ಕಾರದಿಂದ ಸಿಗುವ ಕೊಳೆ ಪರಿಹಾರದ ಮೊತ್ತದಿಂದ ಕುಟುಕು ಜೀವ ಹಿಡಿದುಕೊಳ್ಳುವ ನಿರೀಕ್ಷೆಯಲ್ಲಿದ್ದರೆ ಕಂದಾಯ ಇಲಾಖೆ ಅಧಿಕಾರಿಗಳ ಆಟದಿಂದ ಕೈಗೆ ಬಂದಿದ್ದು ಬಾಯಿಗೆ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.

ಹೆಕ್ಟೇರ್‌ಗೆ 18 ಸಾವಿರ ರೂ.ಗಳನ್ನು ಕೊಡುವ ಅವಕಾಶವಿದ್ದರೂ ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗರ ವರದಿಯನುಸಾರ ರೈತರಿಗೆ ಕೇವಲ ಸಾವಿರದೊಳಗಿನ ಪುಡಿಕಾಸು ಸಿಕ್ಕ ಪ್ರಕರಣಗಳೂ ನಡೆದಿವೆ. ಈ ರೀತಿ ಪರಿಹಾರ ಪಡೆದವರು ಅಧಿಕಾರಿಗಳಿಗೆ ಹಿಡಿ ಶಾಪ ಹಾಕುವುದರ ಹೊರತು ಕಾನೂನು ಹೋರಾಟ ಮಾಡುವ ಅವಕಾಶ ಕೂಡ ಪಡೆದಿಲ್ಲ ಎಂಬುದು ಕೃಷಿಕರ ಪಾಲಿನ ದುರಂತವಾಗಿದೆ.

2017-18ನೇ ಸಾಲಿನಲ್ಲಿ ಅಡಕೆ ಕೊಳೆರೋಗ ಪರಿಹಾರ ಕೋರಿ 30,086 ಬೆಳೆಗಾರರು ಅರ್ಜಿ ಸಲ್ಲಿಸಿದ್ದರು. ರೈತರ ಅಹವಾಲಿಗೆ ಸ್ಪಂದಿಸಿದ ಸರ್ಕಾರ 18 ಕೋಟಿ ರೂ. ಇದಕ್ಕಾಗಿ ರಾಜ್ಯದಲ್ಲಿ ಮಂಜೂರು ಮಾಡಿ ಮೊದಲ ಕಂತಾಗಿ 9.17 ಕೋಟಿ ರೂ ಬಿಡುಗಡೆ ಮಾಡಿತು. ಇಲಾಖೆ ಅಂಕಿ-ಅಂಶದ ಪ್ರಕಾರ ಜಿಲ್ಲೆಯ 15,731 ಜನರಿಗೆ ಪರಿಹಾರ ನೀಡಲಾಗಿದೆ. ತಾಳಗುಪ್ಪ ಹೋಬಳಿಯ ಓರ್ವ ರೈತರ 3.21 ಎಕರೆ ತೋಟದ ಅಡಕೆ ಬೆಳೆ ಕೊಳೆಯಿಂದ ಸಂಪೂರ್ಣ ನಷ್ಟವಾಗಿದ್ದರೂ ಬಂದಿರುವ ಪರಿಹಾರ 999 ರೂ. ಮಾತ್ರ. ಈ ರೀತಿಯ 10 ಸಾವಿರಕ್ಕೂ ಹೆಚ್ಚು ಉದಾಹರಣೆಗಳು ಶಿವಮೊಗ್ಗ ಜಿಲ್ಲೆ ಒಂದರಲ್ಲೇ ನಡೆದಿವೆ. ಪರಿಹಾರ ಮಂಜೂರಾದ 10,570ಕ್ಕೂ ಹೆಚ್ಚಿನ ರೈತರಿಗೆ ದಕ್ಕಿದ್ದು 999.50 ರೂ.ಗಳಷ್ಟೇ!

ಆಗಿರುವುದೇನು?: ಕೊಳೆ ರೋಗಕ್ಕೆ ತುತ್ತಾದ ರೈತರು ತಮ್ಮ ತೋಟದ ಪಹಣಿ, ಆಧಾರ್‌, ಬ್ಯಾಂಕ್‌ ವಿವರಗಳನ್ನು ಇರಿಸಿ ಅರ್ಜಿ ಸಲ್ಲಿಸಬೇಕು. ಅರ್ಜಿ ಆಧಾರದ ಮೇಲೆ ಕಂದಾಯ ಇಲಾಖೆ ಗ್ರಾಮ ಲೆಕ್ಕಿಗರು ನಷ್ಟದ ಅಂದಾಜು ಪರಿಶೀಲಿಸಿ ವರದಿ ದಾಖಲಿಸುತ್ತಾರೆ. ಈ ವರದಿಯಲ್ಲಿ ನಮೂದಿಸಿದ ಆದ ನಷ್ಟದ ಪ್ರದೇಶವನ್ನು ಪರಿಗಣಿಸಿ ಪರಿಹಾರದ ಮೊತ್ತ ನಿಗದಿಯಾಗುತ್ತದೆ. ಈ ರೀತಿಯ ಪ್ರಕೃತಿ ವಿಕೋಪದಿಂದಾಗುವ ನಷ್ಟಕ್ಕೆ 2015ರ ಏಪ್ರಿಲ್ನಲ್ಲಿ ಮಾರ್ಗಸೂಚಿಯನ್ನು ಕೇಂದ್ರದ ಗೃಹ ಸಚಿವಾಲಯದ ಪ್ರಕೃತಿ ವಿಕೋಪ ನಿರ್ವಹಣಾ ವಿಭಾಗ ಪ್ರಕಟಿಸಿದೆ. ಇದರ ಪ್ರಕಾರ ತೋಟಗಾರಿಕಾ ಬೆಳೆಗಳಲ್ಲಿ ಸಾಂಪ್ರದಾಯಿಕ ಕೃಷಿ ಬೆಳೆ ನಷ್ಟಕ್ಕೆ ಹೆಕ್ಟೇರ್‌ಗೆ 18 ಸಾವಿರ ಹಾಗೂ ನೀರಾವರಿ ತೋಟಗಾರಿಕೆಗೆ ಹೆಕ್ಟೇರ್‌ಗೆ 13,500 ರೂ. ಪರಿಹಾರ ಅವಕಾಶ ಕಲ್ಪಿಸಲಾಗಿದೆ. 2020ರವರೆಗೆ ಜಾರಿಯಲ್ಲಿರುವ ಈ ನೀತಿಯನ್ವಯ 2 ಹೆಕ್ಟೇರ್‌ವರೆಗೆ ಪರಿಹಾರ ಪಡೆಯಲು ಸಾಧ್ಯ.

ಎನ್‌ಡಿಆರ್‌ಎಫ್‌ ಮಾನದಂಡಗಳನ್ನು ಅನುಸರಿಸಿ ಪರಮಾವಧಿ ಪರಿಹಾರ ಕೊಡಿಸಲು ಸಹಕಾರಿಯಾಗಬೇಕಿದ್ದ ಕಂದಾಯ ಇಲಾಖೆಯ ಅಧಿಕಾರಿಗಳು ಬೇಕಾಬಿಟ್ಟಿಯಾಗಿ ವರದಿ ಮಾಡಿದ್ದಾರೆ ಎಂದು ನಂಬಲು ಕಾರಣಗಳಿವೆ. ಬೆಳೆ ಹಾನಿಯ ಕುರಿತು ರೈತರು ಪಹಣಿ ದಾಖಲೆ ಕೊಟ್ಟಿದ್ದರೂ ವಿಎ, ಆರ್‌ಐಗಳು ತಮ್ಮ ಅಂದಾಜಿನಂತೆ ಬೆಳೆ ಹಾನಿ ಪ್ರದೇಶವನ್ನು ಊಹಿಸಿ ತಮ್ಮ ವರದಿಯನ್ವಯ ಕಂಪ್ಯೂಟರ್‌ಗೆ ಬೆಳೆ ನಷ್ಟದ ಪ್ರದೇಶವನ್ನು ದಾಖಲಿಸಿರುವುದರಿಂದ ರೈತರಿಗೆ ಸಾವಿರ ರೂ.ಗೂ ಕಡಿಮೆ ಪರಿಹಾರ ಸಿಕ್ಕಿದ ಪ್ರಕರಣಗಳು ನಡೆದಿವೆ.

ಈ ಕುರಿತಂತೆ ‘ಉದಯವಾಣಿ’ಯೊಂದಿಗೆ ಮಾತನಾಡಿದ ನಗರದ ತೋಟಗಾರ್ ಸಂಸ್ಥೆಯ ಅಧ್ಯಕ್ಷ ಕೆ.ಸಿ. ದೇವಪ್ಪ ಹಾಗೂ ಉಪಾಧ್ಯಕ್ಷ ಹು.ಭಾ. ಅಶೋಕ್‌, ಈ ವಿಚಾರವಾಗಿ ನಾವು ಸಾಗರ, ಹೊಸನಗರ ಹಾಗೂ ಸೊರಬ ತಾಲೂಕಿನ ರೈತರ ಪರವಾಗಿ ಹೋರಾಟ ನಡೆಸಿದ್ದೇವೆ. ಜನಪ್ರತಿನಿಧಿಗಳ ಗಮನಕ್ಕೂ ವಿಷಯವನ್ನು ಮನದಟ್ಟು ಮಾಡುವ ಪ್ರಯತ್ನ ಮಾಡಿದ್ದೇವೆ ಎಂದರು.

ಕಂದಾಯ ಅಧಿಕಾರಿಗಳಿಗೆ ರೈತರ ಕಷ್ಟ ಅರ್ಥವಾಗುವುದಿಲ್ಲ. ಕೊನೆಗೂ ಅವರು ನಾಲ್ಕು ಗೋಡೆಗಳ ನಡುವೆಯೂ ಕುಳಿತು ವರದಿ ತಯಾರಿಸುತ್ತಾರೆ. ಈ ಸಂದರ್ಭದಲ್ಲಿ ಎಲ್ಲಾ ರೈತರು ಘೋಷಿಸಿದ ಪ್ರದೇಶದ ಶೇ. 33ರಷ್ಟು ನಷ್ಟವಾಗಿದೆ ಎಂದು ತಾವೂ ವರದಿ ನೀಡಿದರೆ ನಾಳೆ ತಮ್ಮ ಮೇಲೆ ಅನುಮಾನ ಬಂದು ತನಿಖೆ ನಡೆಯಬಹುದು ಎಂಬ ಹೆದರಿಕೆಯಿಂದ ಬೇಕಾಬಿಟ್ಟಿಯಾಗಿ ಒಟ್ಟು ರೈತನ ಕೃಷಿ ಭೂಮಿಯಲ್ಲಿ ಕಡಿಮೆ ಪ್ರದೇಶದಲ್ಲಿ ಹಾನಿಯಾಗಿದೆ ಎಂದು ವರದಿ ಕೊಟ್ಟಿದ್ದಾರೆ. ಇದರಿಂದ ರೈತರಿಗೆ ಅನ್ಯಾಯವಾಗಿದೆ. ತಮಗೆ ಬೇಕಾದವರಿಗೆ ಹೆಚ್ಚಿನ ನಷ್ಟ ತೋರಿಸಿ, ಇತರರಿಗೆ ಬೇಕಾಗಿಯೇ ಕಡಿಮೆ ಪ್ರದೇಶದ ಹಾನಿ ವರದಿ ನೀಡಿರುವ ಪ್ರಕರಣ ಕೂಡ ಇರಬಹುದು ಎಂಬುದು ಸಹಕಾರಿ ಪ್ರಮುಖರೋರ್ವರ ಆರೋಪ.

ಅಡಕೆ ಬೆಲೆ ನಷ್ಟಕ್ಕೆ ನ್ಯಾಯವಾಗಿ ಪರಿಹಾರ ವಿತರಣೆ ಆಗಿಲ್ಲ. ನಷ್ಟಕ್ಕೊಳಗಾದ ಎಲ್ಲ ರೈತರ ಅರ್ಜಿಗಳನ್ನು ಗ್ರಾಮ ಲೆಕ್ಕಿಗರು ಕಂಪ್ಯೂಟರ್‌ಗೆ ಅಪ್‌ಲೋಡ್‌ ಮಾಡದೆ ಬೆಳೆಗಾರರನ್ನು ಪರಿಹಾರ ವಂಚಿತರನ್ನಾಗಿ ಮಾಡಲಾಗಿದೆ ಎಂದು ಸಾಗರ ಪ್ರಾಂತ್ಯ ಅಡಕೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್‌. ಜಯಂತ್‌ ಆರೋಪಿಸುತ್ತಾರೆ.

ಈ ಕುರಿತು ಇನ್ನಷ್ಟು ವಿಶ್ಲೇಷಣೆ ಒದಗಿಸುವ ಕೆ.ಸಿ. ದೇವಪ್ಪ, ಓರ್ವ ರೈತ 18 ಗುಂಟೆ ಅಡಕೆ ತೋಟ ಹೊಂದಿದ್ದು ಅದರಲ್ಲಿನ ಅಡಕೆ ಬೆಲೆ ಕೊಳೆಯಿಂದ ನಷ್ಟವಾಗಿದೆ ಎಂದರೆ ಪರಿಹಾರ ಲೆಕ್ಕದಲ್ಲಿ ಕೇವಲ 10 ಗುಂಟೆಯನ್ನು ಪರಿಗಣಿಸಿದ ಮಾದರಿಯ ಪ್ರಕರಣಗಳಿವೆ. ಅಡಕೆಯ ಮಹಾಳಿ ಶೇ. 33 ಪ್ರಮಾಣದಲ್ಲಿ ಬರುವುದಿಲ್ಲ. ಅದು ಬಂತು ಎಂದರೆ ಇಡೀ ತೋಟವನ್ನು ಆವರಿಸಿರುತ್ತದೆ. ಈ ರೀತಿಯ ಲೆಕ್ಕಾಚಾರದಿಂದ ಸಣ್ಣ ಬೆಳೆಗಾರರಿಗೂ ಪುಡಿಗಾಸು ಬಂದಿದೆ. ಮಧ್ಯಮ ವರ್ಗದ ಬೆಳೆಗಾರರನ್ನು ಕೂಡ ವಂಚಿಸಲಾಗಿದೆ. ನಾವು ವಿಶ್ಲೇಷಿಸಿದಂತೆ ಈ ರೀತಿ ಹೆಕ್ಟೇರ್‌ಗೆ 18 ಸಾವಿರ ರೂ. ಪರಿಹಾರವನ್ನು ಅನ್ವಯಿಸುವಲ್ಲಿ ಕೂಡ ವ್ಯತ್ಯಯವಾಗಿರುವಂತೆ ಕಂಡುಬರುತ್ತಿದೆ. ಈ ಬಗ್ಗೆ ಸಮಗ್ರವಾಗಿ ತನಿಖೆ ನಡೆಸಿ ಎಲ್ಲ ಅರ್ಹರಿಗೆ ಪರಿಹಾರ ಸಿಗುವಂತೆ ಆಗಬೇಕು ಎಂದು ಆಗ್ರಹಿಸಿದ್ದಾರೆ.

ಅದು ಹಳೆಯದು, ಮತ್ತೆ ಹಾನಿ!: ಕಳೆದ ವರ್ಷದ ಅಡಕೆ ಬೆಳೆ ಹಾನಿಯ ಪರಿಹಾರವೇ ಇನ್ನೂ 8 ಕೋಟಿ ರೂ. ಬರಬೇಕಾಗಿದೆ. ಈ ನಡುವೆ ಕಳೆದೆರಡು ದಶಕಗಳಲ್ಲಿ ಕಂಡು ಕೇಳರಿಯದಷ್ಟು ಮಳೆ ಈ ಬಾರಿ ಸುರಿದಿದ್ದು ಬಹುಪಾಲು ತೋಟಗಳ ಅಡಕೆ ಬೆಳೆ ಸಂಪೂರ್ಣ ಹಾನಿಯಾಗಿದೆ. ಮತ್ತೂಮ್ಮೆ ಪರಿಹಾರದ ಭರವಸೆಯಿಂದ ಕೃಷಿಕರು ಬೆಳೆ ಹಾನಿ ಪರಿಹಾರದ ಅರ್ಜಿ ಸಲ್ಲಿಸಲಾರಂಭಿಸಿದ್ದಾರೆ. ಕೊನೆಪಕ್ಷ ಈ ಬಾರಿಯಾದರೂ ಕಂದಾಯ ಇಲಾಖೆಯ ತಳಮಟ್ಟದ ಅಧಿಕಾರಿಗಳು ರೈತರಿಗೆ ಸಿಗಬಹುದಾದ ಪರಿಹಾರದ ಮೊತ್ತದಲ್ಲಿ ಕಡಿತ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ತೋರಬೇಕಾಗಿದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ