ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಜಿಲ್ಲಾಡಳಿತ ಸಜ್ಜು

Team Udayavani, Mar 20, 2019, 7:23 AM IST

ತುಮಕೂರು: ವಿದ್ಯಾರ್ಥಿ ಜೀವನದ ಪ್ರಮುಖ ಪರೀಕ್ಷೆಯಾಗಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲು ಕಲ್ಪತರು ನಾಡು ತುಮಕೂರು ಜಿಲ್ಲೆಯಲ್ಲಿ ಜಿಲ್ಲಾಡಳಿತ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದ್ದು ಮಂಗಳವಾರ ವಿದ್ಯಾರ್ಥಿಗಳ ಪ್ರವೇಶ ಪತ್ರ ನಂಬರ್‌ಗಳನ್ನು ಡೆಸ್ಕ್ಗಳ ಮೇಲೆ ಬರೆಯಲಾಯಿತು. ಈ ಬಾರಿ ಜಿಲ್ಲೆಯ ತುಮಕೂರು ಹಾಗೂ ಮಧುಗಿರಿ ಶೈಕ್ಷಣಿಕ ಜಿಲ್ಲೆಗಳ 36196 ವಿದ್ಯಾರ್ಥಿಗಳು ಮಾ.21ರಿಂದ ನಡೆಯಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲಿದ್ದಾರೆ.

141 ಪರೀಕ್ಷಾ ಕೇಂದ್ರ: ತುಮಕೂರು 83, ಮಧುಗಿರಿ 58 ಸೇರಿ ಜಿಲ್ಲೆಯ 141 ಪರೀಕ್ಷಾ ಕೇಂದ್ರಗಳನ್ನು ಸಿದ್ಧಪಡಿಸಲಾಗಿದೆ. ಮಾ.21ರಿಂದ ಏ.4ರವರೆಗೆ ನಡೆಯಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ತುಮಕೂರು ಶೈಕ್ಷಣಿಕ ಜಿಲ್ಲೆಯಿಂದ 13156 ಬಾಲಕರು, 10595 ಬಾಲಕಿಯರು ಸೇರಿ 23751 ವಿದ್ಯಾರ್ಥಿಗಳು, ಮಧುಗಿರಿ ಶೈಕ್ಷಣಿಕ ಜಿಲ್ಲೆಯಿಂದ 12445 ಬಾಲಕರು-6572, ಬಾಲಕಿಯರು-5873 ಸೇರಿ ಒಟ್ಟು 36,196 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ಜಿಲ್ಲೆಯ 141 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಈ ಪೈಕಿ 62 ಕ್ಲಸ್ಟರ್‌ ಸಹಿತ, 76 ಕ್ಲಸ್ಟರ್‌ ರಹಿತ ಹಾಗೂ 3 ಖಾಸಗಿ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ತುಮಕೂರು ನಗರದ ವಿದ್ಯಾನಿಕೇತನ ಶಾಲೆ, ಎಸ್‌ಐಟಿ ವಾಸವಿ ಪ್ರೌಢಶಾಲೆ ಹಾಗೂ ಮಧುಗಿರಿ ಜ್ಯೂಪಿಟರ್‌ ಪಬ್ಲಿಕ್‌ ಶಾಲೆ ಸೇರಿ 3 ಖಾಸಗಿ ಕೇಂದ್ರಗಳಲ್ಲಿ ಖಾಸಗಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. 

ಮೂಲಭೂತ ವ್ಯವಸ್ಥೆ: ಪರೀಕ್ಷಾ ಅಕ್ರಮಗಳನ್ನು ತಡೆಯಲು ಮುಂಜಾಗ್ರತಾ ಕ್ರಮವಾಗಿ ಎಲ್ಲಾ 141 ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಅಲ್ಲದೆ, ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಅನುವಾಗುವಂತೆ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ, ಮತ್ತಿತರ ಮೂಲಭೂತ ಸೌಕರ್ಯ ಒದಗಿಸಲಾಗಿದೆ.

ಪ್ರತಿ ಪರೀಕ್ಷಾ ಕೇಂದ್ರಗಳಿಗೂ ತಲಾ ಒಬ್ಬ ಆರೋಗ್ಯ ಸಹಾಯಕರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಪರೀಕ್ಷಾ ಕೇಂದ್ರದ ವೀಕ್ಷಕರನ್ನಾಗಿ ನಿಯೋಜಿಸಲಾಗಿದೆ. ಪರೀಕ್ಷೆಯನ್ನು ಕಟ್ಟುನಿಟ್ಟಾಗಿ ನಡೆಸುವ ನಿಟ್ಟಿನಲ್ಲಿ ಜಿಲ್ಲಾ ಹಾಗೂ ತಾಲೂಕು ಹಂತಗಳಲ್ಲಿ ಜಾಗೃತ ದಳಗಳನ್ನು ರಚಿಸಲಾಗಿದೆ.  ಅಲ್ಲದೆ, ಪ್ರತಿ ಪರೀಕ್ಷಾ ಕೇಂದ್ರಗಳಿಗೂ ಸ್ಥಾನಿಕ ಜಾಗೃತ ದಳಗಳನ್ನು ನಿಯೋಜಿಸಲಾಗಿದೆ ಎಂದು ಡಿಡಿಪಿಐ ಎಂ.ಆರ್‌.ಕಾಮಾಕ್ಷಿ ತಿಳಿಸಿದ್ದಾರೆ.  

ಮೊಬೈಲ್‌ ಬಳಕೆಗೆ ಅವಕಾಶವಿಲ್ಲ:  ಪರೀಕ್ಷಾ ಅವಧಿಯಲ್ಲದೆ ಪ್ರಶ್ನೆ ಪತ್ರಿಕೆ ಓದಲು 15 ನಿಮಿಷ ಕಾಲಾವಕಾಶವನ್ನು ನಿಗದಿಪಡಿಸಲಾಗಿದೆ. ಪ್ರಶ್ನೆ ಪತ್ರಿಕೆ ಓದಿ ಅಂಕಗಳನ್ನು ಆಧರಿಸಿ ಉತ್ತರ ಬರೆಯಬೇಕು. ಪರೀಕ್ಷಾ ಕೇಂದ್ರಗಳಿಗೆ ಮುಖ್ಯ ಅಧೀಕ್ಷಕರನ್ನು ಹೊರತುಪಡಿಸಿ ಯಾರೊಬ್ಬರಿಗೂ ಮೊಬೈಲ್‌ ಬಳಕೆಗೆ ಅವಕಾಶವಿಲ್ಲ. ಸ್ಮಾರ್ಟ್‌ ವಾಚ್‌ ಅಥವಾ ಎಲೆಕ್ಟ್ರಾನಿಕ್‌ ಕೈಗಡಿಯಾರವನ್ನು  ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ತರುವಂತಿಲ್ಲ ಎಂದು ಹೇಳಿದರು.

ಏ.10ರಿಂದ ಮೌಲ್ಯಮಾಪನಾ ಕಾರ್ಯ: ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಮುಗಿದ ನಂತರ ನಗರದ 6 ಕೇಂದ್ರಗಳಲ್ಲಿ ಏ.10 ರಿಂದ ಮೌಲ್ಯಮಾಪನ ನಡೆಯಲಿದ್ದು ಸುಮಾರು 2500 ಶಿಕ್ಷಕರನ್ನು ನಿಯೋಜಿಸಲಾಗಿದೆ. ಮೌಲ್ಯ ಮಾಪನ ಕೇಂದ್ರದಲ್ಲಿ ಈ ಬಾರಿ ಆನ್‌ಲೈನ್‌ ಪೋರ್ಟಿಂಗ್‌ ವ್ಯವಸ್ಥೆ ಮಾಡಲಾಗಿದ್ದು, ಇದಕ್ಕಾಗಿ 15 ಲ್ಯಾಪ್‌ಟಾಪ್‌ ಅಳವಡಿಸಲಾಗುವುದು. ಮೌಲ್ಯ ಮಾಪನದ ಪ್ರತಿ ದಿನದ ಮಾಹಿತಿಯನ್ನು ಆನ್‌ಲೈನ್‌ ಪೋರ್ಟಿಂಗ್‌ ಮೂಲಕ ಮಂಡಳಿಗೆ ನೀಡಲಾಗುವುದು ಎಂದು ತಿಳಿಸಿದರು.

ಎಸ್ಸೆಸ್ಸೆಲ್ಸಿ ಪರೀಕ್ಷಾ ವೇಳಾ ಪಟ್ಟಿ: ಜಿಲ್ಲೆಯಲ್ಲಿ ಮಾ.21ರಿಂದ ಏ.4ರವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯಲಿದೆ. ಪ್ರಥಮ ಭಾಷೆ ಕನ್ನಡ, ಉರ್ದು, ಇಂಗ್ಲಿಷ್‌, ಸಂಸ್ಕೃತ ವಿಷಯಗಳು, ಮಾ.23ರಂದು ಅರ್ಥಶಾಸ್ತ್ರ, ಮಾ.25ರಂದು ಗಣಿತ ಹಾಗೂ ಸಮಾಜಶಾಸ್ತ್ರ, ಮಾ.27ರಂದು ದ್ವಿತೀಯ ಭಾಷೆ ಕನ್ನಡ, ಇಂಗ್ಲಿಷ್‌, ಮಾ.29ರಂದು ಸಮಾಜ ವಿಜ್ಞಾನ, ಏ.2ರಂದು ವಿಜ್ಞಾನ, ರಾಜ್ಯಶಾಸ್ತ್ರ, ಕರ್ನಾಟಕ ಸಂಗೀತ, ಹಿಂದೂಸ್ಥಾನಿ ಸಂಗೀತ ಹಾಗೂ ಏ.4ರಂದು ತೃತೀಯ ಭಾಷೆ ಹಿಂದಿ,

ಕನ್ನಡ, ಸಂಸ್ಕೃತ ಪರೀಕ್ಷೆ ಹಾಗೂ ಮಾಹಿತಿ ತಂತ್ರಜ್ಞಾನ, ರೀಟೇಲ್‌, ಆಟೋಮೊಬೈಲ್‌, ಹೆಲ್ತ್‌ ಕೇರ್‌, ಬ್ಯೂಟಿ ಅಂಡ್‌ ವೆಲ್‌ನೆಸ್‌ ವಿಷಯದಲ್ಲಿ ಎನ್‌ಎಸ್‌ಕ್ಯೂಎಫ್, ನ್ಯಾಷನಲ್‌ ಸ್ಕಿಲ್‌ ಕ್ವಾಲಿಫಿಕೇಷನ್‌ ಫ್ರೆàಮ್‌ ವರ್ಕ್‌ ಪರೀಕ್ಷೆಗಳು ನಡೆಯಲಿವೆ. ತೃತೀಯ ಭಾಷೆ ಬದಲಿಗೆ ಎನ್‌ಎಸ್‌ಕ್ಯೂಎಫ್ ಪರೀಕ್ಷೆ ಬರೆಯುವವರಿಗಾಗಿ ತುಮಕೂರು ನಗರದ ಎಂಪ್ರಸ್‌ ಹಾಗೂ ಸರ್ಕಾರಿ ಜ್ಯೂನಿಯರ್‌ ಕಾಲೇಜು, ತಿಪಟೂರು ತಾಲೂಕಿನ ನೊಣವಿನಕೆರೆ ಸರ್ಕಾರಿ ಜ್ಯೂನಿಯರ್‌ ಕಾಲೇಜಿನಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಡಿಡಿಪಿಐ ಎಂ.ಆರ್‌.ಕಾಮಾಕ್ಷಿ ತಿಳಿಸಿದ್ದಾರೆ.

ಬೆಳಗ್ಗೆ 9ರಿಂದ ಸಂಜೆ 5ರವರೆಗೆ ನಿಷೇಧಾಜ್ಞೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಯಾವುದೇ ಲೋಪವಿಲ್ಲದಂತೆ ನಡೆಸಲು ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್‌ ವ್ಯಾಪ್ತಿ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಈ ನಿಷೇಧಾಜ್ಞೆ ಪರೀಕ್ಷೆ ನಡೆಯುವ ದಿನಗಳಂದು ಬೆಳಗ್ಗೆ 9ರಿಂದ ಸಂಜೆ 5ರವರೆಗೆ ಜಾರಿಯಲ್ಲಿರುತ್ತದೆ. ಈ ವೇಳೆ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಇರುವ ಜೆರಾಕ್ಸ್‌ ಹಾಗೂ ಬೆರಳಚ್ಚು ಕೇಂದ್ರಗಳನ್ನು ಮುಚ್ಚಬೇಕು.

ನಿಷೇಧಿತ ಪ್ರದೇಶದೊಳಗೆ ಅನಧಿಕೃತ ವ್ಯಕ್ತಿಗಳು ಪ್ರವೇಶಿಸುವಂತಿಲ್ಲ. ಪ್ರಶ್ನೆ ಪತ್ರಿಕೆಗಳ ಸೋರಿಕೆ ಮತ್ತು ಪರೀಕ್ಷಾ ಕ್ರಮಗಳಿಗೆ ಉತ್ತೇಜನ ನೀಡುವ ವ್ಯಕ್ತಿಗಳು ಕಂಡು ಬಂದಲ್ಲಿ ದಂಡ ಪ್ರಕ್ರಿಯೆ ಸಂಹಿತೆ 1963 ಸೆಕ್ಷನ್‌ 107, 110 ರಡಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ ಕುಮಾರ್‌ ತಿಳಿಸಿದ್ದಾರೆ.

ಯಾವುದೇ ಗೊಂದಲಗಳಿಗೆ ಅವಕಾಶವಾಗದಂತೆ ಪರೀಕ್ಷೆಯನ್ನು ಸುಗಮವಾಗಿ ನಡೆಸಲು ಎಲ್ಲಾ ಸಿದ್ಧತೆ ಕೈಗೊಳ್ಳಲಾಗಿದೆ. ನಿರಂತರ ವಿದ್ಯುತ್‌ ಕಲ್ಪಿಸಲು ಬೆಸ್ಕಾಂ ಸಂಸ್ಥೆಗೆ ಮನವಿ ಮಾಡಲಾಗಿದೆ. ವಿಕಲಚೇತನ ಮಕ್ಕಳಿಗೆ ನೆಲಹಂತದಲ್ಲಿಯೇ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿದೆ. 
-ಕಾಮಾಕ್ಷಿ, ಡಿಡಿಪಿಐ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ