ಪಡುಬಿದ್ರಿ: ಎರಡು ಅಂಗಡಿಗಳಲ್ಲಿ ಕಳ್ಳತನ: ಕಳ್ಳನ ಚಲನವಲನ ಸಿಸಿ ಕ್ಯಾಮೆರಾದಲ್ಲಿ ಸೆರೆ
Team Udayavani, Jan 19, 2023, 12:56 AM IST
ಪಡುಬಿದ್ರಿ: ಜರ್ಕಿನ್ ಮತ್ತು ಮಾಸ್ಕ್ ಧರಿಸಿದ್ದ ಕಳ್ಳನೋರ್ವ ಜ. 17ರ ಮಧ್ಯರಾತ್ರಿ ವೇಳೆ ಪಡುಬಿದ್ರಿಯ ಎರಡು ಅಂಗಡಿಗಳ ಬೀಗ ಮುರಿದು ಒಳ ಪ್ರವೇಶಿಸಿ 7,000 ರೂ. ನಗದು ಸಹಿತ ಲ್ಯಾಪ್ಟಾಪ್, ಮೊಬೈಲ್ ಹಾಗೂ ಬೆಲೆಬಾಳುವ ಹೊಸ ಜೀನ್ಸ್ಪ್ಯಾಂಟು, ಶರ್ಟುಗಳನ್ನು ಕದ್ದಿರುವ ಕುರಿತಾಗಿ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಡುಬಿದ್ರಿ ಮಾರ್ಕೆಟ್ ರಸ್ತೆಯ ಅಂಗ ಡಿಗೆ ನುಗ್ಗಿ 15000 ರೂ. ಬೆಲೆಬಾಳುವ ಡೆಲ್ ಲ್ಯಾಪ್ಟಾಪ್ ಹಾಗೂ ಸ್ಯಾಮ್ಸಂಗ್ ಮೊಬೈಲ್ ಫೋನನ್ನು ಕದ್ದೊಯ್ದಿದ್ದಾನೆ. ಬಳಿಕ ಕಾರ್ಕಳ ರಸ್ತೆಯ ನಯತ್ ಕಟ್ಟಡ ಸಮೀಪದ ಅಂಗಡಿಯ ಬೀಗ ಮುರಿದು ಒಳ ಪ್ರವೇಶಿಸಿ 7000ರೂ. ನಗದು, 2 ಕಾಣಿಕೆ ಡಬ್ಬಿಯಲ್ಲಿನ ನಗದು, 10 ಶರ್ಟುಗಳು ಹಾಗೂ 14 ಜೀನ್ಸ್ ಪ್ಯಾಂಟುಗಳು ಕಳವಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಕಳ್ಳನ ಚಲನವಲನಗಳು ಸಿಸಿಟಿವಿಯಲ್ಲಿ ದಾಖಲಾಗಿವೆ. ಕಳ್ಳನ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.