ವಿದ್ಯಾರ್ಥಿ ಸಮುದಾಯ ಕೇಂದ್ರೀಕೃತ ಗಾಂಜಾ ಜಾಲ

ಕಡಿವಾಣ ಹಾಕಲು ಪೊಲೀಸರಿಂದ ಕೇಸು, ಕ್ಲಾಸು!

Team Udayavani, Sep 26, 2019, 5:15 AM IST

ಉಡುಪಿ: ವಿದ್ಯಾರ್ಥಿಗಳನ್ನು ಕೇಂದ್ರೀಕರಿಸಿ ಕಾರ್ಯಾಚರಿಸುತ್ತಿರುವ “ಗಾಂಜಾ ಜಾಲ’ವನ್ನು ಮಟ್ಟ ಹಾಕುವ ಜತೆಗೆ ಯುವಜನರನ್ನು ಮಾದಕ ವ್ಯಸನದಿಂದ ದೂರವಿರಿಸಲು ಜಿಲ್ಲೆಯ ಪೊಲೀಸರು “ಕೇಸು ಮತ್ತು ಕ್ಲಾಸು’ ಎರಡಕ್ಕೂ ಆದ್ಯತೆ ನೀಡುತ್ತಿದ್ದು, ಫ‌ಲಕಾರಿಯಾಗಿದೆ.

ಅಂತಾರಾಷ್ಟ್ರೀಯ ಶಿಕ್ಷಣ ನಗರಿ ಮಣಿಪಾಲ, ಪ್ರವಾಸಿ ತಾಣಗಳಾಗಿರುವ ಉಡುಪಿ, ಮಲ್ಪೆ ಪರಿಸರವನ್ನು ಮುಖ್ಯ ಮಾರುಕಟ್ಟೆಯನ್ನಾಗಿಸಿರುವ ಪೆಡ್ಲರ್‌ಗಳು (ಮಾದಕ ದ್ರವ್ಯ ಮಾರಾಟಗಾರರು) ಇತರ ಎಲ್ಲ ಮಾದಕ ದ್ರವ್ಯಗಳಿಗಿಂತ ಹೆಚ್ಚು ಗಾಂಜಾವನ್ನೇ ಬಿಕರಿ ಮಾಡುತ್ತಿದ್ದಾರೆ.

ಒಂದೆಡೆ ಕಾನೂನಿನಡಿ ಬಿಗಿ ಕ್ರಮ ಕೈಗೊಂಡಿರುವ ಪೊಲೀಸರು ಇನ್ನೊಂದೆಡೆ ಜಾಗೃತಿ ಕಾರ್ಯ ಕ್ರಮಗಳಿಗೂ ಆದ್ಯತೆ ನೀಡುತ್ತಿದ್ದಾರೆ. ಶಾಲಾ ಕಾಲೇಜುಗಳಲ್ಲಿ ಈಗಾಗಲೇ 93 ಕಾರ್ಯಕ್ರಮ ನಡೆಸಿ ಜಾಗೃತಿ ಮೂಡಿಸುವ ಯತ್ನ ಮಾಡಿದ್ದಾರೆ. ಇದು ಮುಂದುವರಿಯುತ್ತಿದ್ದು, ಯುವಜನರು ಬೆಂಬಲ ನೀಡುತ್ತಿದ್ದಾರೆ.

ಸಾಗಾಟಕ್ಕೆ ತಡೆ
ಬಸ್‌ಗಳಲ್ಲಿ ಪಾರ್ಸೆಲ್‌ ಮೂಲಕ ಸಾಗಿಸುತ್ತಿದ್ದ “ಸಾಂಪ್ರದಾಯಿಕ ವಿಧಾನ’ಕ್ಕೂ ಕೊರಿಯರ್‌ ಮೂಲಕ ರವಾನೆಗೂ ಕಡಿವಾಣ ಹಾಕಲಾಗಿದೆ. ರೈಲು ಮತ್ತು ಇತರ ವಾಹನಗಳಲ್ಲಿ ನಗರ ಪ್ರವೇಶಿಸುವ ಗಾಂಜಾ ತಡೆಯಲು ಹೊಸ ರೀತಿಯ ಕಾರ್ಯಾಚರಣೆಗೆ ಮುಂದಾಗಿದ್ದಾರೆ. ರೈಲುಗಳಲ್ಲಿ ಸಾಗಾಟದ 3 ಪ್ರಕರಣಗಳು ಪತ್ತೆಯಾಗಿವೆ.

ಸ್ನೇಹಿತರ ರೂಪದಲ್ಲಿ
ಸ್ನೇಹಿತರು, ಸಂಬಂಧಿಕರು ಎಂದು ಪರಿಚಯಿಸಿಕೊಂಡು ವಿದ್ಯಾರ್ಥಿಗಳು ಇರುವ ಫ್ಲ್ಯಾಟ್‌, ಪಿಜಿಗಳ ಬಳಿಗೆ ವಾಹನಗಳಲ್ಲಿ ಬಂದು ವ್ಯವಹಾರ ಕುದುರಿಸುತ್ತಿರುವವರ ಮಾಹಿತಿಯೂ ಲಭ್ಯವಾಗಿದ್ದು, ಅಂಥವರ ಮೇಲೂ ಕಣ್ಣಿಟ್ಟಿದ್ದಾರೆ.

ಅಲ್ಲಿ 20 ಸಾವಿರ, ಇಲ್ಲಿ 50 ಸಾವಿರ
ಪುಣೆ, ಮಹಾರಾಷ್ಟ್ರ, ಬಿಹಾರಗಳಲ್ಲಿ ಕೆಜಿಗೆ 10 ಸಾವಿರದಿಂದ 20 ಸಾವಿರ ರೂ. ತನಕ (ಗುಣಮಟ್ಟಕ್ಕೆ ತಕ್ಕಂತೆ) ಸಿಗುವ ಗಾಂಜಾ ಉಡುಪಿಯಲ್ಲಿ ಕೆಜಿಗೆ 50 ಸಾವಿರ ರೂ.ಗೆ ಬಿಕರಿಯಾಗುತ್ತಿದೆ. 20 ಗ್ರಾಂ ಪ್ಯಾಕೇಟನ್ನು 1,000 ರೂ.ಗೆ ಮಾರಾಟ ಮಾಡಲಾಗುತ್ತದೆ. ಸಿಗರೇಟ್‌ ಸೇದುವ ಯುವಕರು ಬಳಿಕ ಗಾಂಜಾ ಚಟ ಬೆಳೆಸಿಕೊಳ್ಳುವುದು ಕಂಡುಬರುತ್ತಿದೆ. ಅದಕ್ಕಾಗಿ ಹಣ ಬೇಕಾದಾಗ ಮಾರಾಟಗಾರ (ಪೆಡ್ಲರ್‌) ಆಗಿ ಬದಲಾಗುತ್ತಾರೆ. ಮುಂದೆ ಚಟ- ವ್ಯವಹಾರ ಜತೆಜತೆಯಲ್ಲೇ ಸಾಗುತ್ತದೆ.

20 ಕೆಜಿಗೂ ಅಧಿಕ ಗಾಂಜಾ ವಶ !
ಜೂ. 26ರಿಂದ ಇದುವರೆಗೆ ಜಿಲ್ಲೆಯ ಪೊಲೀಸರು 20 ಕೆಜಿಗೂ ಅಧಿಕ ಗಾಂಜಾ ಸ್ವಾಧೀನಪಡಿಸಿಕೊಂಡಿದ್ದಾರೆ. 62ಕ್ಕೂ ಅಧಿಕ ಪ್ರಕರಣ ದಾಖಲಿಸಿ 67ಕ್ಕೂ ಅಧಿಕ ಮಂದಿಯನ್ನು ಬಂಧಿಸಿದ್ದಾರೆ. ಗಾಂಜಾ ಸೇವಿಸಿದ 56 ಮಂದಿಯನ್ನು, ಮಾರಾಟಕ್ಕೆ ಸಂಬಂಧಿಸಿದ 7 ಪ್ರಕರಣಗಳಲ್ಲಿ 9 ಮಂದಿಯನ್ನು ಬಂಧಿಸಲಾಗಿದೆ. ಜೂ. 26ರಂದು 5 ಕೆಜಿ 280 ಗ್ರಾಂ ಗಾಂಜಾ, ಜು. 5ರಂದು 59 ಗ್ರಾಂ, ಜು. 6ರಂದು 2 ಕೆಜಿ 550 ಗ್ರಾಂ, ಜು. 24ರಂದು 2 ಕೆಜಿ 200 ಗ್ರಾಂ ಗಾಂಜಾ ವಶವಾಗಿದೆ. ಇದರಲ್ಲಿ ಕೆಲವು ವಿದ್ಯಾರ್ಥಿಗಳು, ಕಳೆದ ವರ್ಷವಷ್ಟೇ ವಿದ್ಯಾಭ್ಯಾಸ ಮುಗಿಸಿದವರು “ಪೆಡ್ಲರ್‌’ಗಳಾಗಿದ್ದರು. ಈ ವರ್ಷದ ಜೂ. 26ರಿಂದ ಜು. 27ರ ನಡುವಿನ ಒಂದು ತಿಂಗಳ ಅವಧಿಯಲ್ಲಿಯೇ ಉಡುಪಿ, ಮಣಿಪಾಲ ಪರಿಸರದಲ್ಲಿ ಗಾಂಜಾ ಸಂಬಂಧ 45 ಮಂದಿಯನ್ನು ಬಂಧಿಸಲಾಗಿದೆ!

ಇಲಾಖೆ ಗಾಂಜಾ ಪ್ರಕರಣಗಳನ್ನು ಭೇದಿಸುವಲ್ಲಿ ಸಾಕಷ್ಟು ಯಶಸ್ವಿಯಾಗಿದೆ. ಕಾರ್ಯಾಚರಣೆ ಹಾಗೂ ಜಾಗೃತಿ ಕಾರ್ಯಕ್ರಮ ಎರಡೂ ಮುಂದುವರಿಯಲಿವೆ.ಸಾರ್ವಜನಿಕರ ಸಹಭಾಗಿತ್ವವೂ ಅಗತ್ಯ. ಜತೆಗೆ ಯುವಜನತೆ ಎಚ್ಚೆತ್ತುಕೊಳ್ಳಬೇಕು. ಪಾರ್ಸೆಲ್‌ ಸಾಗಿಸುವವರು ಅದರೊಳಗಿರುವ ವಸ್ತುವಿನ ಮಾಹಿತಿ ಪಡೆಯಬೇಕು. ಇಲ್ಲವಾದರೆ ಅವರೂ ತಪ್ಪಿತಸ್ಥರಾಗುತ್ತಾರೆ.
– ನಿಶಾ ಜೇಮ್ಸ್‌, ಎಸ್‌ಪಿ, ಉಡುಪಿ

ಮಾಹಿತಿ ಕೊಡಿ
ಸಾರ್ವಜನಿಕರಿಗೆ ಯಾರ ಮೇಲಾದರೂ ಗಾಂಜಾ ಸೇವನೆಯ ಸಂದೇಹ ಬಂದರೆ ತತ್‌ಕ್ಷಣ ಸೆನ್‌ ಪೊಲೀಸ್‌ ಠಾಣೆ (0820-2530021) ಅಥವಾ ಸಮೀಪದ ಠಾಣೆಗೆ ಮಾಹಿತಿ ನೀಡಬೇಕು. ಇದರಿಂದ ಗಾಂಜಾ ಮಾರಾಟಗಾರರ ಪತ್ತೆ ಸುಲಭವಾಗುತ್ತದೆ. ಮಾಹಿತಿದಾರರ ವಿವರವನ್ನು ಗೌಪ್ಯವಾಗಿಡುತ್ತೇವೆ.
– ಸೀತಾರಾಮ್‌, ಇನ್ಸ್‌ಪೆಕ್ಟರ್‌, ಸೆನ್‌ ಪೊಲೀಸ್‌ ಠಾಣೆ, ಉಡುಪಿ

– ಸಂತೋಷ್‌ ಬೊಳ್ಳೆಟ್ಟು

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ