ಮಕ್ಕಳ ಜನನ, ಲಿಂಗಾನುಪಾತ ಪ್ರಮಾಣದಲ್ಲಿ ಇಳಿಮುಖ

Team Udayavani, Apr 30, 2019, 4:12 PM IST

ತುಮಕೂರಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ ಕುಮಾರ್‌ ಮಾತನಾಡಿದರು.

ತುಮಕೂರು: ಕಳೆದ ಆರ್ಥಿಕ ವರ್ಷದಲ್ಲಿ ಜಿಲ್ಲೆಯಲ್ಲಿ ಮಕ್ಕಳ ಜನನ ಲಿಂಗಾನುಪಾತ ಪ್ರಮಾಣದಲ್ಲಿ ಇಳಿಮುಖವಾಗಿರುವುದಕ್ಕೆ ಸ್ಪಷ್ಟವಾದ ಕಾರಣಗಳೇನು ಎಂಬುದನ್ನು ಪತ್ತೆ ಹಚ್ಚಬೇಕಾಗಿದ್ದು, ಜಿಲ್ಲೆಯಲ್ಲಿರುವ ಎಲ್ಲಾ ಸ್ಕ್ಯಾನಿಂಗ್‌ ಸೆಂಟರ್‌ ಪರಿಶೀಲನೆ ನಡೆಸಿ, ಅ ಬಗ್ಗೆ ವಿಸ್ತೃತವಾದ ವರದಿ ನೀಡಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಕೆ. ರಾಕೇಶ್‌ ಕುಮಾರ್‌ ಸೂಚಿಸಿದ್ದಾರೆ.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಪಿಸಿ ಅಂಡ್‌ ಪಿಎನ್‌ಡಿಟಿ ಕಾಯ್ದೆ ಅನುಷ್ಠಾನದ ಜಿಲ್ಲಾ ಸಲಹಾ ಸಮಿತಿ, ಜಿಲ್ಲಾ ತಪಾಸಣಾ ಮತ್ತು ಮೇಲ್ವಿಚಾರಣಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಿಎನ್‌ಡಿಟಿ ಕಾಯ್ದೆ ಹಾಗೂ ನಿಯಮಗಳನ್ವಯ ಕಾರ್ಯ ನಿರ್ವಹಿಸದ ಸ್ಕ್ಯಾನಿಂಗ್‌ ಸೆಂಟರ್‌ಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ವಿಸ್ತೃತ ವರದಿ ಸಲ್ಲಿಸಿ: ಕಳೆದ ಆರ್ಥಿಕ ವರ್ಷದಲ್ಲಿ ಜಿಲ್ಲೆಯಲ್ಲಿ ಮಕ್ಕಳ ಜನನ ಲಿಂಗಾನುಪಾತ ಪ್ರಮಾಣದಲ್ಲಿ ಇಳಿಮುಖವಾಗಿರುವುದಕ್ಕೆ ಸ್ಪಷ್ಟವಾದ ಕಾರಣಗಳೇನು ಎಂಬುದನ್ನು ಪತ್ತೆ ಹಚ್ಚಬೇಕಾಗಿದೆ. ಅಲ್ಲದೇ ಜಿಲ್ಲೆಯಲ್ಲಿರುವ ಎಲ್ಲಾ ಸ್ಕ್ಯಾನಿಂಗ್‌ ಕೇಂದ್ರಗಳಿಗೆ ಜಿಲ್ಲಾ ತಪಾಸಣಾ ಮತ್ತು ಮೇಲ್ವಿಚಾರಣಾ ಸಮಿತಿಯ ಸದಸ್ಯರು ಭೇಟಿ ನೀಡಿ, ಕಾಯ್ದೆಯನುಸಾರ ಸ್ಕ್ಯಾನಿಂಗ್‌ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆಯೇ ಅಥವಾ ಇಲ್ಲವೆ ಎಂಬುದನ್ನು ದಾಖಲೆಗಳೊಂದಿಗೆ ವಿಸ್ತೃತ ವರದಿ ಸಲ್ಲಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಚಂದ್ರಿಕಾ ಅವರಿಗೆ ಸೂಚನೆ ನೀಡಿದರು.

ಅನುಮತಿ ರದ್ದು: ಸ್ಕ್ಯಾನಿಂಗ್‌ ಕೇಂದ್ರಗಳು ಕಡ್ಡಾಯವಾಗಿ ಫಾರಂ-ಎಫ್ನ್ನು ಆರೋಗ್ಯ ಇಲಾಖೆಗೆ ಸಲ್ಲಿಸಬೇಕಾಗುತ್ತದೆ. ಅಲ್ಲದೇ ದಾಖಲೆಗಳನ್ನು ಕಡ್ಡಾಯವಾಗಿ 2 ವರ್ಷ ಸಂರಕ್ಷಿಸಿಡುವಂತೆ ಕಾಯ್ದೆಯಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಪರಿಶೀಲನೆ ಸಂದರ್ಭದಲ್ಲಿ ಕಟ್ಟುನಿಟ್ಟಾಗಿ ಪರಿಶೀಲಿಸಿ ಕಾಯ್ದೆ ಉಲ್ಲಂಘಿಸಿರುವ ಸ್ಕ್ಯಾನಿಂಗ್‌ ಕೇಂದ್ರಗಳ ಬಗ್ಗೆ ವರದಿ ನೀಡಿದರೆ, ಆ ಸ್ಕ್ಯಾನಿಂಗ್‌ ಕೇಂದ್ರಗಳ ಅನುಮತಿ ರದ್ದುಪಡಿಸಲಾಗುವುದು ಎಂದು ಖಡಕ್‌ ಎಚ್ಚರಿಕೆ ನೀಡಿದರು.

ಪತ್ರ ಬರೆಯೋಣ: ಜಿಲ್ಲೆಯ ಗಡಿ ತಾಲೂಕು ಪಾವಗಡದಲ್ಲಿ ಹೊರರಾಜ್ಯದಿಂದ ಅಕ್ರಮವಾಗಿ ಆಗಮಿಸಿ ಸ್ಕ್ಯಾನಿಂಗ್‌ ಸೆಂಟರ್‌ಗಳ ಮೂಲಕ ಹೆಣ್ಣು ಭ್ರೂಣ ಪತ್ತೆ ಮಾಡಿಸುತ್ತಿರುವ ಬಗ್ಗೆ ಕ್ರಮಕೈಗೊಳ್ಳಲು ರಾಜ್ಯ ಸಕ್ಷಮ ಪ್ರಾಧಿಕಾರವು ಪತ್ರ ಬರೆದಿರುವ ಬಗ್ಗೆ ಡಿಎಚ್ಒ ಸಭೆಯ ಗಮನಕ್ಕೆ ತಂದರು. ಪಾವಗಡದಲ್ಲಿರುವ ಸ್ಕ್ಯಾನಿಂಗ್‌ ಸೆಂಟರ್‌ಗಳಲ್ಲಿ ಸ್ಕ್ಯಾನಿಂಗ್‌ ಮಾಡಿಸುವವರ ಪ್ರತಿಯೊಬ್ಬ ಗರ್ಭಿಣಿಯರ ಮಾಹಿತಿ ಪಡೆದು ಪರಿಶೀಲಿಸಿ, ನೆರೆಯ ರಾಜ್ಯದಿಂದ ಆಗಮಿಸಿದ್ದರೆ ನೆರೆಯ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ಪರಿಶೀಲಿಸಿ ಮಾಹಿತಿ ನೀಡುವಂತೆ ಪತ್ರ ಬರೆಯೋಣ ಎಂದು ತಿಳಿಸಿದರು. ಸಭೆಯಲ್ಲಿ ಡಾ.ಬಸವರಾಜ್‌, ಡಾ.ಭರತ್‌, ಡಾ.ನಳಿನ, ವಿಜಯ ಸೇರಿದಂತೆ ಸಮಿತಿಯ ಸದಸ್ಯರು ಭಾಗವಹಿಸಿದ್ದರು.

ನಮ್ಮ ನೆಲದ ಕಾನೂನನ್ನು ಎಲ್ಲರೂ ಗೌರವಿಸಬೇಕಾಗಿರುವುದು ಎಲ್ಲರ ಕರ್ತವ್ಯವಾಗಿದೆ. ಅದೇ ರೀತಿಯಲ್ಲಿ ಪಿಸಿ ಅಂಡ್‌ ಪಿಎನ್‌ಸಿಟಿ ಕಾಯ್ದೆ ಪಾಲನೆ ಮಾಡಬೇಕಾಗಿರುವುದು ಸ್ಕ್ಯಾನಿಂಗ್‌ ಕೇಂದ್ರಗಳ ಕರ್ತವ್ಯವಾಗಿದೆ. ಸ್ಕ್ಯಾನಿಂಗ್‌ ಕೇಂದ್ರಗಳ ಆವರಣದಲ್ಲಿ ಕಡ್ಡಾಯವಾಗಿ ಸಿಸಿಟೀವಿ ಅಳವಡಿಸಲು ಸೂಚನೆ ನೀಡಬೇಕು. ಕಳೆದ ಆರ್ಥಿಕ ವರ್ಷದಲ್ಲಿ ಜಿಲ್ಲೆಯಲ್ಲಿ ಮಕ್ಕಳ ಜನನ ಲಿಂಗಾನುಪಾತ ಪ್ರಮಾಣದಲ್ಲಿ ಇಳಿಮುಖವಾಗಿರುವುದಕ್ಕೆ ಸ್ಪಷ್ಟವಾದ ಕಾರಣಗಳೇನು ಎಂಬುದನ್ನು ಪತ್ತೆ ಹಚ್ಚಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಜಾಗೃತಿ ವಹಿಸಿ ಕೆಲಸ ನಿರ್ವಹಿಸಬೇಕು.- ಡಾ.ಕೆ.ರಾಕೇಶ್‌ ಕುಮಾರ್‌, ಜಿಲ್ಲಾಧಿಕಾರಿ.


ಈ ವಿಭಾಗದಿಂದ ಇನ್ನಷ್ಟು

  • ಹುಳಿಯಾರು: ಪಟ್ಟಣ ಪಂಚಾಯಿತಿ ವಾಣಿಜ್ಯ ಮಳಿಗೆಗಳ ಇ-ಹರಾಜಿಗೆ ಉತ್ಛ ನ್ಯಾಯಾಲಯ ತಡೆಯಾಜ್ಞೆ ನೀಡಿದ್ದರೂ ಆದೇಶ ಉಲ್ಲಂಘಿಸಿ ಇ-ಹರಾಜು ಪ್ರಕ್ರಿಯೆ ನಡೆದಿದೆ. ಆದರೆ...

  • ಕೊರಟಗೆರೆ: ರೈತ ಬೆಳೆಯುವ ಬೆಳೆಗೆ ದರ ನಿಗದಿ ಮಾರುಕಟ್ಟೆ ಮಾಡುತ್ತಿದೆ. ಅದಕ್ಕೆ ಬದಲಾಗಿ ರೈತನೇ ನಿಗದಿ ಮಾಡುವಂತಾಗಬೇಕು ಎಂದು ರಾಜ್ಯ ಅಪೆಕ್ಸ್‌ ಬ್ಯಾಂಕ್‌...

  • ಭಕ್ತರ ಪಾಲಿನ ಇಷ್ಟಾರ್ಥ ಸಿದ್ಧಿಸುವ ಮಹಾಗಣಪತಿ ಎಂದೇ ನಾಡಿನಾದ್ಯಂತ ಪ್ರಸಿದ್ಧಿ ಪಡೆದಿರುವ ಗೂಳೂರು ಮಹಾಗಣಪತಿಯ ವಿಸರ್ಜನಾ ಮಹೋತ್ಸವದ ಭವ್ಯ ಮೆರವಣಿಗೆ ವಿವಿಧ...

  • ಚಿಕ್ಕನಾಯಕನಹಳ್ಳಿ: ಪಟ್ಟಣದಲ್ಲಿ ಸೋಮವಾರ ನಡೆಯುವ ವಾರದ ಸಂತೆಯನ್ನು ಸ್ಥಳಾಂತರ ಮಾಡುವ ಪುರಸಭೆ ತೀರ್ಮಾನಕ್ಕೆ ಸಾರ್ವಜನಿಕರು ಪರ-ವಿರೋಧ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ....

  • ತುಮಕೂರು: ಜಿಲ್ಲೆಯ ಕೊರಟಗೆರೆ ವಿಧಾನಸಭಾ ಕ್ಷೇತ್ರದ ಕೋರಾ ಮತ್ತು ಚೆನ್ನರಾಯ ದುರ್ಗ ಹೋಬಳಿಯ 18 ಹಳ್ಳಿಗಳಿಗೆ ಹೇಮಾವತಿ ನೀರು ಹರಿಸಬೇಕು ಎಂದು ಆಗ್ರಹಿಸಿ ಶ್ರೀ...

ಹೊಸ ಸೇರ್ಪಡೆ