ಕಾರವಾರ ಗ್ರಂಥಾಲಯಕ್ಕೆ ಸಿಬ್ಬಂದಿ ಕೊರತೆ

Team Udayavani, Oct 30, 2019, 3:01 PM IST

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಕೇಂದ್ರದ ಗ್ರಂಥಾಲಯವೂ ಆಯಕಟ್ಟಿನ ಜಾಗದಲ್ಲಿದೆ. ಜಿಲ್ಲಾ ನ್ಯಾಯಾಲಯದ ಎದುರೇ ಇರುವ ಕೇಂದ್ರ ಗ್ರಂಥಾಲಯದಲ್ಲಿ 1.10 ಲಕ್ಷ ಗ್ರಂಥಗಳಿವೆ.

ಓದುಗರು ಕಡಿಮೆ ಇದ್ದರೂ ನಿಯತವಾಗಿ ಗ್ರಂಥಾಲಯಕ್ಕೆ ಬರುವ ಸಾರ್ವಜನಿಕರು, ವಿದ್ಯಾರ್ಥಿಗಳು ಇದ್ದಾರೆ. ಮೊಬೈಲ್‌ ಮತ್ತು ಸಾಮಾಜಿಕ ಜಾಲತಾಣದ ಪರಿಣಾಮ ಪುಸ್ತಗಳನ್ನು ಮನೆಗೆ ಕೊಂಡೊಯ್ದು ಓದುವ ಓದುಗನ ಸಂಖ್ಯೆ ಇಳಿಮುಖವಾಗಿದೆ. ಆದರೆ ಗ್ರಂಥಾಲಯದಲ್ಲಿ ನಿರಾಶಾದಾಯಕ ವಾತಾವರಣವೇನಿಲ್ಲ. ವಿದ್ಯುತ್‌, ಫ್ಯಾನ್‌ಗಳು ಕಾರ್ಯಚಾಲನೆಯಲ್ಲಿದೆ. ಕುಡಿಯುವ ನೀರಿನ ಆಧುನಿಕ ವ್ಯವಸ್ಥೆ ಇಲ್ಲ. ಎಲ್ಲ ಕಡೆಯಂತೆ ಇಲ್ಲಿನ ಗ್ರಂಥಾಲಯ ಸಿಬ್ಬಂದಿ ಕೊರತೆ ಎದುರಿಸುತ್ತಿದೆ.

ಗ್ರಂಥಾಲಯ ಕಟ್ಟಿದ ಇತಿಹಾಸ ರೋಚಕ: 1864ರಲ್ಲಿ ಕಾರವಾರದಲ್ಲಿ ಜಿಲ್ಲಾ ನ್ಯಾಯಾಧೀಶರಾಗಿದ್ದ ಆರ್‌.ವೈಟ್‌ ನೇತೃತ್ವದಲ್ಲಿ ಸಭೆಯೊಂದು ನಡೆದು ಕಾರವಾರದಲ್ಲಿ ಸಾರ್ವಜನಿಕ ಗ್ರಂಥಾಲಯ ಹಾಗೂ ವಸ್ತು ಸಂಗ್ರಹಾಲಯ ನಿರ್ಮಾಣಕ್ಕೆ ನಿರ್ಧರಿಸಿತು. ಆ ಸಭೆಯಲ್ಲಿ ಎಂ.ಜೆ. ಸ್ಟುವರ್ಟ್‌, ಎಚ್‌. ಮ್ಯಾಕ್ಸವೆಲ್‌, ಐ. ಪ್ಲೆಮಿಂಗ್‌, ಜಿಲ್ಲಾಧಿಕಾರಿ ಎಚ್‌. ಇಂಗ್ಲ್, ಲೆಫ್ಟ್ನೆಂಟ್‌ ಪಾರ್ಕರ್‌, ಕ್ಯಾಪ್ಟನ್‌ ಗುಡ್‌ಫೆಲೋ ಇದ್ದರು. ಇವರ ಕನಸಿನ ಕಾರಣವಾಗಿ ಈಗಿನ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಗ್ರಂಥಾಲಯ ಆವರಣದಲ್ಲಿ ನಡೆಯಿತು. ನಂತರ ಕಲೆಕ್ಟರ್‌ ಬಂಗ್ಲೆ ಪಕ್ಕದಲ್ಲಿ ಹಾಗೂ ಈಗಿನ ಪಿಡಬ್ಲ್ಯೂಡಿ ಕಚೇರಿಯ ಆವರಣದಲ್ಲಿ ಗ್ರಂಥಾಲಯವಿತ್ತು. ಜಿಲ್ಲಾಧಿಕಾರಿ ಎಚ್‌. ಇಂಗ್ಲ ಅವರು ಸುದೀರ್ಘ‌ಕಾಲ ಜಿಲ್ಲಾಧಿಕಾರಿಯಾಗಿದ್ದರು. ಅವರ ಅಧಿಕಾರ ಅವಧಿಯ ಉದ್ದಕ್ಕೂ ಗ್ರಂಥಾಲಯ ಸುಸೂತ್ರವಾಗಿ ನಡೆಯುವಂತೆ ನೋಡಿಕೊಂಡರು. ರಾವ್‌ ಬಹದ್ದೂರು ಆರ್‌.ಆರ್‌. ಗಂಗೊಳ್ಳಿ ಅವರ ಉದಾರ ದಾನದಿಂದಾಗಿ 1913ರಲ್ಲಿ ಜಿಲ್ಲಾ ಗ್ರಂಥಾಲಯವು ಸ್ವಂತ ಕಟ್ಟಡ ಕಂಡಿತು. ಅಂದಿನ ಕಲೆಕ್ಟರ್‌ ಜಿ. ಮಾಂಟೀತ್‌ ಅವರು ಹೊಸ ಕಟ್ಟಡ ಉದ್ಘಾಟಿಸಿದರು.

1916, 1924,1934ರಲ್ಲಿ ಪುಸ್ತಕಗಳ ಕ್ಯಾಟ್‌ಲಾಗ್‌ ಪದ್ಧತಿ ಮಾಡುತ್ತಾ ಬಂದಿದ್ದರು. ಎಸ್‌.ಎ. ಫಾಲೇಕರ್‌ ಎಂಬುವವರು ಗ್ರಂಥಾಲಯಕ್ಕಾಗಿ ದುಡಿದ ಹಟ್ಟಿಯಂಗಡಿ ಎಂಬುವವರ ಕಪ್ಪು ಬಿಳುಪಿನ ತೈಲ ಚಿತ್ರವನ್ನು ಗ್ರಂಥಾಲಯಕ್ಕೆ ದಾನ ನೀಡಿದರು. 1949ರಲ್ಲಿ ವೈ.ಟಿ.ನಾಡಕರ್ಣಿ ಎಂಬುವವರು ಪುಸ್ತಕಗಳ ಕ್ಯಾಟ್‌ಲಾಗ್‌ ಮಾಡಿದರು. ನಂತರ ಪಿ.ಎಸ್‌. ಹಬ್ಬು, ಎಂ.ಎ. ಗಾಂವ್ಕರ್‌ ಎಂಬುವವರು ಪುಸ್ತಕಗಳ ಭಾಷೆಗೆ ಅನುಸಾರವಾಗಿ ಕ್ಯಾಟ್‌ ಲಾಗ್‌ ಸಿದ್ಧಪಡಿಸಿದರು. 1964ರಲ್ಲಿ ಕಾರವಾರ ಗ್ರಂಥಾಲಯ ಶತಮಾನೋತ್ಸವ ಸಹ ನಡೆಯಿತು.

1977ರಲ್ಲಿ ಗ್ರಂಥಾಲಯ ಸರ್ಕಾರದ ವಶಕ್ಕೆ ಬಂತು: ಎನ್‌.ಡಿ. ಬಗರಿ ಎಂಬುವವರು ರಾಜ್ಯ ಗ್ರಂಥಾಲಯ ಅಧಿಕಾರಿಯಾಗಿದ್ದರು. ಆ ಅವಧಿಯಲ್ಲಿ ಕಾರವಾರ ಜಿಲ್ಲಾ ಗ್ರಂಥಾಲಯವನ್ನು ಸರ್ಕಾರದ ಅಧೀನಕ್ಕೆ ತೆಗೆದುಕೊಂಡರು. ಮತ್ತು ಗ್ರಂಥಾಲಯ ಉನ್ನತಿಗೆ ಹಲವು ಕ್ರಮ ಕೈಗೊಂಡರು. ಆಗ ಜಿಲ್ಲೆಯಲ್ಲಿ ಕಾರವಾರ ಸೇರಿದಂತೆ 15 ಗ್ರಂಥಾಲಯ ಶಾಖೆಗಳಿದ್ದವು. 19 ಪುಸ್ತಕ ವಿತರಣಾ ಕೇಂದ್ರಗಳಿದ್ದವು. ಮಕ್ಕಳ ಪುಸ್ತಕವಿಭಾಗವೂ ಇತ್ತು. 24 ಮಂಡಲ ಗ್ರಂಥಾಲಯಗಳೂ ಇದ್ದವು.

1993ರಲ್ಲಿ ಹೊಸ ಕಟ್ಟಡ ನಿರ್ಮಾಣ: ಜಿಲ್ಲಾ ಕೇಂದ್ರ ಗ್ರಂಥಾಲಯದ ಹಳೆಯ ಕಟ್ಟಡಕ್ಕೆ ಹೊಂದಿಕೊಂಡೇ ಅದರ ಮುಂಭಾಗದಲ್ಲಿ ಹೊಸ ಕಟ್ಟಡ ನಿರ್ಮಾಣ 8.12.1993ರಲ್ಲಿ ಪ್ರಾರಂಭವಾಯಿತು. ಅದಕ್ಕೆ ಸರ್ಕಾರ 29 ಲಕ್ಷ ರೂ. ಅನುದಾನ ನೀಡಿತು. ಕಟ್ಟಡ 1997ರಲ್ಲಿ ಪೂರ್ಣಗೊಂಡಿತು.

ಜಿಲ್ಲಾ ಕೇಂದ್ರ ಗ್ರಂಥಾಲಯ 1997-98ರಲ್ಲಿ ಹೊಸ ಕಟ್ಟಡಕ್ಕೆ ವಿಸ್ತರಿಸಿಕೊಂಡಿತು. ಹಾಗೆ 1913ರಲ್ಲಿ ಕಟ್ಟಿದ ಕಟ್ಟಡವೂ ಪುಸ್ತಕಗಳ ಆಗರವೇ ಆಗಿ ಉಳಿದುಕೊಂಡಿದೆ. ಆಗ ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿನ ಪುಸ್ತಕಗಳ ಸಂಖ್ಯೆ 2 ಲಕ್ಷ. 40 ಮಂಡಲ ಕೇಂದ್ರ ಗ್ರಂಥಾಲಯಗಳಿದ್ದವು. ಬಿಲ್ಟ್ ಬಳ್ಳಾಪುರ ಇಂಡಸ್ಟ್ರೀಸ್‌ ಕಂಪನಿ ಸಂಚಾರಿ ಗ್ರಂಥಾಲಯಕ್ಕೆ ಜ್ಞಾನ ವಾಹಿನಿ ಎಂಬ ವಾಹನವನ್ನು ದೇಣಿಗೆ ಸಹ ನೀಡಿತ್ತು. ಸಂಚಾರಿ ಗ್ರಂಥಾಲಯ ವಿವಿಧ ಹಳ್ಳಿಗಳಿಗೆ ತೆರಳಿ ಜನರಿಗೆ ಪುಸ್ತಕಗಳನ್ನು ಓದಲು ನೀಡುವ ಪದ್ಧತಿ ಪ್ರಾರಂಭವಾದುದು ಆಗ. ಅಂದರೆ 1993ರಲ್ಲಿ.

ಈಗಿನ ಸ್ಥಿತಿ: ಲಕ್ಷದ ಮೇಲೆ ಹತ್ತಿಪ್ಪತ್ತು ಸಾವಿರ ಪುಸ್ತಕಗಳಿವೆ. ದಿನಕ್ಕೆ 40 ರಿಂದ 50 ಜನ ಪುಸ್ತಕಗಳನ್ನು ಮನೆಗೆ ತೆಗೆದುಕೊಂಡು ಓದುವವರೂ ಇದ್ದಾರೆ. ವಿದ್ಯಾರ್ಥಿಗಳು ಗ್ರಂಥಾಲಯದಲ್ಲೇ ಪುಸ್ತಕ ಪಡೆದು ಓದುವ ವಿಭಾಗವೂ ಸಹ ತುಂಬಿರುತ್ತದೆ. ದಿನ ಪತ್ರಿಕೆ, ವಾರ ಪತ್ರಿಕೆ, ನಿಯತಕಾಲಿಕಗಳ ವಿಭಾಗದಲ್ಲಿ 30ಕ್ಕೂ ಹೆಚ್ಚು ಪತ್ರಿಕೆಗಳು ಬರುತ್ತಿದ್ದು, ಇಲ್ಲಿ ಓದುಗರ ಸಂಖ್ಯೆ ದಿನವೂ 300 ದಾಟುತ್ತದೆ.

ಆದರೆ ಕಟ್ಟಡ ಈಚೆಗೆ ಸುಣ್ಣಬಣ್ಣ ಕಂಡಿಲ್ಲ ಹಾಗೂ ಶೇ. 50ಕ್ಕೂ ಮಿಕ್ಕಿ ಸಿಬ್ಬಂದಿ ಕೊರತೆಯನ್ನು ಎದುರಿಸುತ್ತಿದೆ. ಗ್ರಂಥಾಲಯ ವಿಭಾಗ ಆಧುನಿಕತೆಗೆ ತೆರೆದುಕೊಳ್ಳಲು ಕಾದಿದೆ. ಮುಖ್ಯಗ್ರಂಥಪಾಲಕರ ಹೇಳಿಕೆಯ ಪ್ರಕಾರ ತಿಂಗಳೊಪ್ಪತ್ತಿನಲ್ಲಿ ಡಿಜಿಟಲೀಕರಣಕ್ಕೆ ಒಳಪಡಲಿದೆ. 2 ಕಂಪ್ಯೂಟರ್‌, 4 ಟ್ಯಾಬ್‌ಗಳು ಬರಲಿವೆ ಎಂದು ಗ್ರಂಥಾಲಯ ಮುಖ್ಯಸ್ಥರು ಹೇಳುತ್ತಿದ್ದಾರೆ.

 

-ನಾಗರಾಜ ಹರಪನಹಳ್ಳಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ