ಆರೋಪಿಗಳಿಗೆ 20 ವರ್ಷ ಕಠಿನ ಶಿಕ್ಷೆ, ದಂಡ

ಬಾಲಕಿ ಮೇಲೆ ನಡೆದಿದ್ದ ಸಾಮೂಹಿಕ ಅತ್ಯಾಚಾರ

Team Udayavani, Nov 27, 2019, 4:57 AM IST

ಉಡುಪಿ: ನಗರದ ಹೊರ ವಲಯದಲ್ಲಿ 2016ರಲ್ಲಿ ಬಾಲಕಿ ಮೇಲೆ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಿಗೆ 20 ವರ್ಷ ಕಠಿನ ಶಿಕ್ಷೆ, ದಂಡ ವಿಧಿಸಿ ಜಿಲ್ಲಾ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಿ.ಎಂ. ಜೋಶಿ ಮಂಗಳವಾರ ತೀರ್ಪು ನೀಡಿದ್ದಾರೆ. ಜಿಲ್ಲಾ ವಿಶೇಷ ನ್ಯಾಯಾಲಯವು ನ.20ರಂದು ಆರೋಪಿಗಳನ್ನು ದೋಷಿ ಎಂದು ಘೋಷಿಸಿತ್ತು. ರಾಜಸ್ಥಾನ ಮೂಲದ ಉಡುಪಿ ಟೈಲ್ಸ್‌ ಕೆಲಸದ ಕಾರ್ಮಿಕರಾಗಿದ್ದ ಪದಮ್‌ ಸಿಂಗ್‌ ಸೇನಿ (28) ಮತ್ತು ಮುಕೇಶ್‌ ಸೇನಿ (20) ಶಿಕ್ಷೆಗೊಳಗಾದವರು.

ಘಟನೆ ವಿವರ
ಪದಮ್‌ ಸಿಂಗ್‌ ಸೇನಿ, ಮುಕೇಶ್‌ ಸೇನಿ 2016ರ ಜು.8ರಂದು ರಾತ್ರಿ ಸಂತ್ರಸ್ತೆಯ ತಂದೆ ಕೆಲಸದ ನಿಮಿತ್ತ ತೆರಳಿದ್ದಾಗ, ಬಾಲಕಿಯ ಮನೆಗೆ ಆಗಮಿಸಿ ಬಾಲಕಿಯನ್ನು ಬಲವಂತವಾಗಿ ಎಳೆದುಕೊಂಡು ಹೋಗಿ ಬಡಗಬೆಟ್ಟಿನಲ್ಲಿರುವ ಬಾಡಿಗೆ ಮನೆಯೊಂದರಲ್ಲಿ ಅತ್ಯಾಚಾರ ಎಸಗಿದ್ದರು. ಬಳಿಕ ಜೀವ ಬೆದರಿಕೆ ಒಡ್ಡಿ ಮನೆಯ ಬಳಿ ಬಿಟ್ಟುಹೋಗಿದ್ದರು. ಈ ಬಗ್ಗೆ 2016 ಜು.10ರಂದು ಪ್ರಕರಣ ದಾಖಲಾಗಿತ್ತು. ಘಟನೆಗೆ ಸಂಬಂಧಿಸಿ ಅಂದಿನ ತನಿಖಾಧಿಕಾರಿಗಳಾದ ಉಡುಪಿ ವೃತ್ತ ನಿರೀಕ್ಷಕ ಶ್ರೀಕಾಂತ್‌ ಕೆ. ಮತ್ತು ಜೈಶಂಕರ್‌ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿ 2016ರ ಸೆ. 20ರಂದು ನ್ಯಾಯಾಲಯಕ್ಕೆ ದೋಷಾ ರೋಪ ಸಲ್ಲಿಸಿದ್ದರು. ಅಭಿಯೋಜನೆ ಪರವಾಗಿ 34 ಸಾಕ್ಷಿಗಳ ಪೈಕಿ 21 ಸಾಕ್ಷಿಗಳನ್ನು ವಿಚಾರಣೆಗೊಳಪಡಿಸಿ ಹೇಳಿಕೆ ಪಡೆದುಕೊಳ್ಳಲಾಗಿತ್ತು.

ಶಿಕ್ಷೆ ವಿವರ
ಸಾಮೂಹಿಕ ಅತ್ಯಾಚಾರಕ್ಕೆ 20 ವರ್ಷ ಕಠಿನ ಜೈಲು ಶಿಕ್ಷೆ, 20 ಸಾವಿರ ರೂ. ದಂಡ, ತಪ್ಪಿದಲ್ಲಿ 1 ವರ್ಷ ಸಾದಾ ಸಜೆ, ಅಪಹರಣಕ್ಕೆ 10 ವರ್ಷ ಜೈಲು ಶಿಕ್ಷೆ, 15 ಸಾವಿರ ರೂ. ದಂಡ, ತಪ್ಪಿದಲ್ಲಿ 6 ತಿಂಗಳು ಹೆಚ್ಚುವರಿ ಜೈಲು ಶಿಕ್ಷೆ, ಜೀವ ಬೆದರಿಕೆಗೆ 1 ವರ್ಷ ಜೈಲು ಶಿಕ್ಷೆ, ಐದು ಸಾವಿರ ರೂ. ದಂಡ, ತಪ್ಪಿದಲ್ಲಿ 3 ತಿಂಗಳು ಜೈಲು, ಪೊಕ್ಸೋ ಪ್ರಕರಣಕ್ಕೆ ಸಂಬಂಧಿಸಿ 20 ವರ್ಷ ಜೈಲು ಶಿಕ್ಷೆ, 20 ಸಾವಿರ ರೂ. ದಂಡ, ತಪ್ಪಿದಲ್ಲಿ 1 ವರ್ಷ ಜೈಲು ಶಿಕ್ಷೆ ವಿಧಿಸಿ ನ್ಯಾಯಾಧೀಶ ಸಿ.ಎಂ. ಜೋಶಿ ತೀರ್ಪು ನೀಡಿದ್ದಾರೆ. ಸಂತ್ರಸ್ತೆ ಬಾಲಕಿಯ ಪರ ಜಿಲ್ಲಾ ಪೊಕ್ಸೋ ವಿಶೇಷ ಸರಕಾರಿ ಅಭಿಯೋಜಕ ವಿಜಯ ವಾಸು ಪೂಜಾರಿ ವಾದ ಮಂಡಿಸಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ