ಬೈಂದೂರು ಭಾಗದಲ್ಲಿ ಯಶಸ್ಸು ಕಂಡ ಪೊಲೀಸರ ಕ್ರಮ

ಹೊಸ ಸಾರಿಗೆ ನಿಯಮ ಪರಿಣಾಮ, ಪಟ್ಟಣಕ್ಕೆ ಬರುತ್ತಿಲ್ಲ ಗ್ರಾಮೀಣ ಭಾಗದ ವಾಹನ

Team Udayavani, Sep 20, 2019, 5:35 AM IST

ಬೈಂದೂರು: ಇಲ್ಲಿನ ಗ್ರಾಮೀಣ ಭಾಗದಲ್ಲಿ ಕೊನೆಗೂ ರೋಡ್‌ ರೋಮಿಯೊ ಬೈಕ್‌ ಸವಾರರ ಅಬ್ಬರಗಳಿಗೊಂದಷ್ಟು ಬ್ರೇಕ್‌ ಬಿದ್ದಿದೆ. ಕಳೆದೊಂದು ವಾರದಿಂದ ಗಲ್ಲಿಗಲ್ಲಿಗಳಲ್ಲಿ ಪೊಲೀಸರ ಕಟ್ಟುನಿಟ್ಟಿನ ಕ್ರಮದಿಂದಾಗಿ ಸೂಕ್ತ ದಾಖಲೆಗಳಿಲ್ಲದೆ ಬೈಕ್‌ ಹತ್ತಲು ಹಿಂದೆಮುಂದೆ ನೋಡುವಂತಾಗಿದೆ.ಮಾತ್ರವಲ್ಲದೆ ಬೈಂದೂರು ಭಾಗದ ಪ್ರಮುಖ ರಸ್ತೆಗಳಲ್ಲಿ ದ್ವಿಚಕ್ರ ವಾಹನ ಸವಾರರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿಬಿಟ್ಟಿದೆ.

ಕಠಿಣ ಕಾನೂನು ಕಬೀ ಕುಶ್‌, ಕಬೀ ಗಮ್‌
ಹೊಸ ಸಾರಿಗೆ ನಿಯಮ ಬೈಕ್‌ ಸವಾರರ ಪಾಲಿಗೆ ಕಬೀ ಕುಶ್‌ ಕಬೀ ಗಮ್‌ ಎನ್ನುವಂತಾಗಿದೆ. ಕಾರಣವೇನೆಂದರೆ ಕಡಿಮೆ ಬೆಲೆಗೆ ಖರೀದಿಸಿದ ಸೆಕೆಂಡ್‌ ಹ್ಯಾಂಡ್‌ ಬೈಕ್‌ ಚಲಾಯಿಸುವಾಗ ಆರಕ್ಷಕರ ತಪಾಸಣೆಗೆ ಸಿಕ್ಕಿಬಿದ್ದರೆ ಬೈಕ್‌ ದರಕ್ಕಿಂತ ದಂಡದ ಪ್ರಮಾಣವೆ ಅಧಿಕವಾಗಿ ಬಿಡುತ್ತಿದೆ. ರಸ್ತೆ ಸುರಕ್ಷತೆ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಈ ಕ್ರಮ ಸ್ವಾಗತಾರ್ಹ.ಆದರೆ ಗ್ರಾಮೀಣ ಭಾಗದಲ್ಲಿ ಕೆಲವೊಮ್ಮೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಕಾರಣವೇನೆಂದರೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಗತ್ಯ ಕ್ರಮ ಆವಶ್ಯಕತೆಯಿದೆ.ಆದರೆ ಕೃಷಿ ಚಟುವಟಿಕೆ ಇನ್ನಿತರ ಅಗತ್ಯ ಸಂದರ್ಭದಲ್ಲಿ ತುರ್ತು ಕೆಲಸಕ್ಕಾಗಿ ಹೋಗುವಾಗ ಸಾಮಾನ್ಯವಾಗಿ ನಿಯಮ ಪಾಲಿಸುವುದಿಲ್ಲ.ಈ ಸಂದರ್ಭದಲ್ಲಿ ಸಿಕ್ಕಿಬಿದ್ದರೆ ಮಾತ್ರ ದಂಡ ಪಾವತಿಸುವುದು ಅನಿವಾರ್ಯವಾಗಿರುತ್ತದೆ.

ಕಾನೂನು ಎಲ್ಲಾ ಸಂದರ್ಭಗಳಲ್ಲೂ ಒಂದೆ ನಿಯಮವಾಗಿರುವ ಕಾರಣ ಹೊಸನಿಯಮ ಸಾಕಷ್ಟು ಬದಲಾವಣೆ ಉಂಟು ಮಾಡಿದೆ. ಬೈಂದೂರು ವೃತ್ತ ನಿರೀಕ್ಷಕರ ವ್ಯಾಪ್ತಿಯ ಗಂಗೊಳ್ಳಿ, ಕೊಲ್ಲೂರು ಹಾಗೂ ಬೈಂದೂರು ಠಾಣಾ ವ್ಯಾಪ್ತಿಯಲ್ಲಿ ಆರಕ್ಷಕ ಇಲಾಖೆ ಕಟ್ಟುನಿಟ್ಟಿನ ಕ್ರಮಕೈಗೊಂಡಿರುವುದರಿಂದ ಸರಕಾರದ ಆದೇಶ ಯಶಸ್ವಿಯಾಗಿ ಅನುಷ್ಠಾನಗೊಂಡಿದೆ.

ಮಾತ್ರವಲ್ಲದೆ ಸಾರ್ವಜನಿಕರು ಕೂಡ ಸೂಕ್ತ ಮುಂಜಾಗ್ರತೆ ವಹಿಸುವಂತೆ ಮಾಡಿದೆ. ಕಳೆದೊಂದು ವಾರದಿಂದ ದ್ವಿಚಕ್ರ ಅಪಘಾತ ಕೂಡ ಇಳಿಮುಖವಾಗಿದೆ. ಇದರ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ನಿಯಮ ಕುರಿತ ನೂರಾರು ಟ್ರೋಲ್‌ಗ‌ಳು ಹರಿದಾಡುತ್ತಿದೆ.

ಹಳ್ಳಿಗಳಿಂದ ಬೈಂದೂರು
ಪೇಟೆಗೆ ಬರುತ್ತಿಲ್ಲ ಬೈಕ್‌ಗಳು
ಹೊಸ ನಿಯಮ ಏಫೆಕ್ಟ್ ಎಷ್ಟರ ಮಟ್ಟಿಗೆ ಇದೆಯೆಂದರೆ ಕಳೆದ ನಾಲ್ಕೈದು ದಿನಗಳಿಂದ ಆರಕ್ಷಕ ತಪಾಸಣೆಗೆ ಹೆದರಿ ಹಳ್ಳಿಗಳಿಂದ ಬೈಂದೂರಿಗೆ ಬರುವವರು ಪೇಟೆಗೆ ಬೈಕ್‌ ತರುತ್ತಿಲ್ಲ.

ಇಲ್ಲಿನ ಗಂಗಾನಾಡು ರಸ್ತೆ, ಪಡುವರಿ ರಸ್ತೆ ಗಳಲ್ಲಿ ವಾಹನ ಇಟ್ಟು ಕಾಲ್ನಡಿಗೆಯಲ್ಲಿ ಪೇಟೆಗೆ ಬರುತ್ತಿದ್ದಾರೆ. ನಗರ ಪ್ರದೇಶದ ಸುತ್ತಲಿನ ರಸ್ತೆಗಳಲ್ಲಿ ಸಾಲು ಸಾಲು ವಾಹನ ನಿಲ್ಲುತ್ತಿದೆ. ನಿಯಮಕ್ಕೆ ಹೆದರಿ ಪೇಟೆಗೆ ಜನ ಬಾರದಿರುವ ಕಾರಣ ವ್ಯಾಪಾರ ಕೂಡ ಇಳಿಮುಖವಾಗಿದೆ ಎನ್ನುವುದು ಸ್ಥಳೀಯ ವ್ಯಾಪಾರಸ್ಥರ ಅಭಿಪ್ರಾಯವಾಗಿದೆ.

ಠಾಣಾಧಿಕಾರಿಗೆ ಪ್ರಶಂಸಾಪತ್ರ
ಸಕಾಲ ಸೇವೆಗಳ ಅಧಿನಿಯಮದಡಿ 103 ಸೇವೆಗಳನ್ನು ನಿಗದಿತ ಕಾಲಮಿತಿಯಡಿ ಒದಗಿಸಿ ಸಕಾಲ ಸೇವೆಗಳ ಜಾರಿಯಲ್ಲಿ ಠಾಣಾ ವ್ಯಾಪ್ತಿಯ ಸಿಬಂದಿ ಹಾಗೂ ಅಧಿಕಾರಿಗಳ ಮುತುವರ್ಜಿಯನ್ನು ಶ್ಲಾಘಿಸಿ ಠಾಣಾಧಿಕಾರಿ ತಿಮ್ಮೇಶ್‌ ಅವರು ಸಕಾಲ ಮಿಷನ್‌ ವತಿಯಿಂದ ಜಿಲ್ಲಾಧಿಕಾರಿಗಳ ಪ್ರಶಂಸಾ ಪತ್ರಕ್ಕೆ ಭಾಜನರಾಗಿದ್ದಾರೆ.

ಜವಾಬ್ದಾರಿ
ಹೊಸ ನಿಯಮದ ಪ್ರಕಾರ ಮೇಲಧಿಕಾರಿಗಳ ಆದೇಶದಂತೆ ಬೈಂದೂರು ವ್ಯಾಪ್ತಿಯಲ್ಲಿ ಇಲಾಖೆ ಸಮರ್ಪಕವಾಗಿ ಕ್ರಮಕೈಗೊಂಡಿದೆ. ಹೈವೇ ಪೊಲೀಸ್‌, ಹೊಯ್ಸಳ ,ಠಾಣಾಧಿಕಾರಿಗಳು,ಇಂಟರ್‌ಸೆಪ್ಟರ್‌ ವಿಭಾಗಗಳಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗುತ್ತಿದೆ. ಸಾರ್ವಜನಿಕರಿಗೂ ಈ ಕುರಿತು ಸಮರ್ಪಕ ಮಾಹಿತಿ ನೀಡಲಾಗಿದೆ.ಇಲಾಖೆಯೊಂದಿಗೆ ಸಹಕರಿಸುವುದು ಹಾಗೂ ಕಾನೂನು ಪಾಲಿಸಬೇಕಾಗಿರುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ.
-ಪರಮೇಶ್ವರ ಗುನಗ,
ವೃತ್ತ ನಿರೀಕ್ಷಕರು ಬೈಂದೂರು

ಕಾನೂನು ಪಾಲಿಸಬೇಕು
ಗ್ರಾಮೀಣ ಭಾಗದ ಅದರಲ್ಲೂ ಹಳ್ಳಿಯಿಂದ ಬರುವ ಅದೆಷ್ಟೋ ಜನರ ಆಶಯ, ನನ್ನ ದೇಶ ಬದಲಾಗಬೇಕು. ಅದಕ್ಕಾಗಿ ರೂಪಿಸಿದ ಕಾನೂನುಗಳನ್ನು ಎಲ್ಲರೂ ಪಾಲಿಸಲೇಬೇಕು. ಆಗ ವ್ಯವಸ್ಥೆಗಳು ತನ್ನಿಂದ ತಾನಾಗಿಯೇ ಸರಿಯಾಗುತ್ತವೆ. ಸರಕಾರದ ರಸ್ತೆ ನಿಯಮ ಪಾಲಿಸಿದ ಮೇಲೆ ರಸ್ತೆ ಸರಿಮಾಡಿಸಿ ಎಂದು ಕೇಳುವ ಹಕ್ಕು ನಮ್ಮದಾಗುತ್ತದೆ. ಹೆಲ್ಮೆಟ್‌ ಬಳಕೆ, ವಾಹನದ ಎಲ್ಲ ಡಾಕ್ಯುಮೆಂಟ್ಸ್‌ ಗಳನ್ನು ಇಟ್ಟುಕೊಳ್ಳುವುದು, ರಸ್ತೆಯ ಎಲ್ಲ ನಿಯಮಗಳನ್ನು ಸರಿಯಾಗಿ ಪಾಲಿಸುವುದು ಮಾಡಿದರೆ ನಮ್ಮನ್ನು ಯಾವ ಅಧಿಕಾರಿಗಳೂ ಪ್ರಶ್ನಿಸುವುದಿಲ್ಲ. ಹೀಗಾದಲ್ಲಿ ಮಾತ್ರ ನಮ್ಮ ದೇಶವೂ ಬದಲಾವಣೆಯತ್ತ ತೆರೆದುಕೊಳ್ಳುವುದಕ್ಕೆ, ಅಭಿವೃದ್ಧಿಯಾಗುವುದಕ್ಕೆ ಸಾಧ್ಯ.
-ಸುಕುಮಾರ ಶೆಟ್ಟಿ , ಸೂರಕುಂದ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ