ಗೋಮಾಳದಲ್ಲಿ ಕ್ರಿಕೆಟ್ ಮೈದಾನಕ್ಕೆ ವಿರೋಧ
ಶ್ರೀಮಂತರ ಕ್ರೀಡೆಗೆ ಪ್ರಕೃತಿ ನಡುವಿನ ನೈಸರ್ಗಿಕ ಸಾವರ ಪೈ ಗುಡ್ಡದ ನಿರ್ನಾಮ ಬೇಡ: ಲಿಂಗರಾಜು
Team Udayavani, Apr 4, 2021, 8:09 PM IST
ಕಾರವಾರ: ಸಾವರ ಪೈ ಗೋಮಾಳದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ಸ್ಥಾಪನೆಯನ್ನು ಕಾರವಾರ ತಾಲೂಕಿನ ಚಿತ್ತಾಕುಲಾ ಗ್ರಾಮದ ಸಾಮಾಜಿಕ ಕಾರ್ಯಕರ್ತ ಲಿಂಗರಾಜು ತೀವ್ರವಾಗಿ ವಿರೋಧಿಸಿದರು.
ಇಲ್ಲಿನ ಪತ್ರಿಕಾಭನದಲ್ಲಿ ಸಾವರ ಪೈ ನಿವಾಸಿಗಳ ಜೊತೆ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸುವುದನ್ನು ನಾವು ಸ್ವಾಗತಿಸುತ್ತೇವೆ. ಆದರೆ ಕ್ರಿಕೆಟ್ ಸ್ಟೇಡಿಯಂ ಚಿತ್ತಾಕುಲಾ ಗ್ರಾಮದ ಸಾವರ ಪೈ ಗೋಮಾಳ ಜಾಗದಲ್ಲಿ ಕ್ರೀಡಾಂಗಣ ನಿರ್ಮಾಣ ಬೇಡ ಎಂದರು.
ಗುಡ್ಡ ಕಡಿದು, ಸಮತಟ್ಟು ಮಾಡಿ, ಕ್ರೀಡಾಂಗಣ ಮಾಡಲು ಹೋದರೆ ಭೂ ಕುಸಿತದ ಭೀತಿ ಸಹ ಇದೆ. ಈಗಾಗಲೇ ಹೆದ್ದಾರಿ ಸೇತುವೆ ಸಂಬಂಧ ಸದಾಶಿವಗಡದ ಒಂದು ಬದಿ ಗುಡ್ಡ ತೆಗೆಯಲಾಗಿದೆ. ಮತ್ತೆ ಗುಡ್ಡ ಸ್ಫೋಟಿಸಿ, ಅದರ ಸುತ್ತಲಿನ ಭೂಮಿ ಸಡಿಲ ಮಾಡುವುದು ಬೇಡ. ಪಕ್ಕದಲ್ಲಿ ನದಿ ಇದೆ. ನದಿ ದಿಕ್ಕು ಸಹ ಬದಲಾಗಬಹುದು. ಸದಾಶಿವಗಡ ಅಪಾರ್ಟಮೆಂಟ್ ಗಳಿಗೆ ಧಕ್ಕೆ ಆಗಬಹುದು. ಗೋಮಾಳ ಜಾಗ, ದನಗಳಿಗೆ ಮೀಸಲಿರಲಿ ಎಂದರು.
ಕಾರವಾರ ತಾಲೂಕಿನ ಬೇರೆ ಎಲ್ಲಾದರೂ ಕ್ರೀಡಾಂಗಣ ನಿರ್ಮಿಸಲಿ, ಬೇಕಾದರೆ ಕಾಳಿ ನದಿ ದಡದಲ್ಲಿ, ಖಾಸಗಿ ಜಾಗದಲ್ಲಿ ಭೂಮಿ ಖರೀದಿಸಿ ಸರ್ಕಾರ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸಲಿ ಎಂದು ಲಿಂಗರಾಜು ಪ್ರತಿಪಾದಿಸಿದರು. ಅದಕ್ಕೆ ಸಹಕಾರ ನೀಡುತ್ತೇವೆ. ಆದರೆ ಜನವಸತಿ ಸುತ್ತಮುತ್ತ ಇರುವ ಗೋಮಾಳವನ್ನು ಬಳಸಬಾರದು ಎಂದರು.
ಚಿತ್ತಾಕುಲಾ ಸಾವರಪೊಯಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಮಾಡುವ ಜಾಗ ಗೋಮಾಳ ಜಾಗವಾಗಿದ್ದು, ಅಲ್ಲಿ ನಮ್ಮ ದನಕರುಗಳನ್ನು ಹುಲ್ಲು ಮೇಯಿಸುವ ಸಲುವಾಗಿ ಇಟ್ಟ ಜಾಗವಾಗಿರುತ್ತದೆ. ಇಲ್ಲಿ ನಮಗೆ ಅಂತಾರಾಷ್ಟಿÅàಯ ಕ್ರಿಕೆಟ್ ಸ್ಟೇಡಿಯಂ ಬದಲಾಗಿ, ಒಂದು ಗೋ ಶಾಲೆ ನಿರ್ಮಿಸಿ ಕೊಡಬೇಕೆಂದು ಸರ್ಕಾರವನ್ನು ವಿನಂತಿಸಿದರು.
ಸದಾಶಿವಗಡ ಕೋಟೆ ಐತಿಹಾಸಿಕವಾಗಿ ಪ್ರಸಿದ್ಧ ವಾಗಿದೆ. ಇಲ್ಲಿ ನೈಸರ್ಗಿಕ ಸೌಂದರ್ಯ ಕೂಡಾ ಇದ್ದು, ಇಲ್ಲಿ ಗುಡ್ಡ ಅಗೆದು, ಸ್ಟೇಡಿಯಂ ನಿರ್ಮಿಸಿದರೆ ಪ್ರಕೃತಿ ಸೌಂದರ್ಯ ಹಾಳಾಗುತ್ತದೆ. ಶ್ರೀಮಂತರ ಒಡ್ಡೋಲಗ ಮಾಡಲು ಇಲ್ಲಿ ಅವಕಾಶವಿಲ್ಲ. ಬಂಡವಾಳ ಶಾಹಿಗಳ ಕಣ್ಣು ಸಾವರ ಪೈ ಜಾಗದ ಮೇಲೆ ಬಿದ್ದಿದ್ದು, ಇದಕ್ಕೆ ಗ್ರಾಮದ ಜನರು ಅವಸಕಾಶ ನೀಡುವುದಿಲ್ಲ ಎಂದರು.
ಸಾವರ ಪೈ ಜಾಗದ ಸುತ್ತಲೂ ಸುಮಾರು 300 ಮನೆಗಳಿದ್ದು, ಕ್ರಿಕೆಟ್ ಸ್ಟೇಡಿಯಂನಿಂದ ಅಲ್ಲಿ ವಾಸಿಸುವ ಕುಟುಂಬದವರು ನಿರಾಶ್ರಿತರಾಗುತ್ತಾರೆ ಎಂದು ಲಿಂಗರಾಜು ಪ್ರತಿಪಾದಿಸಿದರು. ಚಿತ್ತಾಕುಲಾ ಗ್ರಾಮದ ಸಾವರ ಪೈಯಲ್ಲಿ ಅಂತಾರಾಷ್ಟಿÅàಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಕೈಬಿಡಬೇಕೆಂದು, ಹಾಲಿ ಸರ್ಕಾರವನ್ನು ಹಾಗೂ ಹಾಲಿ ಶಾಸಕರನ್ನು ವಿನಂತಿಸಿಕೊಂಡರು. ಪತ್ರಿಕಾಗೋಷ್ಠಿಯಲ್ಲಿ ಚಿತ್ತಾಕುಲಾ ಗ್ರಾಮದ ಸಾವರಪೈ ಪ್ರದೇಶದ ಸುಮಾರು 30 ಜನರು ಹಾಜರಿದ್ದರು.