ಪಲಿಮಾರು ಅಣೆಕಟ್ಟು ಬಳಿ ನೂರಾರು ಎಕ್ರೆ ಕೃಷಿ ಭೂಮಿ ಜಲಾವೃತ
ಅಣೆಕಟ್ಟು ಹೊರ ಹರಿವಿನ ಜಾಗದಲ್ಲಿ ಹೂಳು ತೆಗೆಯದೆ ಸಮಸ್ಯೆ
Team Udayavani, Dec 14, 2020, 1:04 PM IST
ಪಡುಬಿದ್ರಿ, ಡಿ. 13: ನೂರಾರು ಎಕರೆ ಪ್ರದೇಶಕ್ಕೆ ನೀರೊದಗಿಸಲು ಸಣ್ಣ ನೀರಾವರಿ ಇಲಾಖೆ ಮೂಲಕ ಸುಮಾರು 7.5 ಕೋಟಿ ರೂ. ವೆಚ್ಚದಲ್ಲಿ ಪಲಿಮಾರಿನಲ್ಲಿ ಶಾಂಭವಿ ನದಿಗೆ ಉಪ್ಪು ನೀರು ತಡೆ ಅಣೆಕಟ್ಟು ನಿರ್ಮಿಸಲಾಗಿದೆ. ಆದರೆ ನೀರ ಹೊರ ಹರಿವಿನ ಜಾಗದಲ್ಲಿ ಹೂಳು ತುಂಬಿದ್ದು ಇದರಿಂದ ನೂರಾರು ಎಕರೆ ಕೃಷಿಭೂಮಿ ಜಲಾವೃತವಾಗಿವೆ. ಜತೆಗೆ ಗ್ರಾಮಗಳಿಗೆ ಮುಳುಗಡೆ ಭೀತಿ ಉಂಟಾಗಿದೆ.
ಹೊರಹರಿವು ಪ್ರದೇಶದಲ್ಲಿ ಹೂಳು :
ಸುಮಾರು 600 ಎಕರೆ ಪ್ರದೇಶಕ್ಕೆ ನೀರೊದಗಿಸುವ ಸಲುವಾಗಿ 25 ವರ್ಷಗಳ ಹಿಂದೆ ಈ ಪ್ರದೇಶದಲ್ಲಿ ನಿರ್ಮಿಸಿದ್ದ ಅಣೆಕಟ್ಟಿನ ಕಾಮಗಾರಿ ದೋಷದಿಂದ ಕೂಡಿದೆ. ಹಲವಾರು ಬಾರಿ ದುರಸ್ತಿ ಮಾಡಿದ್ದರೂ ಸಮಸ್ಯೆಗೆ ಮುಕ್ತಿ ದೊರೆತಿಲ್ಲ. ಈ ಹಿನ್ನೆಲೆಯಲ್ಲಿ ಹಳೆಯ ಅಣೆಕಟ್ಟೆ ಬಳಿಯಲ್ಲಿಯೇ ಸಣ್ಣ ನೀರಾವರಿ ಇಲಾಖೆ ಮೂಲಕ ವರ್ಷದ ಹಿಂದಷ್ಟೇ ನೂತನ ಅಣೆಕಟ್ಟನ್ನು ನಿರ್ಮಿಸಲಾಗಿತ್ತು. ಹದಿನೈದು ದಿನಗಳ ಹಿಂದೆ ಈ ಅಣೆಕಟ್ಟಿಗೆ ಹಲಗೆ ಅಳವಡಿಸುವ ಕಾರ್ಯ ಮಾಡಲಾಗಿತ್ತು. ಪರಿಣಾಮ ಅಣೆಕಟ್ಟಿನಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ. ಆದರೆ ನೀರಿನ ಹೊರ ಹರಿವಿಗೆ ಸಂಪರ್ಕಿಸುವ ತೋಡುಗಳು ಹೂಳು ತುಂಬಿವೆ. ಇದರ ಪರಿಣಾಮ ಉಡುಪಿ ಜಿಲ್ಲೆಯ ಪಲಿಮಾರು, ಇನ್ನ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಬಳ್ಕುಂಜೆ ಗ್ರಾಮಗಳ ನೂರಾರು ಎಕರೆ ಪ್ರದೇಶಗಳು ಜಲಾವೃತವಾಗಿವೆ.
ಕಾಲುವೆ ಸ್ಲ್ಯಾಬ್ ಕುಸಿತ :
ಈಗ ನಿರ್ಮಾಣವಾಗಿರುವ ಅಣೆಕಟ್ಟನ್ನೂ ಹಿಂದಿನ ಅಣೆಕಟ್ಟಿನಷ್ಟೇ 7.5 ಮೀಟರ್‌ವರೆಗೆ ಎತ್ತರಿಸಿ ಅಣೆಕಟ್ಟೆಯ ನಾಲ್ಕು ಕಡೆ 100 ಮೀ. ವ್ಯಾಪ್ತಿಯಲ್ಲಿ ನದಿಗೆ ತಡೆಗೋಡೆ ನಿರ್ಮಾಣ ಮಾಡಲಾಗಿದೆ. ಬಳ್ಕುಂಜೆಗ್ರಾಮಕ್ಕೆ ನೀರು ಪೂರೈಸಲು ಕಿರು ಕಾಲುವೆಯೊಂದನ್ನು ನಿರ್ಮಿಸಲಾಗಿತ್ತು. ಯೋಜನೆ ಪೂರ್ಣಗೊಂಡ ಕೆಲವೇ ತಿಂಗಳಿನಲ್ಲಿ ಆ ಕಾಲುವೆ ಸ್ಲ್ಯಾಬ್ ಕುಸಿದು ಹಾನಿಯಾಗಿರುವುದು ಕಾಮಗಾರಿಯ ಗುಣಮಟ್ಟವನ್ನು ಪ್ರಶ್ನಿಸುವಂತಿದೆ. ಅಣೆಕಟ್ಟು ನಿರ್ಮಾಣ ಸಂದರ್ಭದಲ್ಲಿಯೇ ಕೃಷಿ ಪ್ರದೇಶಗಳಿಂದ ನೀರು ಸರಾಗವಾಗಿ ಹರಿಯುವಂತೆ ಇರುವ ತೋಡುಗಳ ಹೂಳೆತ್ತಲು ಅಧಿಕಾರಿಗಳು ಗಮನ ನೀಡಬೇಕು ಎನ್ನುವುದು ಇಲ್ಲಿನವರ ಬೇಡಿಕೆಯಾಗಿದೆ.
ಜಲಾವೃತ ಕೃಷಿ ಭೂಮಿ :
ಅಣೆಕಟ್ಟಿನ ನೀರು ನುಗ್ಗಿದ ಪರಿಣಾಮ ಕೃಷಿ ಭೂಮಿ ಮುಳುಗಡೆಯಾಗಿದೆ. ತರಕಾರಿ ಗಿಡಗಳು ಕೊಳೆತು ಹೋಗಿವೆ. ನಾಲ್ಕು ಬಾವಿಗಳ ನೀರು ಮಲಿನಗೊಂಡು ಕುಡಿಯುವ ನೀರಿಗೆ ಪರದಾಡುವಂತಾಗಿದೆ. ರೈತರ ಬವಣೆ ನಿರಂತರವಾಗಿದ್ದು ಕೇಳುವವರಿಲ್ಲವಾಗಿದೆ. ಮಳೆಗಾಲದಲ್ಲಿ ನೆರೆಯಿಂದಾಗಿ ಭತ್ತದ ಕೃಷಿ ಮಾಡ ಲಾಗಿಲ್ಲ. ಈಗ ಸುಗ್ಗಿ ಬೆಳೆಯನ್ನೂ ಬೆಳೆಯಲಾಗುತ್ತಿಲ್ಲ. ಕೃಷಿಕರು ಅತಂತ್ರರಾಗಿದ್ದಾರೆ. ಜಾನುವಾರುಗಳ ಮೇವಿಗೂ ತತ್ವಾರ ಉಂಟಾಗಿದೆ. ಈ ಬಗ್ಗೆ ಗ್ರಾಮಸ್ಥರು ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.
ಹಿಂಗಾರು ಕೃಷಿ ಕಷ್ಟ :
ಅಣೆಕಟ್ಟಿನ ಹಲಗೆ ಅಳವಡಿಕೆಯಿಂದ ಬಳ್ಕುಂಜೆ ಭಾಗದ ಕರ್ನಿರೆ, ಉಳೆಪಾಡಿ, ಬಳ್ಕುಂಜೆ ಪ್ರದೇಶಗಳ ಸುಮಾರು 25 ಎಕರೆ ಕೃಷಿಭೂಮಿ ಜಲಾವೃತವಾಗಿದೆ. ಮೇಲ್ಮಟ್ಟದಲ್ಲಿ ನೀರಿಲ್ಲದಿದ್ದರೂ ಭೂಮಿಯಲ್ಲಿ ಒರೆತ ಹೆಚ್ಚಾಗಿ ಹಿಂಗಾರು ಕೃಷಿ ಮಾಡುವುದು ಕಷ್ಟಸಾಧ್ಯವಾಗುತ್ತಿದೆ ಎಂದು ಪ್ರಗತಿಪರ ಕೃಷಿಕ ಉಳೆಪಾಡಿಯ ರಿಚರ್ಡ್ ಡಿ‘ಸೋಜಾ ಹೇಳುತ್ತಾರೆ.
ಅಣೆಕಟ್ಟಿನ ಸಮಸ್ಯೆ ಬಗ್ಗೆ ತಿಳಿದಿದೆ. ಪ್ರತಿ ವರ್ಷ ಜನವರಿ ವರೆಗೆ ಈ ಸಮಸ್ಯೆ ಇದೆ. ಈಗಾಗಲೇ ಕೆಲ ಹಲಗೆಗಳನ್ನು ತೆಗೆಯಲು, ಕಾಲುವೆಯಲ್ಲಿ ನೀರು ಹೊರಬಿಡಲು ಸೂಚಿಸಲಾಗಿದೆ. ಕುಸಿದ ಕಾಲುವೆ ಸ್ಲಾéಬ್ ದುರಸ್ತಿ ಮಾಡಲಾಗುವುದು. ಇನ್ನು ಪ್ರತ್ಯೇಕ ಹೂಳೆತ್ತುವಿಕೆಗೆ ಸದ್ಯ ಇಲಾಖೆಯಲ್ಲಿ ಅನುದಾನ ಲಭ್ಯವಿಲ್ಲ. – ಶೇಷಕೃಷ್ಣ ರಾವ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್, ನೀರಾವರಿ ಇಲಾಖೆ
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444