9.88 ಲಕ್ಷ ಮತದಾರರು-1135 ಮತಗಟ್ಟೆ ಸ್ಥಾಪನೆ

Team Udayavani, Apr 21, 2019, 3:38 PM IST

ಯಾದಗಿರಿ: ಲೋಕಸಭೆ ಚುನಾವಣೆ ಮತದಾನಕ್ಕೆ ಕೈಗೊಂಡ ಸಿದ್ಧತೆಗಳ ಕುರಿತು ಜಿಲ್ಲಾಚುನಾವಣಾಧಿಕಾರಿ ಎಂ.ಕೂರ್ಮಾರಾವ್‌ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

ಯಾದಗಿರಿ: ಲೋಕಸಭಾ ಸಾರ್ವತ್ರಿಕ ಚುನಾವಣೆ
ಪ್ರಯುಕ್ತ ಜಿಲ್ಲೆಯ 1,135 ಮತದಾನ ಕೇಂದ್ರಗಳಲ್ಲಿ
ಏ. 23ರಂದು ಬೆ:ಗ್ಗೆ 7:00ರಿಂದ ಸಂಜೆ 6:00ರ
ವರೆಗೆ ನಡೆಯಲಿರುವ ಮತದಾನ ಪ್ರಕ್ರಿಯೆಯನ್ನು
ಭಾರತ ಚುನಾವಣಾ ಆಯೋಗದ ನಿರ್ದೇಶನ ಮತ್ತು ಮಾರ್ಗಸೂಚಿಗಳ ಅನ್ವಯ ನಡೆಸಲಾಗುತ್ತದೆ. ಮತದಾನದ ದಿನದಂದು ಜಿಲ್ಲೆಯಲ್ಲಿರುವ ಅಂತಿಮ ಮತದಾರರ ವಿವರ ನೀಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಎಂ.ಕೂರ್ಮಾರಾವ್‌ ತಿಳಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಯಚೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಸುರಪುರ ವಿಧಾನಸಭಾ ಕ್ಷೇತ್ರದಲ್ಲಿ
2,75,491, ಶಹಾಪುರ ವಿಧಾನಸಭಾ ಕ್ಷೇತ್ರದಲ್ಲಿ
2,29,117, ಯಾದಗಿರಿ ವಿಧಾನಸಭಾ ಕ್ಷೇತ್ರದಲ್ಲಿ
2,38,533 ಜನ ಮತದಾರರಿದ್ದಾರೆ. ಕಲಬುರಗಿ ಲೋಕಸಭಾ ವ್ಯಾಪ್ತಿಗೆ ಸೇರುವ ಗುರುಮಠಕಲ್‌ ವಿಧಾನಸಭಾ ಕ್ಷೇತ್ರದಲ್ಲಿ 2,45,251 ಮತದಾರರು
ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 9,88,392 ಮತದಾರರಿದ್ದಾರೆ ಎಂದು ಮಾಹಿತಿ ನೀಡಿದರು.

ವೋಟರ್‌ ಸ್ಲಿಪ್‌: ಏಪ್ರಿಲ್‌ 23ರಂದು ನಡೆಯಲಿರುವ
ಲೋಕಸಭಾ ಸಾರ್ವತ್ರಿಕ ಚುನಾವಣೆ ಮತದಾನ
ಸಂಬಂಧ ಮತದಾರರ ಪಟ್ಟಿಯಲ್ಲಿ ಹೆಸರಿರುವ
ಮತದಾರರಿಗೆ ಈಗಾಗಲೇ ಮತದಾರರ ಗುರುತಿನ
ಚೀಟಿ ವಿಧಾನಸಭಾ ಕ್ಷೇತ್ರವಾರು ಬಿಎಲ್‌ಒ(ಮತಗಟ್ಟೆ ಮಟ್ಟದ) ಅಧಿಕಾರಿಗಳ ಮೂಲಕ ವಿತರಿಸಲಾಗಿದೆ. ಆದರೆ, ಮತಗಟ್ಟೆಯಲ್ಲಿ ಮತದಾರರನ್ನು ಗುರುತಿಸುವ ಉದ್ದೇಶಕ್ಕಾಗಿ ಚೀಟಿ ಒಪ್ಪಿಕೊಳ್ಳುವುದಿಲ್ಲ. ಚುನಾವಣಾ ಆಯೋಗ ನಿರ್ದಿಷ್ಟಪಡಿಸಿರುವ ಎಪಿಕ್‌ ಕಾರ್ಡ್‌ ಅಥವಾ 11 ವಿವಿಧ ದಾಖಲಾತಿಗಳಾದ ಪಾಸ್‌ಪೋರ್ಟ್‌, ಚಾಲನಾ ಪರವಾನಗಿ, ಕೇಂದ್ರ-ರಾಜ್ಯ-ಪಿಎಸ್‌ಯು ನೌಕರರಾಗಿದ್ದರೆ ಸರ್ಕಾರ ಕೊಟ್ಟಿರುವ ಫೋಟೋ ಸಹಿತ ಗುರುತಿನ ಚೀಟಿ, ಬ್ಯಾಂಕ್‌-ಪೋಸ್ಟ್‌ ಆಫೀಸ್‌ ಭಾವಚಿತ್ರವುಳ್ಳ ಪಾಸ್‌ಬುಕ್‌, ಪಾನ್‌ ಕಾರ್ಡ್‌, ರಾಷ್ಟ್ರೀಯ ಜನಸಂಖ್ಯಾ ನೋಂದಣಿ ನೀಡಿರುವ ಸ್ಮಾರ್ಟ್‌ ಕಾರ್ಡ್‌, ನರೇಗಾ ಜಾಬ್‌ ಕಾರ್ಡ್‌, ಆರೋಗ್ಯ ವಿಮಾ ಸ್ಮಾರ್ಟ್‌ ಕಾರ್ಡ್‌, ಭಾವಚಿತ್ರವುಳ್ಳ ಪಿಂಚಣಿ ದಾಖಲೆ, ಸಂಸದರು, ಶಾಸಕರು, ಎಂಎಲ್‌ ಸಿಗಳಿಗೆ ನೀಡಿದ ಅಧಿಕೃತ ಗುರುತಿನ ಚೀಟಿ, ಹಾಗೂ ಆಧಾರ್‌ ಕಾರ್ಡ್‌ಗಳ ಪೈಕಿ ಯಾವುದಾರು ಒಂದು ದಾಖಲಾತಿ
ಹಾಜರುಪಡಿಸಿ ಮತ ಚಲಾಯಿಸಬಹುದಾಗಿದೆ ಎಂದು ತಿಳಿಸಿದರು.

ಮತಗಟ್ಟೆ 100ಮೀಟರ್‌ ವ್ಯಾಪ್ತಿಯಲ್ಲಿ ಕರ್ತವ್ಯನಿರತ ಅಧಿಕಾರಿಗಳನ್ನು ಹೊರತುಪಡಿಸಿ ಬೇರೆ ಯಾರು ಸೆಲ್ಯುಲಾರ್‌ ಫೋನ್‌ಗಳು, ಕಾರ್ಡ್‌ಲೆಸ್‌ ಫೋನ್‌ ಬಳಸುವಂತಿಲ್ಲ. ಮಾಧ್ಯಮ ಪ್ರತಿನಿಧಿಗಳು ಮತಗಟ್ಟೆಗಳಿಗೆ ಸುದ್ದಿಗಾಗಿ ತೆರಳಿದಾಗ ಮತದಾರ ಮತ ಚಲಾಯಿಸುವ ಪ್ರಕ್ರಿಯೆ ಚಿತ್ರಿಕರಿಸುವಂತಿಲ್ಲ. ಒಂದು ವೇಳೆ ಉಲ್ಲಂಘನೆ ಮಾಡಿದಲ್ಲಿ ಪ್ರಜಾ ಪ್ರಾತಿನಿಧ್ಯ ಅಧಿನಿಯಮ 1951ರ ಪ್ರಕರಣ 126, 130 ಹಾಗೂ ಭಾರತೀಯ ದಂಡ ಸಂಹಿತೆ ಪ್ರಕರಣ 171ರ ಪ್ರಕಾರ ಶಿಕ್ಷಾರ್ಹ ಅಪರಾಧವಾಗುತ್ತದೆ ಎಂದು ತಿಳಿಸಿದರು.

ಸುರಪುರದ 94 ಅಂಧ ಮತದಾರರಿಗೆ 319 ಬೂತಕನ್ನಡಿ, 298 ಸ್ವಯಂ ಸೇವಕರು. ಶಹಾಪುರದ 92 ಅಂಧ ಮತದಾರರಿಗೆ 265 ಬೂತಕನ್ನಡಿ, 251 ಸ್ವಯಂ ಸೇವಕರು. ಯಾದಗಿರಿಯ 86 ಅಂಧ ಮತದಾರರಿಗೆ 267 ಬೂತಕನ್ನಡಿ, 212 ಸ್ವಯಂ ಸೇವಕರು ಹಾಗೂ ಗುರುಮಠಕಲ್‌ನ 81 ಅಂಧ ಮತದಾರರಿಗೆ 284 ಬೂತಕನ್ನಡಿ, 273 ಸ್ವಯಂ ಸೇವಕರು ಜಿಲ್ಲೆಯ ಒಟ್ಟು 353 ಅಂಧ ಮತದಾರರಿಗೆ 1,135 ಬೂತ ಕನ್ನಡಿ ಹಾಗೂ 1,034 ಸ್ವಯಂ ಸೇವಕರ ಮತದಾನದ ದಿನದಂದು ಸಹಾಯಕರ ಎಂದು ಭಾರತ ಸ್ಕೌಟ್ಸ್‌ ಮತ್ತು ಗೈಡ್ಸ್‌, ಅಂಗನವಾಡಿ ಸಹಾಯಕಿಯರು ಹಾಗೂ ಆಶಾ ಕಾರ್ಯಕರ್ತೆಯರನ್ನು ನೇಮಿಸಲಾಗಿದೆ. ಅಂದು ಮತ ಚಲಾಯಿಸಲು ಸಂಜೆ 6:00ರೊಳಗೆ ಮತಗಟ್ಟೆಯಲ್ಲಿ ಹಾಜರಿದ್ದ ಮತದಾರರ ಸಾಲಿನ ಕೊನೆ ಮತದಾರನಿಂದ ಕ್ರಮ ಸಂಖ್ಯೆಚೀಟಿಗಳನ್ನು ನೀಡಿ ಮತದಾನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು.

ಸಿ-ವಿಜಿಲ್‌ ಮತ್ತು 1950 ಸಹಾಯವಾಣಿ: ಭಾರತ ಚುನಾವಣಾ ಆಯೋಗ ಚುನಾವಣೆಯಲ್ಲಿ ಅಕ್ರಮ
ತಡೆಗಟ್ಟಲು ಸಿ-ವಿಜಿಲ್‌ ಆ್ಯಪ್‌ ಪರಿಚಯಿಸಿದೆ. ಯಾರು ಬೇಕಾದರು ಇದನ್ನು ಡೌನ್‌ಲೋಡ್‌ ಮಾಡಿಕೊಂಡು. ಚುನಾವಣೆಗೆ ಸಂಬಂಧಪಟ್ಟಂತೆ ಮತದಾರರಿಗೆ ಒಡ್ಡುವ ಆಮಿಷಗಳು, ಸಲ್ಲದ ಹೇಳಿಕೆಗಳು ಸೇರಿದಂತೆ ಯಾವುದೇ ರೀತಿಯ ಚುನಾವಣಾ ಅಕ್ರಮ ನಡೆದರೆ ಆ್ಯಪ್‌ ಮೂಲಕ ಸಾರ್ವಜನಿಕರು ಚಿತ್ರ ಹಾಗೂ ವಿಡಿಯೋ ಸಹಿತ ದೂರು ನೀಡಬಹುದಾಗಿದೆ. ಚುನಾವಣೆ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಹಾಯವಾಣಿ-1950 ಸಂಖ್ಯೆ ಸ್ಥಾಪಿಸಲಾಗಿದೆ. ದಿನದ 24 ಗಂಟೆ ಕಾರ್ಯನಿರ್ವಹಣೆಯಲ್ಲಿರುತ್ತದೆ. ಅಲ್ಲದೇ, ಕಂಟ್ರೋಲ್‌ ರೂಮ್‌ ಕೂಡ ತೆರೆಯಲಾಗಿದೆ. ಸಾರ್ವಜನಿಕರು ದೂರವಾಣಿ ಸಂಖ್ಯೆ: 08473-253772 ಗೆ ಕರೆ ಮಾಡುವುದರ ಮೂಲಕ ದೂರನ್ನು ಸಲ್ಲಿಸಬಹುದು ಹಾಗೂ ಮಾಹಿತಿ ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ಜಿಲ್ಲಾ ಸ್ವೀಪ್‌ ಸಮಿತಿ ಅಧ್ಯಕ್ಷೆ ಹಾಗೂ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕವಿತಾ ಎಸ್‌. ಮನ್ನಿಕೇರಿ ಮಾತನಾಡಿ, ಜಿಲ್ಲೆಯಲ್ಲಿ ಸ್ಥಾಪನೆ ಮಾಡಲಾಗಿರುವ 1,135 ಮತಗಟ್ಟೆಗಳಲ್ಲಿ ಏಪ್ರಿಲ್‌
23ರಂದು ಮತದಾನ ನಡೆಯಲಿದೆ. ಅಂದು ದಿವ್ಯಾಂಗರು, ಹಿರಿಯ ಮತದಾರರು, ಅಂವಿಕಲರು,
ಗರ್ಭಿಣಿಯರು ಮತದಾನ ಕೇಂದ್ರಕ್ಕೆ ಬಂದು ಮತ ಚಲಾಯಿಸುವಂತೆ ಅನುಕೂಲವಾಗುವ ನಿಟ್ಟಿನಲ್ಲಿ
ವಾಹನ ಸೌಲಭ್ಯ ಮಾಡಲಾಗುತ್ತದೆ. ಮತದಾರರು
ತಮ್ಮ ಮೊಬೈಲ್‌ ಸಂಖ್ಯೆ ನೀಡಿದರೆ ವಾಹನ ಚಾಲಕರು ಮೂಲಸ್ಥಳಕ್ಕೆ ಬಂದು ಕರೆದುಕೊಂಡು ಹೋಗುತ್ತಾರೆ.

ಮತದಾನ ಕೇಂದ್ರಗಳಲ್ಲಿ ರ್‍ಯಾಂಪ್‌, ಕುಡಿಯುವ ನೀರು, ಶೌಚಾಲಯ ಹಾಗೂ ವಿದ್ಯುತ್‌ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಋಷಿಕೇಶ್‌ ಭಗವಾನ್‌ ಸೋನವಣೆ ಮಾತನಾಡಿ, ಚುನಾವಣಾ ಕಾರ್ಯ ಸುಗಮವಾಗಿ ನಡೆಯಲು ಸೂಕ್ತ ಬಂದೋಬಸ್ತ್ ಮಾಡಲಾಗಿದೆ. ನಾಲ್ವರು ಡಿವೈಎಸ್‌ಪಿ, 14 ಸಿಪಿಐ, 75 ಪಿಎಸ್‌ಐ, 61 ಎಎಸ್‌ಐ, 894 ಪೊಲೀಸ್‌ ಕಾನ್‌ಸ್ಟೆàಬಲ್ಸ್‌, 4 ಕೆಎಸ್‌ಆರ್‌ಪಿ, 1
ಸಿಐಎಸ್‌ಎಫ್‌, 12 ಡಿಆರ್‌ ಹಾಗೂ 74 ಸೆಕ್ಟರ್‌ ಮೊಬೈಲ್‌ ವಾಹನ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಎಡಿಸಿ ಪ್ರಕಾಶ ಜಿ. ರಜಪೂತ, ಸಿ-ವಿಜಿಲ್‌ ಆ್ಯಪ್‌ ನೋಡಲ್‌ ಅಧಿಕಾರಿ ರಾಜಕುಮಾರ, ಎಂಸಿಎಂಸಿ ನೋಡಲ್‌ ಅಧಿಕಾರಿ ಪೂರ್ಣಿಮಾ ಚೂರಿ, ಚುನಾವಣಾ ತಹಶೀಲ್ದಾರ್‌ ಯಲ್ಲಪ್ಪ ಸುಬೇದಾರ
ಸೇರಿದಂತೆ ವಿವಿಧ ತಂಡಗಳ ನೋಡಲ್‌ ಅಧಿಕಾರಿಗಳು ಸೇರಿದಂತೆ ಖಲಿಲ್‌ ಸಾಬ್‌ ಹಾಜರಿದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ