ಸಿಡಿಲಿನಿಂದ ತಪ್ಪಿಸಿಕೊಳ್ಳಲು ಮುಂಜಾಗ್ರತೆ ಕ್ರಮ ಅನುಸರಿಸಿ

Team Udayavani, May 26, 2019, 3:07 PM IST

ಯಾದಗಿರಿ: ಜೂನ್‌ ಮೊದಲನೇ ವಾರ ರಾಜ್ಯದಲ್ಲಿ ಮುಂಗಾರು ಪ್ರವೇಶವಾಗುತ್ತಿದ್ದು, ಮುಂಗಾರು ಪೂರ್ವ ಅಕಾಲಿಕ ಮಳೆ ಬೀಳುವ ಸಂದರ್ಭದಲ್ಲಿ ಬಿರುಗಾಳಿ, ಗುಡುಗು, ಸಿಡಿಲು ಬರುವ ಸಂಭವವಿರುವುದರಿಂದ ಸಾರ್ವಜನಿಕರು ಮುಂಜಾಗ್ರತಾ ಕ್ರಮ ಅನುಸರಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್‌ ಸಲಹೆ ನೀಡಿದ್ದಾರೆ.

ಸಾರ್ವಜನಿಕರು ಮುಂಜಾಗ್ರತವಾಗಿ ಕೈಗೊಳ್ಳುವ ಕ್ರಮಗಳ ಕುರಿತು ಸಿಡಿಲು (ಖಐಈಐಔಖೀ) ಮೊಬೈಲ್ ಆ್ಯಪ್‌ ಪ್ಲೇಸ್ಟೋರ್‌ನಿಂದ ಡೌನ್‌ಲೋಡ್‌ ಮಾಡಿಕೊಂಡು ಉಪಯೋಗ ಪಡೆದುಕೊಳ್ಳಬೇಕು. ಸಿಡಿಲಾಘಾತದಿಂದ ತಪ್ಪಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

ಸಿಡಿಲು ಸಂಭವಿಸುವಾಗ ಮಾಡಬೇಕಾದ ಕ್ರಮ:ಗುಡುಗು-ಮಿಂಚು ಬರಲಿದೆ ಎಂದು ಗೊತ್ತಾದಾಗ ಬಯಲಿನಲ್ಲಿದ್ದರೆ, ತಕ್ಷಣವೇ ತಗ್ಗು ಪ್ರದೇಶಕ್ಕೆ ಹೋಗಿ ಕುಳಿತುಕೊಳ್ಳಬೇಕು. ನಿಲ್ಲಬಾರದು. ಮಕ್ಕಳು ಮತ್ತು ಪ್ರಾಣಿಗಳು ಮನೆಯೊಳಗೆ ಇರುವುದನ್ನು ಖಚಿತಪಡಿಸಿಕೊಳ್ಳಬೇಕು. ಮರಗಳಿದ್ದ ಪ್ರದೇಶದಲ್ಲಿ ಇದ್ದರೆ ಅಲ್ಲಿಂದ ಬೇಗನೆ ಹೊರಬರುವುದು ಒಳ್ಳೆಯದು (ಯಾಕೆಂದರೆ ಸಿಡಿಲು ಮೋಡದಿಂದ ಭೂಮಿಗೆ ಹರಿಯಲು ಮರದಂತಹ ಹಸಿ, ಒದ್ದೆ ವಸ್ತುವನ್ನೆ ಆರಿಸಿಕೊಳ್ಳುತ್ತದೆ). ತಗ್ಗು ಪ್ರದೇಶ ಇಲ್ಲದೆ ಬಯಲಿನಲ್ಲೆ ಇರಬೇಕಾದರೆ ನಿಮ್ಮ ತಲೆಯನ್ನು ಮೊಣಕಾಲುಗಳ ನಡುವೆ ಹುದುಗಿಸಿಕೊಳ್ಳಬೇಕು. ಇದು ಮಿಂಚಿನಿಂದ ಮಿದುಳಿಗೂ, ಹೃದಯಕ್ಕೂ ಆಗುವ ಹಾನಿ ತಪ್ಪಿಸುತ್ತದೆ.

ಕುರಿ ಮಂದೆ ಅಥವಾ ಜಾನುವಾರುಗಳ ಮಧ್ಯ ನಿಂತಿದ್ದರೆ, ಅವುಗಳ ಮಧ್ಯದಲ್ಲಿ ಬಗ್ಗಿ ಕುಳಿತುಕೊಳ್ಳಬೇಕು ಯಾಕೆಂದರೆ ಮಿಂಚು ಪ್ರಾಣಿಗಳಿಗಿಂತ ಎತ್ತರವಿರುವ ಮನುಷ್ಯನನ್ನೇ ಆರಿಸಿಕೊಳ್ಳುತ್ತದೆ. ಕೆರೆಯಲ್ಲಿ ಈಜುವುದು, ಸ್ನಾನ ಮಾಡುವುದು ಬೇಡ. ನೀರಿನಲ್ಲಿದ್ದರೆ ತಕ್ಷಣ ಹೊರಬರಬೇಕು. ಚಂಡಮಾರುತದ ಸಮಯದಲ್ಲಿ ವಾಹನದಲ್ಲಿ ತೆರಳುತಿದ್ದಲ್ಲಿ ಸಹಾಯಕ್ಕೆ ಬರುವವರೆಗೆ ಅಥವಾ ಚಂಡಮಾರುತವು ಹಾದು ಹೋಗುವ ವರೆಗೆ ನಿಮ್ಮ ವಾಹನದಲ್ಲಿ ಉಳಿಯಬೇಕು ಎಂದು ಮಾಹಿತಿ ನೀಡಿದ್ದಾರೆ.

ಮಾಡಬಾರದ ಕ್ರಮಗಳು: ಸಿಡಿಲು ಸಂಭವಿಸುವಾಗ ವಿದ್ಯುತ್‌ ಕಂಬ, ಇಲೆಕ್ಟ್ರಿಕಲ್ ಟವರ್‌, ಮೊಬೈಲ್ ಟವರ್‌, ಟ್ರಾನ್ಸ್‌ಫಾರ್ಮರ್‌ ಮುಂತಾದವುಗಳ ಹತ್ತಿರವೂ ಇರಬಾರದು. ಮಳೆ ಬರುವ ಸಮಯದಲ್ಲಿ ಮನೆ ಟೆರೆಸ್‌ ಅನ್ನು ಸ್ವಚ್ಛ ಮಾಡುವ ಸಾಹಸ ಬೇಡ. ಮನೆ ಕಿಟಕಿ ಬಳಿ ನಿಲ್ಲುವುದಕ್ಕಿಂತಲೂ ಮನೆ ಮಧ್ಯದಲ್ಲಿರುವುದು ಸುರಕ್ಷಿತ. ಕಾರಿನಲ್ಲಿ ಪ್ರಯಾಣಿಸುತ್ತಿದ್ದರೆ ಗಾಜನ್ನು ಮುಚ್ಚಿಕೊಳ್ಳಬೇಕು. ಕಾರಿನ ಬಾಡಿಯನ್ನು ಸಾಧ್ಯವಾದಷ್ಟು ಸ್ಪರ್ಶಿಸದೆ ಮಧ್ಯದಲ್ಲಿ ಕುಳಿತುಕೊಳ್ಳುವುದು ಒಳ್ಳೆಯದು. ಕಂಪ್ಯೂಟರ್‌ಗಳಿಂದ ದೂರ ಇರಿ. ಮನೆ ಕಾಂಕ್ರಿಟ್ ಗೋಡೆಗಳನ್ನು ಸ್ಪರ್ಶಿಸದೆ ಕೋಣೆ ಮಧ್ಯದಲ್ಲಿದ್ದರೆ ಹೆಚ್ಚು ಸುರಕ್ಷಿತ. ಈ ಸಂದೇಶವನ್ನು ಮನೆಯಲ್ಲಿನ ಕುಟುಂಬದ ಎಲ್ಲರಿಗೂ ತಿಳಿಸಬೇಕು ಎಂದು ಸಲಹೆ ನೀಡಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ