1983 ವಿಶ್ವಕಪ್: ಒಂದು ರೇಡಿಯೋ ರೋಮಾಂಚನ!

Team Udayavani, May 31, 2019, 5:39 PM IST

ಕೊಠಡಿಯ ಸಂಭ್ರಮದಲ್ಲಿ ನಂ. 4 ಸ್ನೇಹಿತನ ಕಾಲು ಮೇಜಿಗೆ ಬಡಿಯಿತು. ದಡ್ಡ.ನೆ ಮಗುಚಿ ಬಿತ್ತು ರೇಡಿಯೋ. ಮುಳ್ಳ ಚಲಿಸಿ ಬೇರೆ ಸ್ಟೇಶನ್‌- ವಿವಿಧ ಭಾರತಿ. ಅದರಲ್ಲಿ ಹಾಡು. “ಆ ಲೌಟ್‌ಕೆ ಆಜಾ..’ ಮತ್ತೆ ಬಿಬಿಸಿ ಹುಡುಕಿದಾಗ ಇನ್ನೊಂದು ವಿಕೆಟ್‌ ಹಾರಿತ್ತು. ನಂ. 2 ಸ್ನೇಹಿತ ಹೇಳಿದ “ಆಲೌಟ್‌ ಕೆ ಆಜಾ ವಿಂಡೀಸ್‌!’

25-6-1983

ಮಂಗಳೂರಿನಲ್ಲಿ ಆ ಶನಿವಾರದಂದು ಮುಂಜಾನೆಯೇ ಒಂದಿಷ್ಟು ಮಳೆ ಸುರಿದಿತ್ತು. ಹೊತ್ತು ಏರುತ್ತಿದ್ದಂತೆಯೇ ಉದ್ವೇಗವೂ ಏರುತ್ತಿತ್ತು. ಮಧ್ಯಾಹ್ನದ ಊಟದ ವೇಳೆ ಮತ್ತಷ್ಟು ಒತ್ತಡ. ಇಂಗ್ಲೆಂಡಿನ ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ಇನ್ನು ತುಸುವೇ ಹೊತ್ತಿನಲ್ಲಿ ಪ್ರಪ್ರಥಮ ಬಾರಿಗೆ ವಿಶ್ವಕಪ್‌ ಕ್ರಿಕೆಟ್‌ ಫೈನಲ್‌ನಲ್ಲಿ ಆಡಲಿರುವ ಭಾರತೀಯ ತಂಡದ ಆಟಗಾರರಲ್ಲೂ ಇಷ್ಟು ಒತ್ತಡವಿದ್ದಿರಲಾರದು! ಅಪರಾಹ್ನ ಮೂರಾಗುತ್ತಿದ್ದಂತೆ ಒತ್ತಡದ ಪರಾಕಾಷ್ಠೆ.

ಲಾರ್ಡ್ಸ್‌ನಲ್ಲಿ ಕಪಿಲ್‌ ದೇವ್‌ ನಾಯಕತ್ವದ ಭಾರತೀಯ ತಂಡ. ಈ ಹಿಂದೆ ಎರಡು ಬಾರಿ ವಿಶ್ವಕಪ್‌ ಜಯಿಸಿದ ಕ್ಲೈವ್‌ಲಾಯ್ಡ ನಾಯಕತ್ವದ ವೆಸ್ಟ್‌ ಇಂಡೀಸ್‌ ತಂಡವನ್ನು ಎದುರಿಸಲು ಸಿದ್ಧತೆ ನಡೆಸಿತ್ತು. ಇಲ್ಲಿ ಮಂಗಳೂರಿನ ಕೊಡಿಯಾಲಬೈಲಿನಲ್ಲಿ ಹಾಸ್ಟೆಲ್‌ ಸ್ವರೂಪದ ಕಟ್ಟಡದ ಕೊಠಡಿಯಲ್ಲಿ ಈ ಲೇಖಕನ ನಾಯಕತ್ವದ ಒಟ್ಟು ಆರು ಮಂದಿಯ ತಂಡ ರನ್ನಿಂಗ್‌ ಕಾಮೆಂಟರಿ ಕೇಳಲು ಈ ಹಿಂದಿನ ಎರಡು ವಿಶ್ವಕಪ್‌ ಅನುಭವಿಯಾಗಿದ್ದ ನ್ಯಾಶನಲ್‌ ಎಕ್ಕೋ ಎಂಬ ರೇಡಿಯೋವನ್ನು ಸಿದ್ಧಪಡಿಸುತ್ತಿತ್ತು! ಒಪ್ಪಂದದಂತೆ, ಎಲ್ಲರೂ ಬ್ಯಾಟರಿ ಸೆಲ್‌ಗ‌ಳ ವೆಚ್ಚವನ್ನು ಹಂಚಿಕೊಂಡೆವು. ಎರಡು ಎಕ್ಸ್‌ಟ್ರಾ ಬ್ಯಾಟರಿಯೂ ಅದರಲ್ಲಿ ಸೇರ್ಪಡೆಗೊಂಡಿತು. ಶಾರ್ಟ್‌ವೇವ್‌ ಬ್ಯಾಂಡಿನಲ್ಲಿ ಬಿಬಿಸಿಯನ್ನು ಅನ್ವೇಷಿಸಲಾಯಿತು. ಕಿಟಿಕಿಯ ಹೊರಗೆ ಏರಿಯಲ್‌. ಟೇಬಲ್‌ ರೇಡಿಯೋಗೆ ಮಾತ್ರ. ಸ್ವಲ್ಪ ಅಲುಗಾಡಿದರೂ ಬಿಬಿಸಿ ಗಾಳಿಯಲ್ಲಿ ತೇಲಿ ಹೋಗುವ ಅಪಾಯ ! ಮತ್ತೆ ಅದನ್ನು “ಮುಳ್ಳಲ್ಲಿ’ ಹುಡುಕುವಾಗ ವಿಕೆಟ್‌ ಹೋಗಿರುವ ಅಥವಾ ಸಿಕ್ಸರ್‌ ಚಿಮ್ಮಿರುವ ಸಾಧ್ಯತೆ ಇರುತ್ತಲ್ಲ…

ಮೂರೂ ಹದಿನೈದು ದಾಟುತ್ತಿದ್ದಂತೆಯೇ ಬಿಬಿಸಿಯಿಂದ ಅಲೆಅಲೆಯಾಗಿ ಹೊಮ್ಮಿ ಬರಲಾರಂಭಿಸಿತು ವೀಕ್ಷಕ ವಿವರಣೆ. ಲಾಯ್ಡ ಟಾಸ್‌ ಜಯಿಸಿದ ಘೋಷಣೆ. ನಮ್ಮ ಆರು ಮಂದಿ ನಡುವೆ ಗಂಭೀರವಾದ ಮೌನ. ಗಾಸಿಪ್‌ನಲ್ಲಿ ಒಂದು ಕ್ಷಣವೂ ಸುಮ್ಮನಿರದ ಕಿಟ್ಟಿ ಮೌನದ ಪರಮಾವತಾರ ತಾಳಿದ್ದಾನೆ ! ಎಲ್ಲವೂ ಕೈಸನ್ನೆಯಲ್ಲಿ. ಆದರೂ ತಡೆಯದೆ “ಭಾರತ ಗೆಲ್ಲುತ್ತದೆ’ ಅಂತ ಘೊಷಿಸಿದ. ಮತ್ತೆ ಮೌನ… ಅಷ್ಟರಲ್ಲಿ ಆ್ಯಂಡಿ ರಾಬರ್ಟ್ಸ್ ಎಸೆತ ಆರಂಭವಾಗಿತ್ತು. ಗಾವಸ್ಕರ್‌ ಆನ್‌ಸೈಡಿಗೆ ತಳ್ಳಿ ಎರಡು ರನ್‌ ಗಳಿಸಿಯಾಗಿತ್ತು. ಇದು ಆಗ 60 ಓವರ್‌ಗಳ ಪಂದ್ಯ.

“ಯಸ್‌. ಹೀ ಈಸ್‌ ಔಟ್‌. ಗಾವಸ್ಕರ್‌ ಈಸ್‌ ಔಟ್‌’ ಎಂಬ ಕರ್ಣಕಠೊರ ಉದ್ಗಾರ ಕೇಳಿಸಿತು. ಭಾರೀ ಸದ್ದು. ರೇಡಿಯೋದ ಸದ್ದೂ ಮಾಯವಾಯಿತು. ಓರ್ವ ಗೆಳೆಯ ಅದರ ತಲೆಗೆ ಕುಟ್ಟಿದ. ಮತ್ತೆ ಸ್ವರ ಕೇಳಿ ಬಂತು. ಸೆಮಿಫೈನಲ್‌ ಹೀರೋ ಮೊಹಿಂದರ್‌ ಬಂದಿದ್ದಾರೆ. “ಬ್ಯೂಟಿಫುಲ್‌ ಆನ್‌ ಡ್ರೈವ್‌ ಆನ್‌ ದ ವೇ ಫಾರ್‌ ಫೋರ್‌’. ಶ್ರೀಕಾಂತ್‌ ಅವರಿಂದ ಬೌಂಟರಿ. ರನ್‌ಗತಿ ಏರಲಾರಂಭಿಸಿತು. ಬೌಂಡರಿ ಸಿಡಿದಾಗಲೆಲ್ಲಾ ಲಾರ್ಡ್ಸ್‌ನಲ್ಲಿ ಮುಗಿಲು ಮುಟ್ಟುವಂತಿದ್ದ ಹರ್ಷೋದ್ಗಾರ. ಅಂದರೆ, ನಮ್ಮ ರೇಡಿಯೋದ ಮುಳ್ಳು ಅಲಗಿ ಬಿಬಿಸಿ ಮಾಯ. ಅದರ ತಲೆಗೆ ಕುಟ್ಟಿ ಅಥವಾ ಕೆನ್ನೆಗೆ ಬಾರಿಸಿದರೆ ಮತ್ತೆ ಬಿಬಿಸಿ ಪ್ರತ್ಯಕ್ಷ!

“ಗಾನ್‌. ಶ್ರೀಕಾಂತ್‌ ಈಸ್‌ ಗಾನ್‌. ಲೆಗ್‌ ಬಿಫೋರ್‌ ಟು ಮಾರ್ಶಲ್‌. ಇಂಡಿಯಾ ಈಸ್‌ ಸ್ಟ್ರಗ್ಲಿಂಗ್. 92 ಫಾರ್‌ ಫೋರ್‌. ವೀಕ್ಷಕ ವಿವರಣೆಗಾರನ ತಾರಕಸ್ವರ ಕೊಡಿಯಾಲಬೈಲ್‌ ಪೂರ್ತಿ ಕೇಳಿಸಿದ ಹಾಗೆ. ಈಗ ನಾಯಕ ಕಪಿಲ್‌ ಆಗಮನ.
ಜಿಂಬಾವ್ವೆ ಎದುರಿನ ಅಜೇಯ 175 ಪುನರಾವರ್ತನೆ ಯಾದೀತೇ ? ಸ್ವಾಮಿ ದೇವರೆ.. ಹಾಗೆಯೇ ಆಗಲಿ. 110 ತಲುಪಿದಾಗ ಪಾಟೀಲ್‌ ಔಟ್‌. ಮುಂದಿನ ಹಂತದಲ್ಲಿ ಭಾರತ 9ಕ್ಕೆ 161. ಕೊನೆಯ ವಿಕೆಟಿಗೆ ಕಿರ್ಮಾನಿ- ಸಂಧು ಅವರಿಂದ 22 ರನ್‌ ಸೇರ್ಪಡೆ. ಭಾರತ 183ಕ್ಕೆ ಆಲೌಟ್‌! ಕೊಠಡಿಯಲ್ಲಿದ್ದವರ ಮುಖಗಳಲ್ಲಿ ನಿರಾಸೆಯ ಛಾಯೆ. ಅಲ್ಲೇ ಎದುರಿನ ರಾಮ ರೆಸ್ಟಾರೆಂಟ್‌ನಲ್ಲಿ ಲಗುಬಗೆಯ ಊಟ ಮಾಡಿದೆವು. “ಫೈನಲಿಗೆ ಬಂದು 250 ರನ್‌ ಕೂಡಾ ಮಾಡದಿದ್ದರೆ…’ ಎಂಬ ಮಾತು ಅಲ್ಲಿ ಕೂಡಾ ಪ್ರತಿಧ್ವನಿಸುತ್ತಿತ್ತು.

184ರ ವಿಜಯದ ಗುರಿಯೊಂದಿಗೆ ವಿಂಡೀಸ್‌ ಬ್ಯಾಟಿಂಗ್‌ ಆರಂಭ. ಮಂಗಳೂರಿನ ಪರಂಪರೆಯಂತೆ ವಿದ್ಯುತ್‌ ಸ್ಥಗಿತ. ಕೊಠಡಿಯಲ್ಲಿದ್ದ ನಂ. 3 ಕ್ಯಾಂಡಲ್‌ ಸಿದ್ಧಪಡಿಸಿತ್ತು. ಬ್ಯಾಟರಿ ರೇಡಿಯೋ ಇಲ್ಲದಿದ್ದ ಅಕ್ಕಪಕ್ಕದ ಮನೆಗಳ ಹುಡುಗರೂ ನಮ್ಮ ಕೊಠಡಿಗೆ ಬಂದರು.

ವಿಂಡೀಸ್‌ ನೋಲಾಸ್‌ 5. ಸಂಧು ಅವರಿಂದ ಎಸೆತ. “ಗ್ರೀನಿಜ್‌ ಈಸ್‌ ಬೌಲ್ಡ್‌. ವಾಟ್‌ ಎ ಫೆಂಟಾಸ್ಟಿಕ್‌ ಸ್ವಿಂಗ್‌!’. ಕೊಠಡಿಯಲ್ಲಿ ಕೂಡಾ ಲಾರ್ಡ್ಸ್‌ನಷ್ಟೇ ಹರ್ಷೋದ್ಗಾರ. ಈಗ ಬಂದರು ವಿವಿಯನ್‌ ರಿಚರ್ಡ್ಸ್‌. ಆನ್‌ಡ್ರೈವ್‌, ಸ್ಕ್ವಾರ್ ಡ್ರೈವ್‌, ಎಕ್ಸ್‌ಟ್ರಾ ಕವರ್‌ ಡ್ರೈವ್‌. ಒಂದೊಂದು ಹೊಡೆತಕ್ಕೂ ನರಳುತ್ತಿದ್ದವರು ನಾನೂ ಸೇರಿದಂತೆ ಕೊಠಡಿಯಲ್ಲಿದ್ದ ಶ್ರೋತೃಗಳು! ಮೊತ್ತ 50ಕ್ಕೆ. ನಾಲ್ಕನೆಯ ಬೌಲರ್‌ ಮದನ್‌ಲಾಲ್‌. ಹೇಯ್ನ   ಈಸ್‌ ಕಾಟ್‌ ಬೈ ಬಿನ್ನಿ!

“ಹಿಯರ್‌ ಈಸ್‌ ಮದನ್‌ಲಾಲ್‌. ರಿಚರ್ಡ್ಸ್‌ ಲಾಫ್ಟೆಡ್ ಹಿಮ್‌ ಓವರ್‌ ಮಿಡ್‌ಆನ್‌. ಮೇಬಿ ಫೋರ್‌. ನೋ. ಕಪಿಲ್‌ ಈಸ್‌ ಆಫ್ಟರ್‌ ಇಟ್‌. ಲಾಂಗ್‌ ಚೇಸ್‌. ಯಸ್‌.. ಹೀ ಮೇಡ್‌ ಇಟ್‌. ರಿಚರ್ಡ್ಸ್‌ ಗಾನ್‌. ವೆಸ್ಟ್‌ ಇಂಡೀಸ್‌ ಇನ್‌ ಡೀಪ್‌ ಟ್ರಬಲ್‌..’ ಎಲ್ಲೆಡೆ ಹರ್ಷೋದ್ಗಾರ. ಅದರ ಒತ್ತಡಕ್ಕೆ ಎಂಬಂತೆ ವಿದ್ಯುತ್‌ ಪ್ರತ್ಯಕ್ಷ! ಮೊತ್ತ 3ಕ್ಕೆ 66. ರನ್ನರ್‌ ಸಹಾಯದಿಂದ ಆಡುತ್ತಿದ್ದ ಲಾಯ್ಡ ಔಟ್‌. ಬಿನ್ನಿ ಎಸೆತಕ್ಕೆ ಕಪಿಲ್‌ ಕ್ಯಾಚ್‌. ಕೊಠಡಿಯ ಸಂಭ್ರಮದಲ್ಲಿ ನಂ. 4 ಸ್ನೇಹಿತನ ಕಾಲು ಮೇಜಿಗೆ ಬಡಿಯಿತು. ದಡ್ಡನೆ ಮಗುಚಿ ಬಿತ್ತು ರೇಡಿಯೋ. ಮುಳ್ಳು ಚಲಿಸಿ ಬೇರೆ ಸ್ಟೇಶನ್‌- ವಿವಿಧ ಭಾರತಿ. ಅದರಲ್ಲಿ ಹಾಡು – “ಆ ಲೌಟ್‌ಕೆ ಆಜಾ..’ ಮತ್ತೆ ಬಿಬಿಸಿ ಹುಡುಕುವಾಗ ಇನ್ನೊಂದು ವಿಕೆಟ್‌ ಹಾರಿತ್ತು. ನಂ. 2 ಸ್ನೇಹಿತ ಹೇಳಿದ- “ಆಲೌಟ್‌ ಕೆ ಆಜಾ ವಿಂಡೀಸ್‌’.
ವಿಂಡೀಸ್‌ ಈಗ 9ಕ್ಕೆ 140.

“ಹಿಯರ್‌ ಈಸ್‌ ಅಮರ್‌ನಾಥ್‌, ಬೌಲಿಂಗ್‌ ಟು ಹೋಲ್ಡಿಂಗ್‌. ಅಪೀಲ್‌ ಫಾರ್‌ ಲೆಗ್‌ ಬಿಫೋರ್‌. ಯಸ್‌…! ಇಂಡಿಯಾ ಈಸ್‌ದ ನ್ಯೂ ವರ್ಲ್ಡ್ ಚಾಂಪಿಯನ್‌ ಆಫ್‌ ಕ್ರಿಕೆಟ್‌. ವಾಟ್‌ ಎ ಮಾರ್ವೆಲೆಸ್‌ ಪರ್‌ಫಾರ್ಮೆನ್ಸ್‌.’
ಕೊಠಡಿಯಿಂದ ಹೊರಬಂದಂತೆ ಕೊಡಿಯಾಲಬೈಲ್‌ ಸರ್ಕಲ್‌ ಪೂರ್ತಿ ನೂರಾರು ಕ್ರಿಕೆಟ್‌ ಅಭಿಮಾನಿಗಳು. ನಡುರಾತ್ರಿಯಾಗಿದ್ದರೂ ನಕ್ಷತ್ರಗಳನ್ನು ಮಸುಕು ಮಾಡುವಷ್ಟು ಸುಡುಮದ್ದು- ಬಿರುಸು ಬಾಣಗಳ ವರ್ಣ ವೈಭವ. ಅದರ ಮುಂದಿನ ವರ್ಷ ನಾನು ಉದಯವಾಣಿಗೆ ಸೇರ್ಪಡೆ. ಅದೇ ವರ್ಷ ಜುಲೈನಲ್ಲಿ ಮಂಗಳೂರಿನಲ್ಲಿ ದೂರದರ್ಶನದ ಪ್ರಸಾರ ಆರಂಭವಾಯಿತು. ವಿಶೇಷವೆಂದರೆ, ನಮ್ಮ ನೂತನ ಕಚೇರಿ ಈಗ ಇದೇ ಸರ್ಕಲ್‌ನಲ್ಲಿದೆ. ಕಚೇರಿಯ ಪಕ್ಕ ಆ ರೆಸ್ಟಾರೆಂಟ್‌ ಕೂಡಾ ಇದೆ. ಕಚೇರಿಗೆ ಆ ಕೊಠಡಿಯೂ ಕಾಣಿಸುತ್ತಿದೆ.
1983ರ ಆ ಎಂದೂ ಮರೆಯದ ರೋಮಾಂಚಕ ಕ್ಷಣ ಈ ಬಾರಿ ಮತ್ತೆ ಬರುವುದೇ ?

ಮನೋಹರ ಪ್ರಸಾದ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ