ಯುವ ಪೀಳಿಗೆ ಜಾನಪದ ಉಳಿಸಿ ಬೆಳೆಸಲಿ

ಚಿಟ್ಟಾ ಗ್ರಾಮದ ಬಾಲಕರ ವಸತಿ ನಿಲಯದಲ್ಲಿ ಜಾನಪದ ಸಂಸ್ಕೃತಿ-ಉಪನ್ಯಾಸ-ಗಾಯನ ಕಾರ್ಯಕ್ರಮ

Team Udayavani, Sep 9, 2019, 3:36 PM IST

ಬೀದರ: ಚಿಟ್ಟಾ ಗ್ರಾಮದ ಸರ್ಕಾರಿ ವಸತಿ ನಿಲಯದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ, ಕರುಣಾಮಯ ಯುವಕ ಸಂಘ, ರಾಷ್ಟ್ರೀಯ ಬುಡಕಟ್ಟು ಕಲಾ ಪರಿಷತ್ತು ಸಂಯುಕ್ತಾಶ್ರಯದಲ್ಲಿ ಜಾನಪದ ಸಂಸ್ಕೃತಿ-ಉಪನ್ಯಾಸ-ಗಾಯನ ಕಾರ್ಯಕ್ರಮ ಜರುಗಿತು.

ಬೀದರ: ಯುವ ಪೀಳಿಗೆಯಿಂದಲೇ ಇಂದಿನ ಜಾನಪದ ಉಳಿಸಿ ಬೆಳೆಸಲು ಸಾಧ್ಯ. ಅವರು ಮನಸ್ಸು ಮಾಡದ ಹೊರತು ಮತ್ತೂಂದು ಆಯ್ಕೆಯೇ ಇಲ್ಲ ಎಂದು ಪಶು ವೈದ್ಯಕೀಯ ಹಾಗೂ ಮೀನುಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ಸಹಾಯಕ ಕುಲಸಚಿವ ಕಂಟೆಪ್ಪ ಪೂಜಾರ ನಾವದಗೇರಿ ಹೇಳಿದರು.

ಚಿಟ್ಟಾ ಗ್ರಾಮದ ಸರ್ಕಾರಿ ಬಾಲಕರ ವಸತಿ ನಿಲಯದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ, ಕರುಣಾಮಯ ಯುವಕ ಸಂಘ, ರಾಷ್ಟ್ರೀಯ ಬುಡಕಟ್ಟು ಕಲಾ ಪರಿಷತ್ತು ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಜಾನಪದ ಸಂಸ್ಕೃತಿ-ಉಪನ್ಯಾಸ-ಗಾಯನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜಾನಪದ ಜನಿಸಿದ್ದೇ ಹಳ್ಳಿಗಳ ಗುಡಿಸಲಿನಲ್ಲಿ. ಬಡವರೆನಿಸಿಕೊಂಡವರ ಹೃದಯದಲ್ಲಿ. ಆದರೆ, ಇಂದು ಆಧುನಿಕತೆಯಿಂದ ಜನಪದ ಮರೆಮಾಚುತ್ತಿದೆ. ಆಧುನಿಕ ಹಾಡುಗಳಿಂದ ಮನಸ್ಸುಗಳು ಒಡೆದುಹೋಗಿ ವಿಕಾರ ಭಾವನೆ ಮೂಡುತ್ತಿದೆ. ಈ ಕುರಿತು ಯುವಪೀಳಿಗೆ ಸಕಾರಾತ್ಮಕವಾಗಿ ಚಿಂತಿಸಿ ಜನಪದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯ ಮಾಡಬೇಕು. ಜನಪದ ಹೃದಯಗಳು ಜನರನ್ನು ಬೆಸೆಯುತ್ತದೆ. ಮನಸ್ಸುಗಳನ್ನು ಒಂದುಗೂಡಿಸುತ್ತದೆ. ಕುಟುಂಬದಲ್ಲಿ ಪರಸ್ಪರ ಪ್ರೀತಿ- ವಿಶ್ವಾಸಗಳನ್ನು ಹೆಚ್ಚಿಸುತ್ತದೆ. ಆದ್ದರಿಂದ ಜನಪದ ಹಾಡು, ಕಥೆ ಮತ್ತು ವಿವಿಧ ಕಲಾ ಪ್ರಕಾರಗಳನ್ನು ಮೈಗೂಡಿಸಿಕೊಂಡು ಅತ್ಯಂತ ಹಳೆಯ ಈ ಜನಪದ ಕಲೆಯನ್ನು ಯುವಪೀಳಿಗೆ ಉಳಿಸಿ ಬೆಳೆಸುವ ಕಾರ್ಯ ಮಾಡಬೇಕೆಂದು ಅಭಿಪ್ರಾಯಪಟ್ಟರು.

ಪಿ.ಎಸ್‌. ಇಟಕಂಪಳ್ಳಿ ಮಾತನಾಡಿ, ಇಂದು ಜನಪದ ಭಾಷೆ ಮಾತನಾಡಿದರೆ ಅನಾಗರಿಕ ಎಂಬ ಹಣೆಪಟ್ಟಿ ಕಟ್ಟುತ್ತಾರೆ. ಸ್ವಲ್ಪ ಆಧುನಿಕತೆಯಿಂದ ಸಾಹಿತ್ಯಿಕವಾಗಿ ಮಾತನಾಡಿದರೆ ನಾಗರಿಕ ಅಂತಾರೆ. ಆದರೆ ನಾವು ಹುಟ್ಟಿ, ಬೆಳೆದದ್ದು ಜನಪದ ಭಾಷೆಯಿಂದಲೇ ಹೊರತು ಆಧುನಿಕ ಸಾಹಿತ್ಯದಿಂದಲ್ಲ ಎಂಬುದನ್ನು ಇಂದಿನ ಯುವಕರು ತಿಳಿದುಕೊಳ್ಳಬೇಕು. ಹಿಂದೆ ಕವಿರಾಜಮಾರ್ಗನಿಂದ ಹಿಡಿದು ಇಂದಿನವರೆಗೂ ತಮ್ಮ ಸಾಹಿತ್ಯದಲ್ಲಿ ಜನಪದ ರಕುರಿತು ಉಲ್ಲೇಖೀಸಿದ್ದಾರೆ. ನಮ್ಮ ಜನಪದ ಭಾಷೆಯಲ್ಲಿ ಮಾತನಾಡಿದಾಗ ಬೆಳೆಯುವಷ್ಟು ಪ್ರೀತಿ ಆಧುನಿಕ ಭಾಷೆಯಲ್ಲಿ ಮಾತನಾಡಿದಾಗ ಬೆಳೆಯುವುದಿಲ್ಲ. ಆದ್ದರಿಂದ ಜನಪದ ಉಳಿಸಿ ಬೆಳೆಸಬೇಕು ಎಂದು ಹೇಳಿದರು.

ಸಾಹಿತಿ ಪ್ರಭುಶೆಟ್ಟಿ ಸೈನಿಕಾರ ಮಾತನಾಡಿ, ಜನ್ಮದಿನ, ಹೊಸ ವರ್ಷ, ಪ್ರೇಮಿಗಳ ದಿನದಂತಹ ಪರಕೀಯ ಸಂಸ್ಕೃತಿ ಆಚರಿಸದೇ ನಮ್ಮ ಜನಪದ ಹಬ್ಬಹರಿದಿನಗಳಾದ ಪಂಚಮಿ, ದಸರಾ, ಹೋಳಿಹುಣ್ಣಿಮೆ ಮುಂತಾದ ಸ್ವದೇಶಿ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ದೊಡ್ಡ ಜವಾಬ್ದಾರಿ ಯುವಕರ ಮೇಲಿದೆ. ಹಿಂದೆ ಪಂಚಮಿ ಹಬ್ಬ ಬರುವ ನಾಲ್ಕು ದಿನ ಮೊದಲೇ ಜನಪದ ಹಾಡುಗಳನ್ನು ಹಾಡುತ್ತ ಸಂಭ್ರಮ ಪಡುತ್ತಿದ್ದರು. ಆದರೆ ಇಂದು ಆ ಸಂಭ್ರಮ ಕಾಣುತ್ತಿಲ್ಲ. ವಿದೇಶಿ ಆಹಾರ, ಬಟ್ಟೆ ಮತ್ತು ಸಂಸ್ಕೃತಿ ದೂರ ಮಾಡಿ ಸ್ವದೇಶಿ ಪದ್ಧತಿ ಅಳವಡಿಸಿಕೊಂಡು ಜನಪದ ಸಂಸ್ಕೃತಿ ಉಳಿಸುವ ಕಾರ್ಯವನ್ನು ಪ್ರತಿಯೊಬ್ಬರೂ ಮಾಡಬೇಕಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಪುಸ್ತಕ ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಜಾನಪದ ಗಾಯಕರಾದ ರಘುನಾಥ ಹಡಪದ, ರಘುನಾಥ ಪಾಂಚಾಳ, ಯಶವಂತ ಕುಚಬಾಳ, ನಾಗಪ್ಪ ದೊಡ್ಡಿ ಚಿಟ್ಟಾ, ಲಕ್ಷ್ಮಣರಾವ್‌ ಕಾಂಚೆ ಅವರಿಗೆ ಗ್ರಂಥಗಳು ನೀಡಿ ಸನ್ಮಾನಿಸಲಾಯಿತು. ಕ.ಜಾ.ಪ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಜಲಿಂಗಪ್ಪ ತಗಾರೆ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಸಂಯೋಜಕ ಡಾ| ರಾಜಕುಮಾರ ಹೆಬ್ಟಾಳೆ, ಗೌತಮ ಸಂಗನೋರ, ಶರಣಬಸಪ್ಪ, ಎಸ್‌.ಬಿ. ಕುಚಬಾಳ, ಮಹಾರುದ್ರ ಡಾಕುಳಗಿ, ಸಂದೀಪ ಕಂಟೆ, ಶಿವಶರಣಪ್ಪ ಗಣೇಶಪುರ, ಅಭಿಷೇಕ, ವಿಠಲ ಮಾರುತಿರಾವ್‌ ತಾಂದಳೆ ಸೇರಿದಂತೆ ಅನೇಕರು ಇದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ