ಭಾವ ಪರವಶದಲ್ಲಿ ಮಿಂದೆದ್ದ ಭಕ್ತರು

ಖಾಸ್ಗತೇಶ್ವರ ಮಠದಲ್ಲಿ ಗೋಪಾಲ ಕಾವಲಿ ಒಡೆಯುವ ಕಾರ್ಯಕ್ರಮ •ಪ್ರತಿಧ್ವನಿಸಿದ ಓಂ ನಮಃ ಶಿವಾಯ ಸ್ಮರಣೆ

Team Udayavani, Jul 14, 2019, 10:28 AM IST

ತಾಳಿಕೋಟೆ: ಖಾಸ್ಗತೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಗೋಪಾಲ ಕಾವಲಿ ಒಡೆಯುವ ಕಾರ್ಯಕ್ರಮವನ್ನು ಖಾಸ್ಗತೇಶ್ವರ ಮಠದ ಸಿದ್ದಲಿಂಗ ಸ್ವಾಮೀಜಿ ನೆರವೇರಿಸಿದರು.

ತಾಳಿಕೋಟೆ: ಸ್ಥಳೀಯ ಖಾಸ್ಗತ ಮಹಾ ಶಿವಯೋಗಿಗಳ ಜಾತ್ರೆ ಹಾಗೂ ರಥೋತ್ಸವ ಅಂಗವಾಗಿ ಶನಿವಾರ ನಸುಕಿನ ಜಾವ 5:45ಕ್ಕೆ ಅಸಂಖ್ಯಾತ ಭಕ್ತ ಸಮೂಹಸಮ್ಮುಖದಲ್ಲಿ ಗೋಪಾಲ ಕಾವಲಿ (ಮೊಸರು ಗಡಿಗೆ) ಒಡೆಯುವ ಕಾರ್ಯಕ್ರಮ ಭಕ್ತಿ ಭಾವದೊಂದಿಗೆ ಜರುಗಿತು.

ಖಾಸ್ಗತೇಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ ಅಂಗವಾಗಿ ಜು. 6ರಿಂದ ನಡೆಸಿಕೊಂಡು ಬರಲಾದ ಸಪ್ತ ಭಜನಾ ಕಾರ್ಯಕ್ರಮ ಮೊಸರು ಗಡಿಗೆ ಒಡೆಯುವುದರ ಮೂಲಕ ಮಂಗಲಗೊಂಡಿತು.

ಖಾಸ್ಗತೇಶ್ವರ ಮಠದ ಪಟ್ಟಾಧಿಧೀಶರಾದ ಸಿದ್ದಲಿಂಗ ಮಹಾಸ್ವಾಮಿಗಳ ಘನ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ನಸುಕಿನ ಜಾವ 4 ಗಂಟೆಗೆ ಪ್ರಭಾತ ಪೇರಿಯೊಂದಿಗೆ ಧ್ವಜದ ಮೆರವಣಿಗೆ ನಡೆಯಿತಲ್ಲದೇ ಶ್ರೀ ಮಠದ ಪ್ರಾಂಗಣದಲ್ಲಿ ಕಟ್ಟಲಾದ ಗೋಪಾಲ ಕಾವಲಿ ಒಡೆಯುವ ಕಾರ್ಯಕ್ರಮವನ್ನು ಖಾಸ್ಗತೇಶ್ವರ ಮಠದ ವೇ| ಸಂಗಯ್ಯ ವಿರಕ್ತಮಠ ನೆರವೇರಿಸಿದರು.

ಈ ಬಾರಿಯೂ ಗೋಪಾಲ ಕಾವಲಿ ಒಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರಸಾದ ದೊರಕಿಸಿಕೊಳ್ಳಲು ಜೀವದ ಹಂಗು ತೊರೆದು ಗದ್ದಲಮಯ ವಾತಾವರಣದಲ್ಲಿಯೂ ಭಕ್ತ ಸಮೂಹ ಓಂ ನಮಃ ಶಿವಾಯ ಎಂಬ ನಾಮಾಂಕಿತದ ಭಕ್ತಿಯನ್ನು ಖಾಸ್ಗತನಿಗೆ ಅರ್ಪಿಸಿದರು.

ಈ ಹಿಂದೆ ಖಾಸ್ಗತರು ಪಂಢರಪುರದ ವಿಠ್ಠಲ ಜಾತ್ರೋತ್ಸವಕ್ಕೆ ತೆರಳಿದಾಗ ಆಷಾಢ ಏಕಾದಶಿ ದಿನದಂದು ವಿಠ್ಠಲ ದೇವಸ್ಥಾನದಲ್ಲಿ ನೆರವೇರಿಸಲಾಗುತ್ತಿರುವ ಗೋಪಾಲ ಕಾವಲಿ ಶ್ರೀ ಮಠದಲ್ಲಿಯೂ ಏರ್ಪಡಿಸಿದರೆ ಭಕ್ತಾದಿಗಳ ಜೀವನ ಪಾವನವಾಗುತ್ತದೆ ಎಂದು ಸ್ವಯಂ ಇಚ್ಛೆಯಿಂದ ಗೋಪಾಲ ಕಾವಲಿ (ಮೊಸರು ಗಡಿಗೆ) ಒಡೆಯುವ ಕಾರ್ಯಕ್ರಮ ಹಮ್ಮಿಕೊಂಡರೆಂದು ಹೇಳಲಾಗುತ್ತದೆ.

ಅದರಂತೆ ಈ ಹಿಂದಿನಿಂದ ನಡೆಸಿಕೊಂಡು ಬರಲಾದ ಈ ಕಾರ್ಯಕ್ರಮದಂತೆ ತಾಳಿಕೋಟೆಯ ಖಾಸ್ಗತೇಶ್ವರ ಮಠದ ಜಾತ್ರೆ ಸಮಯದಲ್ಲಿ ಈ ಕಾರ್ಯಕ್ರಮ ಈಗಲೂ ನಡೆಸಿಕೊಂಡು ಬರಲಾಗುತ್ತಿದೆ. ಈ ಹಿಂದಿನ ಸಂಪ್ರದಾಯದಂತೆ ಖಾಸ್ಗತೇಶ್ವರ ಜಾತ್ರೋತ್ಸವ ಸಮಯದಲ್ಲಿ ರಥೋತ್ಸವಕ್ಕೆ ಒಂದು ದಿನ ಮೊದಲು ಗೋಪಾಲ ಕಾವಲಿ ಒಡೆಯುವ ಕಾರ್ಯಕ್ರಮವನ್ನು ಈಗಲೂ ಮುಂದುವರಿಸಿಕೊಂಡು ಭಕ್ತಾದಿಗಳ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಅನುವು ಮಾಡಿಕೊಡುತ್ತಿರುವುದು ವಿಶೇಷ.

ಅದರಂತೆ ಈ ಸಲವೂ ಶನಿವಾರ ನಸುಕಿನ ಜಾವ ಜರುಗಿದ ಗೋಪಾಲ ಕಾವಲಿ ಒಡೆಯುವ ಕಾರ್ಯಕ್ರಮದಲ್ಲಿ ಮುಂಬೈ, ಪುಣೆ, ಗೋವಾ, ಹೈದರಾಬಾದ್‌, ಬೆಂಗಳೂರು, ಹುಬ್ಬಳ್ಳಿ, ಕಲಬುರಗಿ ಸೇರಿದಂತೆ ನಗರ, ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶಗಳಿಂದಲೂ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.

ಖಾಸ್ಗತೇಶ್ವರ ಮಠದ ಸಿದ್ದಲಿಂಗ ಮಹಾಸ್ವಾಮಿಗಳು ಹಾಗೂ ಮಠದ ಉಸ್ತುವಾರಿ ಮುರುಗೇಶ ವಿರಕ್ತಮಠ, ವಿಶ್ವನಾಥ ವಿರಕ್ತಮಠ, ಶರಭಯ್ಯ ಪುರಾಣಿಕಮಠ, ಹಿರೂರ ಜಯಸಿದ್ದೇಶ್ವರ ಮಹಾಸ್ವಾಮಿಗಳು, ಶ್ರೀಧರ ಕಾಗನೂರಮಠ, ವಿಜಯಕುಮಾರ ಹಿರೇಮಠ, ಮುರಗನವರ ಶಿರೂರ ಇದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ