135 ವರ್ಷ ಪೂರೈಸಿದ ಉಪ್ಪುಂದ ಸರಕಾರಿ ಮಾದರಿ ಹಿ.ಪ್ರಾ. ಶಾಲೆ

ಉಪ್ಪುಂದ ಕರಾವಳಿ ತೀರದಲ್ಲಿ ಜನ್ಮತಾಳಿದ ಮೊತ್ತ ಮೊದಲ ಶಿಕ್ಷಣ ಸಂಸ್ಥೆ

Team Udayavani, Nov 6, 2019, 4:02 AM IST

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

1884 ಶಾಲೆ ಸ್ಥಾಪನೆ
30 ವರ್ಷಗಳ ಬಳಿಕ ಸ್ವಂತ ಜಾಗ ಹಾಗೂ ಕಟ್ಟಡ

ಉಪ್ಪುಂದ: ಉಪ್ಪುಂದ ಕರಾವಳಿ ತೀರದಲ್ಲಿ ಜನ್ಮತಾಳಿದ ಮೊತ್ತ ಮೊದಲ ಶಿಕ್ಷಣ ಸಂಸ್ಥೆ ಎನ್ನುವ ಹೆಗ್ಗಳಿಕೆಯಿರುವ ಉಪ್ಪುಂದ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಈಗ 135 ವರ್ಷ. ವಿಶೇಷವೆಂದರೆ ಶಾಲೆಯು ಸುಮಾರು 30 ವರ್ಷಗಳ ಬಳಿಕ ಸ್ವಂತ ಜಾಗ ಹಾಗೂ ಕಟ್ಟಡ ಹೊಂದುವಂತೆ ಆಯಿತು.

ಶಾಲೆ ಆರಂಭಗೊಂಡಿದ್ದು 1884ರಲ್ಲಿ. ಕೂಸಮ್ಮನ ಬೆಟ್ಟು ಸದಾಶಿವ ಹೊಳ್ಳ ಎಂಬವರ ಮನೆಯಲ್ಲಿ ( ಈಗಿನ ಉಪ್ಪುಂದ ಟೆಲಿಫೋನ್‌ ಎಕ್ಸ್‌ಚೇಂಜ್‌ ಆಫೀಸ್‌ ಬಳಿ) ಗುರುಕುಲ ಮಾದರಿಯಲ್ಲಿ ವಿದ್ಯಾಸೇವೆ ನಡೆಯುತಿತ್ತು. ಇದನ್ನು ಐಗಳ ಮಠ ಎಂದು ಕರೆಯುತ್ತಿದ್ದರು. ಬಳಿಕ ಉಪ್ಪುಂದ ದೇಗುಲದಲ್ಲೂ ವಿದ್ಯಾಭ್ಯಾಸ ನಡೆದಿದೆ. ಅನಂತರ ಬ್ರಿಟಿಷರ ಆಳ್ವಿಕೆಯಲ್ಲಿ ಮೂಲಪಾಠ ಶಾಲೆ ಹೆಸರಿನೊಂದಿಗೆ 3ನೇ ತರಗತಿಯನ್ನು ಶಾಲೆಯಲ್ಲಿ ಆರಂಭಿಸಲಾಯಿತು.

ಪಠ್ಯಕ್ರಮ
1885ರಲ್ಲಿ ರಾಮ ಉಪಾಧ್ಯಯ ಮೊದಲ ಮೂಖ್ಯೋಪಾಧ್ಯರಾಗಿದ್ದರು. 1888ರ ಸುತ್ತೋಲೆಯ
ಪ್ರಕಾರ ವ್ಯವಸಾಯ, ಆರೋಗ್ಯಶಾಸ್ತ್ರ, ತೋಟಗಾರಿಕೆ ವಿಷಯಗಳನ್ನು ಮಕ್ಕಳಿಗೆ ಪಾಠಮಾಡಲಾಗುತ್ತಿತ್ತು. ಶಾಲೆಯಲ್ಲಿ ಮೂರನೇ ತರಗತಿಯವರೆಗೆ ಶಿಕ್ಷಣವಿದ್ದರೂ ಬ್ರಿಟಿಷರು ನಡೆಸುವ ಪರೀಕ್ಷೆಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಮಾತ್ರ ಅರ್ಹತಾ ಪ್ರಮಾಣಪತ್ರ ನೀಡಲಾಗುತ್ತಿತ್ತು. 1890ರಲ್ಲಿ ಮೊದಲ ಬಾರಿಗೆ ಬೈಂದೂರಿನ ಕಿರಿಯ ವಿದ್ಯಾರ್ಥಿಗಳ ಛತ್ರದಲ್ಲಿ ನಡೆದ ಪರೀಕ್ಷೆಯಲ್ಲಿ ಶಾಲೆಯ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.

ಇಂಗ್ಲಿಷ್‌ಗೆ ಬೇಡಿಕೆ
ಶಾಲೆಗೆ ಒಂದು ಎಕ್ರೆ ಹತ್ತು ಸೆಂಟ್ಸ್‌ ಜಾಗವನ್ನು ಉಪ್ಪುಂದ ಹೊಲ್ಮನೆ ಭಟ್‌ ಅವರ ಕುಟುಂಬ ದಾನವಾಗಿ ನೀಡಿದೆ. ಊರವರ ಕೊಡುಗೆಯಿಂದ ಕಟ್ಟಡ ನಿರ್ಮಿಸಲಾಗಿದೆ. 1915ರಲ್ಲಿ ಶಾಲಾ ಪರಿವೀಕ್ಷಕ ಎಂ. ಪದ್ಮನಾಭಯ್ಯ ಅವರು ಊರಿನವರ ಬೇಡಿಕೆಯಂತೆ 4ನೇ ತರಗತಿಗೆ ಇಂಗ್ಲಿಷ್‌ ಕಲಿಯಲು ವ್ಯವಸ್ಥೆ ಮಾಡಲು ಶಿಫಾರಸು ಮಾಡಿದ್ದರು.

ಹೆಣ್ಣು ಮಕ್ಕಳ ಶಾಲೆ
1915-17ರಲ್ಲಿ ತೋಟಕಾರಿಕಾ ಕ್ಷೇತ್ರದಲ್ಲಿ ಶಾಲೆ ಗಮನಾರ್ಹ ಸಾಧನೆ ಮಾಡಿದೆ. ಇಲ್ಲಿ ಬೆಳೆದ ತರಕಾರಿಗಳನ್ನು ಮಾರಾಟ ಮಾಡಿ ಆದಾಯ ಗಳಿಸಲಾಗುತಿತ್ತು. ಅಧ್ಯಾಪಕ ಬಿಜೂರು ಸುಬ್ಬಣ್ಣ ಭಟ್‌ ತೋಟಗಾರಿಕೆ ಶಿಕ್ಷಣ ನೀಡುತ್ತಿದ್ದರು. ಇದು ಪರಿವೀಕ್ಷಕರ ಮೆಚ್ಚುಗೆಗೆ ಕಾರಣವಾಗಿತ್ತು. ಬಳಿಕ 1929ರಲ್ಲಿ ಉಪ್ಪುಂದ ದೇವಸ್ಥಾನದ ವಠಾರದಲ್ಲಿ ಹೆಣ್ಣು ಮಕ್ಕಳಿಗಾಗಿಯೇ ಒಂದು ವಿಶೇಷ ಶಾಲೆ ಆರಂಭಿಸಲಾಯಿತು. 1935ರಲ್ಲಿ ಅದನ್ನು ಈ ಶಾಲೆಯೊಂದಿಗೆ ಸಂಯೋಜಿಸಲಾಯಿತು. ಆ ಸಂದರ್ಭ 68 ಹುಡುಗರು ಮತ್ತು 11 ಹುಡುಗಿಯರು ಇದ್ದರು. 1940ರಲ್ಲಿ 1-5ರ ವರೆಗೆ ತರಗತಿಗಳನ್ನು ಆರಂಭಿಸಲಾಯಿತು. ಆರು ಮಂದಿ ಅಧ್ಯಾಪಕರು, 130 ವಿದ್ಯಾರ್ಥಿ ಮತ್ತು 37 ವಿದ್ಯಾರ್ಥಿನಿಯರು ಇದ್ದರು. 1918ರಲ್ಲಿ ಹೈಯರ್‌ ಎಲಿಮೆಂಟರಿ ಶಾಲೆಯನ್ನಾಗಿ ಮಾಡಲು ಶಿಫಾರಸು ಮಾಡಲಾಗಿತ್ತಾದರೂ 1972ರಲ್ಲಿ ಹೈಯರ್‌ ಎಲಿಮೆಂಟರಿ ಶಾಲೆಯಾಗಿ ಪರಿವರ್ತನೆಗೊಂಡಿತು. 1996ರ ಶಾಲೆಯ ಶತಮಾನೋತ್ಸವ ಆಚರಣೆಯ ಸಂದರ್ಭ 1,146 ವಿದ್ಯಾರ್ಥಿಗಳು, 11ಮಂದಿ ಶಿಕ್ಷಕರು, 5 ಜನ ಗೌರವ ಶಿಕ್ಷಕರು ಇದ್ದರು.

ವಿದ್ಯಾರ್ಥಿಗಳಿಗೆ ಅನುಗುಣವಾಗಿ ಶಾಲೆಗೆ ಹೊಸ ಕೊಠಡಿಯ ಅಗತ್ಯ ಇದೆ. ಇದಕ್ಕೆ ಹಳೆ ವಿದ್ಯಾರ್ಥಿಗಳು, ದಾನಿಗಳು ಸಹಕಾರ ನೀಡಬೇಕಿದೆ. ಹಾಗೂ ಶಿಕ್ಷರ ಕೊರತೆ ಇದೆ ಇದಕ್ಕೆ ಸಂಬಂಧಪಟ್ಟವರು ಸ್ಪಂದಿಸಬೇಕಿದೆ.
-ವೆಂಕಪ್ಪ ಉಪ್ಪಾರ್‌ , ಮುಖ್ಯ ಶಿಕ್ಷಕರು

ಈಗ ಶಾಲೆಯ ಮೇಲಿನ ಗೌರವ ಮತ್ತು ಅಭಿಮಾನ ಇಲ್ಲ. ಜನರ ಮನಸ್ಸಿನಲ್ಲಿ ನಮ್ಮ ಶಾಲೆಯಾಗಿ ಉಳಿದಿಲ್ಲ. ಸರಕಾರಿ ಶಾಲೆಯಾಗಿ ಬಿಟ್ಟಿದೆ. ನಮ್ಮದು ಎನ್ನುವ ಭಾವನೆ ಇಲ್ಲದೆ ಸರಕಾರಿ ಶಾಲೆಯಾಗಿ ಇದ್ದರೆ ನಮ್ಮೂರಿನ ಶಾಲೆ ಉಳಿಯಲು ಸಾಧ್ಯವಿಲ್ಲ .
-ಚಂದ್ರಶೇಖರ ಹೊಳ್ಳ ಉಪ್ಪುಂದ, ಸಾಹಿತಿ, ಹಿರಿಯ ವಿದ್ಯಾರ್ಥಿ

-  ಕೃಷ್ಣ ಬಿಜೂರು

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ