ಸ್ವಾಭಿಮಾನದ ಬದುಕಿಗೆ ಶ್ರೇಷ್ಠ ಸ್ಥಾನ ನೀಡಿದ್ದ ಶರಣರು

Team Udayavani, Mar 16, 2019, 7:36 AM IST

ತಿಪಟೂರು: ಶರಣರು ಮಹಿಳೆಯರಿಗೆ ಧೈರ್ಯ, ಛಲ ಹಾಗೂ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಸ್ವಾತಂತ್ರ್ಯ, ಶ್ರೇಷ್ಠ ಸ್ಥಾನಮಾನ ನೀಡಿದ್ದಾರೆ ಎಂದು ಷಡಕ್ಷರ ಮಠದ ಡಾ.ರುದ್ರಮುನಿ ಸ್ವಾಮೀಜಿ ಅಭಿಪ್ರಾಯಿಸಿದರು.

ನಗರದ ರಾಜ್ಯ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಶರಣ ಸಾಹಿತ್ಯ ಪರಿಷತ್ತು, ತಾಲೂಕು ಘಟಕ ಹಾಗೂ ಕದಳಿ ಮಹಿಳಾ ವೇದಿಕೆ ವತಿಯಿಂದ ಮಹಿಳಾ ದಿನಾಚರಣೆ ಮತ್ತು ವಾರ್ಷಿಕೋತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಮಹಿಳೆಯರಿಗೆೆ ಕಾನೂನು ರಕ್ಷಣೆಗಳಿದ್ದರೂ ಅವರ ಬದುಕು ಅಷ್ಟು ಸುಲಭವಾಗಿಲ್ಲ.

ಅವರ ಜೀವನದಲ್ಲಿ ಆಕಸ್ಮಾತ್‌ ಆಗಿ ಬರುವ ಸಂಕಷ್ಟಗಳನ್ನು ಮೆಟ್ಟಿನಿಲ್ಲುವ ಶಕ್ತಿ, ತಾಳ್ಮೆ, ಸಹನೆ ಬೆಳೆಸಿಕೊಳ್ಳಬೇಕು. ಶರಣೆಯರಾದ ಅಕ್ಕಮಹಾದೇವಿ, ಆಯ್ದಕ್ಕಿ ಲಕ್ಕಮ್ಮ, ಸಂಕವ್ವ ಹೀಗೆ ಹಲವು ಧೀರ ಮಹಿಳೆಯರು ದಿಟ್ಟತನದಿಂದ ತಮ್ಮ ಬದುಕನ್ನು ಕಟ್ಟಿಕೊಳ್ಳವ ಜೊತೆಗೆ ಸಮಸಮಾಜ ನಿರ್ಮಾಣಕ್ಕೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದು, ಅಂಥ ಶರಣೆಯರ ದಿಟ್ಟತನ, ಆದರ್ಶ ಮತ್ತು ಅನುಭವ ತಿಳಿದುಕೊಂಡಲ್ಲಿ ಇಂದಿನ ಮಹಿಳೆಯರಿಗೆ ಬದುಕು ಕಷ್ಟವೆನಿಸುವುದಿಲ್ಲ ಎಂದರು.

ಪುರುಷರಿಗೆ ಸರಿಸಮ: ನಗರಸಭಾ ಪೌರಾಯುಕ್ತೆ ಡಾ. ಮಧು ಮಾತನಾಡಿ, ಮಹಿಳೆ ಗೃಹಿಣಿ ಕೇವಲ ಅಲ್ಲ. ಮನುಕುಲವನ್ನೆ ಹೊತ್ತುನಿಂತ ಜಗತ್‌ಜನನಿ. ಸರ್ಕಾರ ಮಹಿಳೆಯರ ಏಳ್ಗೆಗಾಗಿ ಶೇ.33ರಷ್ಟು ಮೀಸಲಾತಿ ನೀಡಿದ್ದು, ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿಯೂ ಗುರ್ತಿಸಿಕೊಳ್ಳುವ ಮೂಲಕ ಪುರುಷರಿಗೆ ಸರಿಸಮನಾಗಿದ್ದಾಳೆ ಎಂದರು.

ಶರಣ ಸಾಹಿತ್ಯ ಪರಿಷತ್‌ ತಾಲೂಕು ಅಧ್ಯಕ್ಷ ಕೆ.ಎಂ.ಪರಮೇಶ್ವರಯ್ಯ ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ ಶರಣರ ತತ್ವಗಳು ಶೋಷಿತರ, ದಮನಿತರ, ಅವಮಾನಕ್ಕೊಳಗಾದವರನ್ನು ಮೇಲೆತ್ತಿ ಸ್ವಾತಂತ್ರ್ಯ, ಸಮಾನತೆ, ಭಾತೃತ್ವದಿಂದ ಜೀವನ ನಡೆಸಬೇಕೆಂಬುದಾಗಿದೆ ಎಂದರು.

ಕದಳಿ ಮಹಿಳಾ ವೇದಿಕೆ ತಾಲೂಕು ಅಧ್ಯಕ್ಷೆ ಪೂರ್ಣಿಮಾ ಅಧ್ಯಕ್ಷತೆ ವಹಿಸಿದ್ದರು. ವೇದಿಕೆ ಜಿಲ್ಲಾಧ್ಯಕ್ಷೆ ಲೋಕೇಶ್ವರಿಪ್ರಭು, ತಾಲೂಕು ಗೌರವಾಧ್ಯಕ್ಷೆ ಪ್ರಭಾವಿಶ್ವನಾಥ್‌, ಆಪ್ತ ಸಮಾಲೋಚನೆಗಾರ ಲಕ್ಷ್ಮೀ ನರಸಿಂಹಶೆಟ್ಟಿ, ಸೃಜಶೀಲ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್‌.ಜಯಣ್ಣ, ಶಸಾಪ ಜಿಲ್ಲಾಧ್ಯಕ್ಷ ಎಂ.ಜಿ. ಸಿದ್ದರಾಮಯ್ಯ ಮಾತನಾಡಿದರು.

ಸನ್ಮಾನ: ಈ ವೇಳೆ ಗೌರವ ಡಾಕ್ಟರೆಟ್‌ ಪಡೆದಿರುವ ಷಡಕ್ಷರಿ ಮಠದ ಡಾ.ರುದ್ರಮುನಿಸ್ವಾಮೀಜಿ ಹಾಗೂ ಸೂಲಗಿತ್ತಿ ಜಯಮ್ಮ, ಯೋಧನ ಮಡದಿ ಮಮತಾರವರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಕದಳಿ ಮಹಿಳಾ ವೇದಿಕೆ ಉಪಾಧ್ಯಕ್ಷೆ ವಿಶಾಲಸೋಮಶೇಖರ್‌, ಲತಾಸುಂದರ್‌, ಪ್ರಧಾನ ಕಾರ್ಯದರ್ಶಿ ಜಯಬಸವರಾಜು, ನಿರ್ದೇಶಕಿ ಮೀನಾಕ್ಷಿ ಮತ್ತಿತರರಿದ್ದರು. ನಂತರ ಹೊಯ್ಸಳ ಕರ್ನಾಟಕ ಮಹಿಳಾ ಮಾತೃ ಮಂಡಳಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. 

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ