ಆ್ಯಂಟಿ ಓಕ್ಸಿಡೆಂಟ್‌ಗಳು ಮತ್ತು ಐಸೊಫ್ಲೇವನ್‌ಗಳು

Team Udayavani, May 12, 2019, 6:00 AM IST

ಆ್ಯಂಟಿ ಓಕ್ಸಿಡೆಂಟ್‌ಗಳು
– ಆ್ಯಂಟಿಓಕ್ಸಿಡೆಂಟ್‌ಗಳು ಎಂದರೆ ಮನುಷ್ಯ ನಿರ್ಮಿತ ಅಥವಾ ನೈಸರ್ಗಿಕವಾದ ಅಂಶಗಳಾಗಿದ್ದು, ಇವು ಅಂಗಾಂಶಗಳ ಹಾನಿಯನ್ನು ತಡೆಯುತ್ತವೆ ಅಥವಾ ವಿಳಂಬಿಸುತ್ತವೆ ಎನ್ನಲಾಗಿದೆ. “ಫ್ರೀ ರ್ಯಾಡಿಕಲ್‌’ ಗಳಿಂದ ಉಂಟಾಗುವ ಹಾನಿಯನ್ನು ತಡೆಯುತ್ತವೆ ಅಥವಾ ಆಗಿರುವ ಹಾನಿಯನ್ನು ದುರಸ್ತಿ ಮಾಡುವ “ಫ್ರೀ ರ್ಯಾಡಿಕಲ್‌ ದುರಸ್ತಿಕಾರಕ’ಗಳಂತೆ ಫ್ರೀ ರ್ಯಾಡಿಕಲ್‌ಗ‌ಳು ಕೆಲಸ ಮಾಡುತ್ತವೆ. ಆ್ಯಂಟಿ ಓಕ್ಸಿಡೆಂಟ್‌ಪೌಷ್ಟಿಕಾಂಶಗಳು (ವಿಟಮಿನ್‌ಗಳು ಮತ್ತು ಖನಿಜಗಳು) ಹಾಗೂ ಕಿಣ್ವಗಳು (ನಮ್ಮ ದೇಹದಲ್ಲಿ ರಾಸಾಯನಿಕ ಕ್ರಿಯೆಗಳಲ್ಲಿ ಸಹಾಯ ಮಾಡುವ ಪ್ರೊಟೀನ್‌ಗಳು) ಆಗಿವೆ. ಇವುಗಳು ಹಣ್ಣು ಮತ್ತು ತರಕಾರಿಗಳ ಸಹಿತ ಅನೇಕ ಆಹಾರಗಳಲ್ಲಿ ಕಂಡುಬರುತ್ತವೆ.

ಹಳೆಯ ತಲೆಮಾರಿನವರು ಗಿಡಮೂಲಿಕೆಗಳು, ಪಥ್ಯಾಹಾರಗಳನ್ನು ಹೆಚ್ಚು ಸೇವಿಸುತ್ತಿದ್ದು, ಇದು ಅವರಿಗೆ ಆ್ಯಂಟಿ ಓಕ್ಸಿಡೆಂಟ್‌ಗಳನ್ನು ಪೂರೈಸುತ್ತಿದ್ದವು. ಇದರಿಂದ ಫ್ರೀ ರ್ಯಾಡಿಕಲ್‌ಗ‌ಳಿಂದ ಉಂಟಾದ ಹಾನಿಯಿಂದ ರಕ್ಷಣೆ ಲಭಿಸಿ ಆರೋಗ್ಯವಂತರಾಗಿ ಜೀವಿಸಲು ಅವರಿಗೆ ಸಾಧ್ಯವಾಗುತ್ತಿತ್ತು. ನಾವು ವ್ಯಾಯಾಮ ಮಾಡುವಾಗ ಮತ್ತು ನಮ್ಮ ದೇಹವು ಆಹಾರವನ್ನು ಶಕ್ತಿಯಾಗಿ ಪರಿವರ್ತಿಸುವಾಗ ನೈಸರ್ಗಿಕವಾಗಿ ರೂಪುಗೊಳ್ಳುವ ಅತ್ಯಂತ ಅಸ್ಥಿರವಾದ ಮಾಲೆಕ್ಯೂಲ್‌ಗ‌ಳೇ ಫ್ರೀ ರ್ಯಾಡಿಕಲ್‌ಗ‌ಳು. ಧೂಮಪಾನ, ವಾಯುಮಾಲಿನ್ಯ ಮತ್ತು ಸೂರ್ಯನ ಬೆಳಕಿನಂತಹ ಪಾರಿಸರಿಕ ಅಂಶಗಳಿಂದಲೂ ನಮ್ಮ ದೇಹ ಫ್ರೀ ರ್ಯಾಡಿಕಲ್‌ಗ‌ಳಿಗೆ ಒಡ್ಡಿಕೊಳ್ಳಬಹುದು. ಫ್ರೀ ರ್ಯಾಡಿಕಲ್‌ಗ‌ಳು “ಆಕ್ಸಿಡೇಟಿವ್‌ ಸ್ಟ್ರೆಸ್‌’ ಉಂಟು ಮಾಡಬಹುದು. ಹಾಗೆಂದರೆ, ಅಂಗಾಂಶಗಳಿಗೆ ಹಾನಿಯಾಗುವ ಪ್ರಕ್ರಿಯೆ. ಆಕ್ಸಿಡೇಟಿವ್‌ ಸ್ಟ್ರೆಸ್‌ ಕ್ಯಾನ್ಸರ್‌, ಹೃದ್ರೋಗಗಳು, ಮಧುಮೇಹ, ಅಲಿlàಮರ್ಸ್‌ ಕಾಯಿಲೆ, ಪಾರ್ಕಿನ್ಸನ್‌ ಮತ್ತು ಕ್ಯಾಟರ್ಯಾಕ್ಟ್ ನಂತಹ ದೃಷ್ಟಿದೋಷಗಳಂತಹ ಕಾಯಿಲೆಗಳು ಹಾಗೂ ವೃದ್ಧಾಪ್ಯದಲ್ಲಿ ಬಾಧಿಸುವ ಮಾಲೆಕ್ಯುಲಾರ್‌ ನಾಶಕ್ಕೆ ಕಾರಣವಾಗುತ್ತವೆ ಎಂದು ಭಾವಿಸಲಾಗಿದೆ.

– ಆ್ಯಂಟಿ ಓಕ್ಸಿಡೆಂಟ್‌ಗಳು ಸಮೃದ್ಧವಾಗಿರುವ ತರಕಾರಿಗಳು ಮತ್ತು ಹಣ್ಣುಗಳು ಆರೋಗ್ಯಕರ ಎನ್ನಲಾಗಿದೆ. ಆದರೆ ಕಾಯಿಲೆಗಳನ್ನು ತಡೆಯುವಲ್ಲಿ ಆ್ಯಂಟಿ ಓಕ್ಸಿಡೆಂಟ್‌ ಪೂರಕ ಆಹಾರಗಳು ಪ್ರಯೋಜನಕಾರಿ ಎಂಬುದನ್ನು ಅಧ್ಯಯನಗಳು ಸಾಬೀತುಪಡಿಸಿಲ್ಲ. ಸರಕಾರಿ ನೀತಿಗಳು ಈ ಆಹಾರಗಳನ್ನು ಹೆಚ್ಚು ಸೇವಿಸುವಂತೆ ಜನರನ್ನು ಒತ್ತಾಯಿಸುತ್ತವೆ. ಹಣ್ಣು ಮತ್ತು ತರಕಾರಿಗಳನ್ನು ಹೆಚ್ಚು ಸೇವಿಸುವವರಿಗೆ ಈ ಕಾಯಿಲೆಗಳಲ್ಲಿ ಕೆಲವು ಬಾಧಿಸುವ ಸಾಧ್ಯತೆಗಳು ಕಡಿಮೆ ಎಂಬುದಾಗಿ ಅಧ್ಯಯನಗಳು ಹೇಳುತ್ತವೆ. ಆ್ಯಂಟಿ ಓಕ್ಸಿಡೆಂಟ್‌ಗಳಿಗೆ ಉದಾಹರಣೆಗಳು ಎಂದರೆ, ವಿಟಮಿನ್‌ ಸಿ ಮತ್ತು ಇ, ಸೆಲೆನಿಯಂ, ಬಿಟಾ ಕೆರೊಟಿನ್‌ಗಳು, ಲೈಸೊಪೇನ್‌, ಲ್ಯೂಟೆನ್‌ ಮತ್ತು ಝೆಕ್ಸಾಂಥಿನ್‌ನಂತಹ ಕೆರೊಟಿನಾಯ್ಡಗಳು.

– ರಾಷ್ಟ್ರೀಯ ಆರೋಗ್ಯ ಮತ್ತು ಪೌಷ್ಟಿಕಾಂಶ ಪರೀಕ್ಷೆ ಸಮೀಕ್ಷೆ (1999-2000 ಮತ್ತು 2001-2002) ಯ ದತ್ತಾಂಶಗಳನ್ನು ಆಧರಿಸಿ 2009ರಲ್ಲಿ ನಡೆಸಲಾದ ಒಂದು ವಿಶ್ಲೇಷಣೆಯು ಅಮೆರಿಕದ ವಯಸ್ಕರು ಆಹಾರ ಮತ್ತು ಪೂರಕ ಆಹಾರದ ಮೂಲಕ ಪಡೆಯುವ ಆ್ಯಂಟಿ ಓಕ್ಸಿಡೆಂಟ್‌ ಪ್ರಮಾಣವನ್ನು ಅಂದಾಜಿಸಿದೆ. ಪೂರಕ ಆಹಾರಗಳಿಂದ ಶೇ.54ರಷ್ಟು ವಿಟಮಿನ್‌ ಸಿ, ಶೇ.64ರಷ್ಟು ವಿಟಮಿನ್‌ ಇ, ಶೇ.14ರಷ್ಟು ಆಲ್ಫಾ ಮತ್ತು ಬೇಟಾ-ಕೆರೋಟಿನ್‌ಗಳು ಹಾಗೂ ಶೇ.11ರಷ್ಟು ಸೆಲೆನಿಯಮ್‌ ಸಿಗುತ್ತದೆ ಎನ್ನಲಾಗಿದೆ.

– ಆ್ಯಂಟಿಓಕ್ಸಿಡೆಂಟ್‌ಗಳನ್ನು ಡಯಟರಿ ಸಪ್ಲಿಮೆಂಟ್‌ ಆಹಾರಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ (ವೈದ್ಯರು ಶಿಫಾರಸು ಮಾಡಿದಾಗ ಮಾತ್ರ ಉಪಯೋಗಿಸಬೇಕು) ಮತ್ತು ಇವು ಕ್ಯಾನ್ಸರ್‌, ಹೃದ್ರೋಗಗಳು ಮತ್ತು ಎತ್ತರ ಪ್ರದೇಶಗಳಲ್ಲಿ ತಲೆದೋರುವ ಆರೋಗ್ಯ ಸಮಸ್ಯೆಗಳನ್ನು ತಡೆಯುತ್ತವೆಯೇ ಎಂಬ ಬಗ್ಗೆ ಅಧ್ಯಯನ ನಡೆಯುತ್ತಿದೆ. ಆಹಾರದಲ್ಲಿ ಇರುವ ಆ್ಯಂಟಿ ಓಕ್ಸಿಡೆಂಟ್‌ಗಳಿಂದ ಏನಾದರೂ ಅಪಾಯ ಇದೆಯೇ ಎಂಬ ಬಗ್ಗೆ ಇದುವರೆಗೂ ಯಾವುದೇ ಸೂಚನೆ ಇಲ್ಲ. ಆದರೆ, ಕೆಲವು ಪ್ರಕರಣಗಳಲ್ಲಿ ಅಧಿಕ ಪ್ರಮಾಣದ ಆ್ಯಂಟಿ ಓಕ್ಸಿಡೆಂಟ್‌ ಪೂರಕ ಆಹಾರಗಳ ಸೇವನೆಯು ಆರೋಗ್ಯ ಅಪಾಯಗಳೊಂದಿಗೆ ಸಂಬಂಧ ಹೊಂದಿದೆ. ಬೆಟಾ -ಕೆರೋಟಿನ್‌ನ ಅಧಿಕ ಪ್ರಮಾಣದ ಸೇವನೆಯು ಧೂಮಪಾನಿಗಳಲ್ಲಿ ಶ್ವಾಸಕೋಶದ ಕ್ಯಾನ್ಸರ್‌ನ ಅಪಾಯವನ್ನು ವೃದ್ಧಿಸಬಹುದಾಗಿದೆ. ವಿಟಮಿನ್‌ “ಇ’ಯನ್ನು ಅಧಿಕ ಪ್ರಮಾಣದಲ್ಲಿ ಸೇವಿಸುವುದರಿಂದ ಪ್ರಾಸ್ಟೇಟ್‌ ಕ್ಯಾನ್ಸರ್‌ ಮತ್ತು ಒಂದು ವಿಧದ ಲಕ್ವಾ ಉಂಟಾಗುವ ಅಪಾಯವಿದೆ.

– ಇತರ ಡಯಟರಿ ಸಪ್ಲಿಮೆಂಟ್‌ ಆಹಾರಗಳಂತೆ ಆ್ಯಂಟಿಓಕ್ಸಿಡೆಂಟ್‌ ಪೂರಕ ಆಹಾರಗಳು ಕೂಡ ಕೆಲವು ಔಷಧಗಳ ಜತೆಗೆ ಪ್ರತಿಕ್ರಿಯಿಸಬಹುದು. ಉದಾಹರಣೆಗೆ, ವಿಟಮಿನ್‌ ಇ ಸಪ್ಲಿಮೆಂಟ್‌ ಆ್ಯಂಟಿ ಕೊಆಗ್ಯುಲಂಟ್‌ (ರಕ್ತವನ್ನು ತೆಳುಗೊಳಿಸುವ ಔಷಧಗಳು) ಗಳನ್ನು ತೆಗೆದುಕೊಳ್ಳುತ್ತಿರುವವರಲ್ಲಿ ರಕ್ತಸ್ರಾವದ ಅಪಾಯವನ್ನು ಹೆಚ್ಚಿಸಬಹುದು. ಕ್ಯಾನ್ಸರ್‌ ಚಿಕಿತ್ಸೆಯ ವೇಳೆ ಆ್ಯಂಟಿಓಕ್ಸಿಡೆಂಟ್‌ ಸಪ್ಲಿಮೆಂಟ್‌ಗಳನ್ನು ತೆಗೆದುಕೊಂಡರೆ ಪ್ರತಿಕೂಲ ಪರಿಣಾಮ ಉಂಟಾಗುವುದಕ್ಕೆ ತದ್ವಿರುದ್ಧ ಸಾಕ್ಷ್ಯಗಳಿವೆ. ಕೆಲವು ಅಧ್ಯಯನಗಳು ಇದರಿಂದ ಪ್ರಯೋಜನವಿದೆ ಎಂದರೆ ಇನ್ನು ಕೆಲವು ಅಧ್ಯಯನಗಳು ಇದು ಅಪಾಯಕಾರಿ ಎನ್ನುತ್ತವೆ. ಕ್ಯಾನ್ಸರ್‌ ಚಿಕಿತ್ಸೆಯನ್ನು ಪಡೆಯುತ್ತಿರುವ ರೋಗಿಗಳು ಸಪ್ಲಿಮೆಂಟ್‌ಗಳನ್ನು ಸೇವಿಸುವುದಕ್ಕೆ ಮುನ್ನ ವೈದ್ಯರ ಜತೆಗೆ ಸಮಾಲೋಚಿಸಬೇಕು ಎಂದು ದಿ ನ್ಯಾಶನಲ್‌ ಕ್ಯಾನ್ಸರ್‌ ಇನ್‌ಸ್ಟಿಟ್ಯೂಟ್‌ ಶಿಫಾರಸು ಮಾಡಿದೆ.

– ಆಹಾರೋದ್ಯಮದಲ್ಲಿ ಆಹಾರ ಮತ್ತು ಕಾಸೆ¾ಟಿಕ್ಸ್‌ಗಳ ಸಂರಕ್ಷಕವಾಗಿಯೂ ಆ್ಯಂಟಿ ಓಕ್ಸಿಡೆಂಟ್‌ಗಳನ್ನು ಉಪಯೋಗಿಸುತ್ತಾರೆ.

– ಹಣ್ಣು ಮತ್ತು ತರಕಾರಿಗಳನ್ನು ತಮ್ಮ ಆಹಾರದಲ್ಲಿ ಹೆಚ್ಚು ಉಪಯೋಗಿಸುವವರಲ್ಲಿ ಕ್ಯಾನ್ಸರ್‌ ಉಂಟಾಗುವ ಪ್ರಮಾಣ ಕಡಿಮೆ ಎಂಬುದಾಗಿ ಎಪಿಡೆಮಿಯೋಲಾಜಿಕ್‌ ಶೋಧಗಳು ಹೇಳುತ್ತವೆ. ಈ ಆಹಾರ ಪದ್ಧತಿಗಳು ಆ್ಯಂಟಿ ಓಕ್ಸಿಡೆಂಟ್‌ಗಳನ್ನು ಹೊಂದಿರುವ ಸಂಭಾವ್ಯತೆ ಇದ್ದು, ಕ್ಯಾನ್ಸರ್‌ ಉಂಟಾಗುವುದರ ವಿರುದ್ಧ ರಕ್ಷಣೆ ಒದಗಿಸುತ್ತವೆ ಎಂಬ ಸಿದ್ಧಾಂತಕ್ಕೆ ಈ ಶೋಧವು ಪುಷ್ಟಿ ಒದಗಿಸುತ್ತದೆ. ವೃದ್ಧಾಪ್ಯ ಉಂಟಾಗುವುದನ್ನು ವಿಳಂಬಿಸುವಲ್ಲಿ ಹಾಗೂ ಹೃದ್ರೋಗ ಮತ್ತು ಲಕ್ವಾ ಉಂಟಾಗುವುದನ್ನು ತಡೆಯುವಲ್ಲಿ ಕೂಡ ಆ್ಯಂಟಿ ಓಕ್ಸಿಡೆಂಟ್‌ಗಳು ಪ್ರಮುಖ ಪಾತ್ರ ವಹಿಸಲಾಗುತ್ತವೆ ಎಂದು ನಂಬಲಾಗಿದ್ದರೂ ಈ ದತ್ತಾಂಶವು ಇನ್ನೂ ಖಚಿತ ನಿರ್ಣಯಕ್ಕೆ ಬರುವುದಕ್ಕೆ ಸಾಲುವುದಿಲ್ಲ. ಆದ್ದರಿಂದ‌ ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ, ಆ್ಯಂಟಿ ಓಕ್ಸಿಡೆಂಟ್‌ ಸಪ್ಲಿಮೆಂಟ್‌ಗಳು ಮತ್ತು ಕಾಯಿಲೆಯಿಂದ ರಕ್ಷಣೆಯನ್ನು ಒಂದು ಶಿಫಾರಸಾಗಿ ಮಾಡುವುದು ಸಮರ್ಪಕ ತೀರ್ಮಾನವಾಗುವುದಿಲ್ಲ. ಕ್ಯಾನ್ಸರ್‌ ತಡೆಯ ವಿಚಾರವಾಗಿ ಹಲವು ಆರೋಗ್ಯ ಸೇವೆ ಪೂರೈಕೆದಾರ ಅಧಿಕೃತರು ನೀಡುವ ಸಲಹೆಯಂತೆ ದೈನಿಕ ಆಹಾರದಲ್ಲಿ ಹಣ್ಣು ಮತ್ತು ತರಕಾರಿಗಳನ್ನು ಸಾಕಷ್ಟು ಪ್ರಮಾಣದಲ್ಲಿ ಸೇರಿಸಿಕೊಳ್ಳುವುದು ಪ್ರಾಯಃ ಉತ್ತಮ ತೀರ್ಮಾನವಾಗಿರುತ್ತದೆ.

– ವಿಶಾಲ ಜನಸಮುದಾಯಗಳ ರೂಢಿಗತ ಆಹಾರ ಶೈಲಿಗಳು, ಜೀವನ ಶೈಲಿಗಳು ಮತ್ತು ಆರೋಗ್ಯ ಇತಿಹಾಸಗಳ ಬಗೆಗಿನ ಅವಲೋಕನ ಅಧ್ಯಯನಗಳು ತಿಳಿಸುವಂತೆ, ಹೆಚ್ಚು ಹಣ್ಣು ಹಂಪಲು ಮತ್ತು ತರಕಾರಿಗಳನ್ನು ಸೇವಿಸುವವರಿಗೆ ಹೃದ್ರೋಗಗಳು, ಲಕ್ವಾ, ಕ್ಯಾನ್ಸರ್‌ ಮತ್ತು ಕ್ಯಾಟರ್ಯಾಕ್ಟ್ ಸಹಿತ ಹಲವು ರೋಗ ಉಂಟಾಗುವ ಸಾಧ್ಯತೆಗಳು ಕಡಿಮೆ. ಅವಲೋಕನ ಅಧ್ಯಯನಗಳು ಆಹಾರಾಭ್ಯಾಸ ಮತ್ತು ಜೀವನ ಶೈಲಿಗಳಿಗೂ ಅನಾರೋಗ್ಯ ಅಪಾಯಕ್ಕೂ ಇರುವ ಸಂಭಾವ್ಯ ಸಂಬಂಧವನ್ನು ಸೂಚಿಸಬಹುದೇ ವಿನಾ ಒಂದು ಅಂಶವು ಇನ್ನೊಂದಕ್ಕೆ ಕಾರಣವಾಗುತ್ತದೆ ಎಂಬುದನ್ನು ಖಚಿತವಾಗಿ ತಿಳಿಸಲಾರವು. ಏಕೆಂದರೆ, ಅವು ಅದರಲ್ಲಿ ಒಳಗೊಂಡಿರಬಹುದಾದ ಇತರ ಅಂಶಗಳತ್ತ ಗಮನಹರಿಸುವುದಿಲ್ಲ. ಉದಾಹರಣೆಗೆ, ಆ್ಯಂಟಿ ಓಕ್ಸಿಡೆಂಟ್‌ ಸಮೃದ್ಧ ಆಹಾರವನ್ನು ಹೆಚ್ಚು ಸೇವಿಸುವವರು ಹೆಚ್ಚು ವ್ಯಾಯಾಮ ಮಾಡಬಹುದಾಗಿದೆ ಮತ್ತು ಕಡಿಮೆ ಧೂಮಪಾನಿಗಳಾಗಿರಬಹುದಾಗಿದೆ. ಅವರಿಗೆ ಕಾಯಿಲೆಗಳ ಅಪಾಯ ಕಡಿಮೆ ಇರುವುದಕ್ಕೆ ಆ್ಯಂಟಿ ಓಕ್ಸಿಡೆಂಟ್‌ ಮಾತ್ರವಲ್ಲದೆ, ಈ ಅಂಶಗಳೂ ಕಾರಣವಾಗಿರಬಹುದಾಗಿದೆ.

– ಸಂಶೋಧಕರು ಆ್ಯಂಟಿ ಓಕ್ಸಿಡೆಂಟ್‌ಗಳನ್ನು ಪ್ರಯೋಗಾಲಯಗಳಲ್ಲೂ ಪರೀಕ್ಷೆಗೆ ಒಳಪಡಿಸಿದ್ದಾರೆ. ಆ್ಯಂಟಿ ಓಕ್ಸಿಡೆಂಟ್‌ಗಳು ಫ್ರೀ ರ್ಯಾಡಿಕಲ್‌ಗ‌ಳ ಜತೆಗೆ ವರ್ತಿಸಿ ಅವುಗಳನ್ನು ಸ್ಥಿರಗೊಳಿಸುವುದು ಕಂಡುಬಂದಿದ್ದು, ಆ ಮೂಲಕ ಫ್ರೀ ರ್ಯಾಡಿಕಲ್‌ಗ‌ಳು ಅಂಗಾಂಶ ಹಾನಿಗೆ ಕಾರಣವಾಗುವುದನ್ನು ತಡೆಯುವುದು ಶ್ರುತಪಟ್ಟಿದೆ.

– ಆರೋಗ್ಯಕರ ಆಹಾರ ಪದ್ಧತಿ ಅಥವಾ ಸಾಂಪ್ರದಾಯಿಕ ವೈದ್ಯಕೀಯ ಆರೈಕೆಗೆ ಬದಲಾಗಿ ಅಥವಾ ಯಾವುದಾದರೊಂದು ಆರೋಗ್ಯ ಸಮಸ್ಯೆಗೆ ವೈದ್ಯರೊಂದಿಗೆ ಸಮಾಲೋಚಿಸುವುದನ್ನು ಮುಂದೂಡಿ ಆ್ಯಂಟಿ ಓಕ್ಸಿಡೆಂಟ್‌ ಸಪ್ಲಿಮೆಂಟ್‌ಗಳನ್ನು ಉಪಯೋಗಿಸುವುದು ಬೇಡ.

– ವೃದ್ಧಾಪ್ಯಕ್ಕೆ ಸಂಬಂಧಿಸಿದ ಮಾಲೆಕ್ಯುಲಾರ್‌ ನಾಶ ನಿಮಗಿದ್ದಲ್ಲಿ, ವೃದ್ಧಾಪ್ಯ ಸಂಬಂಧಿ ದೃಷ್ಟಿ ದೋಷ ಅಧ್ಯಯನ (ಎಆರ್‌ಇಡಿಎಸ್‌)ದ ಪ್ರಯೋಗಗಳಲ್ಲಿ ಉಪಯೋಗಿಸುವ ಸಪ್ಲಿಮೆಂಟ್‌ಗಳಂಥವು ಪ್ರಯೋಜನಕಾರಿಯೇ ಎಂಬುದನ್ನು ನಿಮ್ಮ ವೈದ್ಯರ ಜತೆಗೆ ಸಮಾಲೋಚಿಸಿ.

– ನೀವು ಡಯಟರಿ ಸಪ್ಲಿಮೆಂಟ್‌ ಉಪಯೋಗಿಸುವ ಯೋಜನೆ ಹಾಕಿಕೊಂಡಿದ್ದಲ್ಲಿ ವಿಶ್ವಾಸಾರ್ಹ ಮೂಲಗಳಿಂದ ಅವುಗಳ ಬಗ್ಗೆ ಮಾಹಿತಿ ಕಲೆ ಹಾಕಿ. ಡಯಟರಿ ಸಪ್ಲಿಮೆಂಟ್‌ಗಳು ಔಷಧಗಳು ಮತ್ತು ಇತರ ಸಪ್ಲಿಮೆಂಟ್‌ಗಳ ಜತೆಗೆ ಪ್ರವರ್ತಿಸಬಹುದು ಹಾಗೂ ಲೇಬಲ್‌ಗ‌ಳಲ್ಲಿ ಉಲ್ಲೇಖವಾಗಿರದ ಅಂಶಗಳನ್ನೂ ಒಳಗೊಂಡಿರಬಹುದು ಎಂಬುದು ನಿಮ್ಮ ಗಮನದಲ್ಲಿ ಇರಲಿ. ಈ ಬಗ್ಗೆ ನಿಮ್ಮ ವೈದ್ಯರು ನಿಮಗೆ ಸಲಹೆ ನೀಡಬಹುದಾಗಿದೆ. ನೀವು ಗರ್ಭಿಣಿಯಾಗಿದ್ದಲ್ಲಿ ಅಥವಾ ಪುಟ್ಟ ಶಿಶುವಿನ ತಾಯಿಯಾಗಿದ್ದಲ್ಲಿ ಅಥವಾ ಗರ್ಭಿಣಿಯಾಗುವ ಯೋಜನೆ ಹೊಂದಿದ್ದಲ್ಲಿ ಡಯಟರಿ ಸಪ್ಲಿಮೆಂಟ್‌ ಬಗ್ಗೆ ನಿಮ್ಮ ವೈದ್ಯರ ಜತೆಗೆ ಅಥವಾ ನಿಮ್ಮ ಶಿಶುವಿನ ವೈದ್ಯರ ಜತೆಗೆ ಸಮಾಲೋಚಿಸುವುದು ಕ್ಷೇಮಕರ.

– ನೀವು ಉಪಯೋಗಿಸುವ ಎಲ್ಲ ಪೂರಕ ಆರೋಗ್ಯ ಆರೈಕೆ ವಿಧಾನಗಳ ಬಗ್ಗೆ ನಿಮ್ಮ ವೈದ್ಯರಿಗೆ ಮಾಹಿತಿ ನೀಡಿ. ನಿಮ್ಮ ಆರೋಗ್ಯ ನಿಭಾವಣೆಗೆ ನೀವು ಏನೆಲ್ಲ ಮಾಡುತ್ತೀರಿ ಎಂಬ ಪೂರ್ಣ ಚಿತ್ರಣವನ್ನು ನಿಮ್ಮ ವೈದ್ಯರಿಗೆ ಕೊಡಿ. ಇದರಿಂದ ಸಂಯೋಜಿತ ಪೂರ್ಣ ಆರೈಕೆಯನ್ನು ನಿಮಗೊದಗಿಸುವುದು ಸಾಧ್ಯವಾಗುತ್ತದೆ.

-ಮುಂದುವರಿಯುವುದು

ಹೆನಿಟಾ ವೆನಿಸಾ ಡಿ’ಸೋಜಾ,
ಪಥ್ಯಾಹಾರ ತಜ್ಞೆ ,
ನ್ಯೂಟ್ರಿಶನ್‌ ಮತ್ತು ಡಯಟೆಟಿಕ್ಸ್‌ ವಿಭಾಗ
ಕೆಎಂಸಿ, ಮಣಿಪಾಲ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ