ಮಲ್ಪೆ ಪೇಟೆ: ಟ್ರಾಫಿಕ್ ಜಾಂ ನಿತ್ಯದ ಸಮಸ್ಯೆ
Team Udayavani, Sep 4, 2021, 6:15 AM IST
ಅಗಲ ಕಿರಿದಾದ ಹೆದ್ದಾರಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸಂಚರಿಸುವ ವಾಹನ ದಿಂದಾಗಿ ಟ್ರಾಫಿಕ್ ಜಾಂ ಪ್ರತಿನಿತ್ಯದ ಸಮಸ್ಯೆಯಾಗಿ ಮಾರ್ಪಟ್ಟಿದೆ. ಮಲ್ಪೆ ಮುಖ್ಯ ಬಸ್ ನಿಲ್ದಾಣದಿಂದ ಕಲ್ಮಾಡಿ ವರೆಗೂ ಸುಮಾರು ಒಂದೂವರೆ ಕಿ.ಮೀ. ಉದ್ದಕ್ಕೆ ವಾಹನಗಳ ಸಾಲು ಕಂಡು ಬರುತ್ತದೆ.
ಮಲ್ಪೆ: ಪ್ರಮುಖ ವಾಣಿಜ್ಯ ಮತ್ತು ಪ್ರವಾಸಿ ಕೇಂದ್ರವಾಗಿ ಬೆಳೆ ಯುತ್ತಿರುವ ಮಲ್ಪೆ ಯಲ್ಲಿ ಟ್ರಾಫಿಕ್ ಜಾಂ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಮೀನುಗಾರಿಕೆ ಆರಂಭಗೊಂಡ ಬಳಿಕ ವಾಹನಗಳ ಓಡಾಟ ಹೆಚ್ಚಾಗಿ ಸಮಸ್ಯೆ ಮತ್ತಷ್ಟು ಉಲ್ಬಣಿಸಿದೆ.
ಇಲ್ಲಿನ ಮೀನುಗಾರಿಕಾ ಬಂದರಿನಿಂದಾಗಿ ನಿತ್ಯ ಮೀನು ಸಾಗಾಟ, ಮಂಜುಗಡ್ಡೆ ಸಾಗಾಟದ ಲಾರಿಗಳು, ಟೆಂಪೋ, ರಿಕ್ಷಾಗಳು ನಿತ್ಯ ಓಡಾಟ ನಡೆಸುತ್ತವೆ. ಮೀನುಗಾರಿಕೆಗೆ ಸಂಬಂಧಿಸಿದ ಕೆಲಸಕ್ಕೆ ಸಾವಿರಾರು ಮಂದಿ ಇಲ್ಲಿಗೆ ಬರುವುದರಿಂದ ಅಷ್ಟೇ ಸಂಖ್ಯೆಯಲ್ಲಿ ದ್ವಿಚಕ್ರ ವಾಹನಗಳು ರಸ್ತೆಗಿಳಿಯುತ್ತವೆ. ಟೆಬಾ¾ ಶಿಪ್‌ಯಾರ್ಡ್ ದೊಡ್ಡ ಕಂಟೈನರ್ ವಾಹನಗಳು ಚಲಿಸುತ್ತದೆ. ಅಲ್ಲದೆ ಪ್ರವಾಸಿ ತಾಣವಾದ ಮಲ್ಪೆ ಸೈಂಟ್ ಮೇರೀಸ್ ಮತ್ತು ಮಲ್ಪೆ ಬೀಚ್‌ಗೆ ಬರುವ ಹೊರರಾಜ್ಯ ಮತ್ತು ಹೊರಜಿಲ್ಲೆಯ ಸಾವಿರಾರು ಪ್ರವಾಸಿಗರು ಇದೇ ಮಾರ್ಗದಲ್ಲಿ ಸಂಚರಿಸುವುದರಿಂದ ವಾಹನ ದಟ್ಟಣೆ ಸಮಸ್ಯೆ ಬಿಗಡಾಯಿಸಿದೆ.
ವಿಸ್ತರಣೆಗೆ ಕಾಲ ಕೂಡಿಬಂದಿಲ್ಲ
ಇಲ್ಲಿನ ರಸ್ತೆಯ ನಿರ್ಮಾಣ ವಾಗಿರುವುದು ಸರಿ ಸುಮಾರು ಒಂದು ಶತಮಾನದ ಹಿಂದೆ. ಹೀಗಾಗಿ ಅಂದಿನ ಕಾಲದ ಜನಸಂಖ್ಯೆ, ವಾಹನಗಳ ಸಂಖ್ಯೆಗೆ ಅನುಗುಣವಾಗಿ ರಸ್ತೆ ನಿರ್ಮಾಣವಾಗಿದೆ. ಇದೇ ರಸ್ತೆಗಳ ಬದಿಯಲ್ಲಿ ವಾಣಿಜ್ಯ ಚಟುವಟಿಕೆಗಾಗಿ ಅಂಗಡಿ ಮಳಿಗೆಗಳು ತಲೆ ಎತ್ತಿವೆ. ಆದರೆ ಇಂದು ವಾಹನ, ಜನಸಂಖ್ಯೆ, ಮಳಿಗೆಗಳು 25-30ರಷ್ಟು ಪಟ್ಟು ಹೆಚ್ಚಾಗಿವೆ. ಅದಕ್ಕೆ ಪೂರಕವಾಗಿ ರಸ್ತೆಯ ವಿಸ್ತರಣೆ ಮತ್ತು ಅಭಿವೃದ್ಧಿ ಆಗಿಲ್ಲ. ಹಿಂದೆ ಇದ್ದ ಇಕ್ಕಟ್ಟಾಗಿರುವ ರಸ್ತೆ ಈಗಲೂ ಅದೇ ರೀತಿ ಇದೆ. ರಸ್ತೆ ವಿಸ್ತರಣೆ ಆಗುತ್ತದೆ ಎಂಬ ಮಾತು ಕಳೆದ 50 ವರ್ಷದಿಂದ ಕೇಳಿ ಬರುತ್ತಲೇ ಇದೆ. ರಾಜ್ಯ ಹೆದ್ದಾರಿ ಈಗ ರಾಷ್ಟ್ರೀಯ ಹೆದ್ದಾರಿಯಾಗಿ ಗುರುತಿಸಿಕೊಂಡಿದೆ. ವಿಸ್ತರಣೆಗೆ ಮಾತ್ರ ಇನ್ನೂ ಕಾಲ ಕೂಡಿ ಬಂದಿಲ್ಲ.
ಇದನ್ನೂ ಓದಿ:ಹು-ಧಾ ಮಹಾನಗರ ಪಾಲಿಕೆ ಚುನಾವಣೆ: ಎಲ್ಲಡೆ ಶಾಂತಿಯುತ ಮತದಾನ
3 ರಸ್ತೆ ಕೂಡುವಲ್ಲಿ ದಟ್ಟಣೆ
ಮುಖ್ಯ ರಸ್ತೆಯ ಮೂರು ರಸ್ತೆ ಕೂಡುವಲ್ಲಿ ವಾಹನ ದಟ್ಟಣೆಯಾಗಿ ಸಂಚಾರದ ಅವ್ಯವಸ್ಥೆಯಿಂದ ಗಂಟೆಗಟ್ಟಲೆ ಕಾಯುವ ಸ್ಥಿತಿ ಇದೆ. ಮೀನುಗಾರಿಕಾ ಬಂದರಿನಿಂದ ಹೊರ ಹೋಗುವ ಮತ್ತು ಬಂದರಿನಡೆಗೆ ಬರುವ ವಾಹನಗಳು ಜೊತೆಗೆ ತೊಟ್ಟಂ, ಕೊಡವೂರು ಮಾರ್ಗದಿಂದ ಮಲ್ಪೆಗಾಗಿ ಮುಂದೆ ಸಾಗುವ ವಾಹನಗಳು ಇವು ಮೂರು ರಸ್ತೆ ಸೇರುವಲ್ಲಿ ಒಂದಾದಾಗ ಸಮಸ್ಯೆಯಾಗುತ್ತಿದೆ. ಸಿಟಿ ಬಸ್‌ಗಳು ಪ್ರಯಾಣಿಕರನ್ನು ಈ ಮೂರು ರಸ್ತೆ ಕೂಡುವಲ್ಲಿ ನಿಲುಗಡೆಗೊಳಿಸಿ ಹತ್ತಿಸಿಕೊಳ್ಳುವುದರಿಂದಲೂ ಸಮಸ್ಯೆ ಸೃಷ್ಟಿಸುತ್ತಾರೆ ಎಂದು ನಾಗರಿಕರು ಆರೋಪಿಸುತ್ತಾರೆ.
ಇತರ ಸಮಸ್ಯೆಗಳೇನು?
– ಒಳಚರಂಡಿ ಇಲ್ಲದೆ ಕೊಳಚೆ ನೀರು ನೇರ ಹೊಳೆ ಸೇರುತ್ತದೆ.
– ಸುಸಜ್ಜಿತವಾದ ಬಸ್ ನಿಲ್ದಾಣದ ಅಗತ್ಯ.
– ಸಾರ್ವಜನಿಕ ಶೌಚಾಲಯದ ವ್ಯವಸ್ಥೆ ಇಲ್ಲ
– ವ್ಯವಸ್ಥಿತವಾದ ರಿಕ್ಷಾ ನಿಲ್ದಾಣದ ಆವಶ್ಯಕತೆ.
– ಮೀನುಗಾರಿಕೆ ಬಂದರಿನ ಮುಖ್ಯದ್ವಾರದ ಮುಂಭಾಗದ ತೋಡಿನಲ್ಲಿ ತ್ಯಾಜ್ಯ ತೆರವುಗೊಳಿಸಬೇಕಾಗಿದೆ.
ಏಕಮುಖ ಸಂಚಾರ
ಎಲ್ಲ ಸರಕು ಸಾಗಾಣಿಕೆಯ ಘನ ವಾಹನಗಳು ಮುಖ್ಯ ಪೇಟೆಯನ್ನು ಪ್ರವೇಶಿಸದೆ ಪರ್ಯಾಯ ಮಾರ್ಗವಾಗಿ ಹೊರಹೋಗುವ ವ್ಯವಸ್ಥೆ ಮಾಡುವ ಬಗ್ಗೆ ಮೀನುಗಾರ ಸಂಘದ ಸಭೆಯಲ್ಲಿ ನಿರ್ಧರಿಸಲಾಗಿದ್ದು ಈ ಬಗ್ಗೆ ಮಲ್ಪೆ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಕ್ರಮ ತೆಗೆದುಕೊಳ್ಳುವ ವ್ಯವಸ್ಥೆ ನಡೆಯುತ್ತಿದೆ.
-ದಯಾನಂದ ಕೆ. ಸುವರ್ಣ, ಅಧ್ಯಕ್ಷರು, ಮಲ್ಪೆ ಮೀನುಗಾರರ ಸಂಘ
ರಸ್ತೆ ವಿಸ್ತರಿಸಿ
ರಸ್ತೆ ವಿಸ್ತರಣೆ ಯೋಜನೆಗೆ ಕಳೆದ 50 ವರ್ಷಗಳಿಂದ ಸರ್ವೇಗಳು ನಡೆಯುತ್ತಲೇ ಬಂದಿವೆ. ಆದರೆ ಇನ್ನೂ ಕೂಡ ರಸ್ತೆಗಳ ವಿಸ್ತರಣೆಯಾಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಮುಖ್ಯವಾಗಿ ಇಲ್ಲಿನ ರಸ್ತೆಯ ವಿಸ್ತರಣೆಯ ಕೆಲಸವೂ ಅತೀ ಶೀಘ್ರದಲ್ಲಿ ಆದರೆ ಎಲ್ಲ ಸಮಸ್ಯೆಗೆ ಪರಿಹಾರ ದೊರೆತಂತಾಗುತ್ತದೆ.
-ಪಾಂಡುರಂಗ ಮಲ್ಪೆ, ಸಾಮಾಜಿಕ ಕಾರ್ಯಕರ್ತ
ಪರಿಶೀಲನೆ
ಹೆಚ್ಚುವರಿ ಸಿಬಂದಿಯನ್ನು ನೇಮಿಸಿ ಸಂಚಾರ ತಡೆಯಾಗುವುದನ್ನು ಸ್ವಲ್ಪ ಮಟ್ಟಿಗೆ ಸರಿಪಡಿಸಬಹುದಾಗಿದೆ. ಸದ್ಯದಲ್ಲೇ ಮೀನುಗಾರ ಸಂಘಟನೆ ಗಳ ಜತೆ ಸಭೆ ನಡೆಸಿ, ಅವರ ಅಭಿಪ್ರಾಯದಂತೆ ಮಂಜುಗಡ್ಡೆ ಹಾಗೂ ಇತರ ದೊಡ್ಡ ವಾಹನಗಳ ಸಂಚಾರಕ್ಕೆ ಪರ್ಯಾಯ ಮಾರ್ಗ ವನ್ನು ಕಲ್ಪಿಸುವ ಬಗ್ಗೆ ಯೋಜನೆ ಮಾಡಲಾಗಿದೆ. ಅದಕ್ಕೂ ಮುನ್ನ ಟ್ರಾಫಿಕ್ ಜಾಂ ಆಗುವ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು.
– ಶಕ್ತಿವೇಲು, ಠಾಣಾಧಿಕಾರಿ ಮಲ್ಪೆ
-ನಟರಾಜ್ ಮಲ್ಪೆ