ಸಾರಿಗೆ ಸಂಸ್ಥೆ ಬಸ್‌ನಲ್ಲಿ ಕನ್ನಡದ ಕಂಪು!

ನಿರ್ವಾಹಕ ನಟರಾಜ್‌ರಿಂದ ಬಸ್‌ಗೆ ಕನ್ನಡದ ಅಲಂಕಾರಜನರಲ್ಲಿ ಕನ್ನಡ ಜಾಗೃತಿಗೆ ವಿಶೇಷ ಯತ್ನ

Team Udayavani, Nov 2, 2019, 4:30 PM IST

ಶಿವಮೊಗ್ಗ: ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು, ಬಾರಿಸು ಕನ್ನಡ ಡಿಂಡಿಮವ, ಹೀಗೆ ನವೆಂಬರ್‌ ತಿಂಗಳು ಬಂದ್ರೆ ಎಲ್ಲೆಲ್ಲೂ ಕನ್ನಡದ ಬಾವುಟ, ಕನ್ನಡ ಸ್ಲೋಗನ್‌ಗಳು, ಕನ್ನಡ ಉಳಿಸುವ ಭಾಷಣಗಳೂ, ಇದಕ್ಕೆಲ್ಲ ಒಂದು ಹೆಜ್ಜೆ ಮುಂದೆ ಹೋಗಿ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ ಉಳಿಸುವ ಹೇಳಿಕೆಗಳು ನೋಡುತೇ¤ವೆ. ನವೆಂಬರ್‌ ಮುಗಿಯುತ್ತಿದ್ದಂತೆ ಮತ್ತೆ ಕನ್ನಡ ನೆನಪಾಗುವುದು ಮುಂದಿನ ನವಂಬರ್‌ನಲ್ಲಿ. ಆದ್ರೆ ಇಲ್ಲೊಬ್ಬರು ತಮಗೆ ಅನ್ನಕೊಡುವ ಕ್ಷೇತ್ರದಲ್ಲಿ ತಾಯಿ ಭುವನೇಶ್ವರಿ ಆರಾಧನೆ ಮಾಡುತ್ತಾ.. ತಮ್ಮ ಸಾರಥಿಯಲ್ಲಿ ಕನ್ನಡದ ಕಂಪನ್ನು ಪಸರಿಸುತ್ತಿದ್ದಾರೆ.

ವಾಹನದೊಳಗೆ ಜ್ಞಾನಪೀಠ ಪ್ರಶಸ್ತಿ ಪ್ರಶಸ್ತಿ ಪಡೆದ ಸಾಹಿತಿಗಳ ಭಾವಚಿತ್ರ. ಕನ್ನಡದ ಮಹಾನ್‌ ಕವಿಗಳು, ಹಾಗೂ 1915 ರಿಂದ 2018ರ ವರೆಗೆ ನಡೆದ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಭಾವಚಿತ್ರ, ಕರ್ನಾಟಕದ ನಕ್ಷೆ ಹಾಗೂ ಜಿಲ್ಲೆಗಳ ವಿವರಗಳು ಹೀಗೆ ಕಂಡು ಬರೋದು ಶಿವಮೊಗ್ಗ ಕೆಎಸ್‌ಆರ್‌ಟಿಸಿ ವಿಭಾಗದ ಬಸ್‌ ಒಂದರಲ್ಲಿ. ಹೌದು, ನ. 1 ಕನ್ನಡ ರಾಜೋತ್ಸವವನ್ನ ಕೆಎಸ್‌ಆರ್‌ ಟಿಸಿಯಲ್ಲಿ ನಿರ್ವಾಹಕರಾಗಿ ಸೇವೆ ಸಲ್ಲಿಸುತ್ತಿರುವ ಕನ್ನಡ ಪ್ರೇಮಿ ನಟರಾಜ್‌ ಕುಂದೂರು ಬಸ್‌ಗೆ ವಿಶೇಷವಾಗಿ
ಅಲಂಕಾರ ಮಾಡುವ ಮೂಲಕ ವಿಭಿನ್ನ ರೀತಿಯಲ್ಲಿ
ರಾಜೋತ್ಸವವನ್ನ ಆಚರಿಸುತ್ತಿದ್ದಾರೆ.

ಶಿವಮೊಗ್ಗ ಹಾಗೂ ಹುಬ್ಬಳ್ಳಿ ನಗರಗಳಿಗೆ ಪ್ರತಿನಿತ್ಯ ಸಂಚಾರ ಮಾಡುವ ಈ ಕನ್ನಡ ರಥ ಹೆಸರಿನ ವಾಹನದ ಹೊರಭಾಗ ಹಾಗೂ ಒಳಭಾಗದಲ್ಲಿ ಕನ್ನಡದ ಜನತಗೆ ಹಾಗೂ ಪ್ರಯಾಣಿಕರಿಗೆ ಕನ್ನಡದ ನಾಡು ನುಡಿ ಸಂಸ್ಕೃತಿಯನ್ನ ಪರಿಚಯ ಮಾಡಿಕೊಡಲಾಗುತ್ತದೆ.

ಕೆಎಸ್‌ಆರ್‌ಟಿಸಿಯಲ್ಲಿ ಸೇವೇ ಸಲ್ಲಿಸುತ್ತಿರುವ ನಟರಾಜ್‌ ಕುಂದೂರು ಮೂಲತಃ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಕುಂದೂರು ಗ್ರಾಮದವರು. ಕಳೆದ 16 ವರ್ಷಗಳಿಂದ ಬಸ್‌ಗೆ ವಿಶೇಷ ಅಲಂಕಾರ ಮಾಡಿ ಶಿವಮೊಗ್ಗದ ಬಸ್‌ ಘಟಕದಲ್ಲಿ ಕನ್ನಡ ರಾಜೋತ್ಸವವನ್ನು ಆಚರಿಸುತ್ತಾರೆ. ಬಸ್‌ನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಕನ್ನಡ ಪ್ರಚಾಕರನಾಗಿ ಜೊತೆಗೆ ಕನ್ನಡ ಭಾಷೆ, ನೆಲ,ಜಲಕ್ಕೆ ಸಂಬಂದಿಸಿದ ರಸಪ್ರಶ್ನೆಗಳನ್ನು ಕೇಳುತ್ತಾರೆ. ಅದಕ್ಕೆ ಸರಿಯಾದ ಉತ್ತರ ನೀಡುವ ಪ್ರಯಾಣಿಕರಿಗೆ ಕನ್ನಡ ಸಾಹಿತ್ಯ ಪುಸ್ತಕವನ್ನ ಬಹುಮಾನವಾಗಿ ನೀಡುತ್ತಾರೆ.

ಇನ್ನು ಈ ವರ್ಷ ಬಸ್‌ ನ ಅಲಂಕಾರದಲ್ಲಿ ಪ್ರತಿಯೊಂದು ಸೀಟ್‌ನಲ್ಲಿ ಕನ್ನಡ ವರ್ಣಮಾಲೆಯನ್ನ ಅಂಟಿಸಿದ್ದಾರೆ. ಜೊತೆಗೆ ಕರ್ನಾಟಕ ರಾಜ್ಯದಲ್ಲಿ ಆದ ಪ್ರವಾಹದ ಬಗ್ಗೆಯೂ ಚಿತ್ರಗಳನ್ನು ಹಾಕಿದ್ದಾರೆ.ಇನ್ನು ನಟರಾಜ್‌ ಕುಂದೂರು ವಾಹನದ ಅಲಂಕಾರಕ್ಕಾಗಿ ಪ್ರತಿ ತಿಂಗಳೂ ತಮ್ಮ ಸಂಬಳದಲ್ಲಿ 2000 ರೂ ತೆಗೆದಿಡುತ್ತಾರೆ. ಕನ್ನಡ ರಕ್ಷಿಸಿ ಕನ್ನಡ ಉಳಿಸಿ ಎಂದು
ಎಲ್ಲರೂ ಬರೀ ಬಾಯಿ ಮಾತಿನಲ್ಲಿ ಹೇಳುತ್ತಾರೆ.

ಆದ್ರೆ ಈ ಕೆಲಸ ನಮ್ಮಿಂದ ಆರಂಭವಾಗಲೆಂದು ಈ ಪ್ರತಿವರ್ಷವೂ ಮಾಡುತ್ತಿದ್ದಾರೆ. ಇನ್ನು ಬಸ್‌ನಲ್ಲಿ ಪ್ರಯಾಣಿಸುವಾಗ ಕನ್ನಡ ಸುಮಧುರ ಗೀತೆಗಳು, ಹಾಗೂ ಕನ್ನಡಪ್ರೇಮ ಸಾರುವ ಹಾಡುಗಳನ್ನ ವಾಹನದಲ್ಲಿ ಹಾಕಲಾಗುತ್ತದೆ. ಈ ಬಸ್‌ನಲ್ಲಿ ಪ್ರಯಾಣಿಸುವಾಗ ಒಂದು ರೀತಿ ವಿಶೇಷ ಅನುಭವವಾಗುತ್ತದೆ. ಕರ್ನಾಟಕದಲ್ಲಿ ಈ ರೀತಿಯ ವಿಶೇಷ ವಾಹನ ಎಲ್ಲಿಯೂ ಕಂಡಿಲ್ಲ, ಬಸ್‌ನ ಒಳಹೊಕ್ಕರೆ ಕನ್ನಡದ ಬಗ್ಗೆ ತಿಳಿದುಕೊಳ್ಳುವ ಕೂತುಹಲ ಹೆಚ್ಚಾಗುತ್ತೆ ಎನ್ನುತ್ತಾರೆ ಪ್ರಯಾಣಿಕರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ